ಹಸಿರು ದಳ, ನಗರ ಫಳಫಳ!

7
ಪರಿಸರ

ಹಸಿರು ದಳ, ನಗರ ಫಳಫಳ!

Published:
Updated:
Deccan Herald

ಮಾಸಿದ ತಲೆಗೂದಲು, ಕಪ್ಪಿಟ್ಟಿರುವ ಚರ್ಮ, ಕೊಳೆಯಾಗಿರುವ ಅಂಗಿ, ಕಾಲಿಗೆ ರಬ್ಬರ್ ಚಪ್ಪಲಿ, ಹೆಗಲಿಗೆ ತನ್ನ ದೇಹಕ್ಕೂ ಮೀರಿದ ಪ್ಲಾಸ್ಟಿಕ್ ಚೀಲ, ಚೀಲದ ಭಾರಕ್ಕೆ ಬಾಗಿರುವ ನಡು, ನೆಲವನ್ನೇ ನೋಡುತ್ತಾ ಸಿಕ್ಕ ಸಿಕ್ಕ ತ್ಯಾಜ್ಯವನ್ನು ಆಯುವ ಕೆಲಸ. ಚಿಂದಿ ಆಯುವವರ ನಿತ್ಯದ ಬದುಕಿನ ಸಾಮಾನ್ಯ ನೋಟವಿದು.

ಮಾಡುವ ಕೆಲಸ ಚಿಂದಿ ಆಯುವುದಾದರೂ, ಅವರಿಂದಾಗಿ ಪರಿಸರಕ್ಕೆ ಆಗುತ್ತಿರುವ ಲಾಭ ಮಾತ್ರ ಅಪಾರ. ನಗರದ ನೈರ್ಮಲ್ಯದಲ್ಲಿ ಸದ್ದಿಲ್ಲದೇ ಚಿಂದಿ ಆಯುವ ಕಾಯಕದಲ್ಲಿ ತೊಡಗಿರುವ ಈ ಸಮುದಾಯ ಅಕ್ಷರಶಃ ಪರಿಸರ ಸಂರಕ್ಷಕರು. ಇಂಥವರ ಸಂಘಟನೆಯೇ ‘ಹಸಿರು ದಳ’ ಎಂಬ ಪರಿಸರ ರಕ್ಷಕ ಎನ್‌ಜಿಒ.

ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ನಳಿನಿ ಶೇಖರ್, ಮದುವೆಯಾದ ನಂತರ ಹತ್ತು ವರ್ಷಗಳ ಕಾಲ ಅಮೆರಿಕದಲ್ಲಿದ್ದವರು. 2010ರಲ್ಲಿ ನಗರಕ್ಕೆ ವಾಪಸ್ ಮರಳಿದಾಗ ಅವರ ಕಿವಿಗೆ ಬಿದ್ದದ್ದು ಘನತ್ಯಾಜ್ಯ ಮತ್ತು ಕಸ ವಿಲೇವಾರಿ ಎಂಬ ಪದಗಳು. ಎಲ್ಲರ ಬಾಯಲ್ಲೂ ಇದೇ ಮಾತು. ಆದರೆ, ಇದನ್ನು ವಿಲೇವಾರಿ ಮಾಡುವವರು ಯಾರು ಎಂಬ ಪ್ರಶ್ನೆಗೆ ಮಾತ್ರ ಯಾರಲ್ಲೂ ಉತ್ತರವಿಲ್ಲ.

ಕೆಲಕಾಲ ಪುಣೆಯಲ್ಲಿದ್ದಾಗ ಅಲ್ಲಿನ ಚಿಂದಿ ಆಯುವವರನ್ನು ಸಂಘಟಿಸಿ, ಪರಿಸರ ರಕ್ಷಣೆಯ ತಿಳಿವಳಿಕೆಯ ಪಾಠ ಹೇಳಿದ್ದ ನಳಿನಿ ಅವರಿಗೆ, ಇಲ್ಲೂ ಅದನ್ನು ಪ್ರಯೋಗಿಸಿದರೆ ಹೇಗೆ ಎಂಬ ಆಲೋಚನೆ ಬಂದದ್ದೇ ತಡ. ಪರಿಸರ ಸಂರಕ್ಷಣೆಯಲ್ಲಿ ಚಿಂದಿ ಆಯುವವರ ಕುರಿತು ಅಧ್ಯಯನ ಕೈಗೊಂಡರು. ಅಲ್ಲಿ ದೊರಕಿದ ಅಂಕಿ ಅಂಶಗಳು ಪ್ರಭುತ್ವದ ಕಣ್ಣು ತೆರೆಸುವಂತಿದ್ದವು. ಪ್ರತಿದಿನವೂ 1,500ಕ್ಕೂ ಹೆಚ್ಚು ಟನ್ ತ್ಯಾಜ್ಯ ಸಂಗ್ರಹಿಸಿ, ವಿಂಗಡಿಸುತ್ತಿದ್ದ ಚಿಂದಿ ಆಯುವವರಿಂದ ಬಿಬಿಎಂಪಿ ಬೊಕ್ಕಸಕ್ಕೆ ವರ್ಷಕ್ಕೆ ₹ 84 ಕೋಟಿ ಉಳಿತಾಯವಾಗುತ್ತಿತ್ತು!


ಗುರುತಿನ ಚೀಟಿ ಪ್ರದರ್ಶಿಸುತ್ತಿರುವ ‘ಹಸಿರು ದಳ’ದ ಸದಸ್ಯರು

ಚಿಂದಿ ಆಯುವವರ ಪರಿಶ್ರಮವನ್ನು ಬಿಬಿಎಂಪಿಗೆ ಮನಗಾಣಿಸಿದಾಗ, ಐಎಎಸ್ ಅಧಿಕಾರಿ ಸಿದ್ದಯ್ಯ ಅವರಿಂದ ಪೂರಕ ಪ್ರತಿಕ್ರಿಯೆ ದೊರೆಯಿತು. 2011ರಲ್ಲಿ ಆರಂಭಿಸಿದ ಕೆಲಸಕ್ಕೆ ಪ್ರತಿಫಲ ದೊರೆಯಲು ಎರಡು ವರ್ಷಗಳೇ ಬೇಕಾದವು. 2013ರ ನವೆಂಬರ್ ಹೊತ್ತಿಗೆ ಚಿಂದಿ ಆಯುವವರ ಸಂಘಟನೆ ಒಂದು ಹಂತಕ್ಕೆ ಬಂದ ಮೇಲೆ ‘ಹಸಿರು ದಳ’ ಎಂಬ ನಾಮಕಾರಣವೂ ಆಯಿತು.

ನಗರದಲ್ಲಿ 35 ಸಾವಿರದಷ್ಟು ಚಿಂದಿ ಆಯುವವರಿದ್ದು, ಅವರಲ್ಲಿ 10 ಸಾವಿರ ಜನರು ಮಾತ್ರ ಸಂಘಟಿತರಾಗಿದ್ದಾರೆ. 7, 500 ಮಂದಿಗೆ ಬಿಬಿಎಂಪಿ ಗುರುತಿನ ಚೀಟಿ ನೀಡಿದೆ. ಇಷ್ಟು ಮಂದಿಗೆ ಹಸಿರುದಳದ  35 ಕಾರ್ಯಕರ್ತರು ನಿರಂತವಾಗಿ ಸ್ವಚ್ಛತೆಯ ಪಾಠ, ಹಸಿ–ಘನತ್ಯಾಜ್ಯ ಬೇರ್ಪಡಿಸುವಿಕೆಯ ತರಬೇತಿ ನೀಡಿದ್ದಾರೆ. ಇದರಿಂದಾಗಿ ಚಿಂದಿ ಆಯುವವರು ಮನೆಮನೆಗೆ ಹೋಗಿ ಕಸ ಸಂಗ್ರಹಿಸುವುದು, ತ್ಯಾಜ್ಯ ವಿಲೇವಾರಿ ಘಟಕ ನಿರ್ವಹಣೆ ಕೆಲಸದ ಜತೆಗೆ ಸರ್ಕಾರದ ಪರಿಸರ ಮತ್ತು ಸ್ವಚ್ಚತಾ ಕಾರ್ಯಕ್ರಮಗಳನ್ನೂ ಅನುಷ್ಠಾನಕ್ಕೆ ತರುವಲ್ಲಿ ಶ್ರಮಿಸುತ್ತಿದ್ದಾರೆ.

ಬಿಬಿಎಂಪಿ 33 ಮಂದಿಗೆ ಕಸ ಸಂಗ್ರಹಿಸುವ ಜವಾಬ್ದಾರಿ ನೀಡಿದೆ. ಪರಿಸರ ಪೂರಕ ಕಾರ್ಯಕ್ರಮಗಳಲ್ಲಿ ನೇರವಾಗಿ ಪಾಲ್ಗೊಳ್ಳುತ್ತಿರುವ ಚಿಂದಿ ಆಯುವವರು ಮ್ಯಾರಾಥಾನ್, ಮದುವೆ, ಹುಟ್ಟುಹಬ್ಬ ಮತ್ತು ಈಚೆಗೆ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಗಳಲ್ಲೂ ಶೂನ್ಯತ್ಯಾಜ್ಯ ಕಾರ್ಯಕ್ರಮ ನಡೆಸಿವೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ‘ಹಸಿರು ದಳ’ದ ಸ್ಥಾಪಕಿ ನಳಿನಿ ಶೇಖರ್.

ನಗರದ ತ್ಯಾಜ್ಯ ವಿಂಗಡಣೆಯಲ್ಲಿ ಪ್ರಧಾನ ಪಾತ್ರ ವಹಿಸಿರುವ ‘ಹಸಿರು ದಳ’ ಏಳು ವರ್ಷಗಳಿಂದ ಪಾಲಿಕೆಯ 44 ವಾರ್ಡ್‌ಗಳಲ್ಲಿ ಒಣ ತ್ಯಾಜ್ಯ ಸಂಗ್ರಹ ಘಟಕಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ. ಬೀದಿಬೀದಿ ಅಲೆದಾಡಿ ಕಸ ಸಂಗ್ರಹಿಸುತ್ತಿದ್ದ ಚಿಂದಿ ಆಯುವವರಿಗೆ ಸಾಮಾಜಿಕ ಭದ್ರತೆ ನೀಡಿ, ಅವರ ಮಕ್ಕಳಿಗೆ ಶಿಕ್ಷಣದ ಸೌಕರ್ಯ ಕಲ್ಪಿಸುವ ಕೆಲಸವನ್ನೂ ಹಸಿರು ದಳ ಮಾಡುತ್ತಿದೆ. ಕೆಲವರು ಒಣತ್ಯಾಜ್ಯ ಸಂಗ್ರಹ ಘಟಕದಿಂದಲೇ ಆದಾಯ ಗಳಿಸುತ್ತಿದ್ದಾರೆ. ಇನ್ನು ಕೆಲವರು ಸ್ವಉದ್ಯೋಗ ಕೈಗೊಂಡಿದ್ದಾರೆ. ಚಿಂದಿ ಆಯುವವರೇ ನೀಡಿದ ಹೆಸರು ‘ಹಸಿರು ದಳ’ದಿಂದಾಗಿ ನಗರದ ಕೆಲವೆಡೆಯಾದರೂ ಸ್ವಚ್ಛತೆ ನಳನಳಿಸುತ್ತಿದೆ.

ಬರಹ ಇಷ್ಟವಾಯಿತೆ?

 • 8

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !