ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷೆಯಾಗಿ ದುಂಡು ಅಭಿವೃದ್ಧಿಯಲ್ಲಿ ತುಂಡು

Last Updated 27 ಅಕ್ಟೋಬರ್ 2019, 9:52 IST
ಅಕ್ಷರ ಗಾತ್ರ

ಏಕೀಕೃತ ಕರ್ನಾಟಕದ ಮತ್ತೊಂದು ರಾಜ್ಯೋತ್ಸವಕ್ಕೆ ನಾವೀಗ ಸಜ್ಜಾಗುತ್ತಿದ್ದೇವೆ. ಕನ್ನಡ ಭಾಷಿಕರಿದ್ದ ಜಾಗಗಳನ್ನೆಲ್ಲಾ ಒಂದುಗೂಡಿಸಿ ಕನ್ನಡದ ರಾಜ್ಯವೊಂದು ಅಸ್ತಿತ್ವಕ್ಕೆ ಬಂದಾಗ ಅಂಥದೊಂದು ಕನಸು- ಕಲ್ಪನೆಯನ್ನು ನಿಜವಾಗಿಸಲು ಹೋರಾಡಿದ ಅನೇಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಅದು ಅಂದು. ಈಗ ಫಲಾನುಭವಿಗಳಾದ ನಾವು ನಮ್ಮ ಕೈಯ್ಯಾರೆ ಮಾಡಿದ ತಪ್ಪುಗಳಿಂದ ಭಾಷೆ ಮತ್ತು ಗಡಿಗಳನ್ನು ಅಪಾಯಕ್ಕೆ ನೂಕಿ, ತೊಂದರೆ ಅನುಭವಿಸಿದ ನಂತರ, ಅವುಗಳನ್ನು ಉಳಿಸಿಕೊಳ್ಳಲು ಸಮ್ಮೇಳನ, ಚಳವಳಿ, ಮುಷ್ಕರಗಳನ್ನು ಮಾಡುತ್ತಿದ್ದೇವೆ. ಪ್ರಾಧಿಕಾರ, ಕಾವಲು ಸಮಿತಿ, ಅಕಾಡೆಮಿಗಳನ್ನು ಅಸ್ತಿತ್ವಕ್ಕೆ ತಂದಿದ್ದೇವೆ. ಆದರೆ, ಭಾಷೆಯನ್ನು ಬಳಸುವ ಜನ ವಾಸಿಸುವ ಭೌಗೋಳಿಕ ಪರಿಸರ ಮಾತ್ರ ಅಭಿವೃದ್ಧಿ ಹೆಸರಿನ ಹಲವು ಯೋಜನೆಗಳ ಹೊಡೆತಕ್ಕೆ ಸಿಲುಕಿ ಛಿದ್ರವಾಗುತ್ತಿದೆ. ಅದನ್ನು ಉಳಿಸಿಕೊಳ್ಳಲು ಏದುಸಿರು ಬಿಡುತ್ತಿದ್ದೇವೆ.

ಹಸಿರು ಯೋಜನೆಗಳ ಹೆಸರಿನಲ್ಲಿ ನಮ್ಮ ಸಮೃದ್ಧ ಕಾಡುಗಳನ್ನು ಸವರಿಹಾಕಿ ವೈವಿಧ್ಯಮಯ ಜೀವಿಸಂಕುಲವನ್ನು ಒಕ್ಕಲೆಬ್ಬಿಸ ಲಾಗುತ್ತಿದೆ. ನದಿಗಳ ಕತ್ತನ್ನು ಹಿಸುಕಲಾಗುತ್ತಿದೆ. ನಿಸರ್ಗದೊಡನೆ ಸಹಜೀವನದ ಅರಿವಿದ್ದರೂ ಯೋಜನೆಗಳು ಹೊತ್ತು ತರುವ ತಾತ್ಕಾಲಿಕ ಅನುಕೂಲಗಳನ್ನು ನೆನೆದು ಶಾಶ್ವತವಾಗಿ ಬಂದೊದಗುವ ಅಪಾಯಗಳನ್ನು ಉಪೇಕ್ಷಿಸುವ ಜಾಣ- ಕಿವುಡುತನವನ್ನು ನಾವೆಲ್ಲ ರೂಢಿಸಿಕೊಂಡಿದ್ದೇವೆ. ಹೋರಾಟವೇನಿದ್ದರೂ ಕೆಲವು ಪರಿಸರಪ್ರಿಯರ ಮತ್ತು ಸಂಘಟನೆಗಳ ಕೆಲಸ ಎಂದು ನಮ್ಮ ಪಾಡಿಗೆ ನಾವು ಇರತೊಡಗಿದ್ದೇವೆ. ಭಾಷೆಯಿಂದ ಒಂದಾಗಿದ್ದ ನೆಲದ ಭಾಗೀಕರಣಕ್ಕೆ, ಬರಡೀಕರಣಕ್ಕೆ ಕಸುವು ತುಂಬುತ್ತಿದ್ದೇವೆ. ವಿವಿಧ ಯೋಜನೆಗಳಿಗಾಗಿ ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕದ ಹತ್ತು ಸಾವಿರ ಹೆಕ್ಟೇರ್‌ನಷ್ಟು ದಟ್ಟ ಅರಣ್ಯದ ಹನನವಾಗಿದೆ.

ಬೆಂಗಳೂರಿಗೆ ಕುಡಿಯುವ ನೀರು ಒದಗಿಸುವ ಶರಾವತಿ ಯೋಜನೆ, ರಾಜ್ಯದ ಗ್ರಿಡ್‍ಗೆ ಇನ್ನಷ್ಟು ‘ಶಕ್ತಿ’ ಪೂರೈಕೆ ಮಾಡಲು ಕೈಗಾ ಅಣು ವಿದ್ಯುತ್‌ ಉತ್ಪಾದನಾ ಜಾಲದ ವಿಸ್ತರಣೆ, ರಾಜಧಾನಿಯ ಪಕ್ಕದ ಜಿಲ್ಲೆಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು ಎತ್ತಿನಹೊಳೆ ತಿರುವು ಯೋಜನೆ, ಬನ್ನೇರುಘಟ್ಟ ಸಂರಕ್ಷಿತ ವಲಯದಲ್ಲಿ ಎಲಿವೇಟೆಡ್ ರಸ್ತೆ ನಿರ್ಮಾಣ ಯೋಜನೆ, ಕೇರಳದ ಸಂಪರ್ಕಕ್ಕೆ ಬಂಡೀಪುರದ ಕಾಡಿನ ರಸ್ತೆಯಲ್ಲಿ ರಾತ್ರಿ ವಾಹನ ಸಂಚಾರ, ಶರಾವತಿಯ ಬಳಿ ಭೂಮ್ಯಂತರ್ಗತ ವಿದ್ಯುತ್ ಉತ್ಪಾದನೆ, ಕಪ್ಪತಗುಡ್ಡದಲ್ಲಿ ಗಣಿಗಾರಿಕೆ, ಜೋಗದ ಜಲಪಾತಕ್ಕೆ ವರ್ಷವಿಡೀ ನೀರು... ಹೀಗೆ ಒಂದೇ, ಎರಡೇ ಹಲವು ಯೋಜನೆಗಳು ರಾಜ್ಯದ ಪರಿಸರವನ್ನು ಛಿದ್ರಗೊಳಿಸಲು ಹವಣಿಸುತ್ತಿವೆ.

ಈಗಾಗಲೇ ಕಡಿದ ಕಾಡಿನಿಂದ ಪ್ರತೀ ಮಳೆಗಾಲದಲ್ಲಿ ಪ್ರವಾಹದ ಪರಿಸ್ಥಿತಿ ತಲೆದೋರಿ, ಹಲವರು ಪ್ರಾಣ ಕಳೆದುಕೊಂಡರೆ ಲಕ್ಷಾಂತರ ಜನ ನಿರಾಶ್ರಿತರಾಗುತ್ತಿದ್ದಾರೆ. ನೀರು ಶೇಖರಿಸಿಡುವ ಉದ್ದೇಶದಿಂದ ಕಟ್ಟಿದ ಅಣೆಕಟ್ಟುಗಳೇ ಪ್ರವಾಹವನ್ನು ಸೃಷ್ಟಿಸುತ್ತಿವೆ. ಹೇಗಾದರಾಗಲಿ ಮಳೆ ಬಂದು ಆಣೆಕಟ್ಟು ತುಂಬಿದರೆ ಅಧಿಕಾರ ಕೈತಪ್ಪುವುದಿಲ್ಲ ಎಂದು ಆನಂದಿಸುವ ರಾಜಕೀಯ ನಾಯಕರ ಕೈಗೆ ಸಿಕ್ಕು ರಾಜ್ಯದ ಪರಿಸರ ನಲುಗುತ್ತಿದೆ. ಅರಣ್ಯೀಕರಣ ಮತ್ತು ಅದರ ಸಂರಕ್ಷಣೆ ಕುರಿತು ಮಾತನಾಡುವ ಕೇಂದ್ರ ಸರ್ಕಾರ, ಹಿಂದಿನ ಬಾಗಿಲಿನಿಂದ ಪರಿಸರ ವಿರೋಧಿ ಯೋಜನೆಗಳಿಗೆ ಮಂಜೂರಾತಿ ನೀಡುತ್ತಿದೆ. ಇರುವಷ್ಟೇ ಕಾಡನ್ನು ಮುತುವರ್ಜಿಯಿಂದ ಕಾದು, ಜೀವಸಂಕುಲವನ್ನು ಕಾಪಾಡಿದ್ದ ಅನೇಕ ಅಧಿಕಾರಿಗಳ, ಪರಿಸರಾಸಕ್ತರ ಕೆಲಸ ನಿರರ್ಥಕವಾಗುತ್ತಿದೆ.

‘ಎಷ್ಟೊಂದು ತೆರಿಗೆ ಕಟ್ತೀವಿ. ನೀರು, ಕರೆಂಟು, ರಸ್ತೆ, ಸೇತುವೆ ಸಿಗುತ್ತೆ ಅಂದ್ರೆ ಒಳ್ಳೇದಲ್ವಾ? ಬರೀ ಕಾಡಿನಿಂದ ಇದೆಲ್ಲಾ ಎಲ್ಲಿ ಸಿಗುತ್ತೆ’ ಎಂದು ಮುಗ್ಧವಾಗಿ ಪ್ರಶ್ನಿಸುವ ಅನೇಕರ ಮಾತನ್ನೇ ಬಂಡವಾಳ ಮಾಡಿಕೊಂಡಿರುವ ರಾಜಕೀಯ ನಾಯಕರು, ‘ಒಂದು ಗಿಡ ಕಡಿದ ಜಾಗದಲ್ಲಿ ಎರಡು ನೆಡ್ತೀವಿ, ಅರಣ್ಯ ಬೆಳೆಸ್ತೀವಿ, ನಾವು ಯೋಜನೆ ರೂಪಿಸಿರೋದೇ ನಿಮಗೆ ಅನುಕೂಲ ಆಗ್ಲಿ ಅಂತ’ ಎಂದು ಹೇಳುತ್ತಾರೆ.

ಬೆಂಗಳೂರಿಗೆ ಕುಡಿಯುವ ನೀರು ತರುವ ಶರಾವತಿ ಯೋಜನೆಯನ್ನೇ ಗಮನಿಸಿ. ಶರಾವತಿ ಹುಟ್ಟಿ ಹರಿಯುವ ಮಲೆನಾಡಿನಲ್ಲೇ ನೀರಿನ ಅಭಾವವಿದೆ. ತುಂಗಾಭದ್ರಾ ನದಿಯ ಮೇಲಿನ ಶಿವಮೊಗ್ಗ ಮತ್ತು ಅದರ ಪಕ್ಕದ ಊರುಗಳಲ್ಲಿ ನೀರಿನ ಟ್ಯಾಂಕರ್‌ಗಳ ನಿತ್ಯ ಮೆರವಣಿಗೆ ನಡೆದಿದೆ. ನದಿಯಿಂದ ನೀರೆತ್ತಲು ಸ್ಥಾಪಿಸಲಾಗುತ್ತಿರುವ ಸ್ಥಾವರದ ‘ಹಸಿರುಮಕ್ಕಿ’ಯು ಶರಾವತಿ ಅಭಯಾರಣ್ಯದಲ್ಲಿದೆ. ಅಲ್ಲಿಂದ ಯಗಚಿ ಜಲಾಶಯಕ್ಕೆ ನೀರು ಸಾಗಿಸುವ ಮಾರ್ಗದುದ್ದಕ್ಕೂ ಅರಣ್ಯವಿದೆ. ಶರಾವತಿಯಿಂದ ಸಾವಿರದ ಐನೂರು ಅಡಿಯವರೆಗೆ ನೀರೆತ್ತಿ 400 ಕಿ.ಮೀ. ದೂರದ ಬೆಂಗಳೂರಿಗೆ ಸಾಗಿಸಲು ಅಪಾರ ಪ್ರಮಾಣದ ವಿದ್ಯುತ್ ಬೇಕು. ಈಗ ಉತ್ಪಾದನೆ ಆಗುತ್ತಿರುವ ವಿದ್ಯುತ್ ಸಾಮಾನ್ಯ ಬಳಕೆಗೇ ಸಾಕಾಗುತ್ತಿಲ್ಲ. ಲಿಂಗನಮಕ್ಕಿಯಿಂದ ಬೆಂಗಳೂರಿಗೆ ನೀರು ಸಾಗುವ ಮಾರ್ಗದಲ್ಲಿ ಬರುವ ಯಾವ ಊರಿಗೂ ನೀರುಣಿಸದೆ ಬೆಂಗಳೂರಿಗೆ ಮಾತ್ರ ನೀರು ತರುವುದು ಎಷ್ಟು ಸರಿ? ಅಲ್ಲದೆ ಬೆಂಗಳೂರಿಗೆ ನೀರು ನೀಡುವ ಕಾವೇರಿ ಐದನೇ ಹಂತದ ಯೋಜನೆ ಪ್ರಗತಿಯಲ್ಲಿರುವಾಗ ಈ ಯೋಜನೆಯನ್ನು ರೂಪಿಸುವ ಅವಸರವಾದರೂ ಏನಿದೆ? ಮಳೆಗಾಲದಲ್ಲಿ ಶರಾವತಿಯಿಂದ ಹತ್ತು ಟಿಎಂಸಿ ಅಡಿಗಳಷ್ಟು ನೀರು ತರುತ್ತೇವೆ ಎನ್ನುವ ಸರ್ಕಾರಕ್ಕೆ ಬೆಂಗಳೂರಿನ ಬಳಿ ಅದನ್ನು ಶೇಖರಿಸಲು ಸ್ಥಳವಿಲ್ಲ ಎನ್ನುವುದರ ಅರಿವಿಲ್ಲವೆ?

ಈಗ ರಾಜ್ಯದ ವಿದ್ಯುತ್ ಕೊರತೆ ನೀಗಿಸಲು ಕೈಗಾ ಅಣು ವಿದ್ಯುತ್ ಸ್ಥಾವರದ ಯೋಜನೆಯ ವಿಸ್ತರಣೆ ಕಾರ್ಯ ಶುರುವಾಗಿದೆ. ಅಸಂಖ್ಯ ವಿದ್ಯುತ್ ಯೋಜನೆಗಳಿಂದ ತೀವ್ರ ಒತ್ತಡ ಅನುಭವಿಸುತ್ತಿರುವ ಉತ್ತರ ಕನ್ನಡ ಜಿಲ್ಲೆ ಈಗ ಮತ್ತೆರೆಡು ಘಟಕಗಳಿಂದ 54 ಹೆಕ್ಟೇರ್‌ಗಳಷ್ಟು ದಟ್ಟ ಅರಣ್ಯವನ್ನು ಕಳೆದುಕೊಂಡು ಇನ್ನಷ್ಟು ಹೈರಾಣಗೊಳ್ಳಲಿದೆ. ಈಗಿರುವ ನಾಲ್ಕು ಸ್ಥಾವರಗಳಿಂದ ಅಪಾರ ಪರಿಸರ ನಾಶವಾಗಿದೆ. ಮರ ಕಡಿಯಲು ಅನುಮತಿ ನೀಡಿ ಎಂದು ಸ್ಥಾವರದ ಅಧಿಕಾರಿಗಳು ಅರಣ್ಯ ಇಲಾಖೆಯನ್ನು ಒತ್ತಾಯಿಸುತ್ತಿದ್ದಾರೆ. ಅಣು ಸ್ಥಾವರಗಳು ದುಬಾರಿ ಮತ್ತು ಅಪಾಯಕಾರಿ ಎಂದು ಗೊತ್ತಿದ್ದರೂ ಅವುಗಳನ್ನು ವಿಸ್ತರಿಸುವುದು ಯಾವ ನ್ಯಾಯ? ಅಲ್ಲದೆ, ಕಾಳಿನದಿಗೆ ಮೇಲ್ದಂಡೆಯಲ್ಲಿ ಕಟ್ಟಲಾಗಿರುವ ನಾಲ್ಕು ಆಣೆಕಟ್ಟೆಗಳಿವೆ. ಅಣುಸ್ಥಾವರ ಬಂದ ಇಪ್ಪತ್ತು ವರ್ಷಗಳಲ್ಲಿ ಅದು ಹೊಮ್ಮಿಸಿದ ವಿಕಿರಣದಿಂದ ಆಗಿರುವ ಆರೋಗ್ಯ ಸಂಬಂಧಿ ಪ್ರತಿಕೂಲ ಪರಿಣಾಮಗಳ ಕುರಿತು ಹಲವು ಸಮೀಕ್ಷಾ ವರದಿಗಳು ಬಂದಿವೆ. ಅಲ್ಲದೆ ರಾಜ್ಯದಲ್ಲೀಗ ವಿದ್ಯುತ್ ಕೊರತೆ ಅಷ್ಟೇನೂ ಇಲ್ಲ. ಹಾಗಿದ್ದೂ ಈ ಯೋಜನೆಯ ಉದ್ದೇಶವಾದರೂ ಏನು? ಬೇರೆ ರಾಜ್ಯಗಳಿಗೆ ವಿದ್ಯುತ್ ಮಾರಲು ನಮ್ಮ ಅಮೂಲ್ಯ ಕಾಡನ್ನೇಕೆ ಕ್ಷಯಿಸಬೇಕು? ಪಶ್ಚಿಮ ಘಟ್ಟದ ತಪ್ಪಲಿನ ಕಾಳಿ ಹುಲಿ ಅರಣ್ಯವನ್ನು ಪರಿಸರ ಸೂಕ್ಷ್ಮವಲಯ ಎಂದು 2013ರಲ್ಲೇ ಕೇಂದ್ರ ಸರ್ಕಾರ ಘೋಷಿಸಿದೆ. ಅದರ ಪ್ರಕಾರ ಆ ಪ್ರದೇಶದಲ್ಲಿ ಯಾವುದೇ ಅರಣ್ಯೇತರ ಚಟುವಟಿಕೆ ನಡೆಸುವಂತಿಲ್ಲ.

ಆದರೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಈ ಯೋಜನೆಗೆ ಈಗಾಗಲೇ ಹಸಿರು ನಿಶಾನೆ ತೋರಿಸಿಬಿಟ್ಟಿವೆ. ಉತ್ತರ ಕನ್ನಡ ಜಿಲ್ಲಾ ಪರಿಸರ ಸಂರಕ್ಷಣಾ ಸಮಿತಿ, ಬೇಡ್ತಿ–ಅಘನಾಶಿನಿ ಕೊಳ್ಳ ಸಮಿತಿ, ವೃಕ್ಷ-ಲಕ್ಷ ಆಂದೋಲನದಂತಹ ಸಂಘಟನೆಗಳು ಮಾತ್ರವಲ್ಲದೆ ಸ್ಥಳೀಯರ ವಿರೋಧವಿದ್ದರೂ ಹೊಸ ಘಟಕದ ನಿರ್ಮಾಣ ಕೆಲಸ ಆರಂಭಿಸಲಾಗಿದೆ. ಈ ಅವಘಡವನ್ನು ತಪ್ಪಿಸಲು ಕೋರ್ಟ್‌ನ ಮೊರೆ ಹೋಗಲು ಕೆಲ ಪರಿಸರ ಸಂಘಟನೆಗಳು
ತೀರ್ಮಾನಿಸಿವೆ.

ಕೆಲವು ವರ್ಷಗಳ ಹಿಂದೆ ನೇತ್ರಾವತಿ ತಿರುವು ಎಂಬ ಹೆಸರಿನಲ್ಲಿ ಚರ್ಚೆಗೆ ಬಂದಿದ್ದ ಯೋಜನೆ ಈಗ ಬೆಂಗಳೂರಿನ ಆಸುಪಾಸಿನ ಐದು ಜಿಲ್ಲೆಗಳಿಗೆ ನೀರುಣಿಸಲು ಎತ್ತಿನಹೊಳೆ ಎಂದು ಮರುನಾಮಕರಣಗೊಂಡು ಪ್ರಾರಂಭವಾಗಿದೆ. ಕುಡಿಯುವ ನೀರಿನ ಯೋಜನೆ ಎಂಬ ಒಂದೇ ಕಾರಣಕ್ಕೆ ರಾಷ್ಟ್ರೀಯ ಹಸಿರು ಮಂಡಳಿ ಯೋಜನೆಗೆ ಅನುಮತಿ ನೀಡಿದೆ. ಇದಲ್ಲದೆ ನೇತ್ರಾವತಿ ಜಲಾನಯನ ಪ್ರದೇಶದಲ್ಲಿ 25 ಕಿರು ಜಲವಿದ್ಯುತ್ ಯೋಜನೆಗಳಿಗೆ ಅನುಮತಿ ನೀಡಿ ವರ್ಷಗಳೇ ಆಗಿವೆ. ಒಂದೇ ನದಿಗೆ ಅಷ್ಟೊಂದು ಒಡ್ಡು ನಿರ್ಮಿಸಿ ನದಿಯ ಸ್ವಾಭಾವಿಕ ಹರಿವನ್ನೇ ತಡೆದರೆ ಹರಿಯುವ ನೀರಿನಲ್ಲಿರುವ ಜೀವ ಸಂಕುಲದ ಗತಿಯೇನು? ಇಂಥ ಯೋಜನೆಗಳಿಂದ ಅಗ್ಗದ ವಿದ್ಯುತ್ ದೊರೆಯುತ್ತದೆ ಎಂದೂ ಬಿಂಬಿಸಲಾಗಿದೆ. ದಟ್ಟಡವಿಯಲ್ಲಿ ಹುಟ್ಟುವ ವಿದ್ಯುತ್ ಸಾಗಣೆಗೆ ತಂತಿ–ಕಂಬಗಳಿಗಾಗಿ ಮತ್ತಷ್ಟು ಅರಣ್ಯ ಬರಿದಾಗುತ್ತದೆ. ಇದನ್ನು ಪ್ರಶ್ನಿಸುವವರನ್ನೆಲ್ಲಾ ಅಭಿವೃದ್ಧಿ ವಿರೋಧಿಗಳು ಎಂದು ವರ್ಗೀಕರಿಸಲಾಗಿದೆ.

ಇನ್ನು ಬೆಂಗಳೂರಿನ ಶ್ವಾಸಕೋಶ ಎಂದೇ ಖ್ಯಾತವಾಗಿರುವ ಬನ್ನೇರುಘಟ್ಟ ಅರಣ್ಯ ತನ್ನ ನಡುವೆ ನಿರ್ಮಾಣಗೊಳ್ಳಲಿರುವ ಎಲಿವೇಟೆಡ್ ಹೈವೇ, ಪಕ್ಕದಲ್ಲೇ ತಲೆ ಎತ್ತಲಿರುವ ನಾಲ್ಕನೇ ಹಂತದ ‘ಸೂರ್ಯನಗರ’ದ ನಿರ್ಮಾಣ ಮತ್ತು ಬಿಎಂಆರ್‌ಡಿಎ ಯೋಜಿಸಿರುವ ಸ್ಯಾಟಲೈಟ್ ಟೌನ್‍ಶಿಪ್ ರಿಂಗ್ ರಸ್ತೆಯಿಂದ ತತ್ತರಿಸಿ ಹೋಗಲಿದೆ. ಕೇಂದ್ರ ಸಚಿವಾಲಯ ಹೊರಡಿಸಿದ್ದ ಕರಡು ಅಧಿಸೂಚನೆಯ ಪ್ರಕಾರ, ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿ (ಇಎಸ್‌ಜೆಡ್‌) 268.96 ಚ.ಕಿ.ಮೀ.ನಷ್ಟಿತ್ತು. ಅಂತಿಮ ಅಧಿಸೂಚನೆ ಹೊರಡುವುದಕ್ಕೂ ಮುನ್ನ ರಾಜ್ಯ ಸರ್ಕಾರ ಇಎಸ್‌ಜೆಡ್‍ನ ವ್ಯಾಪ್ತಿಯನ್ನು 168.84 ಚ.ದ.ಕಿ.ಮೀ.ಗೆ ಕಡಿತಗೊಳಿಸಲು ನಿರ್ಧರಿಸಿತ್ತು. ಇದಕ್ಕೆ ಪರಿಸರ ಕಾರ್ಯಕರ್ತರ ತೀವ್ರ ವಿರೋಧ ವ್ಯಕ್ತವಾದರೂ ವ್ಯಾಪ್ತಿ ಕಡಿತಗೊಳಿಸುವ ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಅನುಮೋದಿಸಿತ್ತು. ನಂತರ ‘ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಯನ್ನು ಮೊದಲಿದ್ದಷ್ಟೇ ಇರುವಂತೆ ನೋಡಿಕೊಳ್ಳಿ’ ಎಂದು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ. ಮುಂದೇನಾಯಿತು ಎಂಬುದು ಯಾರಿಗೂ ತಿಳಿದಿಲ್ಲ.

ಕರ್ನಾಟಕ ಗೃಹಮಂಡಳಿಯು ನಿರ್ಮಿಸಲು ಉದ್ದೇಶಿಸಿರುವ ಸೂರ್ಯನಗರದ ನಾಲ್ಕನೇ ಹಂತ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಿಂದ ಕೇವಲ ಎರಡು ಕಿ.ಮೀ. ದೂರವಿದೆ. ಈ ಪರಿಸರ ಸೂಕ್ಷ್ಮ ವಲಯದ ಹೊರ ಪರಧಿಯನ್ನು ಒಂದು ಕಿ.ಮೀ. ವ್ಯಾಪ್ತಿಗಿಳಿಸಲು ಕೇಂದ್ರ ಪರಿಸರ ಸಚಿವಾಲಯ ನಿರ್ಧರಿಸಿದೆ. ಹಾಗಾಗಿ ಸೂರ್ಯನಗರ ನಿರ್ಮಿಸಲು ಬೇಕಾದ ಭೂಮಿಯ ಸ್ವಾಧೀನ ಪ್ರಕ್ರಿಯೆ ಶುರುವಾಗಿದೆ. ಆದರೆ ಈ ಯೋಜನೆಗೆ ರಾಷ್ಟ್ರೀಯ ಹಸಿರು ಮಂಡಳಿಯಿಂದ ನಿರಾಕ್ಷೇಪಣಾ ಪತ್ರ ಸಿಕ್ಕಿಲ್ಲ. ‘ನಮ್ಮ ಗ್ರಾಮ, ಜಮೀನುಗಳು ಅರಣ್ಯದ ಅಂಚಿನಲ್ಲಿವೆ. ಗೃಹ ಮಂಡಳಿಯವರು ವಸತಿ ಬಡಾವಣೆ ಮಾಡಿದರೆ ಅಲ್ಲಿಂದ ಹೊರಡುವ ಕೊಳೆನೀರು ನಮ್ಮ ಬೆಳೆ ಮತ್ತು ಕಾಡಿನ ಪ್ರಾಣಿಗಳೆರಡಕ್ಕೂ ಹಾನಿಯುಂಟು ಮಾಡುತ್ತವೆ. ಆದ್ದರಿಂದ ಭೂಸ್ವಾಧೀನ ಪ್ರಕ್ರಿಯೆಯನ್ನು ನಿಲ್ಲಿಸಿ’ ಎಂದು ರೈತರು, ಮುಖ್ಯಮಂತ್ರಿಯವರನ್ನು ಅಗ್ರಹಿಸಿದ್ದಾರೆ.

ಅನೇಕಲ್ ಮತ್ತು ಹಾರೋಹಳ್ಳಿ ಮೂಲಕ ಬನ್ನೇರುಘಟ್ಟ ಮತ್ತು ಕನಕಪುರ ಸಂಪರ್ಕಿಸಲು ಬನ್ನೇರುಘಟ್ಟ ಅರಣ್ಯ ಪ್ರದೇಶದಲ್ಲಿ 700 ಕೋಟಿ ರೂಪಾಯಿ ವೆಚ್ಚದ 4.67 ಕಿ.ಮೀ ಉದ್ದದ ಮೇಲು ರಸ್ತೆಯನ್ನು ನಿರ್ಮಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದೆ. ಇದಲ್ಲದೆ ಹತ್ತು ಪಥಗಳ ಹೈವೇ ನಿರ್ಮಿಸಲು ಬೇಕಾಗುವ ಕಂಬಗಳನ್ನು ನಿಲ್ಲಿಸಲು ಈಗಿರುವ ಹಳೆಯ ರಸ್ತೆಯ ಎರಡೂ ಬದಿಯಲ್ಲಿ ಒಂದು ಕಿ.ಮೀಯಷ್ಟು ಉದ್ದದ ಸ್ಥಳವನ್ನೂ ಕೇಳಿದೆ.
ಅರಣ್ಯದ ಉತ್ತರ ಭಾಗಕ್ಕೆ ಮೈಸೂರು ಆನೆ ಸಂರಕ್ಷಿತ ವಲಯವಿದ್ದು ಕೃಷ್ಣಗಿರಿ, ಹೊಸೂರು, ಕಾವೇರಿ ಅಭಯಾರಣ್ಯಗಳ ಅನೆಗಳು ಈ ಭಾಗದಲ್ಲಿ ಕಾರಿಡಾರ್ ಹೊಂದಿವೆ. ಹೊಸದಾಗಿ ಬರುವ ಯಾವುದೇ ರಸ್ತೆಯಿಂದ ಅವುಗಳ ಆವಾಸಸ್ಥಾನಕ್ಕೆ ಧಕ್ಕೆಯಾಗಲಿದೆ ಎಂಬ ಅಭಿಪ್ರಾಯ ವನ್ಯಜೀವಿ ತಜ್ಞರದ್ದು. ದೇಶದ ಬೇರೆಕಡೆ ನಿರ್ಮಿಸಿರುವ ಎಲಿವೇಟೆಡ್ ರಸ್ತೆಗಳಿಂದ ಅನುಕೂಲವಾಗಿದೆ ಎಂದಿರುವ ಎನ್ವಿರಾನ್‍ಮೆಂಟಲ್ ಅಪ್ರೈಸಲ್ ಸಮಿತಿ ಸದಸ್ಯರು ಯೋಜನೆಯನ್ನು ಮುಂದುವರೆಸುವ ಇರಾದೆ ಹೊಂದಿದ್ದಾರೆ.

ಬನ್ನೇರುಘಟ್ಟ ನೇಚರ್ ಕನ್ಸರ್ವೇಶನ್ ಟ್ರಸ್ಟ್‌ ಸದಸ್ಯರು ‘ಇದು ಆನೆ ಕಾರಿಡಾರ್ ಮಾತ್ರವಲ್ಲ, ಚಿರತೆ, ಕರಡಿಯಂಥ ಪ್ರಾಣಿಗಳಿಗೆ ಆವಾಸ ಕಲ್ಪಿಸುವುದರಿಂದ ಮತ್ತು ಪಕ್ಕದ ಬೃಹತ್ ಬೆಂಗಳೂರಿನ ವಾಯುಗುಣದ ಮೇಲೆ ಪರಿಣಾಮ ಬೀರುವುದರಿಂದ ಅದನ್ನು ಅಲಕ್ಷಿಸಲಾಗದು’ ಎಂದಿದ್ದಾರೆ. ಈ ಮಧ್ಯೆ, ‘ತೀರಾ ಅನಿವಾರ್ಯವೆನಿಸಿದರೆ ಮಾತ್ರ ಸೂಕ್ಷ್ಮ ಪರಿಸರ ವಲಯದಲ್ಲಿ ರಸ್ತೆ ನಿರ್ಮಿಸಿ, ಇಲ್ಲವಾದರೆ ಬೇರೆ ಪರ್ಯಾಯ ಮಾರ್ಗದ ಕುರಿತು ಯೋಚಿಸಿ’ ಎಂದು ರಾಷ್ಟ್ರೀಯ ಹೆದ್ದಾರಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಪ್ರಾಧಿಕಾರ ಸುತ್ತೋಲೆ ಕಳುಹಿಸಿದೆ.

ಅಭಿವೃದ್ಧಿಯ ಅತೀವ ಒತ್ತಡಕ್ಕೆ ಸಿಲುಕಿರುವ ಪಶ್ಚಿಮಘಟ್ಟಗಳ ಒಡಲಿನಲ್ಲೇ ಈ ಯೋಜನೆಗಳು ಬೆಂಕಿ ಹಚ್ಚುತ್ತಿರುವುದು ವಿಪರ್ಯಾಸ. ಅಪರೂಪದ ಸಿಂಹಬಾಲದ ಕೋತಿಗಳ ಆವಾಸವೆನಿಸಿರುವ ಶರಾವತಿ ನದಿ ಕಣಿವೆ ಮತ್ತಷ್ಟು ಪ್ರಪಾತಕ್ಕೆ ಕುಸಿಯುತ್ತಿದೆ. ಎರಡೆರಡು ಭೂಮ್ಯಂತರ್ಗತ ಪಂಪ್ ಸ್ಟೋರೇಜ್ ವಿದ್ಯುದಾಗಾರಗಳನ್ನು ನಿರ್ಮಿಸಿ, ಒಡಲನ್ನು ಮತ್ತಷ್ಟು ಹಿಂಡಿ ಈಗಿರುವುದಕ್ಕಿಂತ ಶೇ 24ರಷ್ಟು ಹೆಚ್ಚು ವಿದ್ಯುತ್ ಉತ್ಪಾದಿಸಿ ರಾಜ್ಯ ಹಾಗೂ ಗೋವಾಗಡಿಯ ಹಾದಿಯಲ್ಲಿ ತಂತಿ ಹಾಕಲು 177 ಹೆಕ್ಟೇರ್ ಅರಣ್ಯ ಕಡಿಯಲು ಅನುಮತಿ ನೀಡಲಾಗಿದೆ. ವಾಸ್ತವವಾಗಿ ಈ ಯೋಜನೆಯಲ್ಲಿ ನೂರು ಮೆ.ವಾ ಉತ್ಪಾದಿಸಲು 124 ಮೆ.ವಾ. ವಿದ್ಯುತ್ ಖರ್ಚಾಗುತ್ತಿದೆ. ಕೆಳಗಿನ ಶೇಖರಣಾ ಸ್ಥಳದಿಂದ ಮೇಲಿನ ಜಲಾಗಾರಗಳಿಗೆ ನೀರೆತ್ತಲು, ಉತ್ಪಾದಿಸುವುದಕ್ಕಿತ ಹೆಚ್ಚಿನ ವಿದ್ಯುತ್ ಖರ್ಚಾಗುತ್ತದೆ. ಪ್ರಗತಿಯನ್ನೇ ಗುರಿಯಾಗಿಸಿಕೊಂಡು, ಉಳಿದೆಲ್ಲವೂ ಲೆಕ್ಕಕ್ಕೇ ಇಲ್ಲ ಎಂಬಂತೆ ವರ್ತಿಸುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪಶ್ಚಿಮಘಟ್ಟದಲ್ಲಿ ಇನ್ನೂ 20 ಯೋಜನೆಗಳಿಗೆ ಅಸ್ತು ಎಂದಿವೆ. ಈ ಎಲ್ಲ ಯೋಜನೆಗಳಿಂದ ಲಕ್ಷ, ಲಕ್ಷ ಮರಗಳನ್ನು ಕಡಿಯಲಾಗುತ್ತದೆ.

ಉತ್ತರ ಕರ್ನಾಟಕದ ಪಶ್ಚಿಮಘಟ್ಟ ಎಂಬ ಖ್ಯಾತಿಯ ಕಪ್ಪತಗುಡ್ಡದ ಅರಣ್ಯದ ಅಸ್ತಿತ್ವ ಕಳೆದ ಹಲವು ವರ್ಷಗಳಿಂದ ಅದರಲ್ಲಿನ ಕಣಿವೆಗಳಂತೆ ಏರಿಳಿಯುತ್ತಲೇ ಇದೆ. ಈ ಗುಡ್ಡಗಳ ಸಾಲು 33 ಸಾವಿರ ಹೆಕ್ಟೇರ್‌ನಷ್ಟು ಅರಣ್ಯ ಪ್ರದೇಶವನ್ನು ಹೊಂದಿದೆ. ಅದರಲ್ಲಿ ಸರ್ಕಾರ ಅರ್ಧದಷ್ಟನ್ನು ಮಾತ್ರ ಸಂರಕ್ಷಿತ ಪ್ರದೇಶ ಎಂದು ಘೋಷಿಸಿದೆ. ಕೆಂಪುಮಿಶ್ರಿತ ಮಣ್ಣಿನಿಂದ ಕೂಡಿದ ಈ ಗುಡ್ಡದಲ್ಲಿ 300ಕ್ಕೂ ಅಧಿಕ ಜಾತಿಯ ಔಷಧೀಯ ಸಸ್ಯಗಳಿವೆ. ಚಿರತೆ, ಕರಡಿ, ತೋಳ, ನರಿ, ಪುನುಗು ಬೆಕ್ಕು, ಕಾಡು ಕುರಿ, ಚುಕ್ಕೆ ಜಿಂಕೆ, ಮುಳ್ಳು ಹಂದಿ, ಸಾರಂಗ, ನವಿಲು ಮೊದಲಾದವುಗಳಿಂದ ಜೀವ ವೈವಿಧ್ಯ ಶ್ರೀಮಂತವಾಗಿದೆ. ಹೆಮಟೈಟ್, ಲಿಮೊನೈಟ್, ತಾಮ್ರ, ಕ್ಯಾಲ್ಸಿಯಂ, ಮ್ಯಾಂಗನೀಸ್ ಮತ್ತು ಚಿನ್ನ ಸೇರಿದಂತೆ ಹಲವು ಖನಿಜಗಳಿವೆ. ಈಗಾಗಲೇ ಗುಡ್ಡದಲ್ಲಿ ಗಾಳಿ ವಿದ್ಯುತ್ ಸ್ಥಾವರಗಳು ಸ್ಥಾಪಿತವಾಗಿವೆ. ಗಣಿಗಾರಿಕೆಯ ಹೆಸರಲ್ಲಿ ಲೂಟಿ ಹೊಡೆಯಲು ಕಾಯುತ್ತಿರುವ ಗಣಿ ಕಂಪನಿಗಳು ನಿರಂತರವಾಗಿ ಲಾಬಿ ಮಾಡುತ್ತಲೇ ಇವೆ. ಮೊದಲು ಕಪ್ಪತಗುಡ್ಡವನ್ನು ಸಂರಕ್ಷಿತ ಅರಣ್ಯ ಪ್ರದೇಶ ಎಂದು ಘೋಷಿಸಿದ್ದ ಸರ್ಕಾರ ನಂತರ ತನ್ನ ಆದೇಶವನ್ನು ಹಿಂಪಡೆದಿತ್ತು. ಮಠಾಧೀಶರು, ಪರಿಸರವಾದಿಗಳು, ವಿದ್ಯಾರ್ಥಿಗಳು, ರೈತರು ಹಾಗೂ ಸಾರ್ವಜನಿಕರ ನಿರಂತ ಹೋರಾಟದಿಂದ ಕಪ್ಪತಗುಡ್ಡ, ಗಣಿ ಕುಳಗಳ ಕೈಯಿಂದ ಸದ್ಯ ಬಚಾವಾಗಿದೆ. ರಾಜ್ಯ ಹೈಕೋರ್ಟ್ ಕಪ್ಪತಗುಡ್ಡವನ್ನು ಅಭಯಾರಣ್ಯ ಎಂದು ಕರೆದಿದೆ.
ಇವುಗಳ ಜೊತೆಗೆ ವಿಶ್ವವಿಖ್ಯಾತ ಪಕ್ಷಿಕಾಶಿ ರಂಗನತಿಟ್ಟಿನ ಬಳಿಯೂ ಬೆಂಗಳೂರು – ಮೈಸೂರು ಸಂಪರ್ಕಿಸುವ ಹೊಸ ರಸ್ತೆಯ ಅವಾಂತರ ಪ್ರಾರಂಭವಾಗಿದೆ. ಅತ್ತ ಬಂಡೀಪುರದಿಂದ ಕೇರಳವನ್ನು ಸಂಪರ್ಕಿಸುವ ರಸ್ತೆಯಲ್ಲಿ ರಾತ್ರಿ ವಾಹನ ಸಂಚಾರ ನಿಷೇಧವನ್ನು ಸರ್ವೋಚ್ಚ ನ್ಯಾಯಾಲಯ ಅನುಮೋದಿಸಿ ವರ್ಷಗಳಾಗಿವೆ. ಅಸಂಖ್ಯ ವನ್ಯಜೀವಿಗಳ ಆವಾಸಕ್ಕೆ ವಾಹನ ಸಂಚಾರದಿಂದ ಅಪಾಯವಿರುವುದು ಎಲ್ಲರಿಗೂ ಗೊತ್ತಿದೆ. ಆದರೆ ಮರಗಳ್ಳತನ, ಕಳ್ಳಬೇಟೆಯನ್ನೇ ದಂಧೆಯನ್ನಾಗಿ ಮಾಡಿಕೊಂಡಿರುವವರಿಗೆ ರಸ್ತೆಯಲ್ಲಿ ರಾತ್ರಿ ಸಂಚಾರ ಬೇಕೇ ಬೇಕಿದೆ. ಅದಕ್ಕೆ ತಿಂಗಳಿಗೆ ಒಮ್ಮೆಯಾದರೂ ಪ್ರಸ್ತಾಪ ಮಾಡುವುದು, ಪ್ರತಿಭಟನೆ ಮಾಡುವುದನ್ನು ಕೇರಳ ರಾಜ್ಯ ಹವ್ಯಾಸವನ್ನಾಗಿಸಿಕೊಂಡಿದೆ.

ಪರಿಸರವನ್ನು ನಾಶಮಾಡದೆ ಕಂಡುಕೊಳ್ಳವ ಅಭಿವೃದ್ಧಿ ಮತ್ತು ಅಭಿವೃದ್ಧಿಗೆ ಪೂರಕವಾಗುವಂತೆ ಉಳಿಸಿಕೊಳ್ಳುವ ಪರಿಸರ ಎರಡೂ ಆದ್ಯತೆಯಾಗಬೇಕು. ಅಭಿವೃದ್ಧಿ ಪ್ರಕೃತಿ ಕೇಂದ್ರಿತವಾಗಿದ್ದಾಗ ಅದು ಮಾನವೀಯವೂ ಸಕಲ ಜೀವ ಪರವೂ ಆಗಿರುತ್ತದೆ. ಆದರೆ ಇಂದಿನ ಅಭಿವೃದ್ಧಿ ಮಾನವ ಕೇಂದ್ರಿತವಾಗಿರುವುದರಿಂದ ಅದು ರೂಕ್ಷವೂ ಅಮಾನವೀಯವೂ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT