ಭಾನುವಾರ, ಜನವರಿ 19, 2020
27 °C

ಮರಗಣತಿಗೆ ‘ಆ್ಯಪ್‌’ ಗ್ರಹಣ!

ಅಖಿಲ್‌ ಕಡಿದಾಳ್‌ Updated:

ಅಕ್ಷರ ಗಾತ್ರ : | |

ಮರಗಣತಿ

ನಗರದಲ್ಲಿ ಮರಗಳ ಗಣತಿ ನಡೆಸುವ ಸ್ವಯಂಸೇವಕರು ಹೆಸರು ನೋಂದಾಯಿಸಿಕೊಳ್ಳುವ ಅವಧಿ ಕಳೆದ ತಿಂಗಳು (ಡಿಸೆಂಬರ್‌) ಮುಗಿದಿದೆ. ಗಣತಿ ಆ್ಯಪ್‌ ಅಭಿವೃದ್ಧಿ ಕೆಲಸ ಇನ್ನೂ ಪೂರ್ಣಗೊಳ್ಳದ ಕಾರಣ ಸ್ವಯಂಸೇವಕರು ಇನ್ನೂ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. 

ಕರ್ನಾಟಕ ರಾಜ್ಯ ರಿಮೋಟ್‌ ಸೆನ್ಸಿಂಗ್‌ ಅಪ್ಲಿಕೇಷನ್‌ ಸೆಂಟರ್‌ (ಕೆಎಸ್‌ಆರ್‌ಸಿಎಸಿ) ಮರಗಳ ಗಣತಿಗಾಗಿ ಅಭಿವೃದ್ಧಿಪಡಿಸುತ್ತಿರುವ ಆ್ಯಪ್‌ ಇನ್ನೂ ನಿರ್ಮಾಣ ಹಂತದಲ್ಲಿದೆ. 

ಸ್ವಯಂಸೇವಕರು ನಗರದಲ್ಲಿ ಕೈಗೊಳ್ಳುವ ಗಣತಿಯ ವೇಳೆ ಪ್ರತಿಯೊಂದು ಮರದ ಜಾತಿ, ಆರೋಗ್ಯ, ವಯಸ್ಸು ಇತ್ಯಾದಿ ವಿವರಗಳನ್ನು ನಮೂದಿಸಬೇಕಾಗುತ್ತದೆ. ವೈಜ್ಞಾನಿಕವಾಗಿ ವರ್ಗೀಕರಿಸಿದ ಸಮಗ್ರ ಮಾಹಿತಿಯನ್ನು ಆ್ಯಪ್‌ಗೆ ಅಪ್‌ಲೋಡ್‌ ಮಾಡಬೇಕಾಗುತ್ತದೆ. ನಂತರ ಈ ಮಾಹಿತಿಯನ್ನು ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಗೆ (ಐಡಬ್ಲ್ಯೂಎಸ್‌ಟಿ) ರವಾನಿಸಲಾಗುವುದು. ಸಂಸ್ಥೆಯು ಮಾಹಿತಿಯನ್ನು ಪರಿಷ್ಕರಿಸಿ ಅಂತಿಮವಾಗಿ ಗಣತಿಯ ವರದಿ ಸಿದ್ಧಪಡಿಸಲಿದೆ.

‘ಆ್ಯಪ್‌ ಬಹುತೇಕ ಸಿದ್ಧವಾಗಿದ್ದು, ಇನ್ನೂ ಹೆಸರು ಇಟ್ಟಿಲ್ಲ. ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್‌) ವ್ಯವಸ್ಥೆಯೊಂದನ್ನು ಸೇರ್ಪಡೆ ಮಾಡುವುದು ಬಾಕಿ ಇದೆ’  ಎನ್ನುತ್ತಾರೆ ಮಗರಳ ಗಣತಿ ನೋಡಲ್‌ ಅಧಿಕಾರಿಯೂ ಆಗಿರುವ ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ವಿ. ಶೆಟ್ಟೆಪ್ಪನರ್‌. 

ನಗರದಲ್ಲಿ ಮರಗಳಿರುವ ಸ್ಥಳವನ್ನು ಕರಾರುವಾಕ್ಕಾಗಿ ಗುರುತಿಸಲು (ಮ್ಯಾಪಿಂಗ್‌) ಜಿಐಎಸ್‌ ವ್ಯವಸ್ಥೆ ಅತ್ಯಗತ್ಯ. ಇನ್ನೂ 15 ದಿನಗಳಲ್ಲಿ ಆ್ಯಪ್‌ ಕಾರ್ಯಾಚರಣೆಗೆ ಸಿದ್ಧವಾಗಲಿದೆ ಎನ್ನುವುದು ಅವರ ವಿಶ್ವಾಸ.  

ಬಿಬಿಎಂಪಿ ವ್ಯಾಪ್ತಿ ಅಡಿ ಎಂಟು ವಲಯಗಳಲ್ಲಿ ಮರಗಳ ಗಣತಿ ಕಾರ್ಯ ನಡೆಯಲಿದೆ. ಬಿಬಿಎಂಪಿ ಒಂದು ವಲಯದಲ್ಲಿ 24ರಿಂದ 25 ವಾರ್ಡ್‌ಗಳಿವೆ. ಪ್ರತಿ ವಾರ್ಡ್‌ಗೆ ಮೂರರಿಂದ ನಾಲ್ಕು ಸ್ವಯಂಸೇವಕರು ಬೇಕಾಗುತ್ತದೆ. ಮೊದಲ ಹಂತದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಅಂದರೆ, ರಸ್ತೆಬದಿಯ ಮತ್ತು ಬೀದಿಗಳಲ್ಲಿರುವ ಮರಗಳ ಎಣಿಕೆ ನಡೆಯಲಿದೆ.ಎರಡನೇ ಹಂತದಲ್ಲಿ ಖಾಸಗಿ ಜಾಗದಲ್ಲಿರುವ ಗಿಎ, ಮರಗಳ ಎಣಿಕೆ ಕಾರ್ಯ ನಡೆಯಲಿದೆ. ಈ ಯೋಜನೆ ಪೂರ್ಣಗೊಳ್ಳಲು ಮೂರು ವರ್ಷ ಹಿಡಿಯುತ್ತದೆ ಎಂದು ಶೆಟ್ಟೆಪ್ಪನವರ್‌ ‘ಮೆಟ್ರೊ’ಗೆ ವಿವರಿಸಿದರು.

ಇಲ್ಲಿಯವರೆಗೆ ಗಣತಿ ಕಾರ್ಯದಲ್ಲಿ ಸ್ವಯಂಸೇವಕರಾಗಿ ಕೆಲಸ ಮಾಡಲು 87 ಮಂದಿ ಹೆಸರು ನೋಂದಾಯಿಸಿದ್ದಾರೆ. ಹೆಸರು ನೋಂದಣಿ ಇನ್ನೂ ನಡೆಯುತ್ತಿರುವ ಕಾರಣ ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ಹೇಳಿದೆ. 

ಶಿಸ್ತುಬದ್ಧ ವೈಜ್ಞಾನಿಕ ವರ್ಗೀಕರಣದ ನಂತರ ಪ್ರತಿಯೊಂದು ಮರದ ಮೇಲೂ ಸಮಗ್ರ ವಿವರ ಅಂಟಿಸಲಾಗುತ್ತದೆ. ಮರಗಳಿಗೆ ನಿರ್ದಿಷ್ಟ ಸಂಖ್ಯೆ ನೀಡಲಾಗುತ್ತದೆ. ಮರದ ವಯಸ್ಸು, ಸ್ಥಳೀಯ ಹೆಸರು, ಸಾಮಾನ್ಯ ಹೆಸರು, ವೈಜ್ಞಾನಿಕ ಹೆಸರು, ಜಾತಿ, ವರ್ಗ, ಪ್ರಬೇಧ ಮತ್ತು ಆರೋಗ್ಯದ ವಿವರಗಳಿರುತ್ತವೆ. ಸ್ವಯಂಸೇವಕರು ನಮೂದಿಸುವ ಅಂಕಿ, ಸಂಖ್ಯೆ, ದಾಖಲೆಗಳನ್ನು ಸಸ್ಯಶಾಸ್ತ್ರಜ್ಞರು ಮತ್ತು ಸಸ್ಯಗಳ ವೈಜ್ಞಾನಿಕ ವರ್ಗೀಕರಣ ವಿಜ್ಞಾನಿಗಳು (ಟ್ಯಾಕ್ಸಾನಮಿಸ್ಟ್‌) ಪರಿಶೀಲಿಸಿ, ಅಂತಿಮಗೊಳಿಸಲಿದ್ದಾರೆ. httpp://bengalurutreecensus ವೆಬ್‌ಸೈಟ್‌ನಲ್ಲಿ ಗಣತಿಯ ಎಲ್ಲ ವಿವರ ಪ್ರಕಟಿಸಲಾಗುತ್ತದೆ. 

ಆ್ಯಪ್‌ನಲ್ಲಿ ಸಿಗಲಿದೆ ಸಮಗ್ರ ಮಾಹಿತಿ
ಗಣತಿಯ ವೇಳೆ ಸ್ವಯಂಸೇವಕರು ಪ್ರತಿ ಮರದ ಜಾತಿ, ಪ್ರಬೇಧ, ಆರೋಗ್ಯ, ವಯಸ್ಸು, ಸ್ಥಳೀಯ ಮತ್ತು ವೈಜ್ಞಾನಿಕ ಹೆಸರು ಮತ್ತು ಮರ ಅದು ಇರುವ ಸ್ಥಳ ಇತ್ಯಾದಿ ವಿವರಗಳನ್ನು ನಮೂದಿಸಬೇಕಾಗುತ್ತದೆ. ಹೀಗೆ ಕ್ರೋಡೀಕರಿಸಿದ ಸಮಗ್ರ ಮಾಹಿತಿಯನ್ನು ಆ್ಯಪ್‌ಗೆ ಅಪ್‌ ಲೋಡ್‌ ಮಾಡಲಾಗುತ್ತದೆ.

ಈ ಮಾಹಿತಿ ನೇರವಾಗಿ ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಗೆ (ಐಡಬ್ಲ್ಯೂಎಸ್‌ಟಿ) ಕೈ ಸೇರುತ್ತದೆ. ಈ ಮಾಹಿತಿಯನ್ನು ಪರಿಷ್ಕರಿಸುವ ಸಂಸ್ಥೆಯು ನಂತರ ಅದನ್ನು ವೈಜ್ಞಾನಿಕವಾಗಿ ವರ್ಗೀಕರಿಸಿ, ಅಂತಿಮ ವರದಿ ಸಿದ್ಧಪಡಿಸಲಿದೆ. ಸ್ವಯಂಸೇವಕರು ನೀಡುವ ವರದಿ ಮತ್ತು ದಾಖಲೆಗಳನ್ನು ಸಸ್ಯಶಾಸ್ತ್ರಜ್ಞರು, ವಿಜ್ಞಾನಿಗಳು ಮತ್ತು ವರ್ಗೀಕರಣ ತಜ್ಞರು (ಟ್ಯಾಕ್ಸಾನಮಿಸ್ಟ್‌) ಪರಿಶೀಲಿಸಿ, ಅಂತಿಮಗೊಳಿಸಲಿದ್ದಾರೆ.

ವೈಜ್ಞಾನಿಕ ವರ್ಗೀಕರಣ ಅಂತಿಮವಾದ ನಂತರ ಮರಗಳಿಗೆ ಸಂಖ್ಯೆ ನೀಡಲಾಗುತ್ತದೆ. ಪ್ರತಿಯೊಂದು ಮರದ ಮೇಲೂ ಸಮಗ್ರ ಮಾಹಿತಿ ನಮೂದಿಸಲಾಗುತ್ತದೆ. ಅದರಲ್ಲಿ ಮರ ಇರುವ ಸ್ಥಳ, ಅದರ ವಯಸ್ಸು, ಆರೋಗ್ಯ, ಸ್ಥಳೀಯ ಹೆಸರು, ಸಾಮಾನ್ಯ ಹೆಸರು, ವೈಜ್ಞಾನಿಕ ಹೆಸರು, ಜಾತಿ, ಪ್ರಬೇಧ ಇತ್ಯಾದಿ ವಿವರಗಳಿರುತ್ತವೆ.

* ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ಎಂಟು ವಲಯಗಳಲ್ಲಿ ನಡೆಯಲಿದೆ ಮರಗಳ ಗಣತಿ ಕಾರ್ಯ  

* ಬಿಬಿಎಂಪಿಯ ಒಂದು ವಲಯದಲ್ಲಿ ಸಾಮಾನ್ಯವಾಗಿ 24ರಿಂದ 25 ವಾರ್ಡ್‌ಗಳಿವೆ

* ಪ್ರತಿ ವಾರ್ಡ್‌ಗೆ ಕನಿಷ್ಠ ಮೂರರಿಂದ ನಾಲ್ಕು ಸ್ವಯಂಸೇವಕರ ನಿಯೋಜನೆ 

* ಮೊದಲ ಹಂತದಲ್ಲಿ ಸಾರ್ವಜನಿಕ ಸ್ಥಳಗಳಾದ ರಸ್ತೆಬದಿ ಮತ್ತು ಬೀದಿಗಳಲ್ಲಿರುವ ಮರಗಳ ಎಣಿಕೆ 

* ಎರಡನೇ ಹಂತದಲ್ಲಿ ಖಾಸಗಿ ಜಾಗದಲ್ಲಿರುವ ಗಿಡ, ಮರ ಎಣಿಕೆ ಕಾರ್ಯ ಕೈಗೆತ್ತಿಕೊಳ್ಳಲಿರುವ ಬಿಬಿಎಂಪಿ

* ಗಣತಿ ಪೂರ್ಣಗೊಳ್ಳಲು ಕನಿಷ್ಠ ಮೂರು ವರ್ಷ ಕಾಲಾವಕಾಶ  

* ಗಣತಿ ಕಾರ್ಯಗಳ ಮಾಹಿತಿ httpp://bengalurutreecensus ವೆಬ್‌ಸೈಟ್‌ನಲ್ಲಿ ಪ್ರಕಟ

*
ನಗರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿರುವ ಗಿಡ, ನರಗಳ ಸಂಖ್ಯೆ ಮಾತ್ರವಲ್ಲ, ಅವುಗಳ ಆರೋಗ್ಯ ಅರಿಯುವುದು ಮತ್ತು ವೈಜ್ಞಾನಿಕ ವರ್ಗೀಕರಣ ಮಾಡುವುದು ಮರ ಗಣತಿಯ ಮುಖ್ಯ ಉದ್ದೇಶ
– ವಿ. ಶೆಟ್ಟಪ್ಪನವರ್‌, ಮರಗಣತಿ ನೋಡಲ್‌ ಅಧಿಕಾರಿ  

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು