ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಬಾರಿ ಚಳಿ ಜೋರು

Last Updated 30 ನವೆಂಬರ್ 2018, 19:31 IST
ಅಕ್ಷರ ಗಾತ್ರ

* ಮುಂದಿನ ಫೆಬ್ರುವರಿವರೆಗೂ ನಸುಕಿನಲ್ಲಿ ಇನ್ನಷ್ಟು ಮುಸುಕು ಎಳೆದು ಮಲಗಲೇಬೇಕು. ಇಳಿಸಂಜೆಯಲ್ಲಿ ಕಚಗುಳಿ ಇಡುವ ಕುಳಿರ್ಗಾಳಿಗೂ ಥರಗುಟ್ಟಲೇಬೇಕು. ಯಾಕೆಂದರೆ ಡಿಸೆಂಬರ್‌ನಿಂದ ಫೆಬ್ರುವರಿವರೆಗೂ ಬೆಂಗಳೂರಿನಲ್ಲಿ ಅತ್ಯಂತ ಕಡಿಮೆ ತಾಪಮಾನ ದಾಖಲಾಗಲಿದೆ. ಹವಾಮಾನ ತಜ್ಞರು ಹೀಗೆ ಮುನ್ಸೂಚನೆ ನೀಡುತ್ತಾರೆ.

* ಮಕ್ಕಳು ಮತ್ತು ದೊಡ್ಡವರಿಗೆ ಈ ಬಾರಿಯ ಚಳಿಗಾಲದಲ್ಲಿ ಗಾಳಿ ಮತ್ತು ನೀರಿನಿಂದ ಬರುವ ಸೋಂಕು ರೋಗಗಳು ಹೆಚ್ಚಿನ ಪ್ರಮಾಣದಲ್ಲಿ ಕಾಡಲಿವೆ. ಎಚ್‌1ಎನ್1 ಪ್ರಕರಣಗಳು ಹೆಚ್ಚುತ್ತಲೇ ಇವೆ. ಈ ಬಾರಿ ವೈರಲ್‌ ನ್ಯುಮೋನಿಯಾ ಮಕ್ಕಳಲ್ಲಿ ಜಾಸ್ತಿ ಕಂಡುಬರುತ್ತಿದೆ.

* ಚಳಿಗಾಲದಲ್ಲಿ ಬೆಚ್ಚಗಿದ್ದರೆ ಕೆಲವೊಂದು ಕಾಯಿಲೆಗಳಿಂದ ಪಾರಾಗಬಹುದು. ಬೆಚ್ಚಗಿನ ಆಹಾರ ಸೇವನೆ, ಶೀತ ಗಾಳಿಯಿಂದ ದೇಹವನ್ನು ರಕ್ಷಿಸಿಕೊಳ್ಳುವುದು ಮತ್ತು ದೇಹವನ್ನು ಬೆಚ್ಚಗಿಡುವಂತಹ ಮನೆ ಮದ್ದು ಸೇವಿಸುವುದು ಚಳಿಗಾಲದಲ್ಲಿ ನಮ್ಮ ಸುರಕ್ಷೆಯ ದೃಷ್ಟಿಯಿಂದ ಅತ್ಯವಶ್ಯ.

***

‘ಹೌದು. ಕಳೆದ ಬಾರಿಗಿಂತ ಈ ಬಾರಿಯ ಚಳಿಗಾಲ ಹೆಚ್ಚು ಚುರುಕು ಮುಟ್ಟಿಸಲಿದೆ. ಮಧ್ಯಾಹ್ನ ಹೊರತುಪಡಿಸಿ ಉಳಿದೆಲ್ಲಾ ಸಮಯದಲ್ಲಿ ಚಳಿ ಕಾಡಲಿದೆ. ಡಿಸೆಂಬರ್‌ ಮತ್ತು ಫೆಬ್ರುವರಿ ಮಧ್ಯೆ 7ರಿಂದ 8 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆ ತಾಪಮಾನವನ್ನು ಅನುಭವಿಸಬೇಕಾಗುತ್ತದೆ’ ಎಂದು ಹವಾಮಾನ ತಜ್ಞ ಡಾ.ಎಂ.ಬಿ. ರಾಜೇಗೌಡ ಹೇಳುತ್ತಾರೆ.

ಅವರ ಪ್ರಕಾರ, ನವೆಂಬರ್‌ 28ರಂದೇ ಬೆಂಗಳೂರಿನಲ್ಲಿ ಚಳಿ ಶುರುವಾಗಿದೆ. ಅವತ್ತು 17 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಗಾಳಿಯೂ ಜೋರಾಗಿತ್ತು. ಈಗ ವಾತಾವರಣ ತುಂಬಾ ತಿಳಿಯಾಗಿರುವುದನ್ನು ಗಮನಿಸಬಹುದು. ಭೂಮಿಯಿಂದ ಹೊರಹೋಗುವ ಶಾಖದ ಪ್ರಮಾಣ ಜಾಸ್ತಿಯಾಗುತ್ತಾ ಹೋಗುವ ಕಾರಣ ಭೂಮಿಯ ಪದರ ತಂಪಾಗುತ್ತಾ ಹೋಗುತ್ತದೆ. ಜೊತೆಗೆ ಈಶಾನ್ಯ ರಾಜ್ಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ತಂಪು ಹವೆ ಬೀಸಲಾರಂಭಿಸಿದೆ. ಈ ಎರಡು ಕಾರಣಗಳಿಂದ ಈ ಬಾರಿ ಚಳಿ ಜಾಸ್ತಿ ಇರುತ್ತದೆ ಎಂದು ಅವರು ವೈಜ್ಞಾನಿಕವಾಗಿ ವಿವರಿಸುತ್ತಾರೆ.

ಬೆಂಗಳೂರು, 7 ಡಿಗ್ರಿ ಸೆಲ್ಸಿಯಸ್‌ ತಾಪಮಾನಕ್ಕೆ ಈ ಹಿಂದೆಯೂ ಸಾಕ್ಷಿಯಾಗಿತ್ತು. ವಿಶೇಷವಾಗಿ, 60–70ರ ದಶಕದಲ್ಲಿ ಭೀಕರ ಚಳಿ ಸಾಮಾನ್ಯವಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರಿನಲ್ಲಿ ಕಾಂಕ್ರೀಟು ಕಟ್ಟಡಗಳು, ಕಾಂಕ್ರೀಟು ರಸ್ತೆ, ವಾಹನಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿರುವ ಕಾರಣ ಅಧಿಕ ಶಾಖ ವಾತಾವರಣವನ್ನು ಸೇರಿಕೊಳ್ಳುತ್ತಲೇ ಇರುತ್ತದೆ. ಮತ್ತೊಂದೆಡೆ, ಈಶಾನ್ಯದಿಂದ ಬೀಸಬೇಕಾಗಿದ್ದ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಬೀಳದೇ ಇದ್ದ ಕಾರಣ ಒಣಹವೆ ಹೆಚ್ಚಾಗಿದೆ. ಈ ಸಲ ಚಳಿ ಹೆಚ್ಚಾಗುವುದು ಈ ಕಾರಣಕ್ಕೆ ಎಂದು ರಾಜೇಗೌಡ ಅವರು ನೀಡುವ ಮಾಹಿತಿ.

ಚಳಿಗಾಲದಲ್ಲಿ ಬೆಳಗಿನ ಜಾವಕಡಿಮೆ ತಾಪಮಾನ ಇರುವುದು ಸಾಮಾನ್ಯ. ಈ ಸಲ ಡಿಸೆಂಬರ್‌ ಹೊತ್ತಿಗೆ ಸಂಜೆ 4ರವರೆಗೂ 30 ಡಿಗ್ರಿ ಸೆಲ್ಸಿಯಸ್‌ ವರೆಗೂ ತಾಪಮಾನ ಇದ್ದರೆ,ಸಂಜೆ 4ರ ನಂತರ ಕುಳಿರ್ಗಾಳಿಯ ಕಚಗುಳಿಯನ್ನು ಅನುಭವಿಸಬೇಕಾಗುತ್ತದೆ ಎಂದು ಅವರು ಚಳಿಗಾಲದ ಚಿತ್ರಣವನ್ನು ಕಟ್ಟಿಕೊಡುತ್ತಾರೆ.

ಚಳಿ ಹೆಚ್ಚಾದಂತೆ ಆರೋಗ್ಯದ ಸಮಸ್ಯೆಯೂ ಹೆಚ್ಚುತ್ತದೆ. ಒಣ ಹವೆಯಿಂದಾಗಿ ದೂಳು, ಹೊಗೆಯಿಂದಾಗಿ ಕಾಡುವ ಅಲರ್ಜಿ ಹಾಗೂ ಅಲರ್ಜಿಯಿಂದಾಗಿ ಕೆಮ್ಮು, ಕಫ, ಉಸಿರಾಟದ ಸಮಸ್ಯೆ, ಮೈಗ್ರೇನ್‌ ತಲೆನೋವು, ವೈರಲ್‌ ಜ್ವರ ಕಾಡಬಹುದು. ಕೆಲ ತಿಂಗಳಿನಿಂದ ತಲೆದೋರಿರುವ ಎಚ್‌1ಎನ್‌1 ಜ್ವರದ ಪ್ರಕರಣಗಳು ಮಕ್ಕಳಲ್ಲೂ ಹೆಚ್ಚಾಗಿ ವರದಿಯಾಗುತ್ತಿವೆ ಎಂದು ಮಕ್ಕಳ ತಜ್ಞರು ಹೇಳುತ್ತಾರೆ.

ಚಳಿಗೆ ಬೆಚ್ಚಗೆ...

ನಮ್ಮ ದೇಹ ತಂಪೇರದಂತೆ ಎಚ್ಚರವಹಿಸಿಕೊಂಡಷ್ಟೂ ಚಳಿಯ ಬಾಧೆಯಿಂದ ದೂರವಿರಬಹುದು. ಕಾಲು ಚೀಲ, ಟೋಪಿ, ಸ್ವೆಟರ್‌, ಜಾಕೆಟ್‌ನಂತಹ ದೇಹ ಬೆಚ್ಚಗಿಡುವ ಉಡುಗೆಗಳನ್ನು ಧರಿಸಿಕೊಂಡರೆ ದೇಹವನ್ನು ಬೆಚ್ಚಗಿಟ್ಟುಕೊಳ್ಳಬಹುದು. ಶುದ್ಧ ಹತ್ತಿಯ ಬಟ್ಟೆ, ಎರಡು ಅಥವಾ ಮೂರು ಪದರದಲ್ಲಿ ಬಟ್ಟೆ ಧರಿಸುವುದೂ ಚಳಿಯಿಂದ ಪಾರಾಗಲು ಸುಲಭೋಪಾಯ.ಮಕ್ಕಳು ಕಾಲುಚೀಲ ಮತ್ತು ಟೋಪಿ ಧರಿಸಿದರೆ ಅವರ ದೇಹ ಥಂಡಿಯಾಗದು. ಟೋಪಿ ಧರಿಸಲು ಒಪ್ಪದಿರುವ ಮಕ್ಕಳ ಕಿವಿಗೆ ಹತ್ತಿಯ ಸಣ್ಣ ಉಂಡೆ ಇಡುವುದು ಸೂಕ್ತ.

ಸೇವಿಸುವ ಆಹಾರದ ಮೂಲಕವೂ ಈ ಹವಾಮಾನದಲ್ಲಿ ದೇಹವನ್ನು ಬೆಚ್ಚಗಿರಿಸಿಕೊಳ್ಳಬಹುದು. ಲಂಚ್‌ ಬಾಕ್ಸ್‌ನ ಆಹಾರ ಸೇವಿಸುವವರು ಬೆಚ್ಚಗೆ ಉಳಿಯುವಂತಹ ಲಂಚ್‌ ಬಾಕ್ಸ್‌ ಒಯ್ದರೆ ಆ ಆಹಾರ ಬಾಯಿಗೂ, ದೇಹಕ್ಕೂ ರುಚಿಕರವಾದೀತು.

ಚಳಿಗಾಲದ ಆತಂಕಗಳು

ಮಕ್ಕಳಲ್ಲೂ ಎಚ್‌1ಎನ್1 ಜ್ವರ ಹಾಗೂ ದೂಳು ಮತ್ತು ಹೊಗೆಯಿಂದ ಬರುವ ವೈರಲ್‌ ನ್ಯುಮೋನಿಯಾ ಪ್ರಕರಣಗಳು ಆತಂಕಪಡುವಷ್ಟು ಹೆಚ್ಚುತ್ತಿವೆ. ನೆಗಡಿ, ಕೆಮ್ಮು, ಕಫದ ಸಮಸ್ಯೆಯನ್ನು ಆರಂಭದ ಹಂತದಲ್ಲಿಯೇ ನಿಯಂತ್ರಿಸಬೇಕು.

ನೆಗಡಿ ಇದ್ದರೆ ಮಕ್ಕಳನ್ನು ಶಾಲೆಗೆ ಕಳುಹಿಸಬಾರದು. ಉದ್ಯೋಗಸ್ಥ ತಂದೆ ತಾಯಂದಿರು ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಯಾರೂ ಇಲ್ಲವೆಂದು ಶಾಲೆಗೆ ಕಳುಹಿಸುವುದು ಸಾಮಾನ್ಯ. ಅದರಿಂದ ಇನ್ನಷ್ಟು ಮಕ್ಕಳ ಆರೋಗ್ಯ ಹದಗೆಡಿಸಿದಂತೆ! ಮೂಗು ಕಟ್ಟಿಕೊಂಡಾಗ ದೊಡ್ಡವರು ತೆಗೆದುಕೊಳ್ಳುವ ಹಬೆ (ಸ್ಟೀಮ್‌) ಮಕ್ಕಳಿಗೆ ಅಪಾಯಕಾರಿ. ಅವರಿಗೆ ನೆಬ್ಯುಲೈಸೇಷನ್‌ ಸೂಕ್ತ.

ಒಂದರಿಂದ ಒಂದೂವರೆ ವರ್ಷದೊಳಗಿನ ಮಕ್ಕಳಿಗೆ ತಂಪು ಹವೆ ಮತ್ತು ದೊಡ್ಡವರ ಮೂಲಕ ವೈರಲ್‌ ನ್ಯುಮೋನಿಯಾ, ಜ್ವರ ಹರಡುತ್ತದೆ. ಮನೆ ಮಂದಿಯೆಲ್ಲ ಎಚ್ಚರವಹಿಸಿದರೆ ಒಬ್ಬರಿಂದ ಇನ್ನೊಬ್ಬರಿಗೆ ಅನಾರೋಗ್ಯ ಹರಡದಂತೆ ನೋಡಿಕೊಳ್ಳಬಹುದು.ಬೆಚ್ಚಗಿನ ಉಡುಪು ಮತ್ತು ಬೆಚ್ಚಗಿನ ಆಹಾರದ ಬಗ್ಗೆ ಕಾಳಜಿ ವಹಿಸಿದರೆ ಚಳಿಗಾಲವನ್ನು ಸುರಕ್ಷಿತವಾಗಿ ಕಳೆಯಬಹುದು.

– ಡಾ.ವಿವೇಕಾನಂದ ಕುಷ್ಟಗಿ, ಸಂಜೀವಿನಿ ಮಕ್ಕಳ ಕ್ಲಿನಿಕ್‌, ಜಯನಗರ 7ನೇ ಬ್ಲಾಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT