ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಧು, ಸೈನಾ ನೆಹ್ವಾಲ್‌ಗೆ ಸುಲಭ ಗೆಲುವು

Last Updated 11 ಏಪ್ರಿಲ್ 2018, 19:40 IST
ಅಕ್ಷರ ಗಾತ್ರ

ಗೋಲ್ಡ್‌ ಕೋಸ್ಟ್‌ (ಪಿಟಿಐ): ಭಾರತದ ಪಿ.ವಿ.ಸಿಂಧು, ಸೈನಾ ನೆಹ್ವಾಲ್‌ ಮತ್ತು ಕಿದಂಬಿ ಶ್ರೀಕಾಂತ್‌ ಅವರು ಕಾಮನ್‌ವೆಲ್ತ್‌ ಕ್ರೀಡಾಕೂಟದ
ಬ್ಯಾಡ್ಮಿಂಟನ್‌ನಲ್ಲಿ ಪ್ರೀ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಕ್ಯಾರರಾ ಕ್ರೀಡಾ ಸಂಕೀರ್ಣದಲ್ಲಿ ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಪ್ರಥಮ ಸುತ್ತಿನ ಹಣಾಹಣಿಯಲ್ಲಿ ಸೈನಾ 21–3, 21–1ರಲ್ಲಿ ದಕ್ಷಿಣ ಆಫ್ರಿಕಾದ ಎಲಿಸೆ ಡಿವಿಲಿಯರ್ಸ್‌ ಅವರನ್ನು ಪರಾಭವಗೊಳಿಸಿದರು. ಈ ಹೋರಾಟ 18 ನಿಮಿಷ ನಡೆಯಿತು.

ಮಿಶ್ರ ತಂಡ ವಿಭಾಗದಲ್ಲಿ ಭಾರತ ಚಿನ್ನ ಗೆಲ್ಲುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಸೈನಾ, ಸಿಂಗಲ್ಸ್‌ನಲ್ಲೂ ಮೋಡಿ ಮಾಡಿದರು.

ಮೊದಲ ಗೇಮ್‌ನಲ್ಲಿ ಚುರುಕಿನ ಸರ್ವ್‌ ಮತ್ತು ಆಕರ್ಷಕ ಬೇಸ್‌ಲೈನ್‌ ಹೊಡೆತಗಳ ಮೂಲಕ ಎದುರಾಳಿಯನ್ನು ತಬ್ಬಿಬ್ಬುಗೊಳಿಸಿದ ಅವರು ಏಕಪಕ್ಷೀಯವಾಗಿ ಗೇಮ್‌ ಕೈವಶ ಮಾಡಿಕೊಂಡರು.

ಎರಡನೆ ಶ್ರೇಯಾಂಕಿತೆ ಸೈನಾ, ಎರಡನೆ ಗೇಮ್‌ನಲ್ಲೂ ಪಾರಮ್ಯ ಮೆರೆದರು. ಚುರುಕಿನ ಡ್ರಾಪ್‌ ಮತ್ತು ಮನಮೋಹಕ ಕ್ರಾಸ್‌ಕೋರ್ಟ್‌ ಹೊಡೆತಗಳ ಮೂಲಕ ಪಾಯಿಂಟ್ಸ್‌ ಕಲೆಹಾಕಿದ ಅವರು ಎದುರಾಳಿಗೆ ಯಾವ ಹಂತದಲ್ಲೂ ಪುಟಿದೇಳಲು ಅವಕಾಶ ನೀಡಲಿಲ್ಲ. ಸೈನಾ ಅವರ ರ‍್ಯಾಕೆಟ್‌ನಿಂದ ಸಿಡಿಯುತ್ತಿದ್ದ ಮಿಂಚಿನ ಸ್ಮ್ಯಾಷ್‌ಗಳನ್ನು ರಿಟರ್ನ್‌ ಮಾಡಲು ಪ್ರಯಾಸಪಟ್ಟ ಡಿವಿಲಿಯರ್ಸ್‌ ಸುಲಭವಾಗಿ ಸೋಲೊ‍ಪ್ಪಿಕೊಂಡರು. ಎರಡನೆ ಗೇಮ್‌ನಲ್ಲಿ ದಕ್ಷಿಣ ಆಫ್ರಿಕಾದ ಆಟಗಾರ್ತಿ ಒಂದು ಪಾಯಿಂಟ್‌ ಕಲೆಹಾಕಲಷ್ಟೇ ಶಕ್ತರಾದರು.

ಸಿಂಗಲ್ಸ್‌ ವಿಭಾಗದ ಮತ್ತೊಂದು ಪಂದ್ಯದಲ್ಲಿ ಸಿಂಧು 21–6, 21–3ರಲ್ಲಿ ಫಿಜಿ ದೇಶದ ಆ್ಯಂಡ್ರಾ ವೈಟ್‌ಸೈಡ್‌ ಅವರನ್ನು ಸೋಲಿಸಿದರು.

ಕೂಟದಲ್ಲಿ ಅಗ್ರಶ್ರೇಯಾಂಕ ಹೊಂದಿರುವ ಸಿಂಧು ಎರಡೂ ಗೇಮ್‌ಗಳಲ್ಲೂ ಮೇಲುಗೈ ಸಾಧಿಸಿ ಎದುರಾಳಿಯ ಸವಾಲು ಮೀರಿದರು.

ಋತ್ವಿಕಾ ಶಿವಾನಿ 21–5, 21–7ರ ನೇರ ಗೇಮ್‌ಗಳಿಂದ ಘಾನಾದ ಗ್ರೇಸ್‌ ಅಟಿಪಕಾ ವಿರುದ್ಧ ಗೆದ್ದರು.

ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಭರವಸೆಯಾಗಿರುವ ಕೆ.ಶ್ರೀಕಾಂತ್‌ ಕೂಡ ಶುಭಾರಂಭ ಮಾಡಿದರು.

ಮೊದಲ ಸುತ್ತಿನ ಹೋರಾಟದಲ್ಲಿ ಶ್ರೀಕಾಂತ್‌ 21–13, 21–10ರಲ್ಲಿ ಮಾರಿಷಸ್‌ನ ಆತೀಶ್‌ ಲುಬಾಹ್‌ ಅವರನ್ನು ಮಣಿಸಿದರು.

ಎಚ್‌.ಎಸ್‌.ಪ್ರಣಯ್‌ 21–14, 21–6ರಿಂದ ಮಾರಿಷಸ್‌ನ ಜೀನ್ ಪಾಲ್‌ ಕ್ರಿಸ್ಟೋಫರ್‌ ಅವರನ್ನು ಪರಾಭವಗೊಳಿಸಿದರು.

ಮೊದಲ ಗೇಮ್‌ನಲ್ಲಿ ಎದುರಾಳಿ ಯಿಂದ ಕಠಿಣ ಪೈಪೋಟಿ ಎದುರಿಸಿದ ಪ್ರಣಯ್‌, ಎರಡನೆ ಗೇಮ್‌ನಲ್ಲಿ ಆಕ್ರಮಣಕಾರಿ ಆಟ ಆಡಿ ಕ್ರಿಸ್ಟೋಫರ್‌ ಸವಾಲು ಮೀರಿ ನಿಂತರು.

ಮಿಶ್ರ ಡಬಲ್ಸ್‌ ವಿಭಾಗದ ಪಂದ್ಯ ದಲ್ಲಿ ಕರ್ನಾಟಕದ ಅಶ್ವಿನಿ ಪೊನ್ನಪ್ಪ ಮತ್ತು ಸಾತ್ವಿಕ್‌ ಸಾಯಿರಾಜ್‌ 21–17, 21–16ರಿಂದ ಇಂಗ್ಲೆಂಡ್‌ನ ಬೆನ್‌ ಲೇನ್‌ ಮತ್ತು ಜೆಸ್ಸಿಕಾ ಪುಗ್‌ ಅವರನ್ನು ಪರಾಭವಗೊಳಿಸಿದರು.

* ಆ್ಯಂಡ್ರಾ ವಿರುದ್ಧ ಸುಲಭವಾಗಿ ಗೆದ್ದಿದ್ದೇನೆ. ಮುಂದಿನ ಪಂದ್ಯಗಳಲ್ಲೂ ಗುಣಮಟ್ಟದ ಆಟ ಆಡುವ ಗುರಿ ಹೊಂದಿದ್ದೇನೆ.

–ಪಿ.ವಿ.ಸಿಂಧು, ಭಾರತದ ಆಟಗಾರ್ತಿ

* ಮಿಶ್ರ ತಂಡ ವಿಭಾಗದಲ್ಲಿ ಆಡಿದ ಎಲ್ಲಾ ಪಂದ್ಯಗಳಲ್ಲೂ ಗೆದ್ದಿದ್ದೆ. ಹೀಗಾಗಿ ಮೊದಲ ಸುತ್ತಿನಲ್ಲಿ ವಿಶ್ವಾಸದಿಂದ ಹೋರಾಡಲು ಸಾಧ್ಯವಾಯಿತು.

– ಸೈನಾ ನೆಹ್ವಾಲ್‌, ಭಾರತದ ಆಟಗಾರ್ತಿ

ಸೈನಾ–ಎಲಿಸೆ ಡಿವಿಲಿಯರ್ಸ್‌ ನಡುವಣ ಹೋರಾಟ 18 ನಿಮಿಷ ನಡೆಯಿತು

ಗಾಯಗೊಂಡಿದ್ದ ಸಿಂಧು, ಮಿಶ್ರ ತಂಡ ವಿಭಾಗದಲ್ಲಿ ಆಡಿರಲಿಲ್ಲ

ಪುರುಷರ ವಿಭಾಗದಲ್ಲಿ ಶ್ರೀಕಾಂತ್‌ ಅಗ್ರಶ್ರೇಯಾಂಕ ಹೊಂದಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT