ಶುಕ್ರವಾರ, ಜನವರಿ 22, 2021
28 °C

ಗಾಳಿಯಂಗಡಿಯ ಮುಂದೆ...

ದಿವ್ಯ ಬಿ. ಹೊಸಂಗಡಿ Updated:

ಅಕ್ಷರ ಗಾತ್ರ : | |

Prajavani

ದೇಶದ ರಾಜಧಾನಿ ದೆಹಲಿಯಲ್ಲಿ ತೆರೆದುಕೊಂಡಿರುವ ಗಾಳಿಯಂಗಡಿಯ ಕಡೆಗೆ ಜನ ದೌಡಾಯಿಸುತ್ತಿದ್ದಾರೆ. ಪ್ರಾಣವಾಯುವಿಗೇ ಎಷ್ಟೊಂದು ಪ್ರಾಣಸಂಕಟ! ದೆಹಲಿ ಸುತ್ತಲಿನ ಪಂಜಾಬ್, ಹರಿಯಾಣಗಳ ರೈತರು ಕೊಯ್ಲಿನ ತರುವಾಯ ತಮ್ಮ ಗದ್ದೆಗಳಲ್ಲಿ ಉಳಿದ ಹುಲ್ಲಿನ ಮೆದೆಗೆ ಬೆಂಕಿ ಹಚ್ಚಿ ಎದ್ದ ಹೊಗೆ ದೆಹಲಿಯನ್ನು ಚಕ್ರವ್ಯೂಹದೊಳಗೆ ಸಿಲುಕಿಸಿದೆ. ಮೊದಲೇ ದೆಹಲಿಯ ವಾತಾವರಣ ವಾಹನಗಳ ದಟ್ಟಣೆಯ ಹೊಗೆ, ಕಾರ್ಖಾನೆಗಳ ಹೊಗೆಗಳಿಂದ ಕಲುಷಿತಗೊಂಡಿದೆ. ಜಗತ್ತಿನ ಅತ್ಯಂತ ಕಲುಷಿತ ನಗರವೆಂಬ ಬಿರುದು ಹೊತ್ತ ಚೀನಾದ ಬೀಜಿಂಗ್‌ಅನ್ನೇ ಹಿಂದೆ ಹಾಕಲು ಪೈಪೋಟಿಗೆ ಇಳಿದಂತಿದೆ ದೆಹಲಿ. ಇಂತಹ ಹೊತ್ತಿನಲ್ಲಿ ಗಾಳಿಯಂಗಡಿಗಳು ತೆರೆದುಕೊಳ್ಳತೊಡಗಿವೆ.

ಮಾಲಿನ್ಯದ ಮಟ್ಟ ಏರುತ್ತಿರುವುದನ್ನು ಕುತುಬ್ ಮಿನಾರ್‌ನಷ್ಟು ಎತ್ತರಕ್ಕೆ ಸಾಗಿ, ಸಾರಿ ಸಾರಿ ಹೇಳುತ್ತಿವೆ ಅಲ್ಲಿನ ಬೆಳವಣಿಗೆಗಳು. ಒಂದೊಮ್ಮೆ ಸುಟ್ಟು ಸೀಕರಿಗೊಂಡ ಖಾಂಡವವನದ ನೆನಪನ್ನೂ ಒತ್ತರಿಸಿ ತರುತ್ತಿವೆ. ನಗರಗಳ ಉರಿ ತಗ್ಗಿಸುವುದಕ್ಕೆ ಗಾಳಿಯಂಗಡಿ ಪರಿಹಾರ ಅಲ್ಲ. ಅದೊಂದು ಅರ್ಧವಿರಾಮ ಅಷ್ಟೆ. ಒಂದು ಗುಟುಕಿನ ಶುದ್ಧ ಗಾಳಿ ಹೀರಿ ಮತ್ತೆ ಕಲುಷಿತ ಗಾಳಿಯ ಕಡೆಗೇ ಮೂಗು ಹೊರಳಿಸಬೇಕಷ್ಟೆ.

ಮೊತ್ತ ಮೊದಲ ಬಾರಿಗೆ ದೆಹಲಿಯಲ್ಲಿ ಆಮ್ಲಜನಕ ಬಾರ್ ಆರಂಭಗೊಂಡಿದೆ. ಶುದ್ಧೀಕರಿಸಿದ ನೀರನ್ನು ಪೂರೈಸುವ ಘಟಕಗಳಂತೆ, ಇದು ಶುದ್ಧೀಕರಿಸಿದ ಗಾಳಿ ಪೂರೈಸುವ ಕೆಲಸ ಮಾಡುತ್ತಿದೆ. 299 ರೂಪಾಯಿಯಿಂದ ತೊಡಗಿ 499ರ ವರೆಗೆ ಕೊಟ್ಟರೆ ಕಾಲುಗಂಟೆ ಕೂತು ಶುದ್ಧಗಾಳಿ ದೇಹದೊಳಗೆ ತುಂಬಿಸಿ ಹೊರಡಬಹುದು. ಶುದ್ಧ ಗಾಳಿ ಸಿಕ್ಕ ಸಂಭ್ರಮದಲ್ಲಿ ಒಂದಷ್ಟು ಹೊತ್ತು ಮೂಗು ಮೇಲಕ್ಕೆ ಹೊತ್ತು ನಡೆದಾಡಬಹುದು. ಉಸಿರುಗಟ್ಟಿಸುವ ವಾಯುಮಾಲಿನ್ಯದಿಂದ ಒಂದಷ್ಟು ಹೊತ್ತು ಬಿಡುವು. ಭಾರತಕ್ಕೆ ಇದೊಂದು ಹೊಸ ಅನುಭವ ಮತ್ತು ಹೊಸ ಪರಿಕಲ್ಪನೆ.

ಉಳಿದ ದೇಶಗಳಲ್ಲಿ ಮನರಂಜನೆ ಮತ್ತು ಸುಗಂಧ ದ್ರವ್ಯಗಳ ಉದ್ದೇಶಕ್ಕೆ ಆರಂಭಗೊಂಡ ಉದ್ಯಮ ಇದು. ವಾತಾವರಣದಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗುತ್ತಾ ಇರುತ್ತವೆ. ಅವುಗಳನ್ನು ತಟಸ್ಥಗೊಳಿಸುವ ಪ್ರಯತ್ನಕ್ಕೆ ಈ ಆಮ್ಲಜನಕ ಬಾರ್ ಬಳಕೆಯಾಗುತ್ತದೆ.

ದೆಹಲಿ ಪರಿಸ್ಥಿತಿ ಎಷ್ಟರ ಮಟ್ಟಿಗೆ ಅಪಾಯಕಾರಿ ಎಂದರೆ ಕಳೆದ ಎರಡು ದಶಕಗಳ ಎಲ್ಲ ಬಗೆಯ ಆರೋಗ್ಯ ಸೌಲಭ್ಯಗಳನ್ನು ಬುಡಮೇಲು ಮಾಡುವ ತಾಕತ್ತು ಈ ಕಲುಷಿತ ಗಾಳಿಗೆ ಇದೆ. ಏರುತ್ತಿರುವ ತಾಪಮಾನ, ಕಲುಷಿತ ವಾತಾವರಣ, ಕೃಷಿ ಕೊಯ್ಲಿನ ಹುಲ್ಲಿನ ಹೊಗೆ- ಎಲ್ಲ ಸೇರಿ ದೆಹಲಿ ಉಸಿರುಗಟ್ಟುವಂತಾಗಿದೆ. ದೆಹಲಿಗೆ ಈಗ ಹೆಬ್ಬಾವಿನುಬ್ಬಸ. ಹೀಗಾಗಿಯೇ ಗಾಳಿಯಂಗಡಿಯ ಕದ ತೆರೆದಿದೆ.

ವಾಯುಮಾಲಿನ್ಯದ ಜತೆಗೆ ಏದುಸಿರು ಬಿಡುವ ಹೊತ್ತಿಗೆ ಇದೊಂದು ಪುಟ್ಟ ಪರಿಹಾರದ ಹಾದಿ. ಕಳೆದ ಮೇ ತಿಂಗಳಲ್ಲಿ ಆರ್ಯವೀರ್ ಅವರು ಮೊತ್ತ ಮೊದಲು ದೆಹಲಿಯಲ್ಲಿ ಆಕ್ಸಿಜನ್ ಬಾರ್ ತೆರೆದಾಗ ಜನ ಬಾಯಿ ತೆರೆದುಕೊಂಡಿರಲಿಕ್ಕೂ ಸಾಕು ಅಥವಾ ಮೂಗಿನ ಮೇಲೆ ಬೆರಳಿಟ್ಟಿರಲೂಬಹುದು. ಆದರೆ ಮೂಗು ತೆರೆದು ಕುಳಿತುಕೊಳ್ಳಬೇಕಾದ ಮಟ್ಟಿಗೆ ದೆಹಲಿ ಈಗ ವಿಷಾನಿಲಯುಕ್ತವಾಗಿದೆ.

ಆಕ್ಸಿಜನ್ ಬಾರ್‌ನಲ್ಲಿ ಕಾಲು ಗಂಟೆ ಕುಳಿತರೆ ಸುಗಂಧ ಭರಿತ ಶುದ್ಧ ಆಮ್ಲಜನಕ ಸೇವಿಸಿ ಹೊರಗೆ ಹೋಗಬಹುದು. ಆಮ್ಲಜನಕ ಇಲ್ಲಿ ಏಳು ಬಗೆಯ ಸುವಾಸನೆಯಲ್ಲಿ ಲಭ್ಯ. ಪುದಿನ ಸೊಪ್ಪು, ದಾಲ್ಚಿನಿ, ಕಿತ್ತಳೆ, ನಿಂಬೆಸೊಪ್ಪು, ನೀಲಗಿರಿ, ಲ್ಯಾವೆಂಡರ್, ಸ್ವೀಯರ್‍ಮಿಂಟ್- ಇವಿಷ್ಟು ಬಗೆಯ ಪರಿಮಳದಲ್ಲಿ ಇಲ್ಲಿ ಆಮ್ಲಜನಕ ಸಿಗುತ್ತದೆ.

ಆಕ್ಸಿಜನ್ ಬಾರ್‌ನ ಒಳಗೆ ಬರುವ ಗ್ರಾಹಕರು ತಮ್ಮ ಆಸನ ಅಲಂಕರಿಸಿ ತಮಗೆ ನೀಡಲಾದ ಪೈಪಿನ ಮೂಲಕ ಇಲ್ಲಿ ವಾಯುಸೇವನೆ ನಡೆಸುತ್ತಾರೆ. ತಮ್ಮಿಷ್ಟದ ಪರಿಮಳವನ್ನು ಆಘ್ರಾಣಿಸುತ್ತಾರೆ. ಹೊರಗಿನ ಹಾನಿಕಾರಕ ವಾತಾವರಣದಿಂದ ಮುಕ್ತಿ ಪಡೆಯುತ್ತಾರೆ. ದೇಹ-ಮನಸ್ಸುಗಳನ್ನು ಉಲ್ಲಸಿತಗೊಳಿಸುತ್ತಾರೆ. ತನ್ಮೂಲಕ ತಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಆರೋಗ್ಯಪೂರ್ಣರಾಗುತ್ತಾರೆ. ಶುದ್ಧ ಆಮ್ಲಜನಕದ ಮೂಲಕ ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳುತ್ತಾರೆ. ದೇಹದಲ್ಲಿನ ರಕ್ತಕಣಗಳೆಲ್ಲ ವಿಷಮುಕ್ತವಾಗುತ್ತವೆ. ಇದರಿಂದ ಖಿನ್ನತೆ ನಿವಾರಣೆಯಾಗುತ್ತದೆ. ತಲೆನೋವು ಮಂಗಮಾಯವಾಗುತ್ತದೆ ಎನ್ನುವುದು ಅಂಗಡಿಯವರ ವಾದ. ದೆಹಲಿಯ ಸಾಕೇತ್‍ನಲ್ಲಿ ಇರುವ ಸಿಟಿ ವಾಕ್ ಮಾಲ್‍ನಲ್ಲಿ ಈ ಅಂಗಡಿ ಇದೆ. ಎರಡನೆಯ ಅಂಗಡಿ ದೆಹಲಿಯ ವಿಮಾನ ನಿಲ್ದಾಣದಲ್ಲಿ ಆರಂಭಗೊಳ್ಳಲಿದೆ.

ವಾಯುಮಾಲಿನ್ಯದಿಂದ ಚಡಪಡಿಸುತ್ತಿರುವ ಚೀನಾ ಈಗ ಕೆನಡಾದಿಂದ ಕ್ಯಾನ್‍ಗಳಲ್ಲಿ ತುಂಬಿದ ಶುದ್ಧವಾಯು ಖರೀದಿ ಮಾಡತೊಡಗಿದೆ. ತಮಾಷೆಗೆಂದು ಶುರುಮಾಡಿದ ವಾಯುಮಾರಾಟ ಈಗ ಬೃಹದುದ್ಯಮವಾಗಿ ಬೆಳೆದಿದೆ. ಅಲ್ಲಿ ಗಾಳಿ ಮಾರಾಟ ಶುರುವಾಗಿ ಆರು ವರ್ಷ ಕಳೆದಿದೆ. ವೈಟಾಲಿಟಿ ಏರ್ ಎಂಬ ಬ್ರಾಂಡ್ ಹೆಸರಿನಲ್ಲಿ ಆಮ್ಲಜನಕದ ಚೀಲವನ್ನು ಮೊದಲು ಬಿಕರಿಗಿಟ್ಟಾಗ 99 ಸೆಂಟ್‍ಗೆ ಮಾರಾಟಗೊಂಡಿತು. ಅಂದರೆ ನಮ್ಮ ₹ 56. ಅನಂತರ ಎರಡನೆ ಚೀಲಕ್ಕೆ 160 ಡಾಲರ್ ಸಿಕ್ಕಿತು. ಹೀಗೆ ವೈಟಾಲಿಟಿ ಏರ್ ಮಾರುಕಟ್ಟೆಗೆ ಲಗ್ಗೆ ಇಟ್ಟಿತು. ಅತ್ಯಂತ ಮಾಲಿನ್ಯಭರಿತ ದೇಶಗಳಿಗೆ ಈಗ ಆಮ್ಲಜನಕದ ಚೀಲಗಳು ರಫ್ತಾಗುತ್ತಿವೆ. ಆಮದು ಮಾಡಿಕೊಳ್ಳುವ ದೇಶಗಳಲ್ಲಿ ಚೀನಾ ಮುಂಚೂಣಿಯಲ್ಲಿದೆ.

ಕೆನಡಾದಲ್ಲಿ ಉಚಿತವಾಗಿ ಸಿಗುವ ಗಾಳಿಯನ್ನು ಚೀಲದೊಳಗೆ ತುಂಬಿ ಚೀನಾಕ್ಕೆ ಕಳಿಸುವ ಕೆಲಸದಲ್ಲಿ ವೈಟಾಲಿಟಿ ಏರ್ ತಲ್ಲೀನವಾಗಿದೆ. ಆದರೆ ಕಂಪೆನಿಯವರಿಗೆ ಚೀನಾದ ವಾಯುಗುಣಮಟ್ಟ ಕುಸಿತದ ಆತಂಕ ಹೆಚ್ಚುತ್ತಿದೆಯಂತೆ. ಹತ್ತುಲೀಟರ್ ಆಮ್ಲಜನಕದ ಬಾಟಲಿಗೆ 23 ಡಾಲರ್ ಕೊಟ್ಟು ಚೀನಿಗರು ಖರೀದಿಸುವುದು ನೋಡಿ ಸ್ವತಃ ಉತ್ಪಾದಕ ಕಂಪೆನಿಯೇ ಅವಾಕ್ಕಾಗಿದೆ. ಈ ಬಾಟಲಿ ಬಳಸಿ 200 ಬಾರಿ ಗಾಳಿ ಸೇವಿಸಬಹುದು. ಫ್ಯೂರ್ ಪ್ರೀಮಿಯಂ ಆಕ್ಸಿಜನ್, ಲೇಕ್ ಲೂಯಿಸ್ ಏರ್ ಮುಂತಾದ ಅನೇಕ ಉಪವಿಭಾಗಗಳೂ, ವಿಭಿನ್ನ ದರಗಳೂ ಶುರುವಾಗಿವೆ. ಲೇಕ್ ಲೂಯಿಸ್‍ನಲ್ಲಿ 7.7 ಲೀಟರ್ ಇದ್ದು 150 ಬಾರಿ ಗಾಳಿ ದೇಹದೊಳಕ್ಕೆ ಎಳೆದುಕೊಳ್ಳಬಹುದಷ್ಟೆ.

ಗ್ರಾಹಕರಿಗೆ ಇಲ್ಲಿ ಎರಡು ಆಯ್ಕೆಗಳಿವೆ. ಒಂದು ಶುದ್ಧ ಆಮ್ಲಜನಕದ್ದು; ಇದರಲ್ಲಿ 97 ಶೇಕಡಾ ಆಮ್ಲಜನಕ ಲಭ್ಯ. ಇನ್ನೊಂದು ಸ್ವಚ್ಛ ಆಮ್ಲಜನಕ- ಇದರಲ್ಲಿ ಆಮ್ಲಜನಕದ ಪ್ರಮಾಣ ಕೇವಲ ಶೇಕಡಾ 21ರಷ್ಟು. ಉಳಿದಂತೆ 78 ಶೇಕಡಾ ನೈಟ್ರೋಜನ್ ಮತ್ತಿತರ ಅನಿಲಗಳಿರುತ್ತವೆ. ಹೊರಗಿನ ಲೇಬಲ್ ಮೇಲೆ ಪರೀಕ್ಷಾ ತರಬೇತಿಗೆ ಅನುಕೂಲ ಎಂದು ಅಚ್ಚುಹಾಕಿಸಿದ್ದಾರೆ. ಚಿಕಿತ್ಸೆ, ರೋಗ ತಡೆಗಟ್ಟುವಿಕೆಗೆ ಪೂರಕ ಅಲ್ಲ ಎಂದೂ ಮುದ್ರಿಸಿದ್ದಾರೆ.

ಉತ್ತರ ಅಮೆರಿಕ, ಭಾರತ, ಮಧ್ಯಪ್ರಾಚ್ಯ ಮತ್ತು ಚೀನಾ ದೇಶಗಳಿಗೆ ರಫ್ತಾಗುತ್ತಿದೆ ವೈಟಾಲಿಟಿ ಏರ್. ಚೀನಾದಲ್ಲಂತೂ ಕಂಪನಿ ದೊಡ್ಡ ಮಾರುಕಟ್ಟೆಯನ್ನೇ ಗಳಿಸಿದೆ. ವಾಯುಮಾಲಿನ್ಯಕ್ಕೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿದ ಸುರಕ್ಷಿತ ವಲಯದಿಂದ ಚೀನಾ 20 ಪಟ್ಟು ದೂರಹೋಗಿ ರೆಡ್‍ ಅಲರ್ಟ್ ವಲಯ ತಲುಪಿಯಾಗಿದೆ. ಒಂದು ಶತಕೋಟಿ ಟನ್‍ಗಿಂತಲೂ ಹೆಚ್ಚು ಕಾರ್ಬನ್ ಡೈ ಆಕ್ಸೈಡ್ ಚೀನಾದಲ್ಲಿ ವಾತಾವರಣ ಸೇರುತ್ತಿದೆ. ಇಂತಹ ಅಪವೇಳೆಯಲ್ಲಿ ಚೀನಾ ಸೇರಿದಂತೆ ವಾಯುಮಾಲಿನ್ಯ ಭರಿತ ದೇಶಗಳು ಗಾಳಿಯಂಗಡಿಯ ಕಡೆಗೆ ದೌಡಾಯಿಸುವುದು ಸಹಜ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು