ಕಡಿಮೆ ದರಕ್ಕೆ ಸಸಿಗಳು ಲಭ್ಯ

ಬುಧವಾರ, ಜೂನ್ 26, 2019
28 °C
ಸಾರ್ವಜನಿಕರಲ್ಲಿ ಪರಿಸರ ಜಾಗೃತಿ ಮೂಡಿಸಲು ಅರಣ್ಯ ಇಲಾಖೆ ಕ್ರಮ

ಕಡಿಮೆ ದರಕ್ಕೆ ಸಸಿಗಳು ಲಭ್ಯ

Published:
Updated:
Prajavani

ಕಲಬುರ್ಗಿ: ಜಿಲ್ಲೆಯಾದ್ಯಂತ ಅಲ್ಲಲ್ಲಿ ಮಳೆಯಾಗುತ್ತಿದ್ದು, ವಾತಾವರಣ ಕೊಂಚ ತಂಪಾಗಿದೆ. ಇದಕ್ಕೆ ಪೂರಕವಾಗಿ ಅರಣ್ಯ ಇಲಾಖೆಯು ವಿವಿಧೆಡೆ ಸಸಿಗಳನ್ನು ನೆಡುವುದರ ಜೊತೆಜೊತೆಗೆ ಸಾರ್ವಜನಿಕರಲ್ಲಿ ಪರಿಸರ ಸಂರಕ್ಷಣೆ ಕುರಿತು ಜಾಗೃತಿಯನ್ನೂ ಮೂಡಿಸುತ್ತಿದೆ.

ಮನೆ, ಕಚೇರಿ, ಶಾಲಾ–ಕಾಲೇಜು ಆವರಣ ಹೀಗೆ ಲಭ್ಯವಿರುವ ಸ್ಥಳಗಳಲ್ಲಿ ಸಸಿಗಳನ್ನು ನೆಡುವಂತೆ ಪ್ರೋತ್ಸಾಹಿಸುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳು, ಅದಕ್ಕಾಗಿ ಕಡಿಮೆ ದರದಲ್ಲಿ ವಿವಿಧ ರೀತಿಯ ಸಸಿಗಳನ್ನು ವಿತರಿಸಲು ಕ್ರಮ ಕೈಗೊಂಡಿದ್ದಾರೆ.

ಸಾರ್ವಜನಿಕರಿಗಾಗಿ ಸಸಿಗಳು (ಆರ್‌ಎಸ್‌ಪಿಡಿ) ಮತ್ತು ಮನೆಗೊಂದು ಮರ ಮತ್ತು ಶಾಲೆಗೊಂದು ವನ (ಎಂಎಂಎಸ್‌ವಿ) ಎಂಬ ಎರಡು ಯೋಜನೆಗಳಡಿ ಸಸಿಗಳನ್ನು ವಿತರಿಸಲಾಗುತ್ತಿದ್ದು, ಈ ಯೋಜನೆಯಡಿ ಆಸಕ್ತರು ಸಸಿಗಳನ್ನು ಖರೀದಿಸಬಹುದು. 

ಪ್ರಸಕ್ತ ವರ್ಷ ಆರ್‌ಎಸ್‌ಪಿಡಿ ಯೋಜನೆಯಡಿ 2,700 ಸಸಿಗಳನ್ನು ಮತ್ತು ಎಂಎಂಎಸ್‌ವಿ ಯೋಜನೆಯಡಿ 7 ಸಾವಿರ ಸಸಿಗಳನ್ನು ಇಲಾಖೆಯು ವಿತರಿಸಲಿದೆ.  ಸಸಿಗಳನ್ನು ನೆಡಲು ಬಯಸುವವರು ಮನೆ,
ಕಚೇರಿ ಅಥವಾ ಶಾಲಾ–ಕಾಲೇಜು ಆವರಣದಲ್ಲಿ ಲಭ್ಯವಿರುವ ಸ್ಥಳಾವಕಾಶದ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು. ಅವುಗಳಿಗೆ ನೀರುಣಿಸುವ ಮತ್ತು ನಿರ್ವಹಿಸುವ ಬಗ್ಗೆ ಖಾತ್ರಿ ಪಡಿಸಬೇಕು.ನಗರ ಹೊರವಲಯದ ಸಿರನೂರ ಬಳಿಯಿರುವ ಅರಣ್ಯ ಇಲಾಖೆಯ ಸಸ್ಯಕ್ಷೇತ್ರದಲ್ಲಿ ವಿವಿಧ ಬಗೆಯ ಸಸಿಗಳು ಲಭ್ಯ ಇವೆ. ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಅರಣ್ಯಾಧಿಕಾರಿಗಳು ಇಲ್ಲಿಯ ಶರಣಬಸವೇಶ್ವರ ಗುಡಿ ರಸ್ತೆಯ ಜಿಲ್ಲಾ ನ್ಯಾಯಾಲಯ ಬಳಿಯ ತಮ್ಮ ಇಲಾಖೆ ಕಚೇರಿ ಆವರಣದಲ್ಲೇ ಸಸಿಗಳ ಮಾರಾಟ ಮತ್ತು ಪ್ರದರ್ಶನ ಕೈಗೊಂಡಿದ್ದಾರೆ. 

‘ಪರಿಸರ ದಿನದಂದು ಮಾತ್ರವೇ ಸಸಿಗಳನ್ನು ನೆಟ್ಟರೆ ಸಾಲದು. ಸಸಿಗಳ ಮೇಲಿನ ಕಾಳಜಿ ಮತ್ತು ಪೋಷಣೆ ಅಭಿಯಾನದ ಸ್ವರೂಪ
ಪಡೆಯಬೇಕು. ಜನ್ಮದಿನ, ವಿವಾಹ ವಾರ್ಷಿಕೋತ್ಸವ, ಸಂಘಸಂಸ್ಥೆಗಳ ಕಾರ್ಯಕ್ರಮದಲ್ಲೂ ಸಸಿಗಳನ್ನು ನೆಡುವಂತಹ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಇದು ಹಂತಹಂತವಾಗಿ ಪ್ರದೇಶದ ಹಸಿರೀಕರಣಕ್ಕೂ ಪೂರಕವಾಗುತ್ತದೆ’ ಎನ್ನುತ್ತಾರೆ ಕಲಬುರ್ಗಿ ವಲಯ ಅರಣ್ಯಾಧಿಕಾರಿ ಗುಂಡು ಸಿಂಗ್. 

‘ದೂರದ ಪ್ರದೇಶದಲ್ಲಿ ಸಸಿಗಳನ್ನು ನೆಡುವುದಕ್ಕಿಂತ ಮನೆ, ಕಚೇರಿ ಅಥವಾ ಶಾಲಾ–ಕಾಲೇಜು ಬಳಿ ನೆಡಲು ಪ್ರಥಮ ಆದ್ಯತೆ ನೀಡಬೇಕು. ಸಸಿಗಳಿಗೆ ಪ್ರತಿದಿನವೂ ನೀರು ಹಾಕಬಹುದು, ಅವುಗಳಿಗೆ ಹಾನಿಯಾಗದಂತೆ ತಡೆಯಬಹುದು ಮತ್ತು ಪುಟ್ಟದಾದ ಉದ್ಯಾನ ಅಭಿವೃದ್ಧಿಪಡಿಸಬಹುದು. ಎಲ್ಲೆಡೆ ಗಿಡ, ಮರ ಬೆಳೆದಲ್ಲಿ ವಾತಾವರಣ ಹಿತರಕವಾಗಿರುತ್ತದೆ. ಮಾಲಿನ್ಯ ತಡೆಯಬಹುದು’ ಎಂದರು.

‘ಸಸಿಗಳನ್ನು ನೆಡಲು ಅರಣ್ಯ ಇಲಾಖೆ ವತಿಯಿಂದ ಮಾರ್ಗದರ್ಶನ ನೀಡಲಾಗುವುದು. ಶಾಲಾಕಾಲೇಜಿನ ವಾರ್ಷಿಕೋತ್ಸವ ಅಥವಾ ಇನ್ನಿತರ ಕಾರ್ಯಕ್ರಮಗಳಲ್ಲಿ  ಪರಿಸರ ಸಂರಕ್ಷಣೆ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಲ್ಲಿ, ಅರಣ್ಯ ಇಲಾಖೆಯಿಂದ ಸಹಕಾರ ನೀಡಲಾಗುವುದು’ ಎಂದು ಅವರು ಮಾಹಿತಿ ನೀಡಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !