ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲೆ ಮೀರದಿರೋಣ...

Last Updated 28 ನವೆಂಬರ್ 2020, 19:30 IST
ಅಕ್ಷರ ಗಾತ್ರ

‘ಹಾಸಿಗೆ ಇದ್ದಷ್ಟೇ ಕಾಲು ಚಾಚು’ ಬಾಲ್ಯದಲ್ಲಿ ನಮಗೆಲ್ಲ ಶಾಲೆಯ ಮಾಸ್ತರರು ಯಾವತ್ತೂ ಹೇಳುತ್ತಿದ್ದ ನೀತಿಪಾಠ. ಆದರೆ, ನವಜೀವನಶೈಲಿಯ ಸೋಗಿನಲ್ಲಿ ನಮ್ಮ ಹಾಸಿಗೆಯ ಉದ್ದಗಲದ ಪರಿವೆಯೇ ಇಲ್ಲದೆ ನಾವೀಗ ಕಾಲುಗಳನ್ನು ಮತ್ತಷ್ಟು ಮಗದಷ್ಟು ಚಾಚುತ್ತ ಹೋಗುತ್ತಿದ್ದೇವೆ. ಇದರ ಒತ್ತಡದ ಪರಿಣಾಮ ನಮ್ಮ ವೈಯಕ್ತಿಕ ಬದುಕಿನಲ್ಲಷ್ಟೇ ಅಲ್ಲದೆ ಪರಿಸರದ ಮೇಲೂ ಅಗಾಧವಾಗಿ ಆಗುತ್ತಿದೆ. ಈ ಭೂಮಿಯ ಸಂಪನ್ಮೂಲಗಳ ಮಿತಿಯೊಂದಿಗೆ ನಾವು ಬಳಸುವ ಪರಿಯನ್ನು ಹೊಂದಿಸಿ ನೋಡಿದರೆ ಈ ಮಾತು ದಿಟವಾಗುತ್ತದೆ.

ವ್ಯವಸ್ಥಿತವಾದ ಸೂತ್ರದನ್ವಯ ಮಾಡಲಾಗುವ ಇಂತಹದೊಂದು ತುಲನಾತ್ಮಕ ಅವಲೋಕನಾ ಪ್ರಕ್ರಿಯೆಯನ್ನು 1990ರಲ್ಲಿ ಕೊಲಂಬಿಯಾ ವಿಶ್ವವಿದ್ಯಾಲಯದ ವಿಜ್ಞಾನಿಗಳು ಮೊತ್ತಮೊದಲು ವಿಶ್ವಕ್ಕೆ ಪರಿಚಯಿಸಿದರು. ಪರಿಸರದ ಹೆಜ್ಜೆಗುರುತು (Ecological footprint) ಎನ್ನಲಾಗುವ ಈ ಲೆಕ್ಕಾಚಾರದ ಸೂತ್ರದಲ್ಲಿ ನೈಸರ್ಗಿಕ ಸಂಪನ್ಮೂಲಗಳ ಮೇಲಿನ ಬೇಡಿಕೆ ಮತ್ತು ಪೂರೈಕೆಗಳನ್ನು ವ್ಯವಸ್ಥಿತವಾಗಿ ಅಭ್ಯಸಿಸಲಾಗುತ್ತದೆ.

ಒಂದರ್ಥದಲ್ಲಿ ನಮ್ಮ ಪರಿಸರದ, ಸಂಪನ್ಮೂಲಗಳ ಬಗೆಗಿನ ಶ್ವೇತಪತ್ರವೆಂದು ಹೇಳಬಹುದಾದ ಈ ಕೂಡಿಕಳೆಯುವಿಕೆಯ ಪದ್ಧತಿಯಲ್ಲಿ ನಾವುಗಳು ಆಹಾರಕ್ಕಾಗಿ ಬಳಸುವ ದವಸಧಾನ್ಯ, ಹಣ್ಣು ಹಂಪಲು, ಮಾಂಸ ಜೊತೆಗೆ ವಸತಿಗಾಗಿ ಬಳಸುವ ಭೂಭಾಗ, ಉತ್ಪತ್ತಿ ಮಾಡುವ ತ್ಯಾಜ್ಯ ಇವುಗಳೆಲ್ಲ ಬೇಡಿಕೆಗಳ ಪಟ್ಟಿಯಲ್ಲಿ ಬರುತ್ತವೆ. ಭೂಭಾಗವೊಂದರ ಅರಣ್ಯ ಪ್ರದೇಶ, ಸಾಗುವಳಿಗೆ ಬಳಸುವ ಜಾಗದ ವ್ಯಾಪ್ತಿ, ಮೇವು ಉತ್ಪತ್ತಿಯಾಗುವ ಜಾಗ, ಮೀನುಗಾರಿಕಾ ಪ್ರದೇಶ, ವಸತಿಗಾಗಿ ಗುರುತಿಸಲ್ಪಟ್ಟಿರುವ ಜಾಗ ಇವುಗಳನ್ನೆಲ್ಲ ಪೂರೈಕೆಗಳೆಂದು ಗುರುತಿಸಲಾಗಿದೆ.

ಪ್ರದೇಶವಾರು, ಜಿಲ್ಲಾವಾರು, ರಾಜ್ಯವಾರು ಜೊತೆಗೆ ದೇಶವೊಂದರ ಜೈವಿಕ ಸಾಮರ್ಥ್ಯದ ಜೊತೆಗೆ ಆ ಪ್ರದೇಶದ ಜೈವಿಕ ಆತ್ಮನಿರ್ಭರತೆಯ ಸಮಗ್ರ ಚಿತ್ರಣವನ್ನು ಪರಿಸರದ ಹೆಜ್ಜೆಗುರುತಿನ ಸೂತ್ರವು ನೀಡಬಲ್ಲದು. ಕೊಲಂಬಿಯಾ ವಿಶ್ವವಿದ್ಯಾಲಯವು ಪರಿಚಯಿಸಿದ ಒಂದೆರಡು ವರ್ಷಗಳಲ್ಲೇ ಇದರ ಕರಾರುವಾಕ್ಕುತನದ ಜೊತೆಗೆ ನೈಸರ್ಗಿಕ ಸಂಪನ್ಮೂಲಗಳ ಮೇಲಿನ ಒತ್ತಡಗಳನ್ನು ಕಂಡುಹಿಡಿದು ಭವಿಷ್ಯದ ಯೋಜನೆಗಳನ್ನು ರೂಪಿಸಲು ನೆರವಾಗಬಲ್ಲ ಸೂತ್ರವೊಂದರ ಅಗತ್ಯವನ್ನು ಮನಗಂಡ ಇತರ ದೇಶಗಳೂ ಈ ಪದ್ಧತಿಯನ್ನು ಅಳವಡಿಸಿಕೊಂಡವು.

ಪರಿಸರದ ಹೆಜ್ಜೆಗುರುತಿನ ಸೂತ್ರವು ಹಲವು ಆಘಾತಕಾರಿ ವಿಚಾರಗಳನ್ನು ಹೊರಗೆಡವಿದೆ. ಅದು ಹೇಳುವಂತೆ ಜಾಗತಿಕವಾಗಿ ಪ್ರತಿಶತ 80 ದೇಶಗಳು ತಮ್ಮ ನೈಸರ್ಗಿಕ ಸಂಪನ್ಮೂಲಗಳೊಂದಿಗೆ ಉದ್ರಿ ವ್ಯವಹಾರವನ್ನು ಮಾಡುತ್ತಿವೆ. ಅಂದರೆ ತಮ್ಮ ಜೈವಿಕ ಸಾಮರ್ಥ್ಯಕ್ಕಿಂತ ಹೆಚ್ಚು ಬಳಸುತ್ತಿವೆ. ಈ ಲೆಕ್ಕಾಚಾರದ ಪ್ರಕಾರ, ನಮ್ಮ ಈಗಿನ ಸಂಪನ್ಮೂಲಗಳ ಬೇಡಿಕೆಯನ್ನು ಪೂರೈಸಲು ಈ ಭೂಮಿಯ 1.6ಪಟ್ಟು ಹೆಚ್ಚು ಗಾತ್ರದ ಭೂಮಿ ಬೇಕು. ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ನಾವು ವರ್ಷವೊಂದಕ್ಕೆ ಬಳಸುವ ಸಂಪನ್ಮೂಲಗಳನ್ನು ಪರಿಸರವು ಪುನರ್‌ ಸೃಷ್ಟಿಸಲು ಹಾಗೂ ತ್ಯಾಜ್ಯಗಳನ್ನೆಲ್ಲ ಅರಗಿಸಿಕೊಳ್ಳಲು ಈ ಭೂಮಿಗೆ ಒಂದು ವರ್ಷ ಎಂಟು ತಿಂಗಳು ಸಮಯ ಬೇಕು. ಹೀಗೆ ಕ್ಯಾಲೆಂಡರ್ ವರ್ಷದಲ್ಲಿ ನಮ್ಮ ಬಳಕೆಯು ಪೂರೈಕೆಯನ್ನು ಮೀರುವ ಪ್ರಕ್ರಿಯೆಯನ್ನು ‘ಅರ್ಥ್‌ ಓವರ್ ಶೂಟ್ ಡೇ’ ಅಥವಾ ‘ವಿಶ್ವ ಎಲ್ಲೆ ಮೀರುವ ದಿನ’ ಎಂದು ಹೇಳಲಾಗುತ್ತದೆ. ಅಂದರೆ ಆ ದಿನದಿಂದ ಭೂಮಿಯ ಅಂಗಡಿಯಲ್ಲಿ ನಮ್ಮ ಉದ್ರಿಪಟ್ಟಿ ವ್ಯವಹಾರ ಚಾಲೂ ಆಗುತ್ತದೆ.

ಪರಿಸರದ ಹೆಜ್ಜೆಗುರುತಿನ ಸೂತ್ರದ ಪ್ರಕಾರ ವರ್ಷದ ಯಾವ ದಿನ ನಾವು ಹಾಸಿಗೆಯಿಂದ ನಮ್ಮ ಕಾಲನ್ನು ಹೊರಚಾಚುತ್ತೇವೆಯೋ ಅಂದರೆ ಯಾವ ದಿನ ಜಾಗತಿಕವಾಗಿ ನಮ್ಮ ವಾರ್ಷಿಕ ಬಳಕೆಯು ಆ ವರ್ಷದ ಪೂರೈಕೆಯನ್ನು ಮೀರುತ್ತದೆಯೋ ಆ ದಿನವನ್ನು ‘ಅರ್ಥ್‌ ಓವರ್ ಶೂಟ್ ಡೇ’ ಎಂದು ಹೇಳಲಾಗುತ್ತದೆ. ಈ ಎಲ್ಲೆ ಮೀರುವ ಪ್ರಕ್ರಿಯೆ ಲೆಕ್ಕಾಚಾರ 1970ರಿಂದಲೇ ಆರಂಭವಾಗಿದೆ. ಪರಿಸರದ ಮೇಲೆ ನಾವುಗಳು ಹಾಕುತ್ತಿರುವ ಒತ್ತಡದ ಸೂಚ್ಯಂಕದಂತಿರುವ ಈ ದಿನ 2000ನೇ ಇಸವಿಯಲ್ಲಿ ಸೆಪ್ಟೆಂಬರ್ ಕೊನೆಯ ವಾರದಲ್ಲಿದ್ದರೆ 2020ರಲ್ಲಿ ಇನ್ನಷ್ಟು ಹಿಂದಕ್ಕೆ ಸರಿದು ಆಗಸ್ಟ್‌ 22ಕ್ಕೆ ಬಂದು ತಲುಪಿದೆ. ಹಾಗೆ ನೋಡಿದರೆ ಕಳೆದ ವರ್ಷ ಜುಲೈ ಕೊನೆಯ ವಾರಕ್ಕೇ ಬಂದಿದ್ದ ಈ ದಿನವು ಪ್ರಸಕ್ತ ವರ್ಷ ಕೊರೊನಾದಿಂದ ಜಗತ್ತಿನಾದ್ಯಂತ ಜನ ಮನೆಯೊಳಗೆ ಉಳಿಯಬೇಕಾದ ಸನ್ನಿವೇಶ ಉಂಟಾದ ಕಾರಣ ಪರಿಸರದ ಮೇಲಿನ ಒತ್ತಡ ಕೊಂಚ ತಗ್ಗಿ ಕೊಂಚ ಮುಂದೂಡಲ್ಪಟ್ಟಿದೆ.

ಪ್ರಾದೇಶಿಕವಾಗಿ ಪರಿಸರದ ಹೆಜ್ಜೆಗುರುತಿನ ಸೂತ್ರದಿಂದ ಅಳೆದಾಗ ಭೂಮಿಯಲ್ಲಿನ ನೈಸರ್ಗಿಕ ಸಂಪನ್ಮೂಲಗಳ ಅವನತಿಯಲ್ಲಿ ಮುಂದುವರಿದ ದೇಶಗಳ ಪಾತ್ರ ದೊಡ್ಡದಾಗಿರುವುದು ಸ್ಪಷ್ಟ. ಉದಾಹರಣೆಗೆ ಕತಾರ್ ಫೆಬ್ರುವರಿಗೇ ತನ್ನ ವಾರ್ಷಿಕ ಸಂಪನ್ಮೂಲಗಳನ್ನು ಖಾಲಿ ಮಾಡಿದ್ದರೆ ಸಂಯುಕ್ತ ಅರಬ್ ರಾಷ್ಟ್ರ ಮಾರ್ಚ್‌ನಲ್ಲಿ, ಫ್ರಾನ್ಸ್‌, ಜರ್ಮನಿ ಮತ್ತು ರಷ್ಯಾ ಮೇ ತಿಂಗಳಿನಲ್ಲಿ, ಚೀನಾ ಜೂನ್‌ನಲ್ಲಿ ಹಾಗೂ ಇಂಡೋನೇಷ್ಯಾ ಡಿಸೆಂಬರ್‌ನಲ್ಲಿ ತಮ್ಮ ಎಲ್ಲೆ ಮೀರಿವೆ.

ಪರಿಸರಪೂರಕ ಜೀವನಶೈಲಿ, ಸಂಪನ್ಮೂಲಗಳ ಹಿತಮಿತ ಬಳಕೆಯೂ ಒಂದು ಸಂಸ್ಕಾರವೇ. ಪರಿಸರದ ಹೆಜ್ಜೆಗುರುತಿನ ಅಂಕಿಅಂಶಗಳು ಹೊರಹಾಕಿರುವ ಸತ್ಯಗಳು ಇದನ್ನು ಸಾರಿ ಹೇಳುತ್ತವೆ. ಅವುಗಳ ಪ್ರಕಾರ ವಿಶ್ವದ ಎಲ್ಲ ಜನ ಅಮೆರಿಕದ ನಾಗರಿಕನೊಬ್ಬನ ಜೀವನ ಶೈಲಿಯಂತೆ ಬದುಕಿದರೆ ನಮಗೆ ಬದುಕಲು ಐದು ಭೂಮಿ ಬೇಕಾಗಬಹುದು. ಆಸ್ಟ್ರೇಲಿಯಾದವನಂತಾದರೆ ನಾಲ್ಕು, ಚೀನಿಯವನಂತಾದರೆ ಎರಡು ಭೂಮಿ ಬೇಕು. ಈ ವಿಷಯದಲ್ಲಿ ನಮ್ಮ ಭಾರತವೇ ಎಷ್ಟೋ ವಾಸಿ. ನಮ್ಮಂತೆ ಜಗತ್ತಿನ ಎಲ್ಲರೂ ಬದುಕಿದ್ದಲ್ಲಿ ನಮಗೆ ವರ್ಷಕ್ಕೆ ಭೂಮಿಯ 0.7 ಭಾಗವಷ್ಟೇ ಸಾಕು. ಅಂದರೆ ಅರ್ಥ್‌ ಓವರ್ ಶೂಟ್ ಡೇ ಆಚರಣೆಯ ಪ್ರಮೇಯವೇ ಬರುವುದಿಲ್ಲ. ವಿಶ್ವದ ಐವತ್ತೊಂದು ದೇಶಗಳು ಈ ರೀತಿಯ ಮಿತವ್ಯಯ ಸಾಧಿಸಿದ್ದು ಅವುಗಳಲ್ಲಿ ಭಾರತವೇ ಅತ್ಯಂತ ಹೆಚ್ಚು ಜನಸಂಖ್ಯೆಯ ದೇಶವೆಂಬುದು ಗಮನಿಸಬೇಕಾದ ಸಂಗತಿ. ನಾವು ಬಳಸುವ ವಿದ್ಯುತ್ ಶಕ್ತಿಯು ಜಾಗತಿಕ ಸರಾಸರಿಗಿಂತ ಬಹಳಷ್ಟು ಕಡಿಮೆಯಿದ್ದು, ನಾವು ಹೊರಸೂಸುವ ಇಂಗಾಲದ ಪ್ರಮಾಣ ಜಾಗತಿಕ ಸರಾಸರಿಯ ಶೇಕಡ ನಲವತ್ತರಷ್ಟು ಮಾತ್ರ ಇದೆ. ಹೀಗಾಗಿ ಒಂದರ್ಥದಲ್ಲಿ ಈ ದೊಡ್ಡಣ್ಣಗಳು ನಮ್ಮಂತೆ ಮಿತವ್ಯಯ ಜೀವನಶೈಲಿಗೆ ಬದಲಾಗ ಬೇಕಾದದ್ದು ಈಗಿನ ಜರೂರತ್ತು.

ಈಗಲೇ ಜಾಗರೂಕರಾಗಿ ನಮ್ಮ ಜೀವನಶೈಲಿಯನ್ನು ಸರಿದಾರಿಗೆ ತಂದು ತ್ಯಾಜ್ಯಗಳನ್ನು ಕಡಿಮೆಮಾಡಿ ಪರಿಸರಸ್ನೇಹಿ ಜೀವನಶೈಲಿ ಅಳವಡಿಸಿಕೊಳ್ಳಬೇಕಾಗಿದೆ. ಇಲ್ಲದಿದ್ದಲ್ಲಿ ನಾವೆಲ್ಲ ಎಲ್ಲೆ ಮೀರುವ ದಿನ ದೂರವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT