ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗವಕಾಶ ಕಲ್ಪಿಸಿದ ಗಿಡ ಪೋಷಣೆ

ಪರಿಸರ ಸಂರಕ್ಷಣೆ ಬದ್ಧರಾದ ಅರಣ್ಯ ಇಲಾಖೆ
Last Updated 22 ಮಾರ್ಚ್ 2021, 4:25 IST
ಅಕ್ಷರ ಗಾತ್ರ

ಗೌರಿಬಿದನೂರು: ಸುತ್ತಲಿನ ಪ್ರದೇಶದಲ್ಲಿ ಹೆಚ್ಚಿನ ಗಿಡಮರಗಳು ಬೆಳೆದು ಸ್ವಚ್ಛ ಪರಿಸರದ ಜತೆಗೆ ನೈಜ ವಾತಾವರಣ ನಿರ್ಮಾಣವಾಗಲೆಂದು ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರತಿ ವರ್ಷ ಸಾವಿರಾರು‌ ಗಿಡಗಳನ್ನು ನೆಡುತ್ತಿದ್ದಾರೆ. ಜತೆಗೆ ಬೇಸಿಗೆಯಲ್ಲಿ ಅವುಗಳ ಪೋಷಣೆ ಮಾಡುತ್ತಾ ಸ್ಥಳೀಯ ಕೂಲಿ ಕಾರ್ಮಿಕರಿಗೆ ಉದ್ಯೋಗದ ಅವಕಾಶ ಕಲ್ಪಿಸುತ್ತಿದ್ದಾರೆ.

ಸಾಮಾಜಿಕ ಅರಣ್ಯ ಇಲಾಖೆಯು ಮುಂಗಾರು ಆರಂಭದಲ್ಲಿ ತಾಲ್ಲೂಕಿನವಿವಿಧೆಡೆಗಳಲ್ಲಿ ನೆಡುತೋಪು ನಿರ್ಮಾಣ, ಗುಂಡು ತೋಪು, ಶಾಲಾ ಆವರಣ, ಸರ್ಕಾರಿ ‌ಭೂಮಿ, ಬೆಟ್ಟದ ತಪ್ಪಲು, ಸ್ಮಶಾನ, ಸರ್ಕಾರಿ ಕಚೇರಿಗಳ‌ ಆವರಣ, ಕೆರೆಯಂಗಳ, ರೈತರ ಜಮೀನು ‌ಸೇರಿದಂತೆ ಇತರೆಡೆಗಳಲ್ಲಿ ಸಾವಿರಾರು ‌ಗಿಡಗಳನ್ನು ನೆಟ್ಟು ನೀರುಣಿಸುವ ಜವಾಬ್ದಾರಿ ಪೂರೈಸುತ್ತಾರೆ. ಮಳೆಗಾಲದಲ್ಲಿ ನೆಟ್ಟ ಗಿಡಗಳು ಬೇರಿಳಿದು ಭೂಮಿಯಲ್ಲಿಅಸ್ತಿತ್ವ ಪಡೆದು‌ ಬೆಳೆದು ದೊಡ್ಡದಾಗಲು ಪ್ರಯತ್ನಿಸುತ್ತವೆ.

ಆದರೆ ಅವುಗಳ ಆರೈಕೆ ಅತ್ಯವಶ್ಯಕವಾಗಿದ್ದು, ಇದಕ್ಕಾಗಿ ಸ್ಥಳೀಯ ನಾಗರಿಕರು, ಸಂಘಸಂಸ್ಥೆಗಳ ಪದಾಧಿಕಾರಿಗಳು, ದಾನಿಗಳು ಸೇರಿದಂತೆ ಇತರರು ಕೈ ಜೋಡಿಸಿ ನೆಟ್ಟ ಒಂದೆರಡು ತಿಂಗಳವರೆಗೆ ಅವುಗಳ‌ ಪೋಷಣೆಗೆ ಮುಂದಾಗುತ್ತಾರೆ. ಬಳಿಕ ಚಳಿಗಾಲ‌ ಮುಗಿದು ಬೇಸಿಗೆ ಆರಂಭವಾಗುವಷ್ಟರಲ್ಲಿ ಗಿಡಗಳಿಗೆ ಅವಶ್ಯವಾಗಿರುವ ನೀರನ್ನು ಉಳಿಸಿ ನೆಟ್ಟ ಗಿಡಗಳನ್ನು ‌ಬದುಕಿಸಿಕೊಳ್ಳುವ ಜವಾಬ್ದಾರಿ ಹೆಚ್ಚಾಗಿರುತ್ತದೆ. ಆರಂಭದಲ್ಲಿದ್ದ ಉತ್ಸಾಹ ಬೇಸಿಗೆ ಕಾಲಕ್ಕೆ ಕಡಿಮೆಯಾಗುತ್ತದೆ. ಇದರಿಂದ ನೆಟ್ಟ ಗಿಡಗಳು ನಿರೀಕ್ಷಿತ ಮಟ್ಟದಲ್ಲಿ ಬೆಳೆಯದೆ ಕಮರುತ್ತವೆ.

ಸಾಮಾಜಿಕ ‌ಅರಣ್ಯ ಇಲಾಖೆಯ ವತಿಯಿಂದ 2020-21ನೇ ಸಾಲಿನಲ್ಲಿ ಕೊರೊನಾ ಸಂಕಷ್ಟದ ದಿನಗಳಲ್ಲಿಯೂ ತಾಲ್ಲೂಕಿನಲ್ಲಿ ಸುಮಾರು 70 ಸಾವಿರಕ್ಕೂ ಹೆಚ್ಚು ಗಿಡಗಳನ್ನು ನರೇಗಾ ಯೋಜನೆಯಡಿಯಲ್ಲಿ ನೆಡಲಾಗಿದೆ. ಆದರೆ ಅವುಗಳಿಗೆ ನೀರುಣಿಸಿ ಪೋಷಣೆ ಮಾಡುವ ಬದ್ಧತೆ ಇಲಾಖೆಯ ಜತೆಗೆ ಸ್ಥಳೀಯನಾಗರಿಕರಲ್ಲಿ ಬರಬೇಕಾಗಿದೆ.

ಈ‌ ಬಾರಿ ಇಲಾಖೆಯ ವತಿಯಿಂದ ನೆಟ್ಟ ಗಿಡಗಳಿಗೆ ಹಂತಹಂತವಾಗಿ ನೀರುಣಿಸುವ ಮೂಲಕ ಅವುಗಳನ್ನು ಉಳಿಸಿ ಬೆಳೆಸುವ ಸತ್ಕಾರ್ಯಕ್ಕೆ ಮುಂದಾಗಿದ್ದಾರೆ. ಅಲ್ಲದೆ ನೀರುಣಿಸಲು ಸ್ಥಳೀಯ ಕೂಲಿ‌ಕಾರ್ಮಿಕರನ್ನು ಬಳಕೆ ಮಾಡಿಕೊಳ್ಳುವ ಮೂಲಕ ಭೀಕರ ಬರಗಾಲದಲ್ಲೂಗ್ರಾಮೀಣ ಪ್ರದೇಶದಲ್ಲಿ ಉದ್ಯೋಗದ ಅವಕಾಶಗಳನ್ನು ಕಲ್ಪಿಸುತ್ತಿದ್ದಾರೆ. ಇದರಿಂದ ಪರಿಸರ ಸಂರಕ್ಷಣೆಯ ಜತೆಗೆ ಬಡ ಕೂಲಿ ಕಾರ್ಮಿಕರ ಕುಟುಂಬಗಳಿಗೆ ಆಸರೆಯಾಗಿದೆ.

‘ಈ ವರ್ಷದಲ್ಲಿ ಇಲಾಖೆಯ ಆದೇಶದಂತೆ ತಾಲ್ಲೂಕಿನಲ್ಲಿ ಸುಮಾರು 2 ಲಕ್ಷ ಗಿಡಗಳನ್ನು ಬೆಳೆಸಲಾಗಿದ್ದು, ಅದರಲ್ಲಿ ರೈತರಿಗಾಗಿ ಸುಮಾರು 1.2 ಲಕ್ಷ ಗಿಡಗಳನ್ನು ನೀಡಲಾಗಿದ್ದು, ಉಳಿದ 80 ಸಾವಿರ ಗಿಡಗಳನ್ನು ಸಮುದಾಯದ ವಿವಿಧ ಪ್ರದೇಶಗಳಲ್ಲಿ ನರೇಗಾ ಯೋಜನೆಯಡಿಯಲ್ಲಿ ನೆಡಲಾಗಿದೆ. ಈಗಾಗಲೇ ಅವುಗಳನ್ನು ‌ನೆಟ್ಟು ಸುಮಾರು 10 ತಿಂಗಳು‌ ಕಳೆದಿದ್ದು, ಶೇ 80 ರಷ್ಟು ಜೀವಂತವಾಗಿದ್ದು ಅವುಗಳಿಗೆ ನೀರುಣಿಸಿ ಬೇಸಿಗೆಯ ಮೂರು ತಿಂಗಳುಗಳ‌ ಕಾಲ ಕಾಪಾಡುವುದೇ ದೊಡ್ಡ ಸವಾಲಾಗಿದೆ’ ಎನ್ನುತ್ತಾರೆ ಸಾಮಾಜಿಕ ಅರಣ್ಯ ಇಲಾಖೆಯ ವಲಯ ಅಧಿಕಾರಿ ಎನ್.ಪದ್ಮಶ್ರೀ.

‘ಇದರ ಮಧ್ಯೆ ಬೇಸಿಗೆಯ ಬಿರು ಬಿಸಿಲಿಗೆ ಅಗ್ನಿ ಅವಘಡಗಳು ಉಂಟಾಗಿ ಕೆಲ ಗಿಡಗಳು ಹಾಳಾಗುತ್ತಿರುವುದು ನಿಜಕ್ಕೂ ಮನಸ್ಸಿಗೆ ನೋವುಂಟು ಮಾಡಿದೆ. ಆದರೂ ಕೂಡ ಇಲಾಖೆಯಲ್ಲಿನ ಎಲ್ಲ ಸಿಬ್ಬಂದಿಯ ಸಹಕಾರದಿಂದ ಕಾಲಕಾಲಕ್ಕೆ ವಿವಿಧ ಸ್ತರಗಳಲ್ಲಿ ಗಿಡಗಳಿಗೆ ನೀರುಣಿಸುವ ಕಾರ್ಯ ಮಾಡಲಾಗುತ್ತಿದೆ. ಇದಕ್ಕಾಗಿ ಸ್ಥಳೀಯ ‌ಕೂಲಿ ಕಾರ್ಮಿಕರನ್ನು‌ ಬಳಕೆ ಮಾಡಲಾಗುತ್ತಿದ್ದು, ಅವರಿಗೆ ದಿನಗೂಲಿಯಂತೆ ನೀಡಲಾಗುತ್ತಿದೆ. ಇದರಿಂದ ಗಿಡಗಳ‌ ಪೋಷಣೆಯ ಜತೆಗೆ ಸಂಕಷ್ಟದಲ್ಲಿ‌ ಅವರ ಕುಟುಂಬಗಳಿಗೆ ಆಸರೆಯಾದಂತಿದೆ. ಗಿಡಗಳನ್ನು ನೆಡುವುದು ಎಷ್ಟು ಮುಖ್ಯವೋ‌ಕನಿಷ್ಠ 3 ವರ್ಷಗಳ‌ ಕಾಲ ಅವುಗಳನ್ನು ಪೋಷಿಸುವುದು ನಮ್ಮ ಜವಾಬ್ದಾರಿಯಾಗಿದೆ’ ಎನ್ನುತ್ತಾರೆ.

ಬೆಂಕಿ ಅವಘಡದಿಂದ ರಕ್ಷಿಸಿ

‘ತಾಲ್ಲೂಕಿನ ವಿವಿಧೆಡೆಗಳಲ್ಲಿ ನೆಟ್ಟು ಪೋಷಿಸುತ್ತಿರುವ ಗಿಡಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ನಾಶವಾಗುತ್ತಿರುವ ಪ್ರಕರಣಗಳು ಅಲ್ಲಲ್ಲಿ ಕಂಡು ಬರುತ್ತಿದೆ. ಇದು‌ ನಿಜಕ್ಕೂ ಆತಂಕಕಾರಿ ಬೆಳವಣಿಗೆಯಾಗಿದ್ದು, ಇದನ್ನು ನಿಯಂತ್ರಣ ಮಾಡಲು ಇಲಾಖೆಯ ಜತೆಗೆ ಸ್ಥಳೀಯರ ಸಹಕಾರ ಅತ್ಯವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದೇವೆ ಪರಿಸರ ಸಂರಕ್ಷಣೆಗಾಗಿ ಬದ್ಧರಾಗಿದ್ದೇವೆ’ ಎನ್ನುತ್ತಾರೆ ಅರಣ್ಯ ಅಧಿಕಾರಿ ಎನ್‌.ಪದ್ಮಶ್ರೀ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT