‘ಫೈರ್‌ ವಾರ್ಡನ್‌’ ವಿದ್ಯಾರ್ಥಿಗಳ ಪಡೆ

ಶುಕ್ರವಾರ, ಏಪ್ರಿಲ್ 26, 2019
34 °C

‘ಫೈರ್‌ ವಾರ್ಡನ್‌’ ವಿದ್ಯಾರ್ಥಿಗಳ ಪಡೆ

Published:
Updated:
Prajavani

ಸಾವಿರಾರು ಎಕರೆ ವಿಸ್ತೀರ್ಣದ ಜ್ಞಾನಭಾರತಿ ಆವರಣ ಮತ್ತು ಅಲ್ಲಿನ ಜೈವಿಕವನಗಳಲ್ಲಿ ಸಂಭವಿಸುವ ಅಗ್ನಿ ಅವಘಡ, ಕಾಳ್ಗಿಚ್ಚನ್ನು ತಡೆಯಲು ಸ್ವಯಂ ಪ್ರೇರಿತ ವಿದ್ಯಾರ್ಥಿಗಳ ಮತ್ತು ಅಧ್ಯಾಪಕರ ಪಡೆಯೊಂದನ್ನು ರಚಿಸಲು ಬೆಂಗಳೂರು ವಿಶ್ವವಿದ್ಯಾಲಯದ ಜೈವಿಕವನ ವಿಭಾಗ ಮುಂದಾಗಿದೆ. ಇದಕ್ಕೆ ಈಗಾಗಲೇ 20 ವಿದ್ಯಾರ್ಥಿಗಳು ಮುಂದೆ ಬಂದಿದ್ದಾರೆ.
ಅಗ್ನಿ ದುರಂತಗಳ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವವಿದ್ಯಾಲಯವು ಅಗ್ನಿ ಶಾಮಕ ಇಲಾಖೆ ಜತೆಗೂಡಿ ‘ಅಗ್ನಿ ಜಾಗೃತಿ ಸಪ್ತಾಹ’ ಕೈಗೊಂಡಿದೆ.

ಪಿ.ಜಿ–2, ಪಿಎಚ್‌.ಡಿ ಹಾಸ್ಟೆಲ್‌ ಬಳಿ ಸಪ್ತಾಹಕ್ಕೆ ಸೋಮವಾರ ಸಂಜೆ ಚಾಲನೆ ದೊರೆತಿದ್ದು, ಮಂಗಳವಾರ ಪಿ.ಜಿ–5 ಹಾಸ್ಟೆಲ್‌ ಬಳಿ ಪ್ರಾತ್ಯಕ್ಷಿಕೆ ನಡೆದಿದೆ. ಕಾಳ್ಗಿಚ್ಚು, ಅಗ್ನಿ ಅವಘಡಗಳು ಹೇಗೆಲ್ಲ ಸಂಭವಿಸುತ್ತವೆ? ಆಗ ವಿದ್ಯಾರ್ಥಿಗಳು ಏನು ಮಾಡಬೇಕು? ಈ ದುರಂತಗಳು ಸಂಭವಿಸದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳು ಯಾವುವು ಎಂಬುದರ ಕುರಿತು ಸಪ್ತಾಹದಲ್ಲಿ ಮಾಹಿತಿ ನೀಡಲಾಗುತ್ತಿದೆ. ಅಗ್ನಿ ನಂದಕಗಳ ಬಗೆ ಮತ್ತು ಅವುಗಳ ಬಳಕೆಯ ವಿಧಾನಗಳ ಕುರಿತು ಪ್ರಾತ್ಯಕ್ಷಿಕೆಯನ್ನೂ ನೀಡಲಾಗುತ್ತಿದೆ.

100 ವಿದ್ಯಾರ್ಥಿಗಳ ಪಡೆ:  ‘ಸಪ್ತಾಹದಲ್ಲಿ ಭಾಗವಹಿಸಿದ್ದ ಹಲವರಲ್ಲಿ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಅಮೂಲ್ಯ ಅರಣ್ಯ ಸಂಪತ್ತನ್ನು ಉಳಿಸಿಕೊಳ್ಳಲು ಸ್ವಯಂ ಪ್ರೇರಣೆಯಿಂದ ಮುಂದೆ ಬಂದಿದ್ದಾರೆ. ಸಪ್ತಾಹದ ಕೊನೆಯ ದಿನದಂದು ಇಂಥ 100 ಸ್ವಯಂ ಪ್ರೇರಿತ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರನ್ನು ಒಳಗೊಂಡ ‘ವಿಶ್ವವಿದ್ಯಾಲಯದ ಅಗ್ನಿ ನಂದಕ ಪಡೆ’ ಅಥವಾ ‘ಫೈರ್‌ ವಾರ್ಡನ್‌’ ಪಡೆ ನಿರ್ಮಿಸುವ ಯೋಜನೆ ಇದೆ. ಈ ಪಡೆಯ ಸದಸ್ಯರ ನಡುವೆ ಮಾಹಿತಿ ವಿನಿಮಯಕ್ಕಾಗಿ ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸುತ್ತೇವೆ. ಸದಸ್ಯರಿಗೆ ವಿಶೇಷ ಗುರುತಿನ ಚೀಟಿ, ಜಾಕೆಟ್‌ ನೀಡುತ್ತೇವೆ. ವಿಶೇಷ ತರಬೇತಿ ನೀಡಿ ಸಜ್ಜುಗೊಳಿಸುತ್ತೇವೆ. ಅಗ್ನಿ ಅವಘಡಗಳು ಸಂಭವಿಸಿದ ಮಾಹಿತಿ ಗೊತ್ತಾದ ತಕ್ಷಣ ಕಾರ್ಯೋನ್ಮುಖರಾಗುವಂತೆ ಮಾಡುತ್ತೇವೆ. ವಿ.ವಿಯಿಂದ ಪ್ರಮಾಣ ಪತ್ರವನ್ನು ಕೊಡಿಸುವ ಉದ್ದೇಶವೂ ಇದೆ’ ಎನ್ನುತ್ತಾರೆ ಬೆಂ.ವಿ.ವಿ ಜೈವಿಕವನ ಸಂಯೋಜನಾಧಿಕಾರಿ ಡಾ. ಟಿ.ಜಿ.ರೇಣುಕಾ ಪ್ರಸಾದ್‌.  

ಸಪ್ತಾಹ ಕಾರ್ಯಕ್ರಮ ಎಲ್ಲೆಲ್ಲಿ: ಬುಧವಾರ ವಿ.ವಿ ಲೇಡಿಸ್‌ ಹಾಸ್ಟೆಲ್‌, ಗುರುವಾರ ಬಿ.ಸಿ.ಎಂ ಬಾಯ್ಸ್‌ ಹಾಸ್ಟೆಲ್‌, ಶುಕ್ರವಾರ ಬಿ.ಸಿ.ಎಂ ಲೇಡಿಸ್‌ ಹಾಸ್ಟೆಲ್‌ ಹಾಗೂ ಶನಿವಾರ ‘ಅಡ್ಮಿನಿಸ್ಟ್ರೇಟಿವ್‌ ಬ್ಲಾಕ್‌’ ಬಳಿ ಅಗ್ನಿ ಸಪ್ತಾಹ ಕರ‍್ಯಕ್ರಮ ಜರುಗಲಿದೆ. 

ವಿ.ವಿಯಲ್ಲಿನ ಸಸ್ಯ ಸಂಪತ್ತು

ಜ್ಞಾನಭಾರತಿ ಆವರಣದಲ್ಲಿ 300 ಎಕರೆ ಪ್ರದೇಶದಲ್ಲಿ ಜೈವಿಕವನ–1 ಹಾಗೂ 150 ಎಕರೆ ವಿಸ್ತೀರ್ಣದಲ್ಲಿ ಜೈವಿಕವನ–2 ಇದೆ. ಒಟ್ಟಾರೆ ಆವರಣ ನಾಲ್ಕೂವರೆ ಲಕ್ಷ ಸಸ್ಯ ಸಂಪತ್ತಿನ ತಾಣ. ಇಲ್ಲಿ 5020 ಸಸ್ಯ ಪ್ರಬೇಧಗಳಿವೆ. ಶ್ರೀಗಂಧ, ಬಿಳಿ ಜಾಲಿ, ಕರಿ ಜಾಲಿ, ಹತ್ತಿ, ಅರಳೆ, ಗೋಣಿಮರ, ಬಸರಿ, ನೇರಳೆ ಸೇರಿದಂತೆ ಅಪರೂಪದ ಗಿಡ, ಮರಗಳಿವೆ. ನವಿಲು, ಅಳಿಲು, ನರಿ, ಮುಂಗುಸಿ, ಮೊಲ, ಉರಗ, ವಿವಿಧ ಬಗೆಯ ಪಕ್ಷಿಗಳು, ಚಿಟ್ಟೆಗಳು ಇಲ್ಲಿ ನೆಲೆ ಕಂಡುಕೊಂಡಿವೆ.
ಬರಲಿದೆ ವಿಪತ್ತು ನಿರ್ವಹಣಾ ಕೋರ್ಸ್‌

ವಿಶ್ವವಿದ್ಯಾಲಯದ ಭೂಗೋಳ ವಿಭಾಗ ಮುಂದಿನ ಶೈಕ್ಷಣಿಕ ವರ್ಷದಿಂದ ‘ವಿಪತ್ತು ನಿರ್ವಹಣಾ’ ವಿಷಯದಲ್ಲಿ ಎರಡು ವರ್ಷದ ಸ್ನಾತಕೋತ್ತರ ಕೋರ್ಸ್‌ (ಎಂ.ಎಸ್ಸಿ) ಆರಂಭಿಸಲು ನಿರ್ಧರಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !