ಕೊಟ್ಟೂರು ಯುವಕರ ಪರಿಸರ ಕಾಯಕ

7
ಕ್ಲೀನ್‌ ಕೊಟ್ಟೂರ್‌ಗೆ ಯುವ ಪಡೆಗಳ ಸಾಥ್

ಕೊಟ್ಟೂರು ಯುವಕರ ಪರಿಸರ ಕಾಯಕ

Published:
Updated:
Deccan Herald

ಬೆಳಿಗ್ಗೆ ಕೊಟ್ಟೂರೇಶ್ವರ, ಕೆಳಗೇರಿ ಆಂಜನೇಯ, ಜರ್ಮಲಿ ದುರುಗಮ್ಮ ಗುಡಿಗಳಲ್ಲಿ ರಿಕಾರ್ಡ್ ಹಾಕುವ ಹೊತ್ತಲ್ಲೇ ದೈಹಿಕ ಶಿಕ್ಷಕ ನಾಗರಾಜ ಬಂಜಾರ, ಸೈಕಲ್ ಏರಿ ಧ್ವನಿವರ್ಧಕದಲ್ಲಿ ‘ತಂಬಿಗೆ ಕೈಯಲ್ಲಿ ಹಿಡಿದುಕೊಂಡು, ಮೈಲಿ ದೂರ ಹೋಗಬೇಡಿ...’ ಎಂದು ಹಾಡು ಹಾಕಿಕೊಂಡು ಹೋಗುತ್ತಾರೆ. ಅವರ ಉದ್ದೇಶ ಬಯಲಲ್ಲಿ ಬಹಿರ್ದೆಸೆಗೆ ಹೋಗದಂತೆ ಎಚ್ಚರಿಸುವುದು.

ಕೃಷ್ಣಸಿಂಗ್ ಎಂಬ ಯುವಕ ಬೆಳಿಗ್ಗೆಯೇ ಗಿಡಗಳನ್ನು ಆರೈಕೆ ಮಾಡುತ್ತಾನೆ. ನೇಕಾರ ಓಣಿಯ ಉದ್ಯಾನವನದಲ್ಲಿ ಯುವಕ ಉಮೇಶ ವನ ಬೆಳೆಸುವ ಕಾಯಕದಲ್ಲಿ ತೊಡಗಿರುತ್ತಾನೆ. ಹೈಸ್ಕೂಲ್ ಶಿಕ್ಷಕ ವೀರೇಂದ್ರ ಊರಿನ ಸ್ವಚ್ಛತೆ ಬಗ್ಗೆ ಕಾಳಜಿವಹಿಸುತ್ತಾರೆ. ಜೆಸಿಬಿ ಅಜ್ಜಪ್ಪ, ಕುಲಕರ್ಣಿ, ಆಶೋಕ ಕೆರೆ, ಹಳ್ಳಗಳ ಜಾಡಿನಲ್ಲಿದ್ದ ಕಸಕಡ್ಡಿಗಳ ಸ್ವಚ್ಛತೆಯಲ್ಲಿ ತೊಡಗಿರುತ್ತಾರೆ.


ಶಾಲಾ ಮಕ್ಕಳಿಗೂ ಹಬ್ಬಿದ ಸ್ವಚ್ಛತೆಯ ಪ್ರೀತಿ

ಬಳ್ಳಾರಿ ಜಿಲ್ಲೆಯ ಕೊಟ್ಟೂರಿನಲ್ಲಿ ಹೀಗೆ ಯುವಕರು ಪರಿಸರ ರಕ್ಷಣೆಗೆ ಟೊಂಕಕಟ್ಟಿ ನಿಂತಿದ್ದಾರೆ. ಗಿಡ ನೆಡುವುದು, ಊರಿನ ಸ್ವಚ್ಛತೆ ಕಾಪಾಡುವುದು, ಜಲಮೂಲಗಳಿಗೆ ಕಾಯಕಲ್ಪ ನೀಡುವುದು, ಬಯಲು ಬಹಿರ್ದೆಸೆ ನಿಯಂತ್ರಿಸುವುದು ಈ ಯುವ ಸಮೂಹಕ್ಕೆ ನಿತ್ಯದ ಕಾಯಕವಾಗಿದೆ.

ಆರಂಭದಲ್ಲಿ ಸ್ವ ಸೇವೆಗೆ ನಿಂತವರನ್ನು ಕಂಡು, ‘ಇವರದ್ದೆಲ್ಲ ನಾಲ್ಕದಿನದ ಆರಂಭ ಶೂರತ್ವ ಅಷ್ಟೇ’ ಎಂದು ಮೂದಲಿಸಿದ್ದರು. ಕೆಲವರು, ರಸ್ತೆಗೆ ಕಸ ಚೆಲ್ಲಿ ಇವರ ಕಾಳಜಿ ಪರೀಕ್ಷಿಸಿದರು. ಇಂಥ ಅನುಮಾನ, ಅವಮಾನ, ಪರೀಕ್ಷೆಗಳ ನಡುವೆ ಕೆಲ ಯುವಕರು ಅನಾರೋಗ್ಯಕ್ಕೂ ತುತ್ತಾದರು. ಆದರೆ, ಅವರೊಳಗಿದ್ದ ಸ್ಪಷ್ಟವಾದ ಗುರಿ, ಪರಿಸರದ ಕಾಳಜಿ ಯಾವುದಕ್ಕೂ ಜಗ್ಗುವಂತೆ ಮಾಡಲಿಲ್ಲ. ದಿನೇ ದಿನೇ ಈ ಯುವಕರ ಕಾರ್ಯಗಳು ಆಂದೋಲನ ರೂಪದಲ್ಲಿ ಬೆಳೆಯುತ್ತಾ, ಅಕ್ಕಪಕ್ಕದ ಊರಿಗೆ ಪ್ರೇರಣೆಯಾದವು!.


ಕೆರೆ ಏರಿ ಭದ್ರಗೊಳಿಸುತ್ತಿರುವುದು

ಈ ಕಾರ್ಯಕ್ಕೆ ಪ್ರೇರಣೆ ಹೇಗೆ ?

ಯುವಕ ನಾಗರಾಜ ಬಂಜಾರ. ತನ್ನ ತಂದೆಯ ಸಾವಿನ ನೋವಿನಿಂದ ಹೊರ ಬರಲು 2012ರಲ್ಲಿ ಕೊಟ್ಟೂರಿನಲ್ಲಿ ನಿತ್ಯ ಬೆಳಿಗ್ಗೆ ಪೌರ ಕಾರ್ಮಿಕರೊಂದಿಗೆ ಕಸಗುಡಿಸಿ, ವಿಲೇವಾರಿ ಮಾಡುತ್ತಿದ್ದರು. ‘ಸ್ವಚ್ಛ ಭಾರತ ಸ್ವಸ್ಥ ಭಾರತ’ ಎಂಬ ಘೋಷವಾಖ್ಯದೊಂದಿಗೆ ತನ್ನ ಕಾರ್ಯ ಮುಂದುವರಿಸಿದರು. ಇದು ಕೆಲ ಯುವಕರಿಗೆ ಊರಿನ ಸ್ವಚ್ಛತೆಗೆ ಕೈಜೋಡಿಸಲು ಪ್ರೇರಣೆಯಾಯಿತು. ಅದೇ ಯುವಕರು, ನಾಗರಾಜ್ ಅವರೊಂದಿಗೆ ಸೇರಿ ಒಂದು ತಂಡದಂತೆ ಕೆಲಸ ಮಾಡುತ್ತಿದ್ದಾರೆ. ಈ ತಂಡ ತ್ಯಾಜ್ಯ ವಿಂಗಡಣೆ, ಮರುಬಳಕೆ, ವಿಲೇವಾರಿ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿದೆ.

ನಾಗರಾಜ್‌ ಅವರ ಪರಿಸರ ಸೇವೆ ಗುರುತಿಸಿದ ಜಿಲ್ಲಾಧಿಕಾರಿ ಅವರಿಗೆ ಸೈಕಲ್ ನೀಡಿ ಪ್ರೋತ್ಸಾಹಿಸಿದ್ದಾರೆ. ಈ ಸೈಕಲ್ ಈಗ ಪರಿಸರ ಜಾಗೃತಿಯ ವಾಹನವಾಗಿದೆ. ಸೈಕಲ್‌ಗೆ ಧ್ವನಿವರ್ಧಕ ಕಟ್ಟಿಕೊಂಡು ಶೌಚಾಲಯದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ‘ಮನೆಗೊಂದು ಶೌಚಾಲಯ ಮನೆ ಮಂದಿಗೆಲ್ಲಾ ಆರೋಗ್ಯ’, ‘ಕಸ ಮಾಡುವರಾಗಬೇಡಿ, ಸ್ವಚ್ಛ ಮಾಡುವವರಾಗಿ’ ಎಂಬ ಘೋಷಣೆಯ ಜತೆಗೆ, ಕೊಟ್ಟೂರು ತುಂಬಾ ಜಾಗೃತಿಯ ಫಲಕಗಳನ್ನು ಹಾಕಿಸುತ್ತಿದ್ದಾರೆ.


ಸ್ವಯಂ ಸೇವಕರ ಮುತುವರ್ಜಿಯಿಂದ ಸ್ವಚ್ಛಗೊಂಡ ಕೆರೆಯಲ್ಲಿ ನೀರು ತುಂಬಿರುವ ದೃಶ್ಯ

ಕಳೆದ ವರ್ಷ, ಬಯಲು ಬಹಿರ್ದೆಸೆಯ ದುಷ್ಪರಿಣಾಮಗಳು, ಶೌಚಾಲಯ ನಿರ್ಮಾಣಕ್ಕೆ ಸರ್ಕಾರ ನೀಡುವ ಅನುದಾನದ ಮಾಹಿತಿ ಒಳಗೊಂಡ ಕರಪತ್ರಗಳನ್ನು ಶಾಲಾ-ಕಾಲೇಜು ಮಕ್ಕಳ ನೆರವಿನಿಂದ ಮನೆ ಮನೆಗೆ ಹಂಚಿದ್ದಾರೆ!. ಸಾರ್ವಜನಿಕ ಸ್ಥಗಳಲ್ಲಿ ಪ್ರೊಜಕ್ಟರ್‍ ಬಳಸಿ, ಅರ್ಧ ಗಂಟೆ ಕಾರ್ಯಕ್ರಮ ನೀಡಿದ್ದಾರೆ. ನಾಗರಾಜ್ ತನ್ನ ಮಗಳ ಹುಟ್ಟು ಹಬ್ಬದ ಉಡುಗರೆಯಾಗಿ ಎರಡು ಬಡ ಕುಟುಂಬಕ್ಕೆ ಶೌಚಾಲಯ ನಿರ್ಮಿಸಿಕೊಟ್ಟಿದ್ದಾರೆ. ಇದಕ್ಕೆ ಗೆಳೆಯರು ಸಾಥ್ ನೀಡಿದ್ದಾರೆ. ಪೌರ ಕಾರ್ಮಿಕರ ಸುರಕ್ಷತೆಗೆ ಕರವಸ್ತ್ರ, ಮಾಸ್ಕ್, ಕೈಗವಸಿನಂತಹ ಪರಿಕರಗಳನ್ನು ಕೊಡಿಸಿದ್ದಾರೆ.

ಎಂಜಿನಿಯರ್‌ಗಳ ರುದ್ರಭೂಮಿ ಸ್ವಚ್ಛತೆ:

ರುದ್ರಭೂಮಿಯ ಸ್ವಚ್ಛತೆಗೆ ಸರ್ ಎಂ.ವಿಶ್ವೇಶ್ವರಯ್ಯ ಎಂಜಿನಿಯರ್ಸ್ ಅಸೋಷಿಯೇಷನ್ ಶ್ರಮಿಸಿದೆ. ಈ ಸಂಘದ ಸದಸ್ಯರು ಸ್ವಂತ ಹಣದ ಜತೆಗೆ, ಪಟ್ಟಣ ಪಂಚಾಯ್ತಿ ಅನುದಾನ ಬಳಸಿಕೊಂಡು ಸ್ಮಶಾನ ಜಾಗ ಶುಚಿಗೊಳಿಸಿ, ಕಾಂಪೌಂಡ್‌ಗೆ ಸುಣ್ಣ ಬಣ್ಣ ಬಳಸಿದೆ. ಅದರ ಮೇಲೆ ಮೌಲಿಕ ಬರಹ ಬರೆಸಿದತು. ನಂತರ ಸುತ್ತಲೂ ಸಸಿ ನೆಟ್ಟಿದ್ದಾರೆ.


ಸ್ವಚ್ಛತೆ ಜಾಗೃತಿಗಾಗಿ ಬೀದಿ ನಾಟಕ

ಅಂಚೆ ಕೊಟ್ರೇಶ್ ಕೆರೆಯಲ್ಲಿದ್ದ ಬಳ್ಳಾರಿ ಜಾಲಿಗೆ ಮುಕ್ತಿ ನೀಡಿದ್ದಾರೆ. ಕೊಟ್ರೇಶ್ ಶ್ರಮಕ್ಕೆ ಯುವಕರು, ವ್ಯಾಪಾರಿಗಳು, ಕಾರ್ಮಿಕರು ಶಕ್ತಿಯಾನುಸಾರ ದೇಣಿಗೆ ನೀಡಿದ್ದಾರೆ. ಸಂಗ್ರಹವಾದ ₹14 ಲಕ್ಷ ಹಣದಿಂದ 852 ಎಕರೆ ವ್ಯಾಪ್ತಿಯ ಕೆರೆ ಅಂಗಳ, ಹಳ್ಳದ ಜಾಡು ಬಳ್ಳಾರಿ ಜಾಲಿಯಿಂದ ಮುಕ್ತಿ ಕಂಡಿದೆ. ಯುವಕರ ಮನವಿಯಿಂದ ಜಿಲ್ಲಾಡಳಿತ ಉದ್ಯೋಗಖಾತ್ರಿ ಯೋಜನೆಯಡಿ ₹1. 64 ಕೋಟಿ ವೆಚ್ಚ ಮಾಡಿ, 30 ಸಾವಿರ ಟ್ರಾಕ್ಟರ್ ಲೋಡ್‍ನಷ್ಟು ಹೂಳು ತೆಗೆಸಿದೆ. ‘ನಮ್ಮ ಕೆರೆ ನಮ್ಮ ಹಕ್ಕು’ ಬಳಗದ ಕೆಲಸ, ಕೊಟ್ಟೂರಿನ ಒಗ್ಗಟ್ಟು ಸುತ್ತಲಿನ 16 ಕೆರೆಗಳ ಸ್ವಚ್ಛತೆಗೆ ಸ್ಪೂರ್ತಿಯಾಗಿದೆ.

ತ್ಯಾಜ್ಯದಿಂದ ಶಾಪಗ್ರಸ್ಥವಾಗಿದ್ದ ಗಚ್ಚಿನ ಮಠದ ಕಲ್ಯಾಣಿ ಸ್ವಚ್ಛತೆಗಾಗಿ (ಕನ್ನೀರಮ್ಮ ಬಾವಿ) ಗಚ್ಚಿನ ಮಠ ಬಾಯ್ಸ್ ಬಳಗ, ಯುವ ಬ್ರಿಗೇಡ್‍ನ ಸುಮಾರು 40-60 ಯುವಕರು ಸತತ ತಿಂಗಳು ಶ್ರಮಿಸಿದ್ದಾರೆ. ಹುಡುಗರೇ ಹಣ ಹಾಕಿ ಕಲ್ಯಾಣಿಗೆ ಕಾಯಕಲ್ಪ ನೀಡಿದ್ದಾರೆ. ಮಾತ್ರವಲ್ಲ, ಕಲ್ಯಾಣಿಗೆ ಕಸ ಹಾಕದಂತೆ ರಕ್ಷಣೆ ಒದಗಿಸಿದ್ದಾರೆ. 


ಗಿಡ ನೆಟ್ಟ ನಂತರ..

ಹಸಿರಾಗುತ್ತಿದೆ ಕೊಟ್ಟೂರು..

ಅರಣ್ಯ ಇಲಾಖೆಯ ಸಹಯೋಗದಲ್ಲಿ ರಸ್ತೆ ಬದಿಯಲ್ಲಿ ಮರಗಿಡಗಳನ್ನು ಬೆಳೆಸುವ ಕೆಲಸ ನಡೆಯುತ್ತಿದೆ. ಮಕ್ಕಳಿಗೆ ಪರಿಸರ ಪಾಠ, ನಾಗರಾಜ್ ಮತ್ತು ಅವರ ಬಳಗ ನೇಕಾರ ಓಣಿಯ ಉದ್ಯಾನವನ ನಿರ್ವಹಣೆ ಜವಾಬ್ದಾರಿ ಹೊತ್ತಿದ್ದಾರೆ. ಆ ಉದ್ಯಾನವನ್ನು ಅಯುರ್ವೇದ ಸಸ್ಯ ಕಾಶಿ ಮಾಡಿದ್ದಾರೆ!.

ಛೇಂಬರ್ ಆಫ್ ಕಾರ್ಮಸ್ ಪಟ್ಟಣದ ರಾಷ್ಠ್ರೀಕೃತ ಬ್ಯಾಂಕ್‍ಗಳ ಸಹಯೋಗದಲ್ಲಿ ಗಿಡ ನೆಟ್ಟು, ಟ್ರೀ ಗಾರ್ಡ್ ಹಾಕಿಸಿದ್ದಾರೆ. ಮನೆ ಆಸುಪಾಸಿನ ಗಿಡಗಳ ರಕ್ಷಣೆಯನ್ನೇ ಜನರೇ ನಿರ್ವಹಿಸುತ್ತಾರೆ. ಬೇಸಿಗೆಯಲ್ಲಿ ಜನರೇ ಟ್ಯಾಂಕರ್ ಮೂಲಕ ಗಿಡಗಳನ್ನು ಉಳಿಸಿಕೊಂಡಿದ್ದಾರೆ.‘ಸಾರ್ವಜನಿಕರಲ್ಲೂ ಮರಗಿಡಗಳ ಮೇಲಿನ ಅಕ್ಕರೆ ಹೆಚ್ಚಾಗಿದೆ. ಜನರೇ ಗಿಡ ನೆಡಲು ಸ್ಪರ್ಧೆಗೆ ಬಿದ್ದು ಸ್ಥಳ ನೀಡುತ್ತಿದ್ದಾರೆ. ಜನರ ಕಳಕಳಿಯಿಂದ ಮರಗಿಡಗಳು ಸುರಕ್ಷಿತ ಮತ್ತು ಸಮೃದ್ಧವಾಗಿವೆ’ ಎನ್ನುತ್ತಾರೆ ಕೊಟ್ಟೂರು ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಗಾಳೆಪ್ಪ.


ಕಲ್ಯಾಣಿ ಸ್ವಚ್ಛತೆ

‘ತೇರು ಬಯಲು ಬಸವೇಶ್ವರ ಯುವಕ ಸಂಘ ಕಳೆದ ವರ್ಷ ಪರಿಸರ ಸ್ನೇಹಿ ಗಣೇಶನ ಮೂರ್ತಿ ಕೂರಿಸಿ, 5000 ಸಸಿಗಳನ್ನು ಜನರಿಗೆ ಪ್ರಸಾದ ರೂಪದಲ್ಲಿ ನೀಡಿದ್ದಾರೆ.  ‘ನಮ್ಮ ಓಣಿ ನಮ್ಕ ಹಕ್ಕು’ ಅಡಿಯಲ್ಲಿ ಆ ಪ್ರದೇಶದ ಸ್ವಚ್ಛತೆಗೆ ಮುಂದಾಗಿದ್ದಾರೆ. ‘ನಮ್ಮ ಕಾರ್ಯ ಬೇರೆ ಕಡೆಗಳಲ್ಲಿ ಮತ್ತು ನೈರ್ಮಲ್ಯದ ಬಗ್ಗೆ ಅರಿವು ಮೂಡಿಸುತ್ತಿದೆ. ನಮ್ಮ ಮುಂದಿನ ಗುರಿ ಸ್ವಚ್ಛ, ಸ್ವಸ್ಥ ಕೊಟ್ಟೂರು’ ಎನ್ನುತ್ತಾರೆ ಯುವಕ ವಿಕ್ರಂ ನಂದಿ.

ಕೊಟ್ಟೂರಿನಲ್ಲಿ ನಡೆಯುತ್ತಿರುವ ಸ್ವಚ್ಛತೆ, ಹಸಿರಿನ ಜಾಗೃತಿ ಕಾರ್ಯಗಳು, ಮನೆ-ಮನಗಳಲ್ಲಿ ಚರ್ಚೆಯಾಗುತ್ತಿದೆ. ಊರು ಕಟ್ಟಲು ಸರ್ಕಾರ, ಸ್ಥಳೀಯ ಸಂಸ್ಥೆಗಳ ಮೇಲೆ ಅವಲಂಬಿತವಾಗುವ ಬದಲು, ಅವುಗಳನ್ನೂ ಬಳಸಿಕೊಂಡು, ಸ್ಥಳೀಯವಾಗಿ ಏನೆಲ್ಲಾ ಮಾಡಬಹುದು ಎಂಬುದಕ್ಕೆ ಕೊಟ್ಟೂರಿನಲ್ಲಿ ಈ ಸಂಘಟನೆಗಳ ಕಾರ್ಯ ಒಂದು ಮಾದರಿಯಾಗುತ್ತದೆ.


ಸ್ವಚ್ಛತೆ ಸಾರುವ ‘ಪರಿಸರ ವಾಹನ’

**

ಬೆನ್ನಿಗೆ ನಿಂತ ಹಿರಿಯರು..

ಕಿರಿಯರ ಪರಿಸರ ರಕ್ಷಣೆ, ಸ್ವಚ್ಛತೆಯ ಕಾರ್ಯಕ್ಕೆ ಹಿರಿಯರು, ಮಠಾಧೀಶರು ಬೆನ್ನಿಗೆ ನಿಂತಿದ್ದಾರೆ. ಚಾನುಕೋಟಿ ಶ್ರೀಗಳು ಕೆರೆ ಸ್ವಚ್ಛತೆಯಲ್ಲಿ ಕೈ ಮುಟ್ಟಿ ಕೆಲಸ ಮಾಡಿದ್ದರು. ಪ್ರತಿ ಭಾನುವಾರ ಉಪಹಾರ, ಊಟ, ತಂಪು ಪಾನೀಯದ ವ್ಯವಸ್ಥೆ ಮಾಡಿದ್ದರು. ಖ್ಯಾತ ಕತೆಗಾರ ಕುಂ.ವೀ ಸೇರಿದಂತೆ ಅನೇಕರು ಯುವಕರಿಗೆ ಮಾನಸಿಕವಾಗಿ ಬೆಂಬಲಕ್ಕೆ ನಿಂತರು. ಹಿರಿಯ ಜೀವಿಗಳಾದ ಪೋಸ್ಟ್ ಮಾಸ್ಟರ್ ಕರಿಯಪ್ಪ, ರಾಜೇಂದ್ರಪ್ಪ, ವಾಮದೇವಯ್ಯ ಮತ್ತಿತರರು ಬನಶಂಕರಿ ಗುಡಿಯಿಂದ ಸರಕಾರಿ ಆಸ್ಪತ್ರೆಯವರೆಗೆ ರಸ್ತೆ ಸ್ವಚ್ಛತೆ, ಸಾರ್ವಜನಿಕ ಶೌಚಾಲಯ ಸ್ವಚ್ಛತೆಗೆ ಕೈ ಜೋಡಿಸಿ, ಯುವರಿಗೆ ಸ್ಪೂರ್ತಿಯಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !