ಗುರುವಾರ , ಆಗಸ್ಟ್ 5, 2021
23 °C

PV Web Exclusive: ‘ಸೇತುಬಂಧು’ ಭಾರದ್ವಾಜರ ಮನೆಯಲ್ಲಿ ಜಲ ಜೋಗುಳ

ಸಂಧ್ಯಾ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಕುಗ್ರಾಮಗಳ ನಡುವೆ ಸೇತುಬಂಧ ಬೆಸೆದು ಸಾವಿರಾರು ಜನರಿಗೆ ಬಂಧುವಾಗಿರುವ ಗಿರೀಶ್ ಭಾರದ್ವಾಜ್ ತೂಗು ಸೇತುವೆಗಳ ಸರದಾರರಷ್ಟೇ ಅಲ್ಲ, ಜಲ ಸಂರಕ್ಷಕರೂ ಹೌದು. ಈಗ ಮಳೆ ಅಬ್ಬರಿಸುತ್ತಿದೆ. ಅವರ ಮನೆಸುತ್ತ ಜಲ ಜೋಗಳ ಕೇಳುತ್ತಿದೆ. ಓಡುವ ನೀರಿಗೆ ಲಗಾಮು ಹಾಕಿ, ತಮ್ಮ ಪರಿಸರದಲ್ಲಿ ಅಂತರ್ಜಲ ಹೆಚ್ಚಳಕ್ಕೆ ಕಾರಣರಾದವರು ಗಿರೀಶರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ. ಬೀಳುವ ಮಳೆ ನೀರು ತೊರೆಯಾಗಿ ಹರಿದು ನದಿ, ಸಮುದ್ರ ಸೇರುತ್ತಿದೆ. ಸುಳ್ಯದಲ್ಲಿರುವ ಗಿರೀಶ ಭಾರದ್ವಾಜ್ ಅವರ ಮನೆ, ಗೋದಾಮು, ತೋಟದ ಪರಿಸರದಲ್ಲಿ ಬೀಳುವ ಮಳೆನೀರಿನಲ್ಲಿ ಶೇ 90ರಷ್ಟು ಅಲ್ಲಿಯೇ ಇಂಗುತ್ತಿದೆ ಅಥವಾ ಶೇಖರಣೆಯಾಗುತ್ತಿದೆ.

ಕರ್ನಾಟಕ, ಕೇರಳ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ 129 ತೂಗುಸೇತುವೆಗಳನ್ನು ನಿರ್ಮಿಸಿ, 240 ಹಳ್ಳಿಗಳ ಸಂಕದ ಸಂಕಟವನ್ನು ನಿವಾರಿಸಿದ ‌ಗಿರೀಶ ಅವರು ಜಲತಜ್ಞ ಶ್ರೀಪಡ್ರೆ ಅವರಿಂದ ಪ್ರೇರಿತರಾಗಿ ತಮ್ಮ ಜಮೀನಿನಲ್ಲಿ ಮಳೆ ನೀರು ಇಂಗಿಸುವ ಮಾದರಿಗಳನ್ನು ನಿರ್ಮಿಸಿದ್ದಾರೆ. ಆರೇಳು ವರ್ಷಗಳ ಹಿಂದೆ ಪ್ರಾರಂಭವಾದ ಈ ಕಾರ್ಯ, ಹೊಸ ಪ್ರಯೋಗಗಳೊಂದಿಗೆ ಮತ್ತೆ ಮುಂದುವರಿಯುತ್ತಲೇ ಇದೆ. ಒಂದೆರಡು ತಿಂಗಳುಗಳ ಹಿಂದೆ ಗೋದಾಮಿನ ಆವರಣದಲ್ಲಿ ಮತ್ತೊಂದು ಮಳೆ ನೀರು ಸಂಗ್ರಹ ಮಾದರಿ ರಚಿಸಿದ್ದಾರೆ.

‘ಬೇಸಿಗೆಯಲ್ಲಿ ಕುಡಿಯುವ ನೀರನ್ನೂ ಮಿತವ್ಯಯದಲ್ಲಿ ಬಳಸಬೇಕಾಗಿ ಬಂತು. ಬೋರ್‌ವೆಲ್‌ ಕೂಡ ಬರಿದಾಗಿತ್ತು. ಅದೇ ವೇಳೆಗೆ ಶ್ರೀಪಡ್ರೆ ಅವರ ನೇತೃತ್ವದಲ್ಲಿ ಜಲಾಂದೋಲನ ವ್ಯಾಪಕವಾಗಿತ್ತು. ಶ್ರೀಪಡ್ರೆ ಸಲಹೆ ಪಡೆದು ವಾಸದ ಮನೆ, ಕಾರು ಶೆಡ್ ಮತ್ತು ಕೊಟ್ಟಿಗೆ ಚಾವಣಿ ಸೇರಿ ಸುಮಾರು 2,000 ಚದರ ಅಡಿ ಜಾಗದಲ್ಲಿ ಚಾವಣಿಯ ಮೇಲೆ ಬೀಳುವ ಮಳೆನೀರು ಹಳೆಯ ತೆರೆದ ಬಾವಿಗೆ ಸೇರುವಂತೆ, 6 ಇಂಚಿನ ಪಿವಿಸಿ ಪೈಪ್ ಅಳವಡಿಸಿ, ಹರಿದು ಹೋಗುವ ನೀರನ್ನು ಹಿಡಿದಿಡುವ ಪ್ರಯತ್ನ ಪ್ರಾರಂಭಿಸಿದೆವು’ ಎಂದು ನೆನಪಿಸಿಕೊಂಡರು ಗಿರೀಶ್ ಭಾರದ್ವಾಜ್.


ಮನೆಯ ಚಾವಣಿಯಿಂದ ನೀರು ಬಾವಿಗೆ ಸೇರುವುದು

‘ಒಂದೆರಡು ವರ್ಷಗಳಲ್ಲೇ ನಮಗೆ ಜಲ ಸಂರಕ್ಷಣೆಯ ಫಲಿತಾಂಶ ಸಿಕ್ಕಿತು. ನಮ್ಮ ಮನೆ ಮಾತ್ರವಲ್ಲ, ಸಮೀಪದ ಮನೆಗಳ ಅಂತರ್ಜಲ ಮಟ್ಟ ಕೂಡ ಹೆಚ್ಚಾಗಿತ್ತು. ಈಚಿನ ನಾಲ್ಕಾರು ವರ್ಷಗಳಲ್ಲಿ ಬೇಸಿಗೆಯಲ್ಲಿ ನೀರಿನ ಬರ ಬಂದಿದ್ದೇ ಇಲ್ಲ, ನಮಗೆ ಕುಡಿಯಲು ಮಾತ್ರವಲ್ಲ, ತೋಟಕ್ಕೆ ಕುಡಿಸಲೂ ಸಾಕಾಗುತ್ತದೆ. ಅಂತರ್ಜಲ ಮಟ್ಟ ಎಷ್ಟು ಏರಿಕೆಯಾಗಿದೆ ಎಂಬ ಬಗ್ಗೆ ವೈಜ್ಞಾನಿಕ ಅಧ್ಯಯನ ಮಾಡಿಲ್ಲ. ಆದರೆ, ಇದು ನಮ್ಮ ಅರಿವಿಗೆ ಬಂದಿದೆ’ ಎಂದು ಅನುಭವ ಹಂಚಿಕೊಂಡರು.

‘ಮನೆ ಸಮೀಪದ ಗೋದಾಮು ಜಾಗದಲ್ಲೂ ಈ ವರ್ಷ ಮಳೆ ನೀರು ಇಂಗಿಸುವ ವ್ಯವಸ್ಥೆ ಮಾಡಿದ್ದೇವೆ. ಇಲ್ಲಿರುವ ಬೋರ್‌ವೆಲ್ ಸುತ್ತ ಏಳು ಅಡಿ ಆಳದ ಗುಂಡಿ ಮಾಡಿ, ಅಲ್ಲಿ ಬೋಲ್ಡರ್ಸ್, ಜೆಲ್ಲಿ ಹಾಕಿರುವುದರಿಂದ ಚಾವಣಿಯ ನೀರು ಧಾರೆಯಾಗಿ ಬಂದು ಇಲ್ಲೇ ಇಂಗುತ್ತದೆ. ಮಳೆನೀರು ಚರಂಡಿಯ ನೀರು ಕೂಡ ಹರಿದು ಹೊಳೆ ಸೇರುವುದಿಲ್ಲ. ಅದರ ಓಟಕ್ಕೆ ಕಡಿವಾಣ ಹಾಕಿದ ಕಾರಣ, ಇಲ್ಲಿಯೇ ನಿಂತು ನಿಧಾನಕ್ಕೆ ಭೂಮಿಯೊಡಲು ಸೇರುತ್ತದೆ’ ಎಂದು ಗೋದಾಮಿನ ಸಮೀಪದ ನೀರಿಂಗಿಸುವಿಕೆ ರಚನೆಯ ಕುರಿತು ತಿಳಿಸಿದರು.


ಚಾವಣಿಯಿಂದ ಟಾಕಿ ಸೇರುವ ನೀರು, ಉಕ್ಕಿದ ಮೇಲೆ ಬೋರ್‌ವೆಲ್ ರೀಚಾರ್ಜ್ ಮಾಡುತ್ತದೆ.

ಮನೆಯಿಂದ ಅನತಿ ದೂರದಲ್ಲಿ ತೋಟದ ನಡುವೆ ಈಜುಕೊಳ ಇದೆ. 2 ಲಕ್ಷ ಲೀಟರ್ ಸಾಮರ್ಥ್ಯದ ಈಜುಕೊಳ ಇದು. ಅದರ ಪಕ್ಕದಲ್ಲೇ ಒಂದು ಲಕ್ಷ ಲೀಟರ್ ನೀರಿನ ಟ್ಯಾಂಕ್ ಇದೆ. ಇಲ್ಲಿರುವ ಕಟ್ಟಡದ ಚಾವಣಿ ಮೇಲೆ ಬೀಳುವ ಮಳೆನೀರು ಈಜುಕೊಳ ಸೇರುತ್ತದೆ. ಅಲ್ಲಿಂದ ಉಕ್ಕುವ ನೀರು ಟ್ಯಾಂಕ್‌ನಲ್ಲಿ ಸಂಗ್ರಹವಾಗುತ್ತದೆ. ಧಾರಾಕಾರ ಮಳೆಯಾದಾಗ, ಟ್ಯಾಂಕ್‌ನಿಂದ ಹೊರಚೆಲ್ಲುವ ನೀರು ಹರಿದು ಹೋಗುತ್ತದೆ. ಅದನ್ನೂ ನಮ್ಮ ಭೂಮಿಯೊಳಗೇ ಹಿಡಿದಿಡುವ ಯೋಚನೆಯಿದೆ ಎಂದು ಮುಂದಿನ ಯೋಜನೆಯನ್ನು ಬಿಚ್ಚಿಟ್ಟರು.

‘10 ಮಿ.ಮೀ ಮಳೆಯಾದರೆ ಒಂದು ನಿಮಿಷಕ್ಕೆ ಸುಮಾರು 2,000 ಲೀಟರ್ ನೀರು ಮನೆಯ ಸುತ್ತ ಇಂಗುತ್ತದೆ. ಕೆಲವು ಭಾಗ ನಷ್ಟವಾಗುತ್ತದೆ. ಇದೊಂದು ಅಂದಾಜು ಲೆಕ್ಕಾಚಾರ, ವೈಜ್ಞಾನಿಕ ಅಧ್ಯಯನ ಇನ್ನೂ ಆಗಬೇಕಷ್ಟೆ. ಸದ್ಯ ಮಳೆನೀರು ಭೂಮಿ ಸೇರುತ್ತಿದೆ. ಇದನ್ನು ಸಂಗ್ರಹಿಸಿ, ಬೇಸಿಗೆಯಲ್ಲಿ ಹನಿ ನೀರಾವರಿ ಮೂಲಕ ತೋಟಕ್ಕೆ ಬಳಸಬಹುದು. ಪಾಳುಬಿದ್ದ ಭೂಮಿಯಲ್ಲಿ ಕೆರೆ ಮಾದರಿ ರಚಿಸಿ, ಸಂಗ್ರಹಿಸಬಹುದು’ ಎಂದು ವಿವರಿಸಿದವರು ಗಿರೀಶ ಅವರ ಮಗ ಪತಂಜಲಿ ಭಾರದ್ವಾಜ್.


ಬೋರ್‌ವೆಲ್ ಸುತ್ತ ರಚಿಸಿರುವ ನೀರಿಂಗಿಸುವ ಮಾದರಿ

‘ಈ ವರ್ಷ ಮೇ ಕೊನೆಯಲ್ಲಿ ಸುರಿದ ಮಳೆಗೆ ಮನೆ ಸಮೀಪದ ಹಳೆಯ ಬಾವಿ ಬಹುತೇಕ ಭರ್ತಿಯಾಗಿತ್ತು. ಮುಂಗಾರು ಆರಂಭದಲ್ಲಿ 8–10 ದಿನಗಳ ಮಳೆ ನೀರನ್ನು ಭೂಮಿಯಲ್ಲಿ ಇಂಗಿಸಿ, ಜೂನ್ ತಿಂಗಳ ಮಧ್ಯಭಾಗದಿಂದ ಚಾವಣಿಯಿಂದ ಜಾರುವ ನೀರನ್ನು ಟ್ಯಾಂಕ್‌ನಲ್ಲಿ ಸಂಗ್ರಹಿಸಿದರೆ, ಸುಮಾರು ಜುಲೈ ಕೊನೆಯ ತನಕ ಪಂಪ್‌ಸೆಟ್ ಚಾಲು ಮಾಡುವ ಅಗತ್ಯವಿಲ್ಲ. ದಿನಕ್ಕೆ ಒಂದೆರಡು ಬಾರಿ ಸಾಮಾನ್ಯ ಮಳೆಬಂದರೂ ಟ್ಯಾಂಕ್ ಭರ್ತಿಯಾಗುತ್ತದೆ. ನಾವೀಗ ಇದನ್ನೇ ಬಳಸುತ್ತಿದ್ದೇವೆ’ ಎಂದು ಅವರು ಮಳೆನೀರು ಸದ್ಬಳಕೆಯ ಕ್ರಮ ತಿಳಿಸಿದರು.


ಮಳೆ ನೀರು ಸಂಗ್ರಹ ವ್ಯವಸ್ಥೆಯ ಎದುರು ಗಿರೀಶ ಭಾರದ್ವಾಜ್

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು