ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ: ಮಕ್ಕಳ ಮನದಾಳ ತಲುಪುವುದೆಂತು?

ಮಕ್ಕಳ ದಿನಾಚರಣೆ ವಿಶೇಷ
Last Updated 10 ನವೆಂಬರ್ 2018, 20:00 IST
ಅಕ್ಷರ ಗಾತ್ರ

ಕಾಡಿನ ಹಸಿರೆಲ್ಲ ಮಾಯವಾಗುತ್ತಿದೆ; ನೀರು, ಗಾಳಿ, ಮಣ್ಣು ವಿಷವಾಗುತ್ತಿವೆ! ಇವನ್ನೆಲ್ಲ ಗಮನಿಸುವಾಗ ಭವಿಷ್ಯದ ಕುರಿತು ಭಯ ಮೂಡದಿರದು. ಹಾಗೆಂದು ಜವಾಬ್ದಾರಿ ಹೊರಬೇಕಾದ ದೊಡ್ಡವರೇ ದಿಕ್ಕೆಟ್ಟು ಕುಳಿತರೆ, ಎಳೆಯರಿಗೆ ಸೃಷ್ಟಿಯ ಸಹಜ ಸೌಂದರ್ಯ ಪರಿಚಯಿಸಿ ಭವಿಷ್ಯದ ಹೊಂಗನಸು ಬಿತ್ತುವವರಾರು? ಪರಿಸರದ ಆರೋಗ್ಯಕ್ಕಾಗಿ ಇಂದು ಕೈಗೊಳ್ಳಲೇಬೇಕಾದ ಕರ್ತವ್ಯ ನಿರ್ವಹಿಸುತ್ತಲೇ, ನಾಳೆಯ ವಾರಸುದಾರರಾದ ಮಕ್ಕಳಲ್ಲೂ ಅರಿವು ಮೂಡಿಸುವ ಪರಿಸರ ಶಿಕ್ಷಣ ತೀರಾ ಅಗತ್ಯ. ಇದು ವರ್ತಮಾನದ ಜವಾಬ್ದಾರಿಯಿಂದ ನಾವು ನುಣುಚಿಕೊಳ್ಳುವ ದಾರಿಯಾಗಿಬಿಡಬಹುದೆಂಬ ಸಂದೇಹವೂ ಒಮ್ಮೊಮ್ಮೆ ಕಾಡದಿರದು. ಮುಂಬರುವ ತಲೆಮಾರುಗಳನ್ನು ನಮಗಿಂತಲೂ ಹೆಚ್ಚು ಜವಾಬ್ದಾಯುಳ್ಳವರಾಗಿ ರೂಪಿಸಲು ಇದು ಅವಶ್ಯ ಎಂಬುದೇ ನಾವು ಅದಕ್ಕೆ ಹೇಳಬಹುದಾದ ಸಮಾಧಾನ.

ಹೀಗಾಗಿಯೇ ರಾಷ್ಟ್ರೀಯ ಶಿಕ್ಷಣನೀತಿಯು ಪರಿಸರ ಶಿಕ್ಷಣಕ್ಕೆ ಆದ್ಯತೆ ನೀಡಿದ್ದು. ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (2005) ಸಹ ಇದರ ದಿಕ್ಕುದೆಸೆಗಳನ್ನು ಸೂಚಿಸಿದೆ. ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಶಾಲಾ- ಕಾಲೇಜುಗಳಲ್ಲಿ ಪರಿಸರ ಶಿಕ್ಷಣವು ಕಡ್ಡಾಯವಾಗಿ ದಶಕಗಳೇ ಸಂದಿವೆ. ಶಿಕ್ಷಣದ ಗುಣಮಟ್ಟವನ್ನು ನಿಯಂತ್ರಿಸುವ ಎನ್.ಸಿ.ಇ.ಆರ್.ಟಿ. ಹಾಗೂ ಯು.ಜಿ.ಸಿಗಳಂಥ ಸಂಸ್ಥೆಗಳು ಪಠ್ಯಗಳನ್ನೂ, ಪೂರಕ ಓದಿನ ಸಾಮಗ್ರಿಗಳನ್ನೂ ಸಿದ್ಧಪಡಿಸಿವೆ.

ಆದರೆ, ಇವೆಲ್ಲವೂ ಮಕ್ಕಳನ್ನು ಪರಿಣಾಮಕಾರಿಯಾಗಿ ತಲುಪುತ್ತಿವೆಯೇ? ಸಂಪೂರ್ಣವಾಗಿ ಸಫಲವಾಗಿವೆ ಎನ್ನಲು ಸಾಧ್ಯವಾಗುತ್ತಿಲ್ಲವಲ್ಲ! ಶಿಕ್ಷಣವನ್ನು ಆಹ್ಲಾದಕರವಾಗಿಯೂ, ಕಲಿಕೆಯ ಫಲಶ್ರುತಿಯನ್ನು ಪರಿಣಾಮಕಾರಿಯಾಗಿಯೂ ಮಾಡುವಲ್ಲಿ ಸೋಲುವ ಶೈಕ್ಷಣಿಕ ಕ್ಷೇತ್ರದ ಯಾವತ್ತಿನ ನ್ಯೂನತೆಗಳು ಇದಕ್ಕೆ ಮುಖ್ಯ ಕಾರಣವಾಗಿರಬಹುದು. ಇನ್ನೂ ಒಂದು ಗಮನಾರ್ಹ ಕಾರಣವಿದೆ. ನೆಲ- ಜಲ- ಕಾಡಿನ ಸಂರಕ್ಷಣೆಯ ಸಂಗತಿಗಳನ್ನೆಲ್ಲ ಮಾಹಿತಿ ನೆಲೆಯನ್ನೂ ಮೀರಿ, ಮಕ್ಕಳ ಅರಿವು-ಅನುಭವಕ್ಕಿಳಿಸುವ ಪ್ರಯತ್ನದಲ್ಲಿ ಸೋಲುತ್ತಿರುವುದು. ಪರಿಸರ ರಕ್ಷಿಸುವ ತುರ್ತು ಅಗತ್ಯವನ್ನು ಮಗುವೊಂದು ಪ್ರತಿ ಕ್ಷಣವೂ ಮನಗಾಣಬೇಕಾದರೆ, ಕಲಿಕೆ ಅನುಭವ ವೇದ್ಯವಾಗಬೇಕಲ್ಲವೇ? ಪರಿಸರ ಶಿಕ್ಷಣವು ಶಾಲೆಯಂಗಳವನ್ನೂ ಮೀರಿ ವಿಸ್ತರಣೆಯಾಗಬೇಕಾದ ಮತ್ತು ಪರಿಣಾಮಕಾರಿಯಾದ ಜೀವನ ಶಿಕ್ಷಣವಾಗಿ ರೂಪುಗೊಳ್ಳಬೇಕಾದ ಅಗತ್ಯವಿರುವುದು ಅದಕ್ಕಾಗಿ.

ಮಕ್ಕಳು ಮೂಲತಃ ಪ್ರಕೃತಿ ಸೌಂದರ್ಯದ ಉಪಾಸಕರೇ. ಹೂವೊಂದರ ಸೌಂದರ್ಯವನ್ನೋ, ಚಿಟ್ಟೆಯೊಂದರ ಅನನ್ಯತೆಯನ್ನೋ ಸಹಜವಾಗಿಯೇ ಆಸ್ವಾದಿಸಬಲ್ಲರು. ಅವುಗಳ ಹಿಂದಿನ ಸೃಷ್ಟಿ, ತತ್ವವನ್ನು ಅರುಹಲು ಮಾತ್ರ ಪರಿಸರ ಶಿಕ್ಷಣದ ದೀಕ್ಷೆ ಬೇಕು. ದೂರ ದೇಶದ ಹಿಮ ಪರ್ವತಗಳು ಕರಗಿದರೆ ನಮ್ಮೂರಿಗೇನಾಗಬಹುದೆಂಬ ಕಾರ್ಯಕಾರಣ ಸಂಬಂಧವನ್ನು ಗ್ರಹಿಸಲೂ ಅದು ಕಲಿಸಬಲ್ಲದು. ಅಭಿವೃದ್ಧಿಯ ಅಲೆಯಲ್ಲಿ ತೇಲಿಬರುವ ಕೈಗಾರಿಕೆಗಳಿಂದಾಗುವ ನೀರು-ಗಾಳಿಯ ಮಾಲಿನ್ಯದಿಂದಾಗುವ ನಷ್ಟವೇನು ಎಂದು ಲೆಕ್ಕ ಹಾಕಲೂ ಅರಿಯಬಹುದು. ಅಧುನಿಕ ಗ್ರಾಹಕರಾಗಿ ಪರಿಸರ ನಾಶದಲ್ಲಿ ನಮ್ಮ ಪಾತ್ರವೂ ಇದೆಯೆಂಬ ವಿವೇಕವನ್ನೂ ಮೂಡಿಸಬಲ್ಲದು. ಇವನ್ನೆಲ್ಲ ಅರಿತ ಮೇಲೂ, ಜಗತ್ತೇ ಇಂಥ ದಾರಿಯಲ್ಲಿ ಸಾಗುತ್ತಿರುವಾಗ, ತಾನೊಬ್ಬ ಏನು ಮಾಡಲು ಸಾಧ್ಯ ಎಂದೋ ಅಥವಾ ತನ್ನೊಬ್ಬನ ಪ್ರಯತ್ನವು ಏನು ಫಲ ನೀಡೀತೆಂದೋ ಯುವಜನರು ಋಣಾತ್ಮಕ ನಿಲುವು ಕೈಗೊಳ್ಳುವ ಸಾಧ್ಯತೆಗಳೂ ಇರುತ್ತವೆ. ಮಕ್ಕಳ ಈ ಬಗೆಯ ಗೊಂದಲ ಮತ್ತು ಜಿಜ್ಞಾಸೆಗಳಿಗೆ ಪರಿಹಾರ ಒದಗಿಸುವುದೇ ಪರಿಸರ ಶಿಕ್ಷಣದ ಮುಂದಿರುವ ಇಂದಿನ ಸವಾಲು. ಬದುಕಿನ ಅಡಿಪಾಯವಾದ ನಿಸರ್ಗದ ರಕ್ಷಣೆಗಾಗಿನ ಒಂದೊಂದು ಕಿರು ಪ್ರಯತ್ನವೂ ಬೃಹತ್ ಬದಲಾವಣೆಗೆ ದಾರಿಯಾದೀತೆಂಬ ವಿಶ್ವಾಸ ಮೂಡಿಸುವುದೇ ಇಂದಿನ ಜರೂರತ್ತು ಅಲ್ಲವೇ?

ಮಕ್ಕಳ ಅನುಭವದಂಗಳದ ಪ್ರಶ್ನೆಗಳನ್ನು ಉತ್ತರಿಸಲು ಪರಿಸರ ಶಿಕ್ಷಣದ ಚಟುವಟಿಕೆಗಳು ತೊಡಗಿದ್ದಾದರೆ, ಮುಂದಿನ ದಾರಿಯನ್ನು ಅವರೇ ತೋರಿಯಾರು. ಸಮಸ್ಯೆಗಳನ್ನು ಪರಿಹರಿಸುವ ನವೀನ ತಂತ್ರಗಳೋ, ಯೋಚನಾ ಕ್ರಮಗಳೋ ಅಥವಾ ಪರಿಸರ ಸ್ನೇಹಿ ಜೀವನ ವಿಧಾನಗಳೋ ಜಾಗೃತ ಎಳೆಯರಿಂದ ಹೊರಹೊಮ್ಮಬಹುದು. ಪಟಾಕಿ ಅಥವಾ ಆಹಾರದಲ್ಲಿ ಬಳಸುವ ಕೃತಕ ಬಣ್ಣಗಳು ಆರೋಗ್ಯವನ್ನು ಹದಗೆಡಿಸುವುದೆಂದು ಮಕ್ಕಳಿಗೆ ಖಚಿತವಾದರೆ, ಈ ಜಾಗೃತಿ ಎಲ್ಲೆಡೆ ಹರಡುವುದು ಸುಲಭ. ಎಚ್ಚೆತ್ತ ಮಕ್ಕಳ ನಿರ್ಧಾರಕ್ಕೆ ಮಣಿಯುವ ಪಾಲಕರು ಮತ್ತು ಸಮಾಜ ಸೃಜಿಸುವ ಅರಿವಿನ ಸುನಾಮಿಗೆ ಸರ್ಕಾರಗಳು ಸೂಕ್ತವಾಗಿ ಸ್ಪಂದಿಸಲೇಬೇಕಲ್ಲವೇ? ದಶಕಗಳಿಂದ ಸಾಧಿಸಲಾಗದ್ದು ವರ್ಷಗಳಲ್ಲಿ ಸಾಧ್ಯವಾದೀತು!

ಹಾಗಾದರೆ, ಮಕ್ಕಳ ಮನದಾಳವನ್ನು ತಲುಪುವುದೆಂತು? ಪ್ರಕೃತಿಯೊಳಗಣ ವಿಸ್ಮಯ ಮಕ್ಕಳ ಭಾವಕೋಶಕ್ಕಿಳಿಯಬೇಕು. ಅವರ ಅನುಭವಕ್ಕೊಗ್ಗುವ ವಿದ್ಯಮಾನಗಳನ್ನೇರಿಯೇ ಸಂಕೀರ್ಣ ಪರಿಸರ ತತ್ವಗಳನ್ನು ವಿವರಿಸಬೇಕು. ಕಾರ್ಖಾನೆಯೊಂದು ನಿರ್ಮಿಸುವ ತ್ಯಾಜ್ಯ ತಾಣ ಅಥವಾ ಕೊಳಚೆಯುಕ್ತ ಕೆರೆಯೊಂದರ ಭೇಟಿಯು ಮಾಲಿನ್ಯದ ಗಂಭೀರತೆಯನ್ನು ಮಕ್ಕಳ ಅನುಭವಕ್ಕೆ ತರಬಲ್ಲದು. ಬರದಲ್ಲಿ ಜನರು ತೊಟ್ಟು ನೀರಿಗೂ ಹಪಹಪಿಸುವ ದೃಶ್ಯಾವಳಿಯೊಂದು ಅವರ ಮನವನ್ನು ಕಲಕೀತು. ಇಂಥ ಹೃದಯಸ್ಪರ್ಶಿ ಅಂಶಗಳಿಂದಲೇ ಆರಂಭಿಸಿ, ಆ ಘೋರ ಪರಿಣಾಮಮಗಳ ಹಿಂದಿನ ಕಾರಣಗಳನ್ನು ಹಿಮ್ಮುಖವಾಗಿ ಗುರುತಿಸುತ್ತ ಸಾಗಬೇಕು. ಜೊತೆಗೆ, ಅವನ್ನು ಸರಿಪಡಿಸುವ ದಾರಿಗಳ ಕುರಿತೂ ಚಿಂತಿಸಬೇಕು.

ಮನೆಯಲ್ಲಿ ಕಸದಿಂದ ಕಾಂಪೋಸ್ಟ್ ತಯಾರಿಸುವುದು, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು, ಹೊಲದ ಮಣ್ಣಿನಿಂದಲೇ ಗಣಪನ ಮೂರ್ತಿಯ ತಯಾರಿ, ಅಡುಗೆ ಮನೆಯ ತ್ಯಾಜ್ಯದಿಂದ ತರಕಾರಿ ಬೆಳೆಯುವುದು– ಇವೆಲ್ಲ, ಪರಿಹಾರಗಳನ್ನು ಮೈಗೂಡಿಸುವ ಚಟುವಟಿಕೆಗಳಾಗಬಹುದು. ಆಗೀಗ ತಜ್ಞರೊಂದಿಗಿನ ಒಡನಾಟ ಹೊಸ ಪ್ರೇರಣೆ ನೀಡಬಹುದು. ಪಟಾಕಿಗಳಿಂದ ಬಣ್ಣ ಚಿಮ್ಮಿಸುವ ವಿಷಕಾರಿ ಭಾರ ಖನಿಜಗಳೋ ಅಥವಾ ಶಬ್ದ ಹೊಮ್ಮಿಸುವ ಅಮೋನಿಯಂ ನೈಟ್ರೇಟ್‌ಗಳಂಥ ರಾಸಾಯನಿಕಗಳ ಇತಿಹಾಸವನ್ನು ತರಗತಿಯಲ್ಲೋ, ಮನೆಯಲ್ಲಿ ಊಟದ ವೇಳೆಯಲ್ಲೋ ಚರ್ಚಿಸಬಹುದು. ಅರಣ್ಯ ನಾಶದಿಂದ ಗುಡ್ಡ ಜರಿಯುವುದು ಅಥವಾ ಜನರು ಗುಳೇ ಹೋಗುವುದು ಮಕ್ಕಳ ಪ್ರಬಂಧದ ವಿಷಯವಾಗಬಹುದು. ಹೀಗೆ, ಬೆಳೆಯುವ ಮಕ್ಕಳ ಊಟ, ಆಟ, ನೋಟ, ಪಾಠ ಎಲ್ಲದರಲ್ಲೂ ಪ್ರಕೃತಿಯ ಆರಾಧನೆ ಸಾಗಬಹುದು. ಪರಿಸರ ನಾಶದ ಪರಿಣಾಮಗಳನ್ನೂ ತೆರೆದಿಟ್ಟು, ಪರಿಹಾರದ ಮಾರ್ಗಗಳನ್ನು ಶೋಧಿಸಲು ಯತ್ನಿಸಹುದು.

ಭೂತಾಯಿಯ ಅನಾರೋಗ್ಯ ಮನುಕುಲವನ್ನು ಗಂಭೀರ ಅಪಾಯದೆಡೆಗೆ ತಳ್ಳುತ್ತಿರುವುದಂತೂ ಕಟುಸತ್ಯ. ಇವಕ್ಕೆಲ್ಲ ಪರಿಹಾರ ಹುಡುಕುವ ಒಂದು ಮಾರ್ಗವೆಂದರೆ, ಮಕ್ಕಳ ಮನದಂಗಳದಲ್ಲಿ ಅರಿವಿನ ಬೀಜದುಂಡೆ ಬಿತ್ತುವುದು. ಇವು ಮೊಳೆತು ಕ್ರಿಯಾಶೀಲ ಮನಸ್ಸುಗಳಾಗಿ ಹಸನಾಗಿ ಬೆಳೆದದ್ದಾದರೆ, ಭವಿಷ್ಯದಲ್ಲಿ ಬದುಕಿನ ವಸಂತಗಾನವು ಖಂಡಿತಾ ಲಯಕಂಡುಕೊಂಡೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT