ಪ್ರವಾಸಿಗರ ಕರೆಯಲಿದೆ ‘ನವ ಕೇರಳ’

7

ಪ್ರವಾಸಿಗರ ಕರೆಯಲಿದೆ ‘ನವ ಕೇರಳ’

Published:
Updated:
Deccan Herald

ಮಧುಚಂದ್ರಕ್ಕೂ, ವಿವಾಹ ವಾರ್ಷಿಕೋತ್ಸವಕ್ಕೂ, ಮಕ್ಕಳ ರಜೆಗೂ, ಸ್ನೇಹಿತರ ಜೊತೆಗೂ ಮೋಜಿನ ಪ್ರವಾಸಕ್ಕೆ ಹೋಗಬೇಕೆನಿಸಿದಾಗ ಥಟ್ಟನೆ ನೆನಪಾಗುತ್ತಿದ್ದುದು ಕೇರಳ. ಪ್ರಕೃತಿಯ ಪರಿಪೂರ್ಣ ಪ್ಯಾಕೇಜ್‌ನಂತಿದ್ದ ಕೇರಳ ಕಳೆದೊಂದು ತಿಂಗಳಿಂದ ಪ್ರವಾಸಿಗಳ ಪಾಲಿಗೆ ದುಃಸ್ವಪ್ನವಾಗಿ ಕಾಡಿರುವುದು ಸುಳ್ಳಲ್ಲ. ಅದಕ್ಕೆ ಕಾರಣ ಆಗಸ್ಟ್‌ನಲ್ಲಿ ಮಹಾ ಮಳೆಯಿಂದ ಆದ ಅನಾಹುತಗಳು. ‘ದೇವರ ಸ್ವಂತ ನಾಡು’, ‘ಪ್ರವಾಸಿಗರ ಸ್ವರ್ಗ’ ಎಂಬ ವಿಖ್ಯಾತಿ ಮಹಾಮಳೆಗೆ ಕೊಚ್ಚಿಹೋಯಿತು ಎಂದು ಇಡೀ ಜಗತ್ತು ಸಹಜವಾಗಿಯೇ ಭಾವಿಸಿತ್ತು.  ಆದರೆ ಈಗ... ಪ್ರವಾಸ ಪ್ಯಾಕೇಜ್‌ಗಳನ್ನು ಕೈಬಿಟ್ಟು ಕೇರಳಕ್ಕೆ ಬೆನ್ನುಹಾಕಿ ಕೂತಿದ್ದ ಪ್ರವಾಸಿಗಳು ಮತ್ತೆ ತಮ್ಮ ಲಗೇಜ್‌ ಸಿದ್ಧಪಡಿಸಿಕೊಳ್ಳಬಹುದು ಎಂಬ ಸೂಚನೆಯನ್ನು ಅಲ್ಲಿನ ಸರ್ಕಾರ ರವಾನಿಸಿದೆ.

ಹೌದು. ಮಹಾ ಮಳೆಯಿಂದ ಅಸ್ತಿತ್ವವನ್ನೇ ಕಳೆದುಕೊಂಡಿದ್ದ ಕೇರಳದ ಪ್ರವಾಸೋದ್ಯಮ ಕ್ಷೇತ್ರ ಫೀನಿಕ್ಸ್‌ ಹಕ್ಕಿಯಂತೆ ಮತ್ತೆ ಮೈಕೊಡವಿ ಎದ್ದು ನಿಲ್ಲಲು ಸಜ್ಜಾಗಿದೆ. ದೇಶ ವಿದೇಶದ ಪ್ರವಾಸಿಗಳ ಕಣ್ಮನ ತಣಿಸಿದ ಪ್ರವಾಸಿ ತಾಣಗಳನ್ನು ಶೂನ್ಯದಿಂದಲೇ ಮರುನಿರ್ಮಾಣ ಮಾಡಲಾಗುತ್ತಿದೆ. ರಾಜ್ಯದ ಎಲ್ಲಾ ಪ್ರವಾಸಿ ತಾಣಗಳು ಅತಿ ಶೀಘ್ರವಾಗಿ ಮರುಹುಟ್ಟು ಪಡೆಯಲಿವೆ. ಸೆಪ್ಟೆಂಬರ್‌ 27ರಿಂದ 30ರವರೆಗೆ ನಡೆದ ‘ಕೇರಳ ಟೂರಿಸಂ ಮಾರ್ಟ್‌’ ಎಂಬ ಪ್ರವಾಸೋದ್ಯಮ ಮೇಳದಲ್ಲಿ ‘ನವ ಕೇರಳ ಮರುನಿರ್ಮಾಣ ಯೋಜನೆಗಳು’ ಭ‌ವಿಷ್ಯದ ನಿಖರ ಹೆಜ್ಜೆಗಳನ್ನು ನೋಡಬಹುದಾಗಿತ್ತು.

ಎರಡು ವರ್ಷಕ್ಕೊಮ್ಮೆ ಇಲಾಖೆ ನಡೆಸುವ ಈ ಮೇಳದ ಯಶಸ್ಸು ಕಂಡು ಸ್ವತಃ ಇಲಾಖೆಯೇ ಬೆಚ್ಚಿಬಿದ್ದಿದೆ.  ಪ್ರವಾಸೋದ್ಯಮ ಕ್ಷೇತ್ರದ ವಿವಿಧ ವಿಭಾಗಗಳಲ್ಲಿ ತೊಡಗಿಸಿಕೊಳ್ಳಲು ಮೇಳದಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಗಳ ಸಂಖ್ಯೆ 7,000. ಈ ಪೈಕಿ 1,635 ಅರ್ಜಿಗಳನ್ನು ಶಾರ್ಟ್‌ಲಿಸ್ಟ್‌ ಮಾಡಲಾಗಿದೆ. ಇದರಲ್ಲಿ 66 ದೇಶಗಳ 545 ಅರ್ಜಿದಾರರು ಇದ್ದಾರೆ!). ಕೇರಳ ಟೂರಿಸಂ ಮಾರ್ಟ್‌ನ ಇತಿಹಾಸದಲ್ಲೇ ಈ ಪ್ರಮಾಣದಲ್ಲಿ ವಿದೇಶಗಳು ಪಾಲ್ಗೊಂಡಿರುವುದು ಇದೇ ಮೊದಲು ಎನ್ನುತ್ತಾರೆ, ಇಲಾಖೆ ಕಾರ್ಯದರ್ಶಿ ರಾಣಿ ಜಾರ್ಜ್‌.

‘ಒಂದೇ ತಿಂಗಳ ಅವಧಿಯಲ್ಲಿ ಪ್ರವಾಸೋದ್ಯಮ ಇಲಾಖೆ ಇಂತಹುದೊಂದು ಮೇಳವನ್ನು ಆಯೋಜಿಸಿ ಅಭೂತ ಯಶಸ್ಸು ಕಂಡಿರುವುದನ್ನು ನಿಜಕ್ಕೂ ನಂಬಲಾಗುತ್ತಿಲ್ಲ. ಮೇಳದಲ್ಲಿ ಅಮೆರಿಕ ಮತ್ತು ಯುರೋಪ್‌ನ ಪ್ರವಾಸಿಗಳು ಅತ್ಯುತ್ತಮ ಸ್ಪಂದನ ತೋರಿರುವುದು ಮೇಳದ ಯಶಸ್ಸಿಗೆ ಕಾರಣವಾಗಿದೆ. ಹಿಂದೆಂದೂ ಕಂಡರಿಯದಂತಹ ಪ್ರಾಕೃತಿಕ ವಿಕೋಪಕ್ಕೆ ಕೇರಳದ ಜನರು ಸಾಕ್ಷಿಯಾದರು. ಆದರೆ ಜಾಗತಿಕ ಪ್ರವಾಸೋದ್ಯಮದಲ್ಲಿ ಕೇರಳ ಮತ್ತೆ ಗಟ್ಟಿ ನೆಲೆಯೂರಲಿದೆ ಎಂದು ಮೇಳ ನಿರೂಪಿಸಿದೆ’ ಎಂದು ರಾಣಿ ಜಾರ್ಜ್‌ ಸಂತಸ ವ್ಯಕ್ತಪಡಿಸಿದ್ದಾರೆ.

‘ಪ್ರವಾಸೋದ್ಯಮ ಕ್ಷೇತ್ರವನ್ನು ಸಮಗ್ರವಾಗಿ ಮರುರೂಪಿಸಲು ಸರ್ಕಾರ ₹700 ಕೋಟಿ ಅನುದಾನವನ್ನು ಮೀಸಲಿಟ್ಟಿದೆ. ಪ್ರವಾಸೋದ್ಯಮ ನೀತಿಗಳನ್ನೂ ಸರ್ಕಾರ ಮಾರ್ಪಾಡು ಮಾಡಲಿದೆ. ಟೂರಿಸಂ ಮಾರ್ಟ್‌ನ ಯಶಸ್ಸು ರಾಜ್ಯದ ಜನರ ಮುಖದಲ್ಲಿ ಮತ್ತೆ ನಗು ಕಾಣುವಂತೆ ಮಾಡಿದೆ. ಈ ಯಶಸ್ಸು ರಾಜ್ಯಕ್ಕಷ್ಟೇ ಅಲ್ಲ ಇಡೀ ದೇಶಕ್ಕೆ ಮತ್ತು ಜಗತ್ತಿಗೇ ಒಳ್ಳೆಯ ಸಂದೇಶವನ್ನು ರವಾನಿಸಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ, ಇಲಾಖೆಯ ನಿರ್ದೇಶಕ ಪಿ. ಬಾಲ ಕಿರಣ್‌.  

‘ಜವಾಬ್ದಾರಿಯುತ ಪ್ರವಾಸೋದ್ಯಮ’ ಪರಿಕಲ್ಪನೆ
ಮಳೆ ಅನಾಹುತಕ್ಕೆ ತುತ್ತಾದ ಪ್ರದೇಶಗಳ ಫಲಾನುಭವಿಗಳಿಗೇ ಪ್ರವಾಸೋದ್ಯಮದಲ್ಲಿ ಉದ್ಯೋಗ ನೀಡುವ ಬಗ್ಗೆ ಪ್ರವಾಸೋದ್ಯಮ ಸಚಿವ ಕಡಕಂಪಲ್ಲಿ ಸುರೇಂದ್ರನ್‌ ಮೇಳದಲ್ಲಿ ಪ್ರಸ್ತಾಪಿಸಿದ್ದರು. ಸರ್ಕಾರದ ಮುಂದಿರುವ ‘ಜವಾಬ್ದಾರಿಯುತ ಪ್ರವಾಸೋದ್ಯಮ’ (ರೆಸ್ಪಾನ್ಸಿಬಲ್‌ ಟೂರಿಸಂ) ಎಂಬ ಈ ಪರಿಕಲ್ಪನೆ ಬರೋಬ್ಬರಿ 30ಸಾವಿರ ಕುಟುಂಬಗಳಿಗೆ ಉದ್ಯೋಗ ನೀಡಲಿದೆ. ಈ ಪೈಕಿ 7,800 ಕುಟುಂಬಗಳು ನೇರ ಫಲಾನುಭವಿಗಳಾಗಲಿದ್ದಾರೆ.

ಸರ್ವಸ್ವವನ್ನೂ ಕಳೆದುಕೊಂಡಿದ್ದ ಈ ಕ್ಷೇತ್ರದ ಉದ್ಯೋಗಸ್ಥರಿಗೆ ಹೊಸ ಆಶಾಕಿರಣ ಕಂಡಂತಾಗಿದೆ. ಯಾಕೆಂದರೆ ಈ ಕ್ಷೇತ್ರವು ಭಾರಿ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸಿತ್ತು. ಕೇರಳ ಇನ್‌ಸ್ಟಿಟ್ಯೂಟ್‌ ಆಫ್‌ ಟೂರಿಸಂ ಆ್ಯಂಡ್‌ ಟ್ರಾವೆಲ್‌ ಸ್ಟಡೀಸ್‌ನ ವಿದ್ಯಾರ್ಥಿಗಳೇ ಇಷ್ಟರಲ್ಲೇ ಸಮೀಕ್ಷೆಯನ್ನು ಕೈಗೊಳ್ಳಲಿದ್ದಾರಂತೆ! 

ಕೇರಳದ ಒಟ್ಟು ಜಿಡಿಪಿಯಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಪಾಲು ಶೇ 10. ‘ಈ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ರೂಪಿಸಿರುವ ಯೋಜನೆಗಳು ಕಾರ್ಯರೂಪಕ್ಕೆ ಬರಬೇಕು, 2020ರ ಹೊತ್ತಿಗೆ ರಾಜ್ಯದ ಜಿಡಿಪಿಯಲ್ಲಿ ಪ್ರವಾಸೋದ್ಯಮದ ಪಾಲು ಶೇ 20ರಷ್ಟು ಆಗಬೇಕು’ ಎಂಬುದು ಸರ್ಕಾರದ ದೃಢ ಸಂಕಲ್ಪ. 

‘ದೇವರ ಸ್ವಂತ ನಾಡು’ ಪ್ರವಾಸಿಗಳ ಸ್ವರ್ಗವೆನಿಸಲು ಮತ್ತೆ ಸಜ್ಜಾಗಿದೆ. ಹಾಗಾಗಿ ನಿಮ್ಮ ಪ್ರವಾಸವನ್ನು ಯೋಜಿಸುವಾಗ ಕೇರಳವನ್ನು ಕೈಬಿಡುವ ಅಗತ್ಯವಿಲ್ಲ. ಯಾಕೆಂದರೆ, ‘ನವ ಕೇರಳ’ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ಹಡಗಿನಲ್ಲಿ ಕೇರಳಕ್ಕೆ!
ಮಹಾಮಳೆ ರಾಜ್ಯಕ್ಕೆ ಅನೇಕ ಹೊಸ ಪಾಠಗಳನ್ನೂ ಕಲಿಸಿದೆ. ಅಂತೆಯೇ ಹೊಸ ಸಾಧ್ಯತೆಗಳನ್ನೂ ಮುಂದಿಟ್ಟಿದೆ. ಪ್ರವಾಸ, ಆತಿಥ್ಯ, ಆರೈಕೆ ಮತ್ತು ಸಂಸ್ಕೃತಿ ಕ್ಷೇತ್ರಗಳಲ್ಲಿ ಸಾರ್ವಜನಿಕ–ಖಾಸಗಿ ಸಹಭಾಗಿತ್ವವನ್ನು ದೊಡ್ಡ ಮಟ್ಟದಲ್ಲಿ ದುಡಿಸಿಕೊಳ್ಳಲು ಇಲಾಖೆ ಗಂಭೀರ ಚಿಂತನೆ ನಡೆಸಿದೆ. 

‘ಕೇರಳ ಶಿಪ್ಪಿಂಗ್‌ ಆ್ಯಂಡ್‌ ಇನ್‌ಲ್ಯಾಂಡ್‌ ನೇವಿಗೇಷನ್‌ ಕಾರ್ಪೊರೇಷನ್‌’ (ಕೆಎಸ್ಐಎನ್‌ಸಿ) ಎಂಬ ಈಜಿಪ್ಟ್‌ ಮೂಲದ ವಿಲಾಸಿ ಹಡಗು ಇದೇ ತಿಂಗಳ ಕೊನೆಯಲ್ಲಿ ತನ್ನ ಯಾನ ಆರಂಭಿಸಲಿದೆ. ಈ ಮೂಲಕ ಹಡಗಿನ ಮೂಲಕವೂ ಕೇರಳಕ್ಕೆ ಪ್ರವಾಸ ಕೈಗೊಳ್ಳುವ ಹೊಸ ಶಕೆ ಆರಂಭವಾಗಲಿದೆ.


ರಾಣಿ ಜಾರ್ಜ್‌

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !