ಟಿಶ್ಯು ಕಲ್ಚರ್

7

ಟಿಶ್ಯು ಕಲ್ಚರ್

Published:
Updated:
Prajavani

ನಾಲ್ಕು ಮಂದಿ ಮಲಗಿಕೊಳ್ಳಬಹುದಾದಷ್ಟು ಕೊಠಡಿಯ ಜಾಗದಲ್ಲಿ ಅಬ್ಬಬ್ಬಾ ಎಂದರೆ ಎಷ್ಟು ಗಿಡಗಳನ್ನು ಬೆಳೆಸಬಹುದು? ಹಲವು ಸಾವಿರಗಳಷ್ಟು ಎಂದರೆ ನೀವು ನಂಬುತ್ತೀರಾ? ಸಸ್ಯ ಅಂಗಾಂಶ ಕೃಷಿ (Plant Tissue Culture) ಎಂಬ ತಂತ್ರಜ್ಞಾನ ಇದನ್ನು ಸಾಧ್ಯ ಮಾಡಿದೆ!

ನಮಗೆಲ್ಲ ತಿಳಿದಿರುವಂತೆ ಎಲ್ಲ ಜೀವಿಗಳೂ ಜೀವಕೋಶಗಳಿಂದ ಮಾಡಲ್ಪಟ್ಟಿವೆ. ಪ್ರತಿಯೊಂದು ಜೀವಕೋಶಕ್ಕೂ ಇರುವ ಒಂದು ಅದ್ಭುತವಾದ ಶಕ್ತಿ ಎಂದರೆ ಅದರ ಬೆಳವಣಿಗೆಗೆ ಬೇಕಾದ ಎಲ್ಲ ಆವಶ್ಯಕ ಪೋಷಕಾಂಶಗಳನ್ನು ಒದಗಿಸಿ ಸೂಕ್ತವಾದ ಕೃತಕ ವಾತಾವರಣದಲ್ಲಿ ಬೆಳೆಯಲು ಬಿಟ್ಟರೆ ಒಂದೇ ಜೀವಕೋಶ ಬೆಳೆದು ಸಂಪೂರ್ಣ ಜೀವಿಯಾಗಿ ಅಭಿವೃದ್ಧಿಯಾಗಬಲ್ಲದು! ಪ್ರಾಣಿಗಳಲ್ಲಿ ಈ ಶಕ್ತಿ ಸ್ವಲ್ಪಮಟ್ಟಿಗೆ ಕಡಿಮೆಯಾದರೂ ಸಸ್ಯಗಳ ಜೀವಕೋಶಗಳಲ್ಲಿ ಈ ಶಕ್ತಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ‘ಟೋಟಿಪೊಟೆನ್ಸಿ’ ಎಂದು ಕರೆಯಲಾಗುವ ಈ ಸಾಮರ್ಥ್ಯವನ್ನು ಬಳಸಿಕೊಂಡು ಏಕರೂಪದ ರೋಗರಹಿತವಾದ ಅಧಿಕ ಸಂಖ್ಯೆಯ ಸಸ್ಯಗಳನ್ನು ಬೆಳೆಯುವುದು ಸಾಧ್ಯ. ಒಂಟಿ ಜೀವಕೋಶಗಳಿಗಿಂತಲೂ ಜೀವಕೋಶಗಳ ಗುಂಪಾದ ಅಂಗಾಂಶಗಳನ್ನು ಬಳಸುವುದರಿಂದ ಈ ಕಾರ್ಯ ಇನ್ನೂ ಹೆಚ್ಚು ಪರಿಣಾಮಕಾರಿಯಾಗುವುದರಿಂದ ಈ ಪದ್ಧತಿಯನ್ನು ‘ಅಂಗಾಂಶ ಕೃಷಿ’ ಎಂದು ಕರೆಯಲಾಗುತ್ತದೆ.

ಗಿಡದ ಅಂಗಾಂಶಗಳನ್ನು ಕೃತಕ ಮಾಧ್ಯಮದಲ್ಲಿ ಬೆಳೆಸಿ ಸಸ್ಯಗಳನ್ನು ಬೆಳೆಸುವ ವಿಚಾರ ಮೊದಲಿಗೆ ಹೊಳೆದದ್ದು ಹತ್ತೊಂಬತ್ತನೆಯ ಶತಮಾನದಲ್ಲಿ ಹೇಬರ್ ಲ್ಯಾಂಡ್ ಎಂಬ ಜರ್ಮನಿಯ ಸಸ್ಯವಿಜ್ಞಾನಿಗೆ. ನಂತರದ ಸತತ ಪ್ರಯತ್ನದ ಫಲವಾಗಿ ಸಸ್ಯಗಳ ವಿವಿಧ ಭಾಗಗಳಾದ ಬೇರು, ಕಾಂಡ, ಎಲೆ, ಹೂವು – ಮುಂತಾದವುಗಳನ್ನು ಬಳಸಿ ಪರಿಪೂರ್ಣವಾದ ಸಸ್ಯಗಳನ್ನು ತಯಾರಿಸುವಲ್ಲಿ ವಿಜ್ಞಾನಿಗಳು ಸಫಲರಾಗಿದ್ದಾರೆ. ಈ ತಂತ್ರಜ್ಞಾನದ ಸಮರ್ಥ ಬಳಕೆಯಿಂದ ಏಕರೂಪದ ರೋಗನಿರೋಧಕ ಗುಣಗಳುಳ್ಳ ಹಣಕಾಸು ಬೆಳೆಗಳಾದ ಬಾಳೆ, ಸ್ಟ್ರಾಬೆರಿ, ಶುಂಠಿ, ವೆನಿಲ್ಲಾ – ಮುಂತಾದವುಗಳನ್ನು ಅಧಿಕ ಸಂಖ್ಯೆಯಲ್ಲಿ ಮತ್ತು ಕಡಿಮೆ ಸ್ಥಳದಲ್ಲಿ ಬೆಳೆಯಬಹುದಾಗಿದೆ. ಅಪರೂಪದ ಸಸ್ಯಗಳ ತಳಿಗಳನ್ನು ಉಳಿಸಿ ಬೆಳೆಸಲೂ ಈ ವಿಧಾನ ಸೂಕ್ತ. ಹೊಸ ತರಹದ ಗಿಡ, ಹೂವು, ಹಣ್ಣು, ತರಕಾರಿ – ಇತ್ಯಾದಿಗಳನ್ನು ಬೆಳೆದು ಸಾಕಷ್ಟು ಹಣ ಗಳಿಸಬಹುದಾಗಿರುವುದರಿಂದ ಅಂಗಾಂಶ ಕೃಷಿಯು ಇಂದು ಅತ್ಯಂತ ಪ್ರಸಿದ್ಧವಾದ ಕೃಷಿಪದ್ಧತಿಯಾಗಿ ಬಳಕೆಯಾಗುತ್ತಿದೆ. ಬೆಂಗಳೂರಿನಲ್ಲಿ ಹಲವಾರು ಖಾಸಗಿ ಪ್ರಯೋಗಾಲಯಗಳು ರೈತರಿಗೆ ಈ ನಿಟ್ಟಿನಲ್ಲಿ ನೆರವಾಗುತ್ತಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !