ಮಂಗಳವಾರ, ಮಾರ್ಚ್ 28, 2023
33 °C
ಹಾವು ಸಂರಕ್ಷಿಸಿ, ಮಹತ್ವ ಸಾರುತ್ತಿರುವ ಸ್ನೇಕ್‌ ಶ್ಯಾಂ–ಸೂರ್ಯ ಕೀರ್ತಿ

World Snake Day: ಅಪ್ಪ–ಮಗನ ಉರಗ ಸೇವೆ...

ಕೆ.ಓಂಕಾರ ಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಹಾವು ಕಂಡೊಡನೆ ದೊಣ್ಣೆ ಹಿಡಿದು ಹೊಡೆಯಲು ಮುಂದಾಗುವರೇ ಅಧಿಕ. ‘ಹಾವು ಅಪಾಯಕಾರಿ, ಕಚ್ಚಿದರೆ ಸಾವು ಸಂಭವಿಸಬಹುದು’ ಎಂಬ ಭಯ, ಆತಂಕವೇ ಅದಕ್ಕೆ ಕಾರಣ.

ಇಂಥ ಸಮಯದಲ್ಲಿ ಹಾವುಗಳನ್ನು ಸಂರಕ್ಷಿಸಿ ಅವುಗಳನ್ನು ಸ್ವಾಭಾವಿಕ ಪರಿಸರಕ್ಕೆ ಸೇರಿಸುತ್ತಿರುವ ಮೈಸೂರಿನ ಸ್ನೇಕ್‌ ಶ್ಯಾಂ, ಹಲವಾರು ವರ್ಷಗಳಿಂದ ಮೈಸೂರು ನಗರದಲ್ಲಿ ಮನೆಮಾತಾಗಿದ್ದಾರೆ. ಜನರ ಪಾಲಿಗೆ ಆಪತ್ಬಾಂಧವರಾಗಿದ್ದಾರೆ.

80ರ ದಶಕದಿಂದಲೇ ಈ ಕಾಯಕದಲ್ಲಿ ತೊಡಗಿದ್ದು, ಸಾವಿರಾರು ಉರಗಗಳನ್ನು ರಕ್ಷಣೆ ಮಾಡಿದ್ದಾರೆ. ಜೊತೆಗೆ ಹಾವುಗಳ ಸಂರಕ್ಷಣೆಯ ಮಹತ್ವ ಸಾರುತ್ತಿದ್ದಾರೆ. ಈ ಕೆಲಸವೇ ಅವರನ್ನು ಒಮ್ಮೆ ಕಾರ್ಪೊರೇಟರ್‌ ಸ್ಥಾನಕ್ಕೂ ಏರಿಸಿತ್ತು. ವಿಜಯನಗರ 2ನೇ ಹಂತದಲ್ಲಿನ ರಸ್ತೆಗೆ ಇವರ ಹೆಸರಿಡಲಾಗಿದೆ. ‘ವಿಶ್ವ ಹಾವು ದಿನ’ದ ಪ್ರಯುಕ್ತ ಉರಗ ಪ್ರೇಮಿ ಸ್ನೇಕ್‌ ಶ್ಯಾಂ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

‘ಮನುಷ್ಯ ಭೂಮಿಗೆ ಬರುವ ಸಹಸ್ರಾರು ವರ್ಷಗಳ ಮೊದಲಿನಿಂದಲೇ ಹಾವುಗಳು ಇಲ್ಲಿ ವಾಸಿಸುತ್ತಿವೆ. ಆದರೆ, ಅವುಗಳನ್ನೇ ಮನುಷ್ಯರು ನಾಶ ಮಾಡಲು ಹೊರಟಿದ್ದಾರೆ. ಹಾವುಗಳು ಇಲಿಗಳನ್ನು ತಿಂದು ಆಹಾರ ಧಾನ್ಯ ಸಂರಕ್ಷಣೆಯಲ್ಲಿ ತೊಡಗಿವೆ, ಪರಿಸರ ಸಮತೋಲನಕ್ಕೆ ಕಾರಣವಾಗಿವೆ. ಕೇರೆ ಹಾವು (ರ‍್ಯಾಟ್‌ ಸ್ನೇಕ್‌) ವರ್ಷಕ್ಕೆ 300 ಇಲಿಗಳನ್ನು ತಿನ್ನುತ್ತದೆ. ಹಾವುಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ. ನಮ್ಮ ತಪ್ಪಿನಿಂದ ಅವು ಕಚ್ಚುತ್ತವೆ. ಅವುಗಳ ಸಂತತಿ ಇಲ್ಲವಾದರೆ ಮನುಷ್ಯರ ಬದುಕೂ ದುರ್ಬರವಾಗುತ್ತದೆ. ಇದುವರೆಗೆ 40 ಸಾವಿರಕ್ಕೂ ಅಧಿಕ ಹಾವು ಸಂರಕ್ಷಣೆ ಮಾಡಿದ್ದೇನೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಜೀವ ಲೆಕ್ಕಿಸದೆ ಸಂರಕ್ಷಣೆ: ಕೋವಿಡ್‌ ಲಾಕ್‌ಡೌನ್‌ ಸಮಯದಲ್ಲಿ ಸೋಂಕಿತರ ಮನೆಗೂ ತೆರಳಿ ಜೀವ ಲೆಕ್ಕಿಸದೆ ಹಾವಿನ ಸಂರಕ್ಷಣೆಯಲ್ಲಿ ತೊಡಗಿದ್ದರು.

‘ಲಾಕ್‌ಡೌನ್‌ ವೇಳೆ ಎಲ್ಲರೂ ಮನೆಯಲ್ಲಿದ್ದಾಗ ಹೆಚ್ಚು ಹಾವುಗಳು ಕಾಣಿಸಿಕೊಳ್ಳುತ್ತಿದ್ದವು. ಹೆಚ್ಚಿನ ಕರೆಗಳು ಬರುತ್ತಿದ್ದವು. ಕೆಲ ಏರಿಯಾ, ಮನೆಗಳನ್ನು ಸೀಲ್‌ಡೌನ್ ಮಾಡಲಾಗಿತ್ತು. ಅಂಥ ಮನೆಗೇ ತೆರಳಿ ಹಾವು ರಕ್ಷಣೆ ಮಾಡಿದೆ’ ಎಂದು ನುಡಿದರು.

25 ಪ್ರಭೇದ: ‘ಯಾವುದೇ ಬಡಾವಣೆಯ ಮನೆಯೊಳಗೆ ಹಾವು ಸೇರಿಕೊಂಡಿರುವ ಬಗ್ಗೆ ರಾತ್ರಿ 1 ಗಂಟೆಗೆ ಕರೆ ಬಂದರೂ ಪುತ್ರನನ್ನು ಕರೆದುಕೊಂಡು ಹೋಗುತ್ತೇನೆ. ಮೈಸೂರಲ್ಲಿ ಸುಮಾರು 25 ಪ್ರಭೇದದ ಹಾವುಗಳು ಇವೆ. ಸಂರಕ್ಷಣೆ ಮಾಡಿ ಸ್ವಾಭಾವಿಕ ಪರಿಸರದಲ್ಲಿ ಬಿಡುತ್ತಿದ್ದೇವೆ’ ಎಂದರು.

ತಂದೆ ಹಾದಿ ಹಿಡಿದ ಸೂರ್ಯ: ಪ್ರತಿ ಪೋಷಕರು ತಮ್ಮ ಮಕ್ಕಳು ಉನ್ನತ ಸ್ಥಾನಕ್ಕೇರುವುದನ್ನು ಕನಸು ಕಾಣುತ್ತಾರೆ. ಆದರೆ, ಶ್ಯಾಂ ಅವರು ತಮ್ಮ ಪುತ್ರನಿಗೆ ಚಿಕ್ಕಂದಿನಿಂದಲೇ ಹೇಳಿಕೊಟ್ಟಿದ್ದು ಉರಗ ಸಂರಕ್ಷಣೆ. ‌ಹೀಗಾಗಿ, ಸೂರ್ಯ ಕೀರ್ತಿ ಕೂಡ ತಂದೆ ಹಾದಿ ಹಿಡಿದಿದ್ದಾರೆ. ಸಾವಿರಕ್ಕೂ ಅಧಿಕ ಉರಗಗಳ ರಕ್ಷಣೆ ಮಾಡಿದ್ದಾರೆ.

‘ತಂದೆಯು ಹಾವುಗಳನ್ನು ಸಂರಕ್ಷಣೆ ಮಾಡಿ ಅರಣ್ಯಕ್ಕೆ ಬಿಡಲು ಮನೆಗೆ ತರುತ್ತಿದ್ದರು. ಆಗ ಅವುಗಳ ವರ್ತನೆ ಗಮನಿಸುತ್ತಿದ್ದೆ. ನಾಗರಹಾವು ಏಕೆ ಹೆಡೆ ಎತ್ತುತ್ತದೆ, ಕೇರೆ ಹಾವು ಏಕೆ ಕತ್ತು ದಪ್ಪ ಮಾಡಿಕೊಳ್ಳುತ್ತದೆ, ಯಾವ ಉದ್ದೇಶಕ್ಕೆ ಪೊರೆ ಬಿಡುತ್ತವೆ? ಕೋಪ ಬಂದಾಗ, ಹಸಿವಾದಾಗ ಅವುಗಳ ವರ್ತನೆ ಹೇಗಿರುತ್ತದೆ ಎಂಬುದನ್ನು ಕರಗತ ಮಾಡಿಕೊಂಡೆ’ ಎಂದು ಸೂರ್ಯ ಹೇಳಿದರು.

‘ಜೂನ್‌ ತಿಂಗಳಲ್ಲಿ ಮೈಸೂರು ನಗರದಲ್ಲಿ ಕಟ್ಟಾವು (ಕ್ರೇಟ್‌) ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತವೆ. ಈ ಹಾವುಗಳು ರಾತ್ರಿ ಮಾತ್ರ ಚಟುವಟಿಕೆಯಿಂದ ಕೂಡಿರುತ್ತವೆ. ಇರುವೆ ಕಚ್ಚಿದರೆ ಗೊತ್ತಾಗುತ್ತದೆ, ಆದರೆ, ಈ ಹಾವು ಕಚ್ಚಿದಾಗ ಗೊತ್ತಾಗುವುದೇ ಇಲ್ಲ. ನಾಗರಹಾವಿಗಿಂತ 14 ಪಟ್ಟು ಹೆಚ್ಚು ವಿಷಕಾರಿ’ ಎಂದು ಮಾಹಿತಿ ನೀಡಿದರು.

ಇವರಿಬ್ಬರು ಯಾವುದೇ ಸಂದರ್ಭದಲ್ಲಿ, ಎಷ್ಟೇ ವಿಷಕಾರಿಯಾಗಿದ್ದರೂ ಹಾವನ್ನು ಹಿಡಿಯುತ್ತಾರೆ. ಹಿಡಿದಿರುವ ಹಾವಿನ ವಿಶೇಷತೆ, ಇಲ್ಲಿಗೇಕೆ ಬಂದಿರಬಹುದು ಎಂಬುದರ ಕುರಿತು ಜನರಿಗೆ ವಿವರಣೆ ನೀಡುತ್ತಾರೆ.

ಹಾವು ಕಚ್ಚಿದರೆ ಏನು ಮಾಡಬೇಕು ಎಂಬುದಕ್ಕೆ ಸೂರ್ಯ ಕೀರ್ತಿ ಸಲಹೆ

* ಯಾವುದೇ ಕಾರಣಕ್ಕೆ ಗಾಬರಿಗೆ ಒಳಗಾಗಬಾರದು. ಹಾವಿನ ವಿಷಕ್ಕಿಂತ ಒತ್ತಡ, ಗಾಬರಿಯೇ ಅಪಾಯಕಾರಿ
* ಸಾಬೂನು ಇಲ್ಲವೇ ಡೆಟಾಲ್‌ನಿಂದ ಮೊದಲು ಗಾಯ ತೊಳೆಯಿರಿ
* ಕಚ್ಚಿದ ಜಾಗವನ್ನು ಅಲುಗಾಡಿಸಬೇಡಿ. ಅಲುಗಾಡಿಸಿದರೆ ರಕ್ತಪರಿಚಲನೆ ಹೆಚ್ಚಾಗಿ, ವಿಷ ಬೇಗ ಹರಡುತ್ತದೆ
* ಕುಡಿಯಲು ನೀರು, ತಿನ್ನಲು ಆಹಾರ ಕೊಡಬೇಡಿ
* ಕಚ್ಚಿದ ಭಾಗವನ್ನು ಬಿಗಿಯಾಗಿ ಕಟ್ಟಬೇಡಿ
* ಸಾಧ್ಯವಾದಷ್ಟು ಬೇಗ ಆಸ್ಪತ್ರೆಗೆ ಸಾಗಿಸಿ
* ಎಲ್ಲ ಹಾವುಗಳೂ ವಿಷಪೂರಿತವಲ್ಲ. ನಾಗರಹಾವು, ಮಂಡಲ ಹಾವು, ನಾಗಮಂಡಲ ಹಾವು, ಕಟ್ಟಾವು (ಕ್ರೇಟ್‌) ಕಚ್ಚಿದರೆ ಮಾತ್ರ ವಿಷವೇರುತ್ತದೆ

ಸಂಪರ್ಕಕ್ಕೆ: 9980557797

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು