ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ತೂರು ನೀತಿಗೆಟ್ಟ ರಾಜಕಾರಣಿ

ವರ್ತೂರು ಪ್ರಕಾಶ್‌ ವಿರುದ್ಧ ಜೆಡಿಎಸ್ ಮುಖಂಡ ಕೆ.ಶ್ರೀನಿವಾಸಗೌಡ ವಾಗ್ದಾಳಿ
Last Updated 16 ಮಾರ್ಚ್ 2018, 8:37 IST
ಅಕ್ಷರ ಗಾತ್ರ

ಕೋಲಾರ: ‘ಶಾಸಕ ವರ್ತೂರು ಪ್ರಕಾಶ್‌ರನ್ನು ಕ್ಷೇತ್ರದಿಂದ ಮನೆಗೆ ಕಳುಹಿಸಲು 5 ವರ್ಷ ಬೇಕಾಗಿಲ್ಲ. ಮೂರು ತಿಂಗಳು ಸಾಕು’ ಎಂದು ಜೆಡಿಎಸ್ ಮುಖಂಡ ಕೆ.ಶ್ರೀನಿವಾಸಗೌಡ ವ್ಯಂಗ್ಯವಾಡಿದರು.

ಇಫ್ಕೋ ಟೋಕಿಯೊ ಸಂಸ್ಥೆ ವತಿಯಿಂದ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬಡ ರೋಗಿಗಳಿಗೆ ಹಣಕಾಸು ನೆರವಿನ ಚೆಕ್‌ ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿ, ‘ವರ್ತೂರು ಪ್ರಕಾಶ್‌ರಂತಹ ಭ್ರಷ್ಟ ಹಾಗೂ ನೀತಿಗೆಟ್ಟ ರಾಜಕಾರಣಿಯನ್ನು ಜಿಲ್ಲೆಯ ಇತಿಹಾಸದಲ್ಲೇ ಕಂಡಿರಲಿಲ್ಲ’ ಎಂದು ತೀವ್ರ ವಾಗ್ದಾಳಿ ನಡೆಸಿದರು.

‘ಕ್ಷೇತ್ರದಲ್ಲಿ ತಾನು ಯಾವುದೇ ಭ್ರಷ್ಟಾಚಾರ ಮಾಡಿಲ್ಲ ಎಂದು ವರ್ತೂರು ಪ್ರಕಾಶ್‌ ಕಾರ್ಯಕರ್ತರ ಸಮಾವೇಶದಲ್ಲಿ ಹೇಳಿದ್ದಾರೆ. ಆದರೆ, ಅವರು ಒಂದು ದಶಕದಲ್ಲಿ ಎಷ್ಟು ಹಣ ಮಾಡಿದ್ದಾರೆ ಎಂಬ ಮಾಹಿತಿ ನನ್ನ ಬಳಿಯಿದೆ. ಕಂದಾಯ ಇಲಾಖೆಯ ಆಯಕಟ್ಟಿನ ಹುದ್ದೆಗಳಲ್ಲಿ ತಮ್ಮ ಆಪ್ತ ಅಧಿಕಾರಿಗಳನ್ನು ಕೂರಿಸಿ ಇಡೀ ವ್ಯವಸ್ಥೆ ಹಾಳು ಮಾಡಿದ್ದಾರೆ. ಅವರ ದುರಾಡಳಿತದಿಂದ ಕ್ಷೇತ್ರದ ಜನ ಬೇಸತ್ತಿದ್ದಾರೆ’ ಎಂದರು.

ಗೆಲುವಿನ ದಿಕ್ಸೂಚಿ: ‘ಕ್ಷೇತ್ರದಲ್ಲಿ ಒಂದು ವಾರದಿಂದ ಓಡಾಡುತ್ತಿದ್ದೇನೆ. ಈ ಬಾರಿ ಚುನಾವಣೆಗೆ ಸ್ಪರ್ಧಿಸಬೇಕೇ ಅಥವಾ ಬೇಡವೇ ಎಂದು ಜನಾಭಿಪ್ರಾಯ ಸಂಗ್ರಹಿಸಲು ಮನೆ ಮನೆಗೆ ಭೇಟಿ ಕೊಡುತ್ತಿದ್ದೇನೆ. ರಾಜಕೀಯವಾಗಿ ಸಾಕಷ್ಟು ಬದಲಾವಣೆ ಆಗಿದೆ. ಶಾಸಕರ ಜತೆಗಿದ್ದವರೂ ಅಸಮಾಧಾನಗೊಂಡು ನನ್ನತ್ತ ಬರುತ್ತಿದ್ದಾರೆ. ಇದು ನನ್ನ ಗೆಲುವಿನ ದಿಕ್ಸೂಚಿ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಕ್ಷೇತ್ರದ ಅಭಿವೃದ್ಧಿ ಜನರ ಪ್ರಮುಖ ಬೇಡಿಕೆಯಾಗಿದೆ. ಗ್ರಾಮೀಣ ಭಾಗದಲ್ಲಿ ಈ ಹಿಂದೆ ಜನ ಪಕ್ಷ ಭೇದ ಮರೆತು ಜೀವನ ಮಾಡುತ್ತಿದ್ದರು. ರಾಜಕೀಯ ವೈಮನಸ್ಸು ಇರಲಿಲ್ಲ. ಕ್ಷೇತ್ರದ ಜನ ಬೈರೇಗೌಡರನ್ನು 6 ಬಾರಿ ಗೆಲ್ಲಿಸಿ ವಿಧಾನಸೌಧಕ್ಕೆ ಕಳುಹಿಸಿದ್ದರು. ಅವರ ಮಗ ಕೃಷ್ಣ ಬೈರೇಗೌಡರೂ ಗೆದ್ದಿದ್ದಾರೆ. ಆದರೆ, ಇಂತಹ ಸಂದಿಗ್ಧ ಸ್ಥಿತಿಯನ್ನು ಹಿಂದೆಂದೂ ಕಂಡಿರಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಬೃಹತ್‌ ಸಮಾವೇಶ: ‘ಜಿಲ್ಲಾ ಕೇಂದ್ರದಲ್ಲಿ ಏ.1ಕ್ಕೆ ಪಕ್ಷದ ಬೃಹತ್‌ ಸಮಾವೇಶ ಆಯೋಜಿಸಿದ್ದು, ಈ ಬಗ್ಗೆ ಚರ್ಚೆ ನಡೆಸಲು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಮಾ.18ರಂದು ಬೆಂಗಳೂರಿನಲ್ಲಿ ಸಭೆ ಕರೆದಿದ್ದಾರೆ. ನನಗೆ ಜೆಡಿಎಸ್‌ ಟಿಕೆಟ್‌ ಸಿಗುವ ಬಗ್ಗೆ ಯಾವುದೇ ಅನುಮಾನ ಬೇಡ. ನಾನು ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ನಿಶ್ಚಿತ. ಬೆಂಬಲಿಗರು ಹಾಗೂ ಕಾರ್ಯಕರ್ತರು ಭಿನ್ನಾಭಿಪ್ರಾಯ ಮರೆತು ಗೆಲ್ಲುವಿಗೆ ಶ್ರಮಿಸಬೇಕು’ ಎಂದು ತಿಳಿಸಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮಣ್ಣ, ರಾಜ್ಯ ಜೆಡಿಎಸ್ ಎಸ್ಸಿ ಘಟಕದ ಉಪಾಧ್ಯಕ್ಷ ವೆಂಕಟೇಶ್, ಮುಖಂಡರಾದ ಪುಟ್ಟರಾಜು, ಜಾಕೀರ್ ಹುಸೇನ್ ಹಾಜರಿದ್ದರು.

*
ವರ್ತೂರು ಪ್ರಕಾಶ್‌ ಈ ಹಿಂದೆ ಆಪರೇಷನ್ ಕಮಲದಲ್ಲಿ ಯಡೆಯೂರಪ್ಪ ಮತ್ತು ಜನಾರ್ದನರೆಡ್ಡಿ ಅವರಿಂದ ₹ 35 ಕೋಟಿ ಪಡೆದಿರುವ ಸಂಗತಿ ಎಲ್ಲರಿಗೂ ಗೊತ್ತಿದೆ.
–ಕೆ.ಶ್ರೀನಿವಾಸಗೌಡ, ಜೆಡಿಎಸ್‌ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT