ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಸಾಧಕರು 2023 | ವಿಜಯ್‌ ನಿಶಾಂತ್‌ -ಮರಗಳಿಗೆ ಚಿಕಿತ್ಸೆ ನೀಡುವ ವೈದ್ಯ

Last Updated 1 ಜನವರಿ 2023, 4:24 IST
ಅಕ್ಷರ ಗಾತ್ರ

'ಪ್ರಜಾವಾಣಿ' ಪಾಲಿಗಿದು ಅಮೃತ ಮಹೋತ್ಸವದ ವರ್ಷ. 75 ವರ್ಷಗಳ ಹಾದಿಯಲ್ಲಿ ಜನಮುಖಿಯಾಗಿರುವ ಪತ್ರಿಕೆ, ನಮ್ಮ ನಡುವಿನ ಪ್ರತಿಭಾವಂತರನ್ನು ಗುರುತಿಸುವ ಕೆಲಸವನ್ನೂ ಲಾಗಾಯ್ತಿನಿಂದ ಮಾಡುತ್ತಾ ಬಂದಿದೆ. 2020ರಿಂದ ಪ್ರತಿವರ್ಷ ಆಯಾ ಇಸವಿಯ ಕೊನೆಯ ಎರಡು ಅಂಕಿಗಳಿಗೆ ಹೊಂದುವಷ್ಟು ಸಂಖ್ಯೆಯ ಸಾಧಕರನ್ನು ಆಯ್ಕೆ ಮಾಡಿ, ಸನ್ಮಾನಿಸುತ್ತಿರುವುದೇ ಇದಕ್ಕೆ ಸಾಕ್ಷಿ. ಶಿಕ್ಷಣ, ಸಮಾಜಸೇವೆ, ವಿಜ್ಞಾನ, ಕ್ರೀಡೆ, ಸಾಹಿತ್ಯ–ಕಲೆ–ಮನರಂಜನೆ, ಪರಿಸರ, ಉದ್ಯಮ, ಸಂಶೋಧನೆ, ಆಡಳಿತ, ಕನ್ನಡ ಕೈಂಕರ್ಯ ಹೀಗೆ ಹಲವು ಕ್ಷೇತ್ರಗಳಲ್ಲಿ ತಮ್ಮಷ್ಟಕ್ಕೆ ತಾವು ಮುಗುಮ್ಮಾಗಿ ಸೇವೆ ಸಲ್ಲಿಸುತ್ತಿರುವವರನ್ನು 23 ಸಾಧಕರನ್ನು 2023ರ ಹೊಸವರ್ಷಕ್ಕೆ ಸಾಂಕೇತಿಕವಾಗಿ ಮಾಡಲಾಗಿದೆ. ಸಾಧಕರ ಕಿರು ಪರಿಚಯವನ್ನು ಇಲ್ಲಿ ನೀಡಲಾಗಿದ್ದು, ಅವರ ಹೆಜ್ಜೆಗುರುತುಗಳು ಈ ಅಕ್ಷರಚೌಕಟ್ಟನ್ನೂ ಮೀರಿದ್ದು. ಹೊಸ ವರ್ಷವನ್ನು ಈ ಸಾಧಕರೊಟ್ಟಿಗೆ ಬರಮಾಡಿಕೊಳ್ಳುವುದಕ್ಕೆ ಪತ್ರಿಕಾ ಬಳಗ ಹರ್ಷಿಸುತ್ತದೆ.

****

ಹೆಸರು: ವಿಜಯ್‌ ನಿಶಾಂತ್‌

ವೃತ್ತಿ: ಪರಿಸರ ಕಾರ್ಯಕರ್ತ

ಸಾಧನೆ: ನಗರ ಸಂರಕ್ಷಣೆ ಕಾಯಕ. ಪ್ರಮುಖವಾಗಿ ಮರಗಳ ರಕ್ಷಣೆ ಹಾಗೂ ಗಿಡಮರಗಳ ರೋಗಕ್ಕೆ ಚಿಕಿತ್ಸೆ ನೀಡುವ ‘ಟ್ರೀ ಡಾಕ್ಟರ್‌’.

ಬೆಂಗಳೂರು ಸೇರಿದಂತೆ ರಾಜ್ಯ ಹಲವು ಭಾಗಗಳಲ್ಲಿ ಮರಗಳ ಆರೈಕೆ, ರಕ್ಷಣೆ, ಪೋಷಣೆ ಹಾಗೂ ನಗರ ಅರಣ್ಯೀಕರಣ ಕಾರ್ಯದಲ್ಲಿ 2002ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ ವಿಜಯ್‌ ನಿಶಾಂತ್‌. ಬಿಬಿಎಂಪಿ ಅರಣ್ಯ ಘಟಕದಲ್ಲಿ ದಶಕಕ್ಕೂ ಹೆಚ್ಚು ಕಾಲ ಅಧಿಕೃತ ಸ್ವಯಂಸೇವಕನಾಗಿ ಕೆಲಸ ಮಾಡಿ, ನಗರ ವನ್ಯಜೀವಿಗಳ ರಕ್ಷಣೆ, ಅವುಗಳ ಪುನರ್ವಸತಿಯಲ್ಲಿ ಕೆಲಸ ಮಾಡಿದ್ದಾರೆ.

ಮಕ್ಕಳಿಗೆ ಪರಿಸರ ಹಾಗೂ ನಗರ ಅರಣ್ಯೀಕರಣದ ಬಗ್ಗೆ ಅರಿವು ಮೂಡಿಸಲು ಶಾಲೆ ಹಾಗೂ ಸಂಘಸಂಸ್ಥೆಗಳ ಮೂಲಕ ಶಾಲಾ–ಕಾಲೇಜುಗಳಲ್ಲಿ ಹಲವು ಜಾಗೃತಿ ಕಾರ್ಯಕ್ರಮ ನೀಡಿದ್ದಾರೆ. ನಗರದಲ್ಲಿ ಬುಡಮೇಲಾಗುತ್ತಿದ್ದ 6 ಸಾವಿರಕ್ಕೂ ಹೆಚ್ಚು ಮರಗಳನ್ನು ಹೋರಾಟದ ಮೂಲಕ ಅಲ್ಲಿಯೇ ಉಳಿಸಿದ್ದಾರೆ. ಇದರ ಜೊತೆಗೆ, ಅಭಿವೃದ್ಧಿ ಕಾಮಗಾರಿಯಿಂದ ನಾಶವಾಗುವ ಬೃಹತ್‌ ಮರಗಳನ್ನು ಬುಡಸಮೇತ ಬೇರೆಡೆಗೆ ಸ್ಥಳಾಂತರಿಸಿ, ಮರುಜೀವ ನೀಡಿದ್ದಾರೆ.

ನಗರದ ಹಲವು ಭಾಗಗಳಲ್ಲಿ ಮರ–ಗಿಡಗಳಲ್ಲಿರುವ ಸಮಸ್ಯೆಯನ್ನು ಅರಿತು ಅವುಗಳನ್ನು ಶುದ್ಧ ಮಾಡಿ, ಔಷಧ ನೀಡಿದ್ದಾರೆ ವಿಜಯ್‌. ಈ ಕಾಯಕದಿಂದ ಅವರಿಗೆ ಭಾರತದ ಪ್ರಥಮ ಹಾಗೂ ಏಕೈಕ ‘ಟ್ರೀ ಡಾಕ್ಟರ್‌’ ಎಂಬ ಖ್ಯಾತಿಯೂ ಬಂದಿದೆ. ನಾಲ್ಕು ಸದಸ್ಯರ ತಂಡದ ವೃಕ್ಷ ಪ್ರತಿಷ್ಠಾನದ ವತಿಯಿಂದ ಜಯನಗರ, ಪಟ್ಟಾಭಿರಾಮನಗರ, ಬೈರಸಂದ್ರದಲ್ಲಿರುವ ಎಲ್ಲ ಮರಗಳ ಸಮೀಕ್ಷೆ ಮಾಡಿ, ಪ್ರತಿಯೊಂದು ಮರವನ್ನು ‘ಟ್ರೀ ಮ್ಯಾಪಿಂಗ್‌’ನಲ್ಲಿ ಅಳವಡಿಸಿ, ಮಾಹಿತಿ ಒದಗಿಸಿದ್ದಾರೆ. ರಾಜ್ಯದ ಪ್ರಥಮ ‘ವೃಕ್ಷ ಸಮಿತಿ’ಯ ಸದಸ್ಯರೂ ಆಗಿದ್ದರು.

ಬನ್ನೇರುಘಟ್ಟ ಅರಣ್ಯ ವ್ಯಾಪ್ತಿಯಲ್ಲಿ ಅಕ್ರಮ ಕ್ವಾರಿಗೆ ತಡೆ, ಹುಬ್ಬಳ್ಳಿ–ಅಂಕೋಲ ರೈಲ್ವೆ ಯೋಜನೆಯಿಂದಾಗುವ ಪರಿಣಾಮದ ಅರಿವು, ಹೆಸರಘಟ್ಟವನ್ನು ಮೀಸಲು ಸಂರಕ್ಷಿತ ಪ್ರದೇಶವಾಗಿಸುವ ಹೋರಾಟದಲ್ಲಿ ಮುಂದಿದ್ದಾರೆ ವಿಜಯ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT