ಹಸಿರಾಯಿತು ನೀರು, ಶುರುವಾಯಿತು ದಿಗಿಲು

ಭಾನುವಾರ, ಜೂನ್ 16, 2019
28 °C
ಕೋಲಾರದ ಕೆರೆಗಳಿಗೆ ಹರಿಯುತ್ತಿರುವ ಕೆ.ಸಿ ವ್ಯಾಲಿ ನೀರು

ಹಸಿರಾಯಿತು ನೀರು, ಶುರುವಾಯಿತು ದಿಗಿಲು

Published:
Updated:
Prajavani

ಕೋಲಾರದ ಜೋಡಿ ಕೃಷ್ಣಾಪುರ ಕೆರೆಯ ಕೋಡಿ ಬಿದ್ದು ನರಸಾಪುರ ಗ್ರಾಮಕ್ಕೆ ಹರಿದು ಬಂದ ನೀರು ಹಸಿರು ಬಣ್ಣಕ್ಕೆ ತಿರುಗಿತ್ತು. ಕೆರೆಯ ನೀರನ್ನು ಕಂಡ ಜನರಲ್ಲಿ ಆತಂಕ ಮೂಡಿತ್ತು. 

ಕೋರಮಂಗಲ ಮತ್ತು ಚಲ್ಲಘಟ್ಟ ಕಣಿವೆ (ಕೆ.ಸಿ. ವ್ಯಾಲಿ) ಯೋಜನೆ ಅಡಿಯಲ್ಲಿ ಕೆರೆಗಳನ್ನು ತುಂಬಿಸುವ ಸರ್ಕಾರದ ಯೋಜನೆಯ ಪ್ರತಿಫಲ ಇದು. ರಾಜ್ಯದ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿನ 191 ಕೆರೆಗಳಿಗೆ ನೀರು  ತುಂಬಿಸಲಾಗುತ್ತಿದೆ. ಬೆಂಗಳೂರಿನಿಂದ ಹರಿಯುವ ಕೊಳಚೆ ನೀರನ್ನು ಹಂತ ಹಂತವಾಗಿ ಶುದ್ಧೀಕರಣ ಮಾಡಿ ಹೀಗೆ ಕೆರೆಗಳಿಗೆ ಬಿಡಲಾಗುತ್ತಿದೆ. ಯೋಜನೆ ಕಾರ್ಯರೂಪಕ್ಕೆ ಬಂದ ಬಳಿಕ ಜಿಲ್ಲೆಯ ಸುಮಾರು 12 ಕೆರೆಗಳು ತುಂಬಿ ಹರಿದಿವೆ. ಆದರೆ ನರಸಾಪುರ ಕೆರೆಗೆ ಹರಿದ ನೀರು ಮಾತ್ರ ಹಸಿರು ವರ್ಣದಲ್ಲಿ ಗೋಚರಿಸಿದ್ದು ಮಾತ್ರ ಜನರಲ್ಲಿ ದಿಗಿಲು ಹುಟ್ಟಿಸಿತ್ತು. 

ಕಳೆದ ತಿಂಗಳಷ್ಟೇ ನಡೆದ ಈ ವಿದ್ಯಮಾನದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಫೋಟೊ, ವಿಡಿಯೊಗಳು ಹರಿದಾಡಿದವು. ಚಿಲ್ಲಾಧಿಕಾರಿಗಳು ಸಿಬ್ಬಂದಿ ಜತೆಗೂಡಿ ಕೆರೆಯಲ್ಲಿ ಪರಿಶೀಲನೆ ನಡೆಸಿದರು. ಪಾಚಿ ಬೆಳೆದಿದ್ದರಿಂದ ಹಸಿರು ಬಣ್ಣಕ್ಕೆ ತಿರುಗಿದೆ ಎಂದು ಗ್ರಾಮಸ್ಥರಿಗೆ ಹೇಳಿ ಹೊರಟುಹೋದರು. ಆದರೆ ಜನರ ಆತಂಕ ಮಾತ್ರ ದೂರವಾಗಲಿಲ್ಲ. 

ಕೆರೆ ತಟದಲ್ಲಿವೆ ಕೊಳವೆಬಾವಿ 

ನರಸಾಪುರ ಕೆರೆಯ ತಟದಲ್ಲಿ ಕುಡಿಯುವ ನೀರಿಗಾಗಿ ನಾಲ್ಕು ಕೊಳವೆ ಬಾವಿಗಳನ್ನು ತೆರೆಯಲಾಗಿದೆ. ಈ ಕೆರೆಗೆ ಹಸಿರುಬಣ್ಣದ ನೀರು ಹರಿದಿರುವುದು ಮತ್ತಷ್ಟು ಆತಂಕವನ್ನು ಹೆಚ್ಚಿಸಿದೆ. ಒಂದು ವೇಳೆ ಈ ನೀರು ಅಂತರ್ಜಲವನ್ನು ಸೇರಿಕೊಂಡರೆ, ಕುಡಿಯುವ ನೀರಿಗಾಗಿ ಕೊರೆದಿರುವ ಬೋರ್‌ವೆಲ್ ನೀರಿಗೂ ಸೇರ್ಪಡೆಯಾಗುವ ಅಪಾಯವಿದೆ. ಅದೇ ನೀರನ್ನು ಗ್ರಾಮಸ್ಥರು ಮೇಲೆತ್ತಿ ಬಳಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. 

ತಾಜ್ಯ ನೀರನ್ನು ಸರಿಯಾಗಿ ಶುದ್ಧೀಕರಣ ಮಾಡಲಾಗಿಲ್ಲ ಎಂದು ಚಿಕ್ಕಬಳ್ಳಾಪುರ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯ ರೆಡ್ಡಿ ಆರೋಪಿಸುತ್ತಾರೆ. ‘ಘಟನೆ ನಡೆದು 24 ಗಂಟೆ ಕಳೆದ ಮೇಲೆ ಜಿಲ್ಲಾಡಳಿತ ಎಚ್ಚೆತ್ತುಕೊಂಡಿತು. ತಜ್ಞರನ್ನು ಕರೆದೊಯ್ಯಬೇಕಾದ ಜಿಲ್ಲಾಧಿಕಾರಿಗಳು ಸ್ಥಳೀಯ ಅಧಿಕಾರಿಗಳನ್ನು ಹಾಗೂ ಮಾಧ್ಯಮದವರನ್ನು ಕರೆದೊಯ್ದಿದ್ದರು. ಡಿಸ್ಚಾರ್ಜ್ ಪಾಯಿಂಟ್‌ನಲ್ಲಿ ಪರಿಶೀಲನೆ ನಡೆಸಿದರು. ನೀರು ಒಂದೊಂದು ಕಡೆ ಒಂದೊಂದು ಬಣ್ಣದಲ್ಲಿ ಕಾಣಿಸುತ್ತದೆ. ಬೆಂಗಳೂರಿ ನಲ್ಲಿ ತ್ಯಾಜ್ಯ ಶುದ್ಧೀಕರಣ ಘಟಕದಿಂದ (ಎಸ್‌ಟಿಪಿ) ಬಿಡುಗಡೆ ಯಾಗುವ ನೀರೇ ಒಂದು ರೀತಿ ಇರುತ್ತದೆ. ಹರಿಯುವಾಗ ಅದಕ್ಕೆ ಕೈಗಾರಿಕೆಗಳಿಂದ ಬರುವ ತಾಜ್ಯ ಸೇರ್ಪಡೆಯಾದಾಗ ಮತ್ತೊಂದು ಬಣ್ಣಕ್ಕೆ ತಿರುಗುತ್ತದೆ. ಮಳೆ ಬಂದರೆ ಅದರ ಬಣ್ಣ ಬದಲಾಗುತ್ತದೆ. ಕೆರೆಗೆ ತಾಜ್ಯ ಹರಿಸುವ ಕಾರ್ಖಾನೆ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಅವರು ಒತ್ತಾಯಿಸಿದ್ದಾರೆ. 

ಮೂರ್ನಾಲ್ಕು ತಿಂಗಳ ಹಿಂದೆ ಕರೆಯೊಂದರಲ್ಲಿ ಮೀನುಗಳು ಸತ್ತಿದ್ದವು. ಇದಕ್ಕೆ ಗ್ರಾಮಸ್ಥರೇ ಹೊಣೆ ಎಂದು ಜಿಲ್ಲಾಡಳಿತ ದೂರಿತ್ತು. ಕೈಗಾರಿಕೆಯಿಂದ ಹರಿದ ತ್ಯಾಜ್ಯ ನೀರಿನಿಂದ ಮೀನು ಸತ್ತಿದ್ದವು ಎಂದು ಆಂಜನೇಯ ರೆಡ್ಡಿ ಆರೋಪಿಸುತ್ತಾರೆ.  

ಅಂತರ್ಜಲಕ್ಕೆ ಸೇರಿದರೆ ಅಪಾಯ

ಕಲುಷಿತ ನೀರನ್ನು ಅಂತರ್ಜಲ ಮರುಪೂರಣ ಮಾಡುವುದು ಅಪಾಯಕಾರಿ. ಶಿಲಾಪದರಗಳನ್ನು ದಾಟಿ ಭೂಮಿಯ ಒಡಲನ್ನು ಸೇರುವ ನೀರಿನಲ್ಲಿ ಭಾರಲೋಹಗಳು ಇದ್ದದ್ದೇ ಆದಲ್ಲಿ, ಅಂತರ್ಜಲವೂ ಕಲುಷಿತಗೊಳ್ಳುತ್ತದೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಇದರ ದೀರ್ಘಾವಧಿ ಪರಿಣಾಮಗಳ ಅಧ್ಯಯನ ಅಗತ್ಯ ಎನ್ನುತ್ತಾರೆ ಅವರು. 

ನ್ಯಾಯಾಲಯದಲ್ಲಿ ಹೋರಾಟ 

ಕೋರಮಂಗಲ ಮತ್ತು ಚಲ್ಲಘಟ್ಟ ಕಣಿವೆ ಯೋಜನೆಗೆ ನೀಡಿದ್ದ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್ ಇತ್ತೀಚೆಗೆ ತೆರವುಗೊಳಿಸಿದೆ. ಕುಡಿಯುವ ನೀರು ಪೂರೈಸುವ ಬದಲಾಗಿ ಅಂತರ್ಜಲ ವೃದ್ಧಿಸುವುದು ಯೋಜನೆಯ ಉದ್ದೇಶ ಎಂದು ಬೆಂಗಳೂರು ನೀರು ಸರಬರಾಜು, ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್‌ಎಸ್‌ಬಿ) ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು ಕೋರ್ಟ್‌ಗೆ ವಿವರಿಸಿದ್ದವು. 

ಕೆರೆಗಳಲ್ಲಿ ಸಂಗ್ರಹವಾಗುವ ಶುದ್ಧೀಕರಿಸಿದ ನೀರು ಭೂಮಿಯೊಳಗೆ ಇಂಗುವ ಮೂಲಕ ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಕಾರಣವಾಗುತ್ತದೆ. ಇಂಗುವ ನೀರು ತಳ ಮುಟ್ಟುವ ಹೊತ್ತಿಗೆ ಹಲವಾರು ಪದರಗಳಲ್ಲಿ ಶುದ್ಧಗೊಳ್ಳುವುದರಿಂದ ರಾಸಾಯನಿಕ ಅಂಶ ಉಳಿಯುವ ಅಪಾಯವೂ ಇಲ್ಲ ಎಂದು ಮನವರಿಕೆ ಮಾಡಿಕೊಟ್ಟಿದ್ದರು. 

ಶುದ್ಧೀಕರಿಸಿ ಕೆರೆಗಳಿಗೆ ಹರಿಬಿಡುವ ನೀರಿನಲ್ಲಿ ಭಾರಿ ಪ್ರಮಾಣದ ರಾಸಾಯನಿಕ ಇರುವುದು ಪರೀಕ್ಷಾ ವರದಿಗಳಿಂದ ತಿಳಿದುಬಂದಿದೆ ಎಂದು ಅರ್ಜಿದಾರರ ಪರ ವಕೀಲ ಪ್ರಶಾಂತ್‌ ಭೂಷಣ್‌ ತಿಳಿಸಿದರಾದರೂ, ಹೈಕೋರ್ಟ್‌ನಲ್ಲೇ ವಾದ ಮಂಡಿಸುವಂತೆ ನ್ಯಾಯಪೀಠ ಹೇಳಿತ್ತು. ಸದ್ಯದಲ್ಲೇ ಹೈಕೋರ್ಟ್‌ನಲ್ಲಿ ವಿಚಾರಣೆ ಆರಂಭವಾಗಲಿದ್ದು, ನೀರು ಹಸಿರು ಬಣ್ಣಕ್ಕೆ ತಿರುಗಿರುವ ವಿಚಾರವನ್ನು ಹೈಕೋರ್ಟ್ ಗಮನಕ್ಕೆ ತರಲಾಗುವುದು ಎಂದು ಆಂಜನೇಯ ರೆಡ್ಡಿ ತಿಳಿಸಿದ್ದಾರೆ. 

ಬೆಂಗಳೂರಿನ ಕೆರೆಗಳ ಸ್ಥಿತಿ 

ನಗರದ ಬಹುತೇಕ ಕೆರೆಗಳ ಪರಿಸ್ಥಿತಿ ಚಿಂತಾಜನಕವಾಗಿದೆ. ಕೈಗಾರಿಕೆ ತ್ಯಾಜ್ಯವನ್ನೂ ಒಳಗೊಂಡಂತೆ ನಗರದ ಎಲ್ಲ ಕೊಳಕು ಕೆರೆಗಳ ಒಡಲು ಸೇರಿಕೊಂಡಿದೆ. ಎಸ್‌ಟಿಪಿಗಳಲ್ಲಿ ತಾಜ್ಯ ನೀರನ್ನು ಸೋಸಿ, ಒಳ್ಳೆಯ ನೀರನ್ನಷ್ಟೇ  ಹರಿಸಿದ್ದು ನಿಜವಾದರೆ, ಬೆಳ್ಳಂದೂರು ಹಾಗೂ ವರ್ತೂರು ಕೆರೆಗಳ ಸ್ಥಿತಿ ಏಕೆ ಹೀಗಿದೆ ಎಂದು ಪರಿಸರ ಪ್ರೇಮಿಗಳು ಪ್ರಶ್ನಿಸುತ್ತಾರೆ. ಕೆರೆಯಲ್ಲಿ ಭಾರಿ ಪ್ರಮಾಣದ ಆಲ್ಗೆ ಹಾಗೂ ಇತರೆ ಕಳೆಗಿಡಗಳು ಹುಲುಸಾಗಿ ಬೆಳೆದಿವೆ. ನೊರೆ ಸಮಸ್ಯೆಯೂ ತೀವ್ರವಾಗಿದೆ. ನೊರೆಯನ್ನು ಹೋಗಲಾಡಿಸಲು ನೀರು ಚುಮುಕಿಸುವ ಯಾಂತ್ರಿಕ ಯತ್ನಗಳನ್ನಷ್ಟೇ ಮಾಡಲಾಗುತ್ತಿದೆ. ಆಲ್ಗೆ ಮತ್ತು ನೊರೆ ಉಂಟಾಗುವ ಮೂಲ ಕಾರಣ ಪತ್ತೆ ಹಚ್ಚಿ ಪರಿಹಾರ ಹುಡುಕುವಲ್ಲಿ ಸರ್ಕಾರ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಸ್ಥಳೀಯಾಡಳಿತ ಸೋತಿವೆ ಎಂದು ನಾಗರಿಕರು ಆರೋಪಿಸುತ್ತಾರೆ. 

3ನೇ ಹಂತದ ಶುದ್ಧೀಕರಣ ಏಕಿಲ್ಲ? 

2013ರಲ್ಲೇ ಕೇಂದ್ರ ನಗರಾಭಿವೃದ್ಧಿ ಮತ್ತು ಆರೋಗ್ಯ ಸಚಿವಾಲಯಗಳು ನೀರು ಶುದ್ಧಿಕರಣ ಕುರಿತು ಸ್ಪಷ್ಟ ಮಾರ್ಗಸೂಚಿ ಪ್ರಕಟಿಸಿವೆ. ಈ ಪ್ರಕಾರ ತ್ಯಾಜ್ಯ ನೀರನ್ನು ಮೂರು ಹಂತಗಳಲ್ಲಿ ಶುದ್ಧೀಕರಣ ಮಾಡಿಬೇಕು, ವೈಜ್ಞಾನಿಕವಾಗಿ ನಿರ್ವಹಿಸಬೇಕು ಎಂದು ತಿಳಿಸಿವೆ. ಆದರೆ ಸರ್ಕಾರ ಮಾತ್ರ ಎರಡೇ ಹಂತಕ್ಕೆ ಸೀಮಿತಗೊಳಿಸಿದೆ ಎನ್ನುವ ಆರೋಪ ಕೇಳಿಬಂದಿದೆ. 

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ನೀರನ್ನು ಶುದ್ಧೀಕರಿಸುತ್ತದೆ. ಶುದ್ಧೀಕರಿಸಿದ ನೀರಿನ ಗುಣಮಟ್ಟ ಪರಿಶೀಲಿಸುವುದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಜವಾಬ್ದಾರಿ. ಕೆರೆಗಳಿಗೆ ಪೂರೈಸುವುದು ಸಣ್ಣ ನೀರಾವರಿ ಇಲಾಖೆಯ ಕೆಲಸ. ಈ ಮೂರೂ ವಿಭಾಗಗಳ ಕೆಲಸದಲ್ಲಿ ಪಾರದರ್ಶಕತೆ ಹಾಗೂ ವೈಜ್ಞಾನಿಕ ನಿರ್ವಹಣೆ ಇದ್ದರೆ ಮಾತ್ರ ಕೆರೆಗಳು ವಿಷದಿಂದ ಮುಕ್ತಿ ಕಾಣಬಹುದು.

‘ಅಂತರ್ಜಲವೂ ಕಲುಷಿತಗೊಳ್ಳುವ ಭೀತಿ’

ಆಲ್ಗಲ್ ಬ್ಲೂಮ್ ಎಂದು ಕರೆಯಲಾಗುವ ಪಾಚಿಯು ನೀರಿನಲ್ಲಿ ಸಮೃದ್ಧವಾಗಿ ಸಾರಜನಕ, ರಂಜಕದಂತಹ ಪೋಷಕಾಂಶಗಳು ಸಿಕ್ಕರೆ ಹುಲುಸಾಗಿ ಬೆಳೆಯುತ್ತದೆ. ಕೆ.ಸಿ. ವ್ಯಾಲಿಯಲ್ಲಿ ಹರಿಯುವ ನೀರು ಪಾಚಿಗಟ್ಟಿರುವುದನ್ನು ಗಮನಿಸಿದರೆ, ಜಲಮಂಡಳಿಯವರು ಸರಿಯಾಗಿ ಶುದ್ಧೀಕರಣ ಮಾಡಿಲ್ಲ ಎಂಬುದು ತಿಳಿಯುತ್ತದೆ. ಶುದ್ಧೀಕರಣದ ಬಳಿಕವೂ ನ್ಯೂಟ್ರಿಯಂಟ್‌ಗಳು ನೀರಿನಲ್ಲಿ ಉಳಿದುಕೊಂಡಿರುವ ಕಾರಣ ಪಾಚಿ ಬೆಳೆದು, ಕೆರೆಯ ನೀರು ಹಸಿರು ಬಣ್ಣಕ್ಕೆ ತಿರುಗಿದೆ. ನೀರಿನಲ್ಲಿ ಭಾರಲೋಹಗಳಿಲ್ಲ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಿದ್ದವರೇ ಇದರ ಹೊಣೆಗಾರಿಕೆಯನ್ನು ಹೊರಬೇಕು. ಬೆಂಗಳೂರಿನ ಬೆಳ್ಳಂದೂರು ಹಾಗೂ ವರ್ತೂರು ಕೆರೆಗಳಲ್ಲಿ ಬೆಳೆಯುತ್ತಿರುವ ಕಳೆಯೂ ಮುಂದಿನ ದಿನಗಳಲ್ಲಿ ಕೋಲಾರದ ಕೆರೆಗಳಲ್ಲಿ ಕಾಣಿಸಿಕೊಳ್ಳಬಹುದು. ನೈಟ್ರೈಟ್ ಎಂಬ ವಿಷಕಾರಕ ಅಂಶವು ಅಂತರ್ಜಲವನ್ನು ಸೇರಿಕೊಂಡರೆ ಅಪಾಯ ಇದೆ. ಈ ನೀರನ್ನು ಸತತವಾಗಿ ಬಳಸುವುದರಿಂದ ಕ್ಯಾನ್ಸರ್ ಬರುವ ಸಾಧ್ಯತೆ ಇದೆ. 

ಟಿ.ವಿ.ರಾಮಚಂದ್ರ, ಐಐಎಸ್‌ಸಿ ಹಿರಿಯ ವಿಜ್ಞಾನಿ

***

ನಿರಂತರ ನಿಗಾ ವ್ಯವಸ್ಥೆ ಬೇಕು’

ಕೊಳಚೆ ನೀರು ಶುದ್ಧೀಕರಣ ಯಂತ್ರಗಳ ಸಾಮರ್ಥ್ಯ ಒಂದೇ ತೆರನಾಗಿದೆ. ಶುದ್ಧೀಕರಣದ ಬಳಿಕವೂ ನೀರಿನಿಂದ ಕೆಲವು ರಾಸಾಯನಿಕಗಳನ್ನು ತೆಗೆಯಲು ಸಾಧ್ಯವಿಲ್ಲ. ನೀರಿನಲ್ಲಿ ಕರಗಿರುವ ಖನಿಜಾಂಶಗಳನ್ನು ಪ್ರತ್ಯೇಕಿಸುವುದು ಸುಲಭವದ ಮಾತಲ್ಲ. ಮೂರನೇ ಹಂತದ ಶುದ್ಧೀಕರಣ ಮಾಡಿದಲ್ಲಿ, ಈ ಸಮಸ್ಯೆಗೆ ಒಂದಿಷ್ಟು ಪರಿಹಾರ ಸಿಗುವ ಸಾಧ್ಯತೆಯಿದೆ. 

ಒಂದು ಜಾಗದಲ್ಲಿ ಸಂಗ್ರಹಿಸಿದ ಒಂದು ಸ್ಯಾಂಪಲ್‌ನಿಂದ ನೀರಿನ ಗುಣಮಟ್ಟವನ್ನು ನಿರ್ಧರಿಸುವುದು ಸರಿಯಾದ ಕ್ರಮವಲ್ಲ. ಒಂದೊಂದು ಜಾಗದಲ್ಲಿ ಸಂಗ್ರಹವಾಗಿರುವ ನೀರು ಒಂದೊಂದು ಗುಣವನ್ನು ಹೊಂದಿರುತ್ತದೆ. ಚರಂಡಿ ನೀರಿನಲ್ಲಿ ಬೆರೆತಿರುವ ರಾಸಾಯನಿಕ ಅಂಶಗಳಿಂದಾಗಿ ನಿರಂತರವಾಗಿ ರಾಸಾಯನಿಕ ಪ್ರಕ್ರಿಯೆಗೆ ಒಳಗಾಗುತ್ತಲೇ ಇರುತ್ತದೆ. ನಿರಂತರವಾಗಿ, ವೈಜ್ಞಾನಿಕವಾಗಿ ನೀರು ಶುದ್ಧತೆಯ ಪ್ರಮಾಣೀಕತೆ ಅತಿಮುಖ್ಯ. ಗುಣಮಟ್ಟದ ನೀರು ನಾಳೆ ಗುಣಮಟ್ಟ ಕಳೆದುಕೊಳ್ಳಬಹುದು. ಸತತವಾಗಿ ನೀರಿನ ಗುಣಮಟ್ಟದ ಮೇಲೆ ನಿಗಾ ವಹಿಸುವುದು ಅಗತ್ಯ. 

–ಆಂಜನೇಯ ರೆಡ್ಡಿ, ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ

***

ಶುದ್ಧೀಕರಿಸಿದ ನೀರನ್ನೇ ಹರಿಸಲಾಗಿದೆ’

ತ್ಯಾಜ್ಯ ನೀರು ಶುದ್ಧೀಕರಣ ವಿಚಾರದಲ್ಲಿ ಯಾವುದೇ ಲೋಪವಾಗಿಲ್ಲ, ಕೆರೆಯಲ್ಲಿ ಪಾಚಿ ಬೆಳೆದಿರುವ ಕಾರಣ ನೀರು ಹಸಿರು ವರ್ಣಕ್ಕೆ ತಿರುಗಿದೆ ಎಂದು ಜಲಮಂಡಳಿ ಸ್ಪಷ್ಟನೆ ನೀಡಿದೆ. 

‘ಶುದ್ಧೀಕರಣ ಘಟಕದಿಂದ ಅನತಿ ದೂರದಲ್ಲಿ ಸಣ್ಣ ನೀರಾವರಿ ಇಲಾಖೆಯ ಪಂಪ್‌ಹೌಸ್ ಇದೆ. ಇಲ್ಲಿ ನಿರ್ಮಿಸಿರುವ ಬಾವಿಯಲ್ಲಿ ಸಂಗ್ರಹವಾದ ನೀರನ್ನು ತಪಾಸಣೆ ಮಾಡಲಾಗುತ್ತದೆ. ಒಂದು ವೇಳೆ ದೋಷ ಕಂಡುಬಂದರೆ ಅದನ್ನು ಖಾಲಿ ಬಾವಿಗೆ ಹರಿಸಲಾಗುತ್ತದೆ. ತಪಾಸಣೆಯಲ್ಲಿ ನೀರಿನ ಗುಣಮಟ್ಟ ದೃಢಪಟ್ಟ ಬಳಿಕವಷ್ಟೇ ನೀರನ್ನು ಮುಂದೆ ಹರಿಸಲಾಗುತ್ತದೆ’ ಎಂದು ಜಲಮಂಡಳಿ ಅಧಿಕಾರಿ ಬಿ.ಎಂ. ಮಂಜುನಾಥ್ ಹೇಳಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 2

  Angry

Comments:

0 comments

Write the first review for this !