ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ನೀರು ಇಂಗಿಸಲು ‘ನಂದಗಡ’ ಹೆಜ್ಜೆ

ಇಂಗು ಗುಂಡಿ ನಿರ್ಮಾಣ, ಮಲಿನ ನೀರು ನಿರ್ವಹಣೆಗೆ ಕ್ರಮ
Last Updated 21 ಜೂನ್ 2020, 19:30 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲ್ಲೂಕಿನ ನಂದಗಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಳೆ ನೀರು ಸಂಗ್ರಹ ಮತ್ತು ಕೊಳಚೆ ನೀರು ನಿರ್ವಹಣಾ ಘಟಕಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಉತ್ತಮ ಮಳೆಯಾಗುತ್ತದೆ. ಇದನ್ನು ಸಂಗ್ರಹಿಸಿ ಇಂಗುವಂತೆ ಮಾಡುವ ಮೂಲಕ ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಯೋಜಿಸಲಾಗಿದೆ. ಪಂಚಾಯಿತಿಯಿಂದಲೇ ಮೊದಲ ಹೆಜ್ಜೆ ಇಟ್ಟಿದ್ದು, ಆವರಣದಲ್ಲಿ ಇಂಗು ಗುಂಡಿಯನ್ನು ನಿರ್ಮಿಸಲಾಗಿದೆ. ಇದರಿಂದಾಗಿ ಸಮೀಪದ ಕೊಳವೆಬಾವಿಗಳಲ್ಲಿ ದೊರೆಯುವ ನೀರಿನ ಪ್ರಮಾಣದಲ್ಲಿ ಜಾಸ್ತಿಯಾಗಿದೆ. ವ್ಯರ್ಥವಾಗಿ ಹರಿದು ಹೋಗುತ್ತಿದ್ದ ನೀರನ್ನು ಹಿಡಿದು ನಿಲ್ಲಿಸಿ, ಬಳಸಿಕೊಳ್ಳುವ ಉದ್ದೇಶ ಇಲ್ಲಿ ಈಡೇರಿದೆ.

ಅಂತರ್ಜಲ ಮಟ್ಟ ವೃದ್ಧಿಸಲು ಅನುಕೂಲ:‘ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾರೇ ಹೊಸದಾಗಿ ಕಟ್ಟಡ ನಿರ್ಮಿಸಲು ಅನುಮತಿಗಾಗಿ ಅರ್ಜಿ ಸಲ್ಲಿಸುವಾಗ, ಮಳೆ ನೀರು ಸಂಗ್ರಹ ಅಳವಡಿಕೆ ಮಾಡಿಕೊಂಡು ಪ್ರಮಾಣಪತ್ರ ನೀಡಬೇಕು ಎಂದು ಕಟ್ಟುನಿಟ್ಟಾಗಿ ತಿಳಿಸಲಾಗಿದೆ. ಮಳೆ ನೀರು ಸಂಗ್ರಹಿಸುವುದರಿಂದ ಆ ಕುಟುಂಬದವರಿಗೂ ಅನುಕೂಲ ಆಗುತ್ತದೆ. ಅದನ್ನು ಮರು ಬಳಕೆ ಮಾಡಿಕೊಳ್ಳಬಹುದಾಗಿದೆ. ಆ ಭಾಗದಲ್ಲಿ ಅಂತರ್ಜಲ ಮಟ್ಟ ಕುಸಿಯದಂತೆ ನೋಡಿಕೊಳ್ಳುವುದಕ್ಕೂ ಸಹಕಾರಿಯಾಗಿದೆ. ಬೇರೆಯವರಿಗೆ ಹೇಳುವ ಮೊದಲು ನಾವು ಮಾಡಬೇಕಲ್ಲವೇ? ಹೀಗಾಗಿ, ಪಂಚಾಯಿತಿ ಆವರಣದಲ್ಲಿ ಇಂಗು ಗುಂಡಿ ನಿರ್ಮಿಸಿದ್ದು, ಮಳೆ ನೀರಿನ ಸದ್ಬಳಕೆಗೆ ಕ್ರಮ ಕೈಗೊಂಡಿದ್ದೇವೆ’ ಎಂದು ಪಿಡಿಒ ಕೆ.ಎಸ್. ಗಣೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪಂಚಾಯಿತಿ ವ್ಯಾಪ್ತಿಯಲ್ಲಿ 5 ಸರ್ಕಾರಿ ಶಾಲೆಗಳು, 11 ಅಂಗನವಾಡಿಗಳು ಹಾಗೂ ಒಂದು ಆಸ್ಪತ್ರೆ ಬರುತ್ತವೆ. ಮೊದಲಿಗೆ ಅಲ್ಲಿ ಮಳೆ ನೀರು ಸಂಗ್ರಹ ಹಾಗೂ ಕೊಳಚೆ ನೀರು ನಿರ್ವಹಣಾ ಘಟಕ ನಿರ್ಮಿಸಲು ಯೋಜಿಸಲಾಗಿದೆ. ಇದಕ್ಕಾಗಿ 15ನೇ ಹಣಕಾಸು ಯೋಜನೆಯ ಅನುದಾನ ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಬಳಸಿಕೊಳ್ಳಲು ಯೋಜಿಸಲಾಗಿದೆ. ಇದರಿಂದ ಸ್ಥಳೀಯರಿಗೆ ಉದ್ಯೋಗ ಒದಗಿಸುವ ಜೊತೆಗೆ ಸರ್ಕಾರಿ ಆಸ್ತಿ ನಿರ್ಮಾಣವೂ ಸಾಧ್ಯವಾಗಲಿದೆ. ಕೊಳಚೆ ನೀರನ್ನು ಸಂಸ್ಕರಣೆ ಮಾಡಿದ ನಂತರ ಉದ್ಯಾನ ನಿರ್ವಹಣೆ ಮೊದಲಾದವುಗಳಿಗೆ ಮರು ಬಳಕೆಗೆ ಅವಕಾಶವಿದೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT