ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಸಿ ಉಡುಗೊರೆ ರೂಢಿ ಆದ್ರ ಚಲೋ ಇರ್ತೇತಿ...

Last Updated 28 ಜೂನ್ 2019, 19:31 IST
ಅಕ್ಷರ ಗಾತ್ರ

ಅಂದು ನಮ್ಮ ವಿಭಾಗದಲ್ಲಿ ಎಂ.ಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುವ ಸಮಾರಂಭ ನಡೆಯುತ್ತಿತ್ತು. ಕೇವಲ ಪರಿಸರಸ್ನೇಹಿ ವಸ್ತುಗಳಿಂದ ಮಾಡಿದ್ದ ಅಲಂಕಾರ ಕಣ್ಣಿಗೆ ಕಟ್ಟುವಂತಿತ್ತು. ವಿಭಾಗದ ಕಾರಿಡಾರ್‌ಗಳಲ್ಲೆಲ್ಲಾ ಸಾಲಾಗಿ ಇಟ್ಟಿದ್ದ ಸಸ್ಯ ಕುಂಡಗಳು, ಸಸ್ಯಶಾಸ್ತ್ರ ವಿಭಾಗಕ್ಕೆ ಗುರುತಿನ ಚೀಟಿಯಂತಿದ್ದವು. ಬಾಗಿಲುಗಳಿಗೆ ಕಟ್ಟಿದ್ದ ಮಾವಿನ ಎಲೆಗಳ ತಳಿರು ತೋರಣ, ಹೂಮಾಲೆ, ಅಂದದ ರಂಗೋಲಿ ಎಲ್ಲವೂ ಒಂದು ಹಬ್ಬದ ವಾತಾವರಣವನ್ನೇ ಸೃಷ್ಟಿಸಿದ್ದವು. ಈ ಪವಿತ್ರ ವಾತಾವರಣ ಸೃಷ್ಟಿಸಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳು ಸಮಾರಂಭವನ್ನು ಯಶಸ್ವಿಗೊಳಿಸಲು ಸಡಗರದಿಂದ ಓಡಾಡುತ್ತಿದ್ದರು. ಸಮಾರಂಭ ಶುರುವಾಗಿ ವಿದ್ಯಾರ್ಥಿಗಳನ್ನು ಬೀಳ್ಕೊಡುವಾಗ ವಿಭಾಗದ ಸಂಪ್ರದಾಯದಂತೆ ಎಲ್ಲ ವಿದ್ಯಾರ್ಥಿಗಳಿಗೂ ನಿಮ್ಮ ಪ್ರಗತಿಯೊಂದಿಗೆ ಸಸ್ಯದ ಪ್ರಗತಿಯ ಬಗೆಗೂ ಕಾಳಜಿಯಿರಲಿ... ಎಂಬ ಸಂದೇಶದ ಮೂಲಕ ಒಂದೊಂದು ಸಸ್ಯವನ್ನು ಕೊಟ್ಟು ಬೀಳ್ಕೊಡಲಾಯಿತು. ಸಂಶೋಧನಾ ವಿದ್ಯಾರ್ಥಿಗಳಾಗಿ ಸಮಾರಂಭಕ್ಕೆ ಸಾಕ್ಷಿಯಾಗಿದ್ದ ನಮಗೂ ಒಂದು ಸಸ್ಯವನ್ನು ಕೊಟ್ಟು ಸ್ವಾಗತಿಸಿದಾಗ ಮನಸ್ಸು ನಮ್ಮ ಎಂ.ಎಸ್ಸಿ ದಿನಗಳಿಗೆ ಜಾರಿತ್ತು.

ಸಸ್ಯ, ಸಸ್ಯಶಾಸ್ತ್ರ ವಿಭಾಗದ ಅಸ್ಮಿತೆ. ವಿಭಾಗದಲ್ಲಿ ನಡೆಯುವ ಅನೇಕ ಸಮಾರಂಭಗಳಲ್ಲಿ ಸಸ್ಯವು ಒಂದು ಪ್ರಮುಖ ಪಾತ್ರವನ್ನು ನಿರ್ವಹಿಸಿ ಹೋಗುವುದು ವಿಭಾಗದಲ್ಲಿನ ವಿಶೇಷ. ಐದು ವರ್ಷಗಳ ಹಿಂದೆ ವಿಭಾಗಕ್ಕೆ ಪ್ರವೇಶ ಪಡೆದು ಬಂದಾಗ ನಮ್ಮ ಸೀನಿಯರ್ಸ್ ನಮಗೆಲ್ಲರಿಗೂ ಒಂದೊಂದು ಸಸ್ಯವನ್ನು ಕೊಟ್ಟು ಸ್ವಾಗತಿಸಿದ್ದು ನೆನಪಾಯಿತು. ಆ ಕರಿಬೇವು ಗಿಡ ಮನೆಯ ಹಿತ್ತಲಲ್ಲಿ ಆರೋಗ್ಯವಾಗಿ ಬೆಳೆದು ನಿಂತಿರುವುದನ್ನು ನೋಡಿದರೆ ಆ ಫ್ರೆಶರ್ಸ್-ಡೇಯ ನೆನಪು ಮರುಕಳಿಸುತ್ತದೆ. ನಂತರ ನಮ್ಮ ಜೂನಿಯರ್ಸ್‌ಗಳಿಗೂ ಸ್ವಾಗತಿಸಲು ಸಸ್ಯವನ್ನೇ ಉಡುಗೊರೆಯಾಗಿ ಕೊಟ್ಟು ಅವುಗಳಲ್ಲಿ ಹೆಚ್ಚಾನೆಚ್ಚು ಗಿಡಗಳನ್ನು ವಿಶ್ವವಿದ್ಯಾಲಯದ ಸಸ್ಯೋದ್ಯಾನದಲ್ಲಿ ಅವರೊಟ್ಟಿಗೆ ನಾವೂ ಗುಂಡಿ ತೋಡಿ ನೆಡುವಾಗ ನಮ್ಮ, ಅವರ ಮಧ್ಯೆ ಬಾಂಧವ್ಯ ಬೇರುಬಿಟ್ಟಿತ್ತು.

ಒಂದು ಸಾಂಪ್ರದಾಯಿಕ ಆಚರಣೆಯಂತೆ ವಿಭಾಗದಲ್ಲಿ ಇಂದಿಗೂ ನಡೆದುಕೊಂಡು ಬರುತ್ತಿರುವ ಈ ರೂಢಿಯನ್ನು ನೋಡಿದರೆ ಬಹಳ ಸಂತಸವಾಗುತ್ತದೆ. ಫನ್-ವೀಕ್‌ನ ಹಸಿರು ದಿನದ ಸಂದರ್ಭದಲ್ಲಿ ಪರಿಸರ ಜಾಗೃತಿ ಸಂಕೇತವಾಗಿ ಎಲ್ಲರೂ ಹಸಿರು ಉಡುಗೆ ತೊಟ್ಟು ಎಲ್ಲ ಪ್ರೊಫೆಸರ್‌ಗಳಿಂದಲೂ ಒಂದೊಂದು ಸಸಿಯನ್ನು ನೆಡಿಸುವುದು ಮತ್ತೂ ವಿಭಾಗದ ಫೈಟಾನ್ ಕ್ಲಬ್ ಉದ್ಘಾಟನೆ ಸಂದರ್ಭದಲ್ಲಿ, ಹೊಸ ವಿದ್ಯಾರ್ಥಿಗಳನ್ನು ಸ್ವಾಗತಿಸುವಾಗ, ಹಳೆಯ ವಿದ್ಯಾರ್ಥಿಗಳನ್ನು ಬೀಳ್ಕೊಡುವಾಗ, ಹೀಗೇ ವಿಭಾಗದಲ್ಲಿ ನಡೆಯುವ ವಿವಿಧ ಬಗೆಯ ಸಮಾರಂಭಗಳಲ್ಲಿ ಸಸಿಯನ್ನು ಉಡುಗೊರೆಯಾಗಿ ಕೊಡುವುದು ಅಥವಾ ಸಸಿಯನ್ನು ನೆಡುವುದು ಒಂದು ಸಯಾಮಿ ಅವಳಿಯಂತೆ ಬೆರೆತಿರುವುದು ವಿಶೇಷವೆನಿಸುತ್ತದೆ.

ಸಸಿಯನ್ನು ಉಡುಗೊರೆಯಾಗಿ ಕೊಡುವ ಈ ರೂಢಿ ಜನರೂಢಿಯಾದರೆ ಚಲೋ ಇರ್ತೇತಿ. ಹುಟ್ಟು ಹಬ್ಬ, ಮದುವೆ ವಾರ್ಷಿಕೋತ್ಸವ, ನಾಮಕರಣ, ಸನ್ಮಾನ ಸಮಾರಂಭ ಹೀಗೆ ಹಲವಾರು ಬಗೆಯ ಸಮಾರಂಭಗಳಲ್ಲಿ ಅವರು ಇಷ್ಟಪಡುವ ಹಣ್ಣಿನ ಗಿಡವನ್ನೋ, ಔಷಧೀಯ, ಆಲಂಕಾರಿಕ ಅಥವಾ ಇತರೆ ಯಾವುದೇ ಸಸ್ಯವನ್ನಾದರೂ ಉಡುಗೊರೆಯಾಗಿ ಕೊಟ್ಟು; ಅವರು ಅದನ್ನು ನೆಟ್ಟು ಬೆಳೆಸುವಾಗ ಸಿಗುವ ಖುಷಿ ಬೇರೆ ಯಾವ ದುಬಾರಿ ಉಡುಗೊರೆಯೂ ಕೊಡಲಿಕ್ಕಿಲ್ಲವೆನಿಸುತ್ತದೆ. ಆ ಗಿಡವು, ಆ ಸಮಾರಂಭದ ಕುರುಹಾಗಿ ನಿರಂತರ ಅದರ ನೆನಪನ್ನು ಎಂದಿಗೂ ತರುತ್ತಲೇ ಇರುತ್ತದೆ. ಅಂದ್ಹಂಗ, ಸಸಿಯನ್ನ ಕೊಡೂವಾಗ ನಿಮ್ಮ ಪ್ರಗತಿಯೊಂದಿಗೆ ಸಸ್ಯದ ಪ್ರಗತಿಯ ಬಗೆಗೂ ಕಾಳಜಿಯಿರಲಿ ಅನ್ನೂ ಸಂದೇಶ ಹೇಳಿ ಕೊಡೂದ ಮರೀಬ್ಯಾಡ್ರ್ಯಾ ಮತ್ತ...

-ಕಾರ್ತಿಕ ಅ. ಈರಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT