ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡು ನೋಡಬೇಕೇ? ಬನ್ನಿ ಇಲ್ಲಿಗೆ..

ಎಂಟು ಸಾವಿರ ಸಾಗವಾನಿ, 650 ತೆಂಗಿನ ಸಸಿ ಹೊಂದಿರುವ ತೋಟ
Last Updated 1 ಜುಲೈ 2019, 19:45 IST
ಅಕ್ಷರ ಗಾತ್ರ

ಮುದ್ದೇಬಿಹಾಳ: ‘ನಮ್ಮ ಮನೆತನಕ್ಕೆ ಘನಮಠದ ನಾಗಭೂಷಣ ಸ್ವಾಮೀಜಿ ಆಶೀರ್ವಾದವಿದೆ. ತೆಂಗು ಇದ್ದವ ಬಡವನಲ್ಲ ಎಂಬ ಅವರ ಮಾತಿನಂತೆ ನಾವು ತೆಂಗಿನ ಗಿಡಗಳನ್ನು ನೆಟ್ಟು ಬೆಳೆಸಿದ್ದೇವೆ. ಅದರಿಂದ ಬಂದಿರುವ ಲಾಭ ಎಷ್ಟು ಎನ್ನುವುದಕ್ಕಿಂತ ಸಿಕ್ಕ ತೃಪ್ತಿ ಕೋಟಿಗಿಂತಲೂ ಹೆಚ್ಚು’ ಎನ್ನುತ್ತಾರೆ ಪಟ್ಟಣದಲ್ಲಿ ಆದಾಯ ತೆರಿಗೆ ಸಲಹೆಗಾರರಾಗಿರುವ ಮಹಾಂತಪ್ಪ ನಾವದಗಿ ಮತ್ತು ಅವರ ಪುತ್ರ ನಾಗಭೂಷಣ ನಾವದಗಿ.

ಇವರು ತಮ್ಮ 16 ಎಕರೆ ಹೊಲವನ್ನು ಸಂಪೂರ್ಣ ಕಾಡನ್ನಾಗಿ ಸೃಷ್ಟಿಸಿದ್ದಾರೆ. ಅವರ ಪರಿಸರ ಪ್ರೀತಿಯನ್ನು ಕಂಡ ಜಿಲ್ಲಾಡಳಿತ 2012ರಲ್ಲಿ ಸನ್ಮಾನಿಸಿದೆ. ಇವರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸಾಹಿತ್ಯ ಕೃಷಿಯಲ್ಲೂ ತೊಡಗಿಸಿಕೊಂಡಿದ್ದಾರೆ.

ಪಟ್ಟಣದಿಂದ ಆಲಮಟ್ಟಿಗೆ ಹೊರಟರೆ ಹಂಡರಗಲ್ಲ ಕ್ರಾಸ್ ಬಳಿ ಸಾಗವಾನಿ, ತೆಂಗಿನ ಮರಗಳು ಬೆಳೆದು ನಿಂತ ವಿಶಾಲ ವನ ಕಾಣುತ್ತದೆ. ಅದರ ಒಳ ಹೊಕ್ಕರೆ ದಾಂಡೇಲಿಯ ಅರಣ್ಯವನ್ನು ಪ್ರವೇಶಿಸಿದ ಅನುಭವ ಆಗುತ್ತದೆ. ಐವತ್ತು ವರ್ಷಗಳ ಹಿಂದೆ ಸಂಪೂರ್ಣ ಮಾವಿನ ತೋಟವಾಗಿದ್ದ ಈ ಹೊಲದಲ್ಲಿ 1990ರ ಸುಮಾರಿಗೆ 30 ಅಡಿಗೆ ಒಂದರಂತೆ 650 ತೆಂಗಿನ ಸಸಿಗಳನ್ನು ತುಮಕೂರು ಜಿಲ್ಲೆಯ ತಿಪಟೂರಿನಿಂದ ತಂದು ಬೆಳೆಸಿದ್ದಾರೆ. ತೆರೆದ ಬಾವಿ, ಎರಡು ಕೊಳವೆಬಾವಿಗಳಿದ್ದರೂ ನೀರಿಲ್ಲದೇ ಒಣಗುವ ಹಂತ ತಲುಪಿದಾಗ ಏಕಕಾಲಕ್ಕೆ 650 ಪ್ಲಾಸ್ಟಿಕ್ ಕೊಡಗಳನ್ನು ತಂದು, ಅವುಗಳಿಗೆ ಸಣ್ಣ ತೂತು ಹಾಕಿ ಗಿಡಗಳ ಪಕ್ಕದಲ್ಲಿಯೇ ಅವುಗಳನ್ನು ಹೂತು, ಹನಿ ನೀರಾವರಿ ಮಾದರಿಯಲ್ಲಿ ನೀರುಣಿಸಿ 250 ಗಿಡಗಳನ್ನು ಉಳಿಸಿಕೊಂಡಿದ್ದಾರೆ. ಈಗ ಜಮೀನಿನ ಸಮೀಪದಲ್ಲಿರುವ ಗೆದ್ದಲಮರಿ ಕೆರೆ ತುಂಬಿರುವುದರಿಂದ ಅಂತರ್ಜಲ ಹೆಚ್ಚಿ, ಜಮೀನಿನಲ್ಲಿರುವ ಕೊಳವೆ ಬಾವಿಗಳಿಗೆ ಜೀವಜಲ ಬಂದಿದ್ದು, ಮತ್ತೆ ಹಸಿರಿನಿಂದ ನಳನಳಿಸುವಂತಾಗಿದೆ.

2009ರಲ್ಲಿ ಸಾಮಾಜಿಕ ಅರಣ್ಯ ಇಲಾಖೆಯವರು ಇವರ ಜಮೀನಿನಲ್ಲಿಯೇ ಸಸ್ಯಪಾಲನಾಲಯ ಪ್ರಾರಂಭಿಸಿದ್ದರು. ಅವರು ಬಿಟ್ಟು ಹೋಗುವಾಗ ಉಳಿದಿದ್ದ ಒಂದು ಸಾವಿರಕ್ಕೂ ಹೆಚ್ಚು ಸಾಗವಾನಿ ಸಸಿಗಳನ್ನು ತೆಂಗಿನ ಸಾಲುಗಳ ಮಧ್ಯೆ ನೆಟ್ಟು ಹೋದರು. ನಂತರ ಬೇಕಾಗಿದ್ದ 7 ಸಾವಿರ ಸಸಿಗಳನ್ನು ಜಮ್ಮಲದಿನ್ನಿ ನರ್ಸರಿಯಿಂದ ತಂದು ಬೆಳೆಸಲಾಗಿದೆ. ಇದರೊಂದಿಗೆ 800 ಹೆಬ್ಬೇವು, 400 ಕರಿಬೇವು ನೆಟ್ಟಿದ್ದಾರೆ. ಅದಕ್ಕೆ ಹನಿ ನೀರಾವರಿ ಮಾಡಿದ್ದಾರೆ.

‘ಇಲ್ಲಿ ಸಾಗವಾನಿ ಬೆಳೆಯಲ್ಲ’ ಎಂಬ ಅಪಸ್ವರದ ಮಧ್ಯೆಯೇ ಧೈರ್ಯವಾಗಿ ಈ ಸಾಹಸಕ್ಕೆ ಇಳಿದಿದ್ದಾರೆ. ಈಗ ಎಂಟು ಸಾವಿರ ಸಾಗವಾನಿ ಗಿಡಗಳು ಮೂವತ್ತು ಅಡಿ ಎತ್ತರ ಬೆಳೆದು ನಿಂತಿವೆ. ಜಮೀನಿನಲ್ಲಿ ಬಿದ್ದ ಮಳೆ ನೀರಿನಲ್ಲಿ ಒಂದು ಹನಿ ನೀರು ಹೊರಗೆ ಹೋಗದೇ ಅಲ್ಲಿಯೇ ಇಂಗಿ ಅಂತರ್ಜಲ ಹೆಚ್ಚುವಂತೆ ಅಲ್ಲಲ್ಲಿ ದೊಡ್ಡ ತೆಗ್ಗುಗಳನ್ನು ಮಾಡಿದ್ದಾರೆ. ಸಾವಿರಾರು ಮರಗಳಿಂದ ಬಿದ್ದ ಎಲೆಗಳು ಮಣ್ಣಲ್ಲಿ ಕರಗಿ ನೈಸರ್ಗಿಕವಾಗಿ ಗೊಬ್ಬರವಾಗುವಂತೆ ಮಾಡಿದ್ದು, ಫಲವತ್ತತೆ ಮತ್ತಷ್ಟು ಹೆಚ್ಚಿದೆ. ಹತ್ತು ವರ್ಷಗಳಲ್ಲಿ ಒಂದೊಂದು ಮರವೂ ಸಾವಿರಾರು ರೂಪಾಯಿ ಬೆಲೆ ಬಾಳುತ್ತದೆ. ಈಗ ಅವರ ಜಮೀನಿನಲ್ಲಿ ನಾಲ್ಕು ಜನರಿರುವ ಕುಟುಂಬಕ್ಕೆ ಮನೆ ಕಟ್ಟಿ ಕೊಟ್ಟಿದ್ದಾರೆ. ಅವರು ಅಲ್ಲಿಯೇ ವಾಸ್ತವ್ಯ ಮಾಡುತ್ತ ತೆಂಗು, ಕರಿಬೇವು ಮಾರಿ ಆದಾಯ ಪಡೆಯುತ್ತಿದ್ದಾರೆ. ಸಂಪರ್ಕ: 94486 46317

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT