ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನದಿಯ ಹಕ್ಕು ಮತ್ತು ನೀರಿನ ನ್ಯಾಯ

Last Updated 14 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಹವಾಮಾನ ತುರ್ತು ಪರಿಸ್ಥಿತಿ ಎದುರಾಗಿರುವ ಪ್ರಸಕ್ತ ದಿನಗಳಲ್ಲಿ ಪ್ರಕೃತಿಯೊಂದಿಗಿನ ನಮ್ಮ ಸಂಬಂಧ ನಾಜೂಕಿನದ್ದೂ, ಅಂತಃಕರಣದ್ದೂ ಆಗಬೇಕಾದ ಅನಿವಾರ್ಯತೆಯಿದೆ. ದೈನಂದಿನ ಅವಶ್ಯಕತೆ ಮತ್ತು ಅಭಿವೃದ್ಧಿಯ ಹೊಡೆತಕ್ಕೆ ಸಿಲುಕಿ ನೈಸರ್ಗಿಕ ಸಂಪತ್ತು ಚಿಂದಿಯಾಗಿ, ಏರುತ್ತಿರುವ ಜನಸಂಖ್ಯೆಗೆ ಉಸಿರಾಡಲು ಶುದ್ಧಗಾಳಿ, ಕುಡಿಯಲು ಶುದ್ಧ ನೀರು ಸಿಗದೆ ಜಗತ್ತೇ ತಲ್ಲಣಿಸುತ್ತಿದೆ.

ಇನ್ನು ಒಂದೇ ತಿಂಗಳು. ನೀರಿನ ಲಭ್ಯತೆ ಕಡಿಮೆಯಾಗಿ ಬೆಳೆಗಳು ಒಣಗುತ್ತವೆ. ಸಮುದ್ರಕ್ಕೆ ಸೇರುವ ಮುಂಚೆಯೇ ಅನೇಕ ನದಿಗಳು ಒಣಗುತ್ತವೆ. ಪ್ರತಿಯೊಂದು ಜೀವಿಯ ಬದುಕಿನ ಮೂಲಾಧಾರವೆನಿಸಿರುವ, ನಾಗರಿಕತೆಗಳನ್ನು ಹುಟ್ಟುಹಾಕಿದ, ಪೋಷಿಸಿ ಮನುಷ್ಯನಿಂದ ವಿಪರೀತ ಒತ್ತಡ ಅನುಭವಿಸುತ್ತಿರುವ ನದಿಗಳಿಗೆ ಸ್ವಚ್ಛ, ಶುದ್ಧ ಹರಿವಿನ ಹಕ್ಕಿಲ್ಲವೆ? ಪವಿತ್ರ ನದಿ ಎಂದು ದಂಡೆಯಲ್ಲಿ ಕೋಟ್ಯಂತರ ಜನರ ಕುಂಭಮೇಳ ನಡೆಸಿ ಕೃತಾರ್ಥರಾಗುತ್ತೇವೆ. ನಮ್ಮ ಪಾಪ ಕಳೆಯುತ್ತದೋ, ಇಲ್ಲವೊ? ನದಿಗಳನ್ನು ಮತ್ತಷ್ಟು ಕೊಳೆ ಮಾಡುತ್ತೇವೆ. ನದಿಗಳನ್ನು ಜೀವನದಿ ಎಂದು ವರ್ಣಿಸುತ್ತೇವೆ. ಅವುಗಳ ಜೀವ ಉಳಿದಿದೆಯೆ?

ಕೃಷಿ ಪ್ರಧಾನ ದೇಶದಲ್ಲಿ ನದಿ ನೀರಿನ ಹೆಚ್ಚಿನ ಬಳಕೆ ರೈತರು ಬೆಳೆಯುವ ಬೆಳೆಗೆ ಮೀಸಲಾಗಿರುತ್ತದೆ. ಆದರೆ, ಕೃಷಿ ಮೊದಲಿನಂತೆ ರೈತಸ್ನೇಹಿಯಾಗಿಲ್ಲ. ಅದರಿಂದ ವಿಮುಖರಾದ ಲಕ್ಷಾಂತರ ಜನರು ನಗರಗಳತ್ತ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ಅಭಿವೃದ್ಧಿಯ ದಾಪುಗಾಲಿಡುತ್ತಿರುವ ನಗರಗಳಿಗೆ ನೀರಿನ ತೀವ್ರ ಅಭಾವವಿದೆ. ಅಣೆಕಟ್ಟೆಯ ಹೆಚ್ಚಿನ ಪಾಲು ನೀರನ್ನು ರೈತರಿಗೆ ಮೀಸಲಿಡುವುದರಿಂದ ಉದ್ಯಮ–ವ್ಯವಹಾರಗಳನ್ನೇ ನೆಚ್ಚಿಕೊಂಡಿರುವ ಪಟ್ಟಣ ಪ್ರದೇಶಗಳಿಗೆ ಸಿಗಬೇಕಾದ ನೀರಿನ ಪ್ರಮಾಣ ಅತ್ಯಂತ ಕಡಿಮೆ.

ಆದರೆ, ಜನಸಂಖ್ಯೆಯ ತುತ್ತಿನಚೀಲ ತುಂಬಲು ರೈತ ಬೆಳೆ ಬೆಳೆಯಬೇಕು. ಅದಕ್ಕೆ ಹೆಚ್ಚಿನ ನೀರು ಬೇಕು. ನಗರೀಕರಣದ ಭರಾಟೆ ಜೋರಾಗಿಯೇ ಇದೆ. ಹಾಗೆಂದು ರೈತನ ಹಿತವನ್ನೇ ಕಾಯುತ್ತ ಕೂತರೆ ಉದ್ಯಮಗಳು, ನಗರಗಳು ಬದುಕುವುದು ಬೇಡವೆ? ಮಣ್ಣಿನ ಮಗ ಮತ್ತು ಯಂತ್ರ ಮಾನವರ ನಡುವಿನ ಕಿತ್ತಾಟದಲ್ಲಿ ನದಿಯು ಬಡವಾಗುತ್ತಿದೆ. ನಿಮಗಿಷ್ಟು, ಅವರಿಗಿಷ್ಟು ಎಂದು ಹೊಸ ಹಂಚಿಕೆಯ ಮಾತೆತ್ತಿದರೆ ರಕ್ತಪಾತವೇ ಆಗಬಹುದು ಎಂಬ ಆತಂಕ ತಜ್ಞರದ್ದು.

ಎಲ್ಲದಕ್ಕೂ ನದಿಯ ನೀರನ್ನೇ ಬಳಸಿಕೊಂಡು ಪ್ರತಿಯಾಗಿ ಮಾಲಿನ್ಯ ಮತ್ತು ವಿಷ ತುಂಬಿ ನದಿಗಳ ಕತ್ತು ಹಿಸುಕಿ ನಮ್ಮ ಬದುಕನ್ನೇ ನಾಶ ಮಾಡುತ್ತಿದ್ದೀರಿ ಎಂಬುದು ಉದ್ಯಮಿಗಳ ಮೇಲೆ ರೈತರ ಆರೋಪ. ನೀವೇನು ಕಮ್ಮಿ? ನಿಮ್ಮ ಹೊಲಗಳಿಗೆ ಬಳಸುವ ವಿಷಕಾರಿ ದ್ರವ್ಯಗಳಿಂದ ನೆಲ-ಜಲಮಾಲಿನ್ಯವಾಗುತ್ತಿಲ್ಲವೆ? ಎಂಬುದು ಉದ್ಯಮಿಗಳ ಪ್ರತ್ಯಾರೋಪ. ಇಬ್ಬರ ವಾದವೇನೋ ಸರಿ. ಆದರೆ, ಇಬ್ಬರಿಗೂ ನದಿಯ ನೀರು ಬೇಕು. ಹಾಗಾದರೆ ತುರ್ತಾಗಿ ಆಗಬೇಕಿರುವುದೇನು? ಲಭ್ಯತೆ ಕಡಿಮೆಯಾದಂತೆ, ನೀರು ವಿಷವಾದಂತೆ, ಅದರ ಸುತ್ತ ರಾಜಕೀಯದ ಹುತ್ತ ಬೆಳೆಯತೊಡಗುತ್ತದೆ. ವ್ಯಾಜ್ಯಗಳು ನ್ಯಾಯಾಲಯದ ಮೆಟ್ಟಿಲೇರುತ್ತವೆ.

2019ರ ‘ವರ್ಲ್ಡ್‌ ವಾಟರ್ ಪ್ರೈಜ್’ ಪಡೆದಿರುವ ದಕ್ಷಿಣ ಆಫ್ರಿಕಾದ ಜಾಕಿ ಕಿಂಗ್ ‘ನದಿಗಳನ್ನು ಮೂಲ ರೂಪದಲ್ಲಿರುವಂತೆ ಮಾಡಬೇಕು. ಅದಕ್ಕೂ ಮುಂಚೆ ನದಿಗಳ ಕಲ್ಮಷಕ್ಕೆ ಕಾರಣವಾಗುವ ಅಂಶಗಳನ್ನು ನಿರ್ಬಂಧಿಸಬೇಕು. ಅವು ಹಿಂದಿನಂತೆ ನಳನಳಿಸುತ್ತ ಹರಿದರೆ ಶುದ್ಧೀಕರಣ ತಾನಾಗಿಯೇ ಆಗುತ್ತದೆ’ ಎಂದು ಪ್ರತಿಪಾದಿಸುತ್ತಾರೆ.

ಭಾರತದ ಬಹುತೇಕ ನದಿ ದಂಡೆಗಳ ಮೇಲೆ ಕಾರ್ಖಾನೆಗಳಿವೆ; ನಗರಗಳಿವೆ. ನದಿಯ ನೀರನ್ನು ಬಳಸಿಕೊಂಡು ಅಭಿವೃದ್ಧಿ ಹೊಂದಿದ ಉದ್ಯಮಗಳು, ನಗರಗಳು ಹಿಂತಿರುಗಿ ನದಿಗೆ ತಮ್ಮ ಕೊಳೆಯನ್ನು ಸುರಿದಿವೆ. ಕೈಗಾರಿಕರಣಕ್ಕೂ ಮುಂಚೆ ನಮ್ಮ ರೈತರಿಗೆ ಹೆಚ್ಚಿನ ನೀರು ತಾನೇ ತಾನಾಗಿ ದೊರೆಯುತ್ತಿತ್ತು. ಸಣ್ಣ ನಗರ, ಊರುಗಳ ಕೊಳೆ ತೊಳೆದು ನದಿ ಮುಂದಿನ ಊರಿಗೆ ಹರಿಯುತ್ತಿತ್ತು.

ಈಗ ನಗರಗಳು ಬೆಳೆಯುತ್ತಿವೆ. ಅಲ್ಲಿನ ಜನಸಂಖ್ಯೆ ಏರುತ್ತಿದೆ. ಹೊಸ ಉದ್ಯಮಗಳು ತಲೆಎತ್ತಿ ವಿಸ್ತರಣೆಗೊಳ್ಳುತ್ತಿವೆ. ಅವರಿಗೂ ನೀರು ಬೇಕು. ಭಾರತದ ಜನಸಂಖ್ಯೆಯ ಶೇಕಡ 37ರಷ್ಟು ಜನರು ನಗರಗಳಲ್ಲಿದ್ದಾರೆ. ಅವರಿಗೆ ಸಿಗಬೇಕಾದ ಪಾಲು ಕಡಿಮೆಯಾಗಬಾರದಲ್ಲವೆ? ಎಂಬ ವಾದ ಶುರುವಾಗಿದೆ.

ಸಮಸ್ಯೆ ಇರುವುದು ನೀರಿನ ಹಂಚಿಕೆಯಲ್ಲಲ್ಲ. ಬೀಳುವ ಮಳೆಯ ನೀರನ್ನು ಹಿಡಿದಿಡುವ ವ್ಯವಸ್ಥೆಯಲ್ಲಿ. ವಾಯುಗುಣ ಬದಲಾವಣೆಯಿಂದಾಗಿ ಮಳೆಯ ಸ್ವರೂಪವೇ ಬದಲಾಗಿದೆ. ಈಗ ಮಳೆ ಬೀಳುತ್ತಿಲ್ಲ, ಬರುತ್ತಿಲ್ಲ, ಬದಲಿಗೆ ಸುರಿಯುತ್ತಿದೆ ಅಥವಾ ನುಗ್ಗುತ್ತಿದೆ. ಸಾಗರ ಸುನಾಮಿಗಳಂತೆ ನದಿ ಸುನಾಮಿಗಳೇಳುತ್ತಿವೆ. ತೀರ ಪ್ರದೇಶ, ತೀರದಂಚಿನ ಬದುಕನ್ನು ನಿರ್ದಾಕ್ಷಿಣ್ಯವಾಗಿ ಮುಳುಗಿಸುತ್ತಿರುವ ಮಳೆ ರಕ್ಕಸನ ರೂಪ ತಳೆದಿದೆ.

ಹಿಂದೆಲ್ಲಾ ಮಳೆಗಾಲವೆಂದರೆ ಇಳೆಯ ಜೀವಕಳೆ ಹೆಚ್ಚಿಸಲು ಬರುವ ಮಾಂತ್ರಿಕನೆಂಬ ಭಾವನೆಯಿತ್ತು. ಬಿರಿಬಿಟ್ಟು ಬಾಯ್ತೆರೆದ ನೆಲ ಮೊದಲ ಹನಿಯ ಸ್ಪರ್ಶವಾದೊಡನೆ ಪುಳಕಗೊಳ್ಳುತ್ತಿತ್ತು. ಹೊಸ ಜೀವಂತಿಕೆಯ ನಾದ ಹೊಮ್ಮುತ್ತಿತ್ತು. ರೈತನ ಮುಖದ ನೆರಿಗೆಗಳು ಮಾಯವಾಗಿ ಸಂಭ್ರಮದ ನಗು ಉಕ್ಕುತ್ತಿತ್ತು. ಈಗ ಈ ಚಿತ್ರಣ ಬದಲಾಗಿದೆ. ರೈತ ತಲೆ ಮೇಲೆ ಕೈ ಹೊತ್ತು ಕೂರುತ್ತಾನೆ. ಓದು-ಬರಹ ಕಲಿತವರು ತಮ್ಮ ಊರು-ಹೊಲಗಳಿಗೆ-ಕೇರಿಗಳಿಗೆ, ಅಪಾರ್ಟ್‍ಮೆಂಟ್‍ಗಳಿಗೆ ನೀರು ನುಗ್ಗಿದೆಯಾ ಎಂಬ ಆತಂಕದಲ್ಲಿ ಟಿ.ವಿ. ಹಚ್ಚಿ ಸುದ್ದಿಗಾಗಿ ಕಾಯುತ್ತಾರೆ. ಇನ್ನೆಷ್ಟು ದಿನ ಮಳೆ? ಭೂಕುಸಿತ ನಿಂತಿದೆಯಾ? ಕರೆಂಟು ಬರುತ್ತದಾ? ಎಂಬ ಪ್ರಶ್ನೆಗಳನ್ನು ಸಂಬಂಧಿಸಿದವರನ್ನು ಕೇಳುತ್ತಾರೆ. ಶಾಲೆಯ ಮಕ್ಕಳು ಇನ್ನೆಷ್ಟು ದಿನ ರಜೆ? ಎಂದು ಖಚಿತಪಡಿಸಿಕೊಳ್ಳುತ್ತಾರೆ.

ಕಳೆದ ವರ್ಷ ಸಾಮಾನ್ಯವಾಗಿ ಬೀಳುವ ಮಳೆಗಿಂತ ಸಾವಿರದಿಂದ ಮೂರು ಸಾವಿರ ಪಟ್ಟು ಮಳೆ ಸುರಿಯಿತು. ಇದರಿಂದ ಪ್ರವಾಹ ಪರಿಸ್ಥಿತಿ ಎದುರಾಯಿತು. ಬಿದ್ದ ಅರ್ಧಮಳೆಗೆ ಹೂಳು ತುಂಬಿದ ಅಣೆಕಟ್ಟುಗಳೆಲ್ಲಾ ಭರ್ತಿಯಾಗಿ, ಉಳಿದ ನೀರನ್ನು ನದಿಗೆ ಬಿಟ್ಟಾಗ ತೀರಪ್ರದೇಶದ ಜನ ನಿರ್ವಸಿತರಾದರು. ಪ್ರಾಣ ಹಾನಿಯ ಜೊತೆ ಸಾವಿರಾರು ಕೋಟಿ ರೂಪಾಯಿಯ ನಷ್ಟ ಉಂಟಾಯಿತು.

ನೀರನ್ನು ಶೇಖರಿಸಿಟ್ಟುಕೊಂಡು ಹಂತ ಹಂತವಾಗಿ ಬೆಳೆಗೆ, ಕುಡಿಯುವ ನೀರಿಗೆ ನೀಡುವ ಉದ್ದೇಶದಿಂದ ನಿರ್ಮಿಸಲಾದ ಅಣೆಕಟ್ಟುಗಳಿಂದಲೇ ಪ್ರವಾಹ ಉಂಟಾಗುತ್ತಿದೆ. ಕೊಯ್ನಾ ಜಲಾಶಯ ಅಪಾಯದ ಮಟ್ಟ ಮೀರಿ ತುಂಬಿದ್ದರಿಂದ ನದಿಗೆ ಬಿಡಲಾದ ನೀರಿನಿಂದ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿತ್ತು. ಜನ-ಜಾನುವಾರುಗಳ ಪ್ರಾಣಹರಣವಾಯಿತು. ಕೆರೆಗಳ ಏರಿ ಒಡೆದು ಊರಿಗೆ ನೀರು ನುಗ್ಗಿತು. ಮನೆ, ಫಸಲೆಲ್ಲಾ ನೀರಿನ ಪಾಲಾಗಿ ಜನ ಅಕ್ಷರಶಃ ಬೀದಿಗೆ ಬಿದ್ದರು. ಮಳೆ ತನ್ನ ರೌದ್ರಾವತಾರ ತೋರಿ ನಾನು ಹೀಗಾಗುವುದಕ್ಕೆ ನೀವೇ ಕಾರಣ ಎಂದು ಎಚ್ಚರಿಸಿತು. ನುಗ್ಗುವ ಮಳೆಯನ್ನು, ಕುಸಿಯುವ ಭೂಮಿಯನ್ನು ಕೃತಕವಾಗಿ ತಡೆಯಬಹುದೇ? ಅದು ಸಾಧ್ಯವಿರದ ಮಾತು. ಹಾಗಾದರೆ ಮುಂದೇನು?

ತುರ್ತಾಗಿ ಆಗಬೇಕಿರುವುದೇನು?

ಮೊದಲನೆಯದು ನಮ್ಮ ವ್ಯವಸಾಯ ಕ್ರಮ ತುಂಬಾ ಜಾಣತನದಿಂದ ಕೂಡಿರಬೇಕಾದ ಅಗತ್ಯವಿದೆ. ಆಹಾರದ ಕ್ರಮವೂ ಬದಲಾಗಬೇಕಿದೆ. ಹೆಚ್ಚಿನ ನೀರು ಬಯಸುವ ಭತ್ತ, ಕಬ್ಬು, ಬಾಳೆ ಬೆಳೆಯುವ ಬದಲು ಆರೋಗ್ಯ ಹೆಚ್ಚಿಸುವ, ಕಡಿಮೆ ನೀರು ಬಯಸುವ ಕಿರುಧಾನ್ಯ, ಕಾಳು, ತರಕಾರಿಗಳನ್ನು ಬೆಳೆದು ತಿನ್ನುವುದನ್ನು ರೂಢಿಸಿಕೊಳ್ಳಬೇಕು. ಔದ್ಯೋಗಿಕ ಶ್ರೀಮಂತ ರಾಷ್ಟ್ರಗಳ ಮಾದರಿಯ ಆಹಾರ ಕ್ರಮವನ್ನು ತ್ಯಜಿಸಬೇಕು. ಅತಿಹೆಚ್ಚಿನ ನೀರನ್ನು ಬಯಸುವ ಮಾಂಸ ಉತ್ಪಾದನೆಯನ್ನು ಕ್ರಮೇಣ ತ್ಯಜಿಸಬೇಕು. ಹನಿ ನೀರಾವರಿಯನ್ನೇ ಬಳಸಬೇಕೆಂಬ ಒತ್ತಾಯವೇನೂ ಇಲ್ಲ.

ಎರಡನೆಯದು ನಮ್ಮ ನಗರಗಳು ನದಿಯಿಂದ ತೆಗೆದುಕೊಂಡ ನೀರನ್ನು ನದಿಗೆ ಶುದ್ಧೀಕರಿಸಿ ಹಿಂತಿರುಗಿಸಬೇಕು. ಮಾಲಿನ್ಯ ಸೇರಿಸುವುದನ್ನು ನಿಲ್ಲಿಸಬೇಕು. ಬಳಸಿ ಬಿಸಾಡುವ ನೀರಿನ ಹನಿಯನ್ನು ಶುದ್ಧೀಕರಿಸಿ ಪುನಃ ಬಳಸಲೇಬೇಕು. ಇರುವ ಕಾನೂನನ್ನು ಪಾಲಿಸಬೇಕು.

ಕೊನೆಯದೆಂದರೆ ಬೀಳುವ ಮಳೆಯ ಪ್ರತಿ ಹನಿಯನ್ನು ಶೇಖರಿಸಲು ಯೋಜನೆ ರೂಪಿಸಬೇಕು. ಹಳ್ಳ, ಕೆರೆ, ಹೊಂಡ, ಗುಂಡಿಗಳನ್ನೆಲ್ಲ ಇನ್ನಷ್ಟು ಆಳಗೊಳಿಸಬೇಕು. ಮಳೆನೀರು ಸಂಗ್ರಹ ಪದ್ಧತಿಯನ್ನು ಕಡ್ಡಾಯಗೊಳಿಸಬೇಕು. ‌

ನಮ್ಮಲ್ಲಿ ನೀರು ಶೇಖರಿಸುವ ವಿನೂತನ ಕ್ರಾಂತಿಕಾರಿ ವಿಧಾನಗಳಿವೆ. ಅವೆಲ್ಲವನ್ನೂ ಬಳಸಿಕೊಂಡು ಎಲ್ಲಾ ಗುಂಡಿ, ಚರಂಡಿ, ನೀರಿನ ಆಕರಗಳನ್ನು ರಕ್ಷಿಸಿ ಮಳೆಯ ನೀರನ್ನು ಹಿಡಿದಿಟ್ಟು ಅಂತರ್ಜಲ ಮರುಪೂರಣಗೊಳ್ಳುವಂತೆ ಮಾಡಬೇಕು. ನೆಲಕ್ಕೆ ನೀರು ಹಿಂಗಿಸುವ ಹಸಿರು ಹುಲ್ಲಿನ ಹೊದಿಕೆಯನ್ನು ವಿಸ್ತರಿಸಬೇಕು. ಪ್ರವಾಹದ ನೀರೆಲ್ಲ ಪರಿಹಾರದ ನೀರಾಗಬೇಕು. ನಿರ್ಮಿಸಲಾಗುವ ಪ್ರತಿ ಮನೆಯೂ ಮಳೆನೀರು ಸಂಗ್ರಹ ವ್ಯವಸ್ಥೆಯನ್ನು ಹೊಂದಬೇಕು. ನದಿಗಳ ಒತ್ತುವರಿ ನಿಲ್ಲಬೇಕು. ನೀರಿನ ಸ್ಪಾಂಜ್ ಎಂದೇ ಕರೆಯಲ್ಪಡುವ ಪಶ್ಚಿಮಘಟ್ಟದ ಶೋಲಾ ಅರಣ್ಯಗಳ ರಕ್ಷಣೆಯಾಗಬೇಕು.

ನದಿಗಳು ರಾಷ್ಟ್ರೀಯ ಸಂಪತ್ತು. ದೇಶವೊಂದರ ಪ್ರಜೆಗೆ ನದಿಗಳನ್ನು ಬಳಸುವ ಹಕ್ಕಿರುವಂತೆ ಅವುಗಳನ್ನು ಶುದ್ಧವಾಗಿಡುವ ಜವಾಬ್ದಾರಿಯೂ ಇದೆ.

ಭಾರತದ ನಾಲ್ಕು ಸಾವಿರ ನದಿಗಳಲ್ಲಿ ಅರ್ಧದಷ್ಟು ಸುಸ್ಥಿತಿಯಲಿಲ್ಲ. ದೊಡ್ಡ ನದಿಗಳಾದ ಗಂಗಾ, ಮಹಾನದಿ, ನರ್ಮದಾ, ಬ್ರಹ್ಮಪುತ್ರ, ಕೃಷ್ಣಾ, ಕಾವೇರಿ, ಗೋದಾವರಿ ಮೇಲೆ ಜನಬಾಹುಳ್ಯದ ದೊಡ್ಡ ಒತ್ತಡವಿದೆ. ಹಲವು ನದಿಗಳು ಮಲಿನಗೊಂಡಿವೆ. ಪಾಪ ತೊಳೆಯುವ ಗಂಗೆಯನ್ನೇ ತೊಳೆಯಲು ಸಾವಿರಾರು ಕೋಟಿ ವ್ಯಯವಾಗುತ್ತಿದೆ. ಯಮುನಾ ನದಿಯ ನೀರು ಶುದ್ಧೀಕರಿಸಿದ ನಂತರವೂ ಕುಡಿಯಲು, ಕೃಷಿಗೆ ಬಳಸಲು ಆಗದಷ್ಟು ಮಲಿನಗೊಂಡಿದೆ. ಇರುವ ನದಿಗಳಿಗೆ ವಿಷ ಉಣಿಸಿರುವ ನಾವು ಎಂದೋ ಮರೆಯಾದ ಸರಸ್ವತಿ ನದಿಯನ್ನರಸುತ್ತಿರುವುದು ಮುಟ್ಟಾಳತನವಲ್ಲವೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT