ಶನಿವಾರ, ಏಪ್ರಿಲ್ 1, 2023
23 °C
ದಾವಣಗೆರೆ ಜಿಲ್ಲಾ ಕೃಷಿ ತರಬೇತಿ ಕೇಂದ್ರವೀಗ ಜೀವಾನಿಲ ವಲಯ

ಕಾಡಜ್ಜಿಯ ಕಾಡುವ ಕಾಡು

ವಿನಾಯಕ ಭಟ್‌ Updated:

ಅಕ್ಷರ ಗಾತ್ರ : | |

Prajavani

ಕಣ್ಣಾಡಿಸಿದಷ್ಟೂ ಹಸಿರ ಹೊದಿಕೆ. ಕೋವಿಡ್‌ ದುರಿತ ಕಾಲವನ್ನು ಮರೆಸುವಂತಹ ಹಕ್ಕಿಗಳ ಚಿಲಿಪಿಲಿ. ಜೀವಾನಿಲವನ್ನು ಪುಪ್ಪುಸಕ್ಕೆ ತಂದು ತುಂಬಿ ವ್ಯಾಕುಲವ ಮರೆಸುವ ತಂಗಾಳಿ. ಕಿವಿಗಳನ್ನು ಅರಳಿಸಿದರೆ ಅದೊಂದು ಸುಮಧುರ ಹಿನ್ನೆಲೆ ಸಂಗೀತವೇ ಸರಿ. ಇಲ್ಲಿ ಕೃಷಿಪಾಠ ಒಂದು ಕಡೆ; ಮಾನವ ನಿರ್ಮಿತ ಕಾಡಿನ ನೋಟ ಇನ್ನೊಂದೆಡೆ.‘ಮಿಯಾವಾಕಿ ಫಾರೆಸ್ಟ್‌’ನಲ್ಲಿ ಪಕ್ಷಿಗಳಿಗೆ ಆಹಾರ ಹಾಕಲು ಮರಕ್ಕೆ ನೇತು ಹಾಕಿರುವ ಡಬ್ಬಿ

ದಾವಣಗೆರೆ ಜಿಲ್ಲೆಯ ಕಾಡಜ್ಜಿಯಲ್ಲಿರುವ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಆವರಣದಲ್ಲಿ ಪಾಳು ಬಿದ್ದಿದ್ದ ಜಾಗವೀಗ ‘ಆಕ್ಸಿಜನ್‌ ಝೋನ್‌’ ಆಗಿದೆ. ಇಲ್ಲಿ ಬೆಳೆಸಿರುವ ಕಾಡು ಜಪಾನ್‌ನ ‘ಮಿಯಾವಾಕಿ ಫಾರೆಸ್ಟ್‌’ನ ಕಥೆಯ ಪ್ರತಿರೂಪ.

ಒಂದೂವರೆ ಎಕರೆಯ ಉದ್ದನೆಯ ಜಾಗ ಜೌಗಿನಿಂದಾಗಿ ಪಾಳುಬಿದ್ದಿತ್ತು. ಇದನ್ನು ಹೇಗೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹಿಂದಿನ ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದಗಲ್‌ ಯೋಚಿಸುತ್ತಿದ್ದಾಗ ಜಪಾನ್‌ನ ಸಸ್ಯ ವಿಜ್ಞಾನಿ ಅಕಿರಾ ಮಿಯಾವಾಕಿ ಅವರು ಒಂದು ಚದರ‌ ಮೀಟರ್‌ ಜಾಗದಲ್ಲಿ ವಿವಿಧ ಜಾತಿಯ ಆರು ಗಿಡಗಳನ್ನು ನೆಟ್ಟು ಕೃತಕ ನೈಸರ್ಗಿಕ ಕಾಡು ಬೆಳೆಸಿದ ಯಶೋಗಾಥೆ ಹೊಳೆಯಿತು. ಈ ಪಾಳು ಜಾಗದಲ್ಲೇ ‘ಮಿಯಾವಾಕಿ ಫಾರೆಸ್ಟ್‌’ ನಿರ್ಮಿಸಬೇಕು ಎಂಬ ಅವರ ಕನಸಿಗೆ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಅಂದಿನ ಪ್ರಭಾರ ಸಹಾಯಕ ನಿರ್ದೇಶಕರೂ ಆಗಿದ್ದ ರಸಗೊಬ್ಬರ ನಿಯಂತ್ರಣ ಪ್ರಯೋಗಾಲಯದ ಕೃಷಿ ಅಧಿಕಾರಿ ಮಾಲತೇಶ ಪುಟ್ಟಣ್ಣವರ ನೀರೆರೆದರು.

ದಿಬ್ಬದ ಮೇಲೆ ಸಾಲು ಗಿಡ

2019ರ ಆಗಸ್ಟ್‌ನಲ್ಲಿ ಜೆಸಿಬಿ ಯಂತ್ರದಿಂದ ಎರಡು ಅಡಿ ಅಗಲ, ಎರಡು ಅಡಿ ಆಳದ ಟ್ರೆಂಚ್‌ಗಳನ್ನು ಉದ್ದಕ್ಕೆ ತೋಡಿಸಲಾಯಿತು. ಟ್ರೆಂಚ್‌ಗಳ ನಡುವೆ ಆರು ಅಡಿ ಅಂತರ ಇರಬೇಕೆಂಬ ಸಂಕಲ್ಪ. ಟ್ರೆಂಚ್‌ನ ಮಣ್ಣನ್ನು ಮೇಲಕ್ಕೆ ಹಾಕಿ ದಿಬ್ಬ ಮಾಡಿ, ಅದರ ಎರಡೂ ಬದಿಗೆ ಪ್ರತಿ ಚದರ‌ ಮೀಟರ್‌ ಜಾಗದಲ್ಲಿ ಅಕ್ಕ ಪಕ್ಕ ಬೇರೆ ಬೇರೆ ಜಾತಿಯ ನಾಲ್ಕು ಸಸಿಗಳು ಬರುವ ಎಚ್ಚರಿಕೆಯನ್ನು ಮೊದಲೇ ತೆಗೆದುಕೊಂಡಿದ್ದಾಯಿತು. ಒಂದೂವರೆ ಎಕರೆ ಜಾಗದಲ್ಲಿ ಹೆಬ್ಬೇವು, ಹಲಸು, ಬೇವು, ಸಾಗವಾನಿಯಂತಹ ಕಾಡು ಜಾತಿಯ ಗಿಡಗಳು ಹಾಗೂ ಹಣ್ಣು ಬಿಡುವ ಗಿಡಗಳು ಸೇರಿ ಸುಮಾರು ಎರಡು ಸಾವಿರ ಸಸಿಗಳು ಮಣ್ಣ ಜತೆ ಮಾತಿಗಿಳಿದವು. ಹನ್ನೊಂದು ತಿಂಗಳಲ್ಲೇ ಆಳೆತ್ತರಕ್ಕೆ ಬೆಳೆದಿರುವ ಈ ಗಿಡಗಳು ‘ಮಿಯಾವಾಕಿ ಫಾರೆಸ್ಟ್‌’ನ ಚಿತ್ರಣವನ್ನು ಕಟ್ಟಿಕೊಡಲು ಸಜ್ಜಾಗಿವೆ.

‘ನೀರು ಬಸಿದು ಹೋಗಲಿ ಎಂದು ಟ್ರೆಂಚ್‌ ತೆಗೆಸಿ, ಮಣ್ಣಿನ ದಿಬ್ಬದ ಮೇಲೆ ಗಿಡಗಳನ್ನು ನೆಟ್ಟಿದ್ದೇವೆ. ಮಳೆ ಬಂದಾಗ ಟ್ರೆಂಚ್‌ನಲ್ಲಿ ನಿಲ್ಲುವ ನೀರಿನಿಂದ ಅಂತರ್ಜಲ ಹೆಚ್ಚಾಗುತ್ತಿದೆ. ಎಲೆ, ಕಸಕಡ್ಡಿಗಳನ್ನು ಟ್ರೆಂಚ್‌ನಲ್ಲಿ ಹಾಕಿದ್ದರಿಂದ ಗೊಬ್ಬರವಾಗಿ ಗಿಡಗಳಿಗೆ ಒಳ್ಳೆಯ ಪೋಷಕಾಂಶ ಸಿಗುತ್ತಿದೆ. ಅಲ್ಪಾವಧಿಯಲ್ಲೇ 8–10 ಅಡಿ ಎತ್ತರ ಬೆಳೆದಿದ್ದು, ಇನ್ನು ಮುಂದೆ ಆರೈಕೆ ಮಾಡಬೇಕಾಗಿಲ್ಲ’ ಎಂದು ಮಾಲತೇಶ ಪುಟ್ಟಣ್ಣವರ ಅವರು ಕಾಯಿ ಬಿಟ್ಟ ನುಗ್ಗೆಗಿಡವನ್ನು ತೋರಿಸಿದರು.


ದಾವಣಗೆರೆ ಜಿಲ್ಲೆಯ ಕಾಡಜ್ಜಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಆವರಣದಲ್ಲಿ ಬೆಳೆಸಿರುವ ‘ಮಿಯಾವಾಕಿ ಫಾರೆಸ್ಟ್‌’ ಹಸಿರಿನಿಂದ ಕಂಗೊಳಿಸುತ್ತಿದೆ.

‘ಗಿಡಗಳ ನಡುವೆ ಮೂಲಂಗಿ, ಹೀರೇಕಾಯಿ, ಕುಂಬಳಕಾಯಿ, ಬೀನ್ಸ್‌, ತೊಗರಿ, ಹಾಗಲಕಾಯಿ ಬೀಜಗಳನ್ನು ಚೆಲ್ಲಿದ್ದೆವು. ಅಲ್ಲಲ್ಲಿ ಈ ತರಕಾರಿ ಬೆಳೆಗಳೂ ಚೆನ್ನಾಗಿ ಬೆಳೆದಿವೆ. ಪಕ್ಷಿಗಳಿಗೆ ಆಹಾರ ಸಿಗಲಿ ಎಂದು ಪೇರಲೆ, ಮಾವು, ಲಕ್ಷ್ಮಣ ಫಲ, ರಾಮ ಫಲ, ಗೋಡಂಬಿ ಗಿಡಗಳನ್ನೂ ಹಾಕಿದ್ದೇವೆ. ಕಾಡಿನ ಪರಿಸರ ನಿರ್ಮಾಣವಾಗಿದ್ದರಿಂದ ಹತ್ತಾರು ಬಗೆಯ ಪಕ್ಷಿಗಳು ಬರುತ್ತಿವೆ. ಡ್ರಿಪ್‌ ಮೂಲಕ ಪಕ್ಷಿಗಳಿಗೆ ಕುಡಿಯಲು ನೀರಿನ ವ್ಯವಸ್ಥೆಯನ್ನೂ ಮಾಡಿದ್ದೇವೆ. ಇಲ್ಲಿನ ಮರದಲ್ಲಿ ಗೀಜಗ ಹಕ್ಕಿಗಳು ಗೂಡು ಕಟ್ಟುತ್ತಿವೆ. ಆಗಾಗ ನವಿಲುಗಳೂ ಬರುತ್ತಿವೆ. ಟ್ರೆಂಚ್‌ ತೋಡಿಸಲು ₹ 25 ಸಾವಿರ ಹಾಗೂ ಹಣ್ಣಿನ ಸಸಿಗಳಿಗೆ ₹ 10 ಸಾವಿರ ಖರ್ಚು ಮಾಡಿದ್ದೆವು. ಹಲವು ಕಾಡು ಜಾತಿಯ ಗಿಡಗಳನ್ನು ಅರಣ್ಯ ಇಲಾಖೆ ಉಚಿತವಾಗಿ ನೀಡಿತ್ತು. ಈ ಜಾಗ ಆಕ್ಸಿಜನ್‌ ಝೋನ್‌ ಜೊತೆಗೆ ಜೀವ ವೈವಿಧ್ಯ ತಾಣವಾಗಿದೆ’ ಎಂದು ಪುಟ್ಟಣ್ಣವರ ಹೆಮ್ಮೆಯಿಂದ ಕಾಡಿನ ದರ್ಶನ ಮಾಡಿಸಿದರು.

‘ಪ್ರಾಣಿ–ಪಕ್ಷಿಗಳಿಗೆ ಅನುಕೂಲ ವಾಗಲಿ ಎಂದು ಪಾಳುಭೂಮಿಯನ್ನು ಕಾಡಾಗಿ ಅಭಿವೃದ್ಧಿ ಪಡಿಸಿದ್ದೇವೆ. ರೈತರು ತಮ್ಮ ಜಮೀನಿನ ಸ್ವಲ್ಪಭಾಗದಲ್ಲಿ ಇಂಥ ಕಾಡನ್ನು ಬೆಳೆಸಿಕೊಳ್ಳಬಹುದಾಗಿದೆ. ಸರ್ಕಾರಿ ಪಾಳುಭೂಮಿಯಲ್ಲಿ ಮಿಯಾವಾಕಿ ಫಾರೆಸ್ಟ್‌ ಬೆಳೆಸಿದರೆ ಪರಿಸರದಲ್ಲಿ ಸಾಕಷ್ಟು ಬದಲಾವಣೆ ತರಲು ಸಾಧ್ಯ’ ಎನ್ನುತ್ತಾರೆ ಶರಣಪ್ಪ ಮುದುಗಲ್‌.

‘ನಮ್ಮ ಸುತ್ತಲಿನ ಜೀವ ವೈವಿಧ್ಯ ಉಳಿಸಿಕೊಳ್ಳಲು ಮಾನವ ಹಸ್ತಕ್ಷೇಪ ಇಲ್ಲದ ಕಾಡು ಬೆಳೆಸುವ ಅಗತ್ಯವಿದೆ. ಹೊಲದಲ್ಲಿ ಹೊಸ ಮೈಕ್ರೊ ಕ್ಲೈಮೇಟ್‌ ನಿರ್ಮಿಸಬಹುದು ಎಂಬುದನ್ನು ಇಲ್ಲಿಗೆ ಬರುವ ರೈತರಿಗೆ ಪ್ರಾತ್ಯಕ್ಷಿಕೆ ಮೂಲಕ ತೋರಿಸಿಕೊಡುತ್ತಿದ್ದೇವೆ’ ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕ ಮಹಮ್ಮದ್‌ ರಫಿ ಇದರ ಶೈಕ್ಷಣಿಕ ಪ್ರಯೋಜನದ ಮೇಲೆ ಬೆಳಕು ಚೆಲ್ಲಿದರು.

ಚಿತ್ರಗಳು: ಲೇಖಕರವು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು