ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಸಾಧಕರು 2023 | ಚಂದ್ರಶೇಖರ್ - ಆಟ, ಪಾಠ, ಹಸಿರು ನೋಟ

Last Updated 1 ಜನವರಿ 2023, 5:20 IST
ಅಕ್ಷರ ಗಾತ್ರ

'ಪ್ರಜಾವಾಣಿ' ಪಾಲಿಗಿದು ಅಮೃತ ಮಹೋತ್ಸವದ ವರ್ಷ. 75 ವರ್ಷಗಳ ಹಾದಿಯಲ್ಲಿ ಜನಮುಖಿಯಾಗಿರುವ ಪತ್ರಿಕೆ, ನಮ್ಮ ನಡುವಿನ ಪ್ರತಿಭಾವಂತರನ್ನು ಗುರುತಿಸುವ ಕೆಲಸವನ್ನೂ ಲಾಗಾಯ್ತಿನಿಂದ ಮಾಡುತ್ತಾ ಬಂದಿದೆ. 2020ರಿಂದ ಪ್ರತಿವರ್ಷ ಆಯಾ ಇಸವಿಯ ಕೊನೆಯ ಎರಡು ಅಂಕಿಗಳಿಗೆ ಹೊಂದುವಷ್ಟು ಸಂಖ್ಯೆಯ ಸಾಧಕರನ್ನು ಆಯ್ಕೆ ಮಾಡಿ, ಸನ್ಮಾನಿಸುತ್ತಿರುವುದೇ ಇದಕ್ಕೆ ಸಾಕ್ಷಿ. ಶಿಕ್ಷಣ, ಸಮಾಜಸೇವೆ, ವಿಜ್ಞಾನ, ಕ್ರೀಡೆ, ಸಾಹಿತ್ಯ–ಕಲೆ–ಮನರಂಜನೆ, ಪರಿಸರ, ಉದ್ಯಮ, ಸಂಶೋಧನೆ, ಆಡಳಿತ, ಕನ್ನಡ ಕೈಂಕರ್ಯ ಹೀಗೆ ಹಲವು ಕ್ಷೇತ್ರಗಳಲ್ಲಿ ತಮ್ಮಷ್ಟಕ್ಕೆ ತಾವು ಮುಗುಮ್ಮಾಗಿ ಸೇವೆ ಸಲ್ಲಿಸುತ್ತಿರುವವರನ್ನು 23 ಸಾಧಕರನ್ನು 2023ರ ಹೊಸವರ್ಷಕ್ಕೆ ಸಾಂಕೇತಿಕವಾಗಿ ಮಾಡಲಾಗಿದೆ. ಸಾಧಕರ ಕಿರು ಪರಿಚಯವನ್ನು ಇಲ್ಲಿ ನೀಡಲಾಗಿದ್ದು, ಅವರ ಹೆಜ್ಜೆಗುರುತುಗಳು ಈ ಅಕ್ಷರಚೌಕಟ್ಟನ್ನೂ ಮೀರಿದ್ದು. ಹೊಸ ವರ್ಷವನ್ನು ಈ ಸಾಧಕರೊಟ್ಟಿಗೆ ಬರಮಾಡಿಕೊಳ್ಳುವುದಕ್ಕೆ ಪತ್ರಿಕಾ ಬಳಗ ಹರ್ಷಿಸುತ್ತದೆ.

****

ಹೆಸರು : ಎಚ್‌.ಸಿ. ಚಂದ್ರಶೇಖರ್

ವೃತ್ತಿ : ಸರ್ಕಾರಿ ಶಾಲೆ ಶಿಕ್ಷಕ

ಸಾಧನೆ : ಪರಿಸರ ಸಂರಕ್ಷಣೆ

ಎಚ್.ಸಿ. ಚಂದ್ರಶೇಖರ್ ಚನ್ನಪಟ್ಟಣ ತಾಲ್ಲೂಕಿನ ಇಗ್ಗಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಸ್ವಂತ ಖರ್ಚಿನಲ್ಲಿ ಶಾಲಾ ಆವರಣದಲ್ಲಿ ಗಿಡ, ಮರಗಳನ್ನು ಬೆಳೆಸುತ್ತಾ ವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುತ್ತಾ ‘ಪರಿಸರ ಪ್ರೇಮಿ ಶಿಕ್ಷಕ’ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಅವರ ಹುಟ್ಟೂರು ತಾಲ್ಲೂಕಿನ ಹರೂರು. ಶಾಲಾ ಆವರಣದ ಸುಮಾರು 10 ಗುಂಟೆ ಜಮೀನಿನಲ್ಲಿ ಪುಟ್ಟದೊಂದು ಕಾಡು ಹಾಗೂ ಕೈತೋಟ ನಿರ್ಮಿಸಿರುವುದು ಅವರ ಹಿರಿಮೆ. ಅಲ್ಲಿ ನೂರಾರು ಜಾತಿಯ ಮರಗಳನ್ನು ಬೆಳೆಸಿದ್ದಾರೆ. ಔಷಧಿ ಗಿಡಗಳನ್ನು ನೆಟ್ಟಿದ್ದಾರೆ. ನೀರಿನ ಇಂಗು ಗುಂಡಿಗಳನ್ನು ನಿರ್ಮಿಸಿದ್ದಾರೆ. ಮಳೆ ನೀರು ಸಂಗ್ರಹಕ್ಕೂ ಒತ್ತು ನೀಡಿದ್ದಾರೆ. ಹಸಿರೆಲೆ ಹಾಗೂ ಒಣಎಲೆ ಗೊಬ್ಬರ ತಯಾರಿಕೆ ಘಟಕ ನಿರ್ಮಿಸಿದ್ದಾರೆ. ಹೂ ಗಿಡಗಳು, ಸೊಪ್ಪು, ತರಕಾರಿ ಬೆಳೆಸಿ ಇತರರಿಗೆ ಮಾದರಿಯಾಗಿದ್ದಾರೆ. ಶಾಲೆಯ ನರ್ಸರಿಯಲ್ಲಿ ಬೆಳೆಸಿದ್ದ 500ಕ್ಕೂ ಹೆಚ್ಚು ವಿವಿಧ ಜಾತಿಯ ಗಿಡಗಳನ್ನು ತಾಲ್ಲೂಕಿನ ಹಲವು ಶಾಲೆಗಳಿಗೆ ಉಚಿತವಾಗಿ ಹಂಚಿ ಪರಿಸರ ಪ್ರೇಮ ಮೆರೆದಿರುವುದು ಅವರ ಹೆಗ್ಗಳಿಕೆ. ಅವರ ಪರಿಸರ ಪ್ರೇಮವನ್ನು ಮೆಚ್ಚಿ 2019ರಲ್ಲಿ ಶಾಲೆಗೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಪರಿಸರ ಇಲಾಖೆಯಿಂದ ‘ಹಸಿರು ಶಾಲೆ’ ಪ್ರಶಸ್ತಿ, ವಂಡರ್ ಲಾ ವತಿಯಿಂದ ‘ಗ್ರೀನ್ ಸ್ಕೂಲ್’ ಅವಾರ್ಡ್ ದೊರೆತಿದೆ.

‘ಶಿಕ್ಷಣ ನೀಡುವುದಷ್ಟೇ ಶಿಕ್ಷಕರ ಕೆಲಸವಾಗಬಾರದು. ಅವರಲ್ಲಿ ಪರಿಸರದ ಬಗ್ಗೆ ಕಾಳಜಿ ಬೆಳೆಸಬೇಕಾದುದು ಎಲ್ಲರ ಕರ್ತವ್ಯ’ ಎಂಬುದು ಚಂದ್ರಶೇಖರ್ ನಂಬಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT