ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

World Environment Day| ಶಾಲೆಯ ಅಂಗಳದಲ್ಲಿ ವನಸಿರಿ

Last Updated 5 ಜೂನ್ 2022, 5:10 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ನಗರದ ಕದ್ರಿಮಿದ್ರಿಯ ಕುವೆಂಪು ವಿದ್ಯಾನಿಕೇತನ ಶಾಲಾವರಣದಲ್ಲಿ ವನರಾಶಿ ನಳನಳಿಸುತ್ತಿದೆ. ಒಂದು ಸಾವಿರದಷ್ಟು ಗಿಡ–ಮರಗಳು ಕಂಪು ಸೂಸುತ್ತಿವೆ.
ಶಾಲೆ ಆವರಣ ಐದು ಎಕರೆ ಇದೆ. ಅಂಗಳದ ಸುತ್ತ, ಕಟ್ಟಡದ ಪಕ್ಕ ಒಂದು ಭಾಗದಲ್ಲಿ ಪೂರ್ತಿ ಸಸ್ಯ. ವೃಕ್ಷ, ಬಳ್ಳಿಗಳು (ವೀಳದ್ಯೆಲೆ, ಕಾಳುಮೆಣಸು...) ಇವೆ. ಅಂಗಳದಲ್ಲಿ ತಂಪಿನ ವಾತಾವರಣ ಇದೆ.

ಶ್ರೀಗಂಧ, ನೇರಳೆ, ಮಾವು, ಹಲಸು, ಹೆಬ್ಬೇವು, ಸಿಲ್ವರ್‌ ಓಕ್‌, ತೆಂಗು, ಅಡಿಕೆ ಮೊದಲಾದ ಮರಗಳು, ನಿಂಬೆ, ಕಿತ್ತಳೆ, ಸೇಬು, ಪೇರಲೆ, ಸಪೋಟ, ಲಿಚ್ಚಿ, ಕಾಫಿ ಮುಂತಾದ ಗಿಡಗಳು, ಅಲಂಕಾರಿಕ, ಹೂವಿನ ಸಸ್ಯಗಳು ಇವೆ.

ಅಸ್ಸಾಂ ರಾಜ್ಯದ ಮುಜಲಿಯ ಅರಿಸಿನ ಸಸ್ಯ ಮೊದಲಾದ ಅಪರೂಪದ ಗಿಡಗಳು ಇವೆ. ಬಿದಿರಿನ ಮೆಳೆಯ ಹಸಿರು ಸಿರಿ ಇದೆ. ಗಿಡ,ಮರಗಳಿಗೆ ನೀರುಣಿಸಲು ಕೊಳವೆ ಬಾವಿ ವ್ಯವಸ್ಥೆ ಇದೆ. ಮಳೆ ನೀರು ಸಂಗ್ರಹ ಸೌಕರ್ಯವೂ ಇವೆ.

ಶಾಲೆಯಲ್ಲಿ 1ರಿಂದ 10ನೇ ತರಗತಿವರೆಗೆ ಒಟ್ಟು 400 ವಿದ್ಯಾರ್ಥಿಗಳು ಇದ್ದಾರೆ. 30 ಬೋಧಕರು, 10 ಸಿಬ್ಬಂದಿ ಇದ್ದಾರೆ. ಆಡಳಿತ ಮಂಡಳಿಯವರು, ಶಿಕ್ಷಕರು, ವಿದ್ಯಾರ್ಥಿಗಳ ಶ್ರಮದಲ್ಲಿ ಈ ವನ ಅರಳಿದೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ಒಂದೊಂದು ಮರದ ಜವಾಬ್ದಾರಿ ವಹಿಸಲಾಗಿದೆ. ನೀರು ಪೂರೈಕೆ, ನಿರ್ವಹಣೆ ಮಾಡಿ ಪೋಷಿಸಬೇಕು.

ಹಸಿರಿನ ಮಡಿಲಲ್ಲಿ ಪಾಠ ಚಟುವಟಿಕೆಗಳು ನಡೆಯುತ್ತವೆ. ಮರಗಳ ನೆರಳಿನಲ್ಲಿ ಮಕ್ಕಳನ್ನು ಕೂರಿಸಿ ಪಾಠ ಮಾಡುತ್ತಾರೆ.

ವಿದ್ಯಾರ್ಥಿ ಶಾಲೆಗೆ ತಡವಾಗಿ ಬಂದರೆ 10 ಗಿಡಗಳಿಗೆ ನೀರು ಹಾಕಿ ತರಗತಿಗೆ ಹೋಗಬೇಕು. ಹುಟ್ಟುಹಬ್ಬದ ದಿನ ಗಿಡಗಳನ್ನು ಕೊಡುಗೆಯಾಗಿ ನೀಡುವ ಪರಿಪಾಟ ರೂಢಿಸಿದ್ದಾರೆ.

‘ವಿದ್ಯಾರ್ಥಿಗಳು ಆಸಕ್ತಿಯಿಂದ ಗಿಡ. ಮರಗಳನ್ನು ಪೋಷಿಸುತ್ತಾರೆ. ಬಹಳಷ್ಟು ವಿದ್ಯಾರ್ಥಿಗಳು ಶಾಲೆಯಲ್ಲಿನ ಚಟುವಟಿಕೆಗಳಿಂದ ಪ್ರೇರಿತರಾಗಿ ಮನೆಯ ಅಂಗಳದಲ್ಲೂ ಗಿಡಗಳನ್ನು ಬೆಳೆಸಿರುವ ನಿದರ್ಶನಗಳು ಇವೆ’ ಎಂದು ಶಾಲೆಯ ಪ್ರಾಚಾರ್ಯ ರಾಘವೇಂದ್ರ ಹೇಳುತ್ತಾರೆ.

‘10 ವರ್ಷಗಳ ಕೈಂಕರ್ಯ’

‘ನಮ್ಮ ಶಾಲೆ ಆವರಣದಲ್ಲಿ ಗಿಡಗಳನ್ನು ನೆಟ್ಟು ಪೋಷಿಸುವ ಕೈಂಕರ್ಯ 10 ವರ್ಷಗಳಿಂದ ಸಾಗಿದೆ. ಹಸಿರು ಸಿರಿಯು ಶಾಲೆಗೆ ಸೊಬಗು ನೀಡಿದೆ’ ಎಂದು ಶಾಲೆಯ ಕಾರ್ಯದರ್ಶಿ ಶಂಕರ್‌ ಹೆಮ್ಮೆಯಿಂದ ಹೇಳುತ್ತಾರೆ.

‘ವಿದ್ಯಾರ್ಥಿಗಳಿಗೆ ‘ವಿಜ್ಞಾನ’,‘ಪರಿಸರ ಅಧ್ಯಯನ’, ಮೊದಲಾದ ವಿಷಯಗಳ ಕೆಲ ಪಾಠಗಳನ್ನು ಸಸ್ಯ ಕಾಶಿಯಲ್ಲೇ ಬೋಧನೆ ಮಾಡುತ್ತೇವೆ. ಪ್ರಾಯೋಗಿಕವಾಗಿ ವಿಷಯವನ್ನು ಮನದಟ್ಟು ಮಾಡಿಸುತ್ತೇವೆ. ಅವರಲ್ಲಿ ಪರಿಸರ ಪ್ರೀತಿ ಮೈಗೂಡಿಸುತ್ತೇವೆ. ನಿತ್ಯ ಮೂರು ಗಂಟೆ ಶಾಲೆಯ ವನದಲ್ಲಿ ಗಿಡ, ಮರಗಳ ನಿರ್ವಹಣೆಯಲ್ಲಿ ತೊಡಗಿಕೊಳ್ಳುತ್ತೇನೆ. ಸಸ್ಯ ಸಂಕುಲದ ಪೋಷಣೆಯು ಖುಷಿಯ ಕಾಯಕ’ ಎಂದು ಅವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT