ಶುಕ್ರವಾರ, ಆಗಸ್ಟ್ 12, 2022
20 °C

PV Web Exclusive: ಶಾಲ್ಮಲಾ; ಇನ್ನೂ ‘ಗುಪ್ತಗಾಮಿನಿ’ಯೇ...

ರಾಮಕೃಷ್ಣ ಸಿದ್ರಪಾಲ Updated:

ಅಕ್ಷರ ಗಾತ್ರ : | |

Prajavani

ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಒಳಗೊಳಗೇ ಹರಿಯುವವಳು

ಜೀವ ಹಿಂಡಿ ಹಿಪ್ಪೆ ಮಾಡಿ ಒಳಗೊಳಗೇ ಕೊರೆಯುವವಳು, ಸದಾ….

ಗುಪ್ತಗಾಮಿನಿ ನನ್ನ ಶಾಲ್ಮಲಾ...

–ಎಂದು ಹಲವು ದಶಕಗಳ ಹಿಂದೆಯೇ ಸಾಹಿತಿ ಚಂಪಾ (ಚಂದ್ರಶೇಖರ್ ಪಾಟೀಲ) ಈ ನದಿಯ ಬಗ್ಗೆ ಕವಿತೆ ಬರೆದಿದ್ದರು.

ಶಾಲ್ಮಲಾ ಧಾರವಾಡ ಜಿಲ್ಲೆಯಲ್ಲಿ ಹುಟ್ಟುವ ಏಕೈಕ ನದಿ. ಉಗಮ ಸ್ಥಳ ಇಲ್ಲಿನ ಸೋಮೇಶ್ವರ ಗುಡಿಯ ಸಮೀಪ. ಧಾರವಾಡದಲ್ಲಿ ಗುಪ್ತಗಾಮಿನಿ; ಅದರ ಹರಿವು, ಲಾಸ್ಯ, ಬಳುಕಾಟ, ಸೌಂದರ್ಯಲಹರಿ ಏನಿದ್ದರೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ. 

ಈ ಗುಪ್ತಗಾಮಿನಿಯ ಉಗಮ ಸ್ಥಳ ಈಗಲೂ ಖಾಸಗಿಯವರ ಒಡೆತನದಲ್ಲಿದೆ. ಜಲೋದ್ಭವವಾಗುವಲ್ಲೊಂದು ಕಲ್ಯಾಣಿಯಿದೆ. ಪಕ್ಕದಲ್ಲೊಂದು ಶಿವನ ಗುಡಿ. ಪೂಜೆ ಅನವರತ. ಅಲ್ಲಿರುವ ಕಲ್ಯಾಣಿ ಕಟ್ಟೆ ಸ್ಥಳೀಯರ ಬಟ್ಟೆಒಗೆಯುವ ಜಾಗವೂ ಹೌದು. ಅಲ್ಲಿಂದ ಮುಂದಕ್ಕೆ ಶಾಲ್ಮಲೆ ಕಿರಿದಾಗಿ ಕೆರೆಯೊಂದನ್ನು ಕೂಡಿಕೊಳ್ಳುತ್ತದೆ. ಮುಂದೆ ಹರಿಯುವ ಮಾರ್ಗ ಇನ್ನಷ್ಟು ಕಿರಿದು. ಜೊತೆಗೆ ಕೊಳೆಗೇರಿ, ಗಟಾರದ ನೀರು ಸೇರಿಕೊಳ್ಳುತ್ತದೆ. ಸುಮಾರು ಒಂದು ಕಿಮೀ ಈ ನದಿಯ ಭಾಗ ಒತ್ತುವರಿಯಾಗಿದೆ. ಹೀಗಾಗಿ ನದಿ ಹರಿವು ಎಲ್ಲಿ ಮಾಯವಾಗುತ್ತದೆ ಎನ್ನುವುದು ಸುಲಭಕ್ಕೆ ಕಾಣಸಿಗದು. ಈ ಒತ್ತುವರಿ ತೆರವಿಗೆ ಕೆಲ ಸಂಘಟನೆಗಳು ಮಾಡಿದ ಪ್ರಯತ್ನವಿನ್ನೂ ಸಫಲವಾಗಿಲ್ಲ.

ಧಾರವಾಡದ ನೇಚರ್ ರಿಸರ್ಚ್ ಸೆಂಟರ್, ನೇಚರ್ ಫಸ್ಟ್ ಇಕೋ ವಿಲೇಜ್, ಹಳ್ಳಿಗೇರಿ ಮತ್ತು ವೃಕ್ಷಲಕ್ಷ ಆಂದೋಲನ ಶಿರಸಿ ಇವರ ಸಹಭಾಗಿತ್ವದಲ್ಲಿ ಧಾರವಾಡದಲ್ಲಿ ‘ಶಾಲ್ಮಲಾ ನದಿ ಉಗಮಸ್ಥಾನ ಪುನರುಜ್ಜೀವನ: ಚಿಂತನ-ಮಂಥನ’ ಸಾರ್ವಜನಿಕ ಸಭೆ ಎರಡು ವರ್ಷಗಳ ಹಿಂದೆ (2018) ನಡೆಯಿತು. ನದಿಯ ಉಗಮ ಸ್ಥಾನದಲ್ಲಿ ಕೈಗೊಳ್ಳಬೇಕಿರುವ ಕಾರ್ಯ ಚಟುವಟಿಕೆಗಳ ಕುರಿತು ಚರ್ಚಿಸಲಾಗಿತ್ತು, ಒತ್ತುವರಿ ತೆರವಿಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಆ ಬಳಿಕ ಈವರೆಗೂ ಕೆಲಸ ನಡೆಯಲಿಲ್ಲ .

ಶಾಲ್ಮಲೆಗೆ ಪುನಃ ಹಸಿರು ತೊಡಿಸಿ, ಜಲಮೂಲ ಅಭಿವೃದ್ಧಿಪಡಿಸಲು ಮಾಡಿದ್ದ ಸಂಕಲ್ಪ ಸರ್ಕಾರದ ನಿರ್ಲಕ್ಷ್ಯ, ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ನನೆಗುದಿಗೆ ಬಿದ್ದಿದೆ. ವಿಶ್ವ ಪರಿಸರದ ದಿನದ ಸಂದರ್ಭದಲ್ಲಿ ಉಗಮ ಸ್ಥಾನ ಸ್ವಚ್ಛಗೊಳಿಸಿ ಪೂಜೆ ಮಾಡಲಾಗುತ್ತದೆ. ಈ ಜಾಗ ರುದ್ರಪ್ಪ ಹರಕುಣಿ ಎಂಬುವವರಿಗೆ ಸೇರಿದ್ದು, ಅವರೇನೋ ಈ ಜಾಗವನ್ನು ಸರ್ಕಾರಕ್ಕೆ ಒಪ್ಪಿಸಿ ಬೇರೆಡೆ ಜಮೀನು ಪಡೆಯಲು ಒಪ್ಪಿದ್ದಾರೆ. ಆದರೆ ಸರ್ಕಾರವೇ ಆಸಕ್ತಿ ತೋರಿಸಿ ಈವರೆಗೂ ಪುನರುಜ್ಜೀವನಕ್ಕೆ ಮುಂದಾಗಿಲ್ಲ ಎಂಬ ದೂರು ಕೇಳಿಬಂದಿದೆ.

ಹೀಗಾಗಿ ಶಾಲ್ಮಲಾ ಇನ್ನೂ ‘ಗುಪ್ತಗಾಮಿನಿ’ಯಾಗಿಯೇ ಇದ್ದಾಳೆ.

ರಿಯಲ್‌ ಎಸ್ಟೇಟ್‌ ಮಾಫಿಯಾ ಎದುರಿಸಲಾರೆವು

‘ಧಾರವಾಡದ ಏಕೈಕ ನದಿಮೂಲ ಉಳಿಸಿಕೊಳ್ಳಲು ನಾವೆಲ್ಲ ಕೈಜೋಡಿಸಿದ್ದೆವು. ಆದರೆ ಸರ್ಕಾರ, ಜನಪ್ರತಿನಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ನಾವು ಅಂದುಕೊಂಡಿದ್ದು ಸಾಕಾರವಾಗಲಿಲ್ಲ. ಈ ನದಿಮೂಲ ಸ್ಚಚ್ಛಗೊಳಿಸಿ ಅದರ ಸುತ್ತಮುತ್ತ ಸಾವಿರ ವೃಕ್ಷ ಹಚ್ಚಬೇಕು ಎಂದುಕೊಂಡಿದ್ದೆವು. ಇಲ್ಲಿಂದ ಮುಂದಕ್ಕೆ ಒಂದು ಕಿಮೀ ನಷ್ಟು ಜಾಗ ಒತ್ತುವರಿಯಾಗಿ ಮನೆ, ವಸತಿ ಸಮುಚ್ಚಯ, ಕೊಳೆಗೇರಿಗಳು ಹುಟ್ಟಿಕೊಂಡಿವೆ. ಅವುಗಳೆಲ್ಲ ತೆರವುಗೊಳಿಸಿದ್ದರೆ ಈ ಪರಿಸರ ಇನ್ನಷ್ಟು ಕಳೆಗಟ್ಟುತ್ತಿತ್ತು. ಗುಪ್ತಗಾಮಿನಿ ಹರಿವು ಪುಣ್ಯಸ್ಥಳವಾಗುತ್ತಿತ್ತು. ಆದರೆ ಸಾಕಾರವಾಗುತ್ತಿಲ್ಲ’ ಎನ್ನುತ್ತಾರೆ ಶಾಲ್ಮಲಾ ಉಳಿಸಿ ಅಭಿಯಾನದಲ್ಲಿ ಕೈಜೋಡಿಸಿರುವ ಇಕೊ ವಿಲೇಜ್‌ ಸಂಸ್ಥಾಪಕ ಪಂಚಯ್ಯ ಹಿರೇಮಠ.

‘ನದಿಮೂಲ ಉಳಿಸುವುದು, ಪುನರುಜ್ಜೀವನ ಗೊಳಿಸುವ ಕಾರ್ಯ ಸರ್ಕಾರದ ಇಚ್ಛಾಶಕ್ತಿಯ ಕೊರತೆಯಿಂದ ನನೆಗುದಿಗೆ ಬಿದ್ದಿದೆ. ನಮ್ಮಿಂದ ಸಾಧ್ಯವಾದಷ್ಟು ಪ್ರಯತ್ನ ಮಾಡಿದ್ದೆವು.  ಆದರೆ ಒತ್ತುವರಿ ಜಾಗ ರಿಯಲ್‌ ಎಸ್ಟೇಟ್‌ನವರ ಹಿಡಿತದಲ್ಲಿದೆ. ಅವರ ಮಾಫಿಯಾ ಎದುರಿಸುವಷ್ಟು ಚೈತನ್ಯ ನಮಗಿಲ್ಲ’ ಎನ್ನುತ್ತಾರೆ ನೇಚರ್‌ ರಿಸರ್ಚ್‌ ಸೆಂಟರ್ ಮುಖ್ಯಸ್ಥ ಹರ್ಷವರ್ಧನ ಶೀಲವಂತರ.

ಬೇಡ್ತಿ ನದಿಯ ಉಗಮ ಸ್ಥಾನ ಧಾರವಾಡದಲ್ಲಿದೆ ಎಂದರೆ ಉತ್ತರ ಕನ್ನಡದವರಿಗೆ ಅಚ್ಚರಿ. ಬಹುತೇಕರಿಗೆ ಇದು ಗೊತ್ತಿಲ್ಲ. ಹೀಗಾಗಿ ಆ ಜಿಲ್ಲೆಯಲ್ಲಿ ಶಾಲ್ಮಲಾ ನದಿಮೂಲ ಉಳಿಸಿಕೊಳ್ಳುವ ಹಂಬಲವೂ ಸಾಕಷ್ಟಿದೆ. 

ಹೀಗಾಗಿ ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶೀಸರ ನೇತೃತ್ವದಲ್ಲಿ ‘ಶಾಲ್ಮಲಾ ನದಿ ಮೂಲ ಉಳಿಸಿ’ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಅವರು ಕೂಡ ಸಾಕಷ್ಟು ಉತ್ಸಾಹದಿಂದ ಕೈಜೋಡಿಸಿದ್ದರು. ಪಶ್ಚಿಮ ಘಟ್ಟದ  ನದಿಮೂಲ,ಅಘನಾಶಿನಿ ಕಣಿವೆ ಉಳಿಸಿಕೊಳ್ಳಬೇಕು ಎನ್ನುವ ಕಳಕಳಿ ಈ ಅಭಿಯಾನದ ಉದ್ದೇಶವಾಗಿತ್ತು.

ಶಾಲ್ಮಲಾ ನದಿ ಮೂಲ

ಧಾರವಾಡದ ದಕ್ಷಿಣ ಭಾಗ, ಸೋಮೇಶ್ವರ ತಟದಲ್ಲಿ ಜಿಲ್ಲೆಯ ಏಕೈಕ ಶಾಲ್ಮಲಾ ನದಿ ಉಗಮ. ಉಪ ನದಿ ಬೇಡ್ತಿ ಹುಬ್ಬಳ್ಳಿ ತಾಲ್ಲೂಕಿನಲ್ಲಿ ಜನ್ಮ ತಾಳಿ ಕಲಘಟಗಿ ಬಳಿ ಸಂಗಮವಾಗಿ, ಎರಡು ಕವಲುಗಳಾಗಿದ್ದದ್ದು ಒಂದಾಗುತ್ತದೆ. ಪೂರ್ವಕ್ಕೆ 25 ಕಿಲೋ ಮೀಟರ್ ಹರಿದು, ಉತ್ತರ ಕನ್ನಡ ಜಿಲ್ಲೆ ಸೇರಿ, ಮುಂದೆ ಶಾಲ್ಮಲಾ ‘ಬೇಡ್ತಿ’ ನದಿಯಾಗುತ್ತಾಳೆ.

ಒಟ್ಟು 161 ಕಿಲೋ ಮೀಟರ್‌ಗಳಷ್ಟು ಹರಿವಿನ ಉದ್ದ ಹೊಂದಿರುವ ಶಾಲ್ಮಲಾ ನದಿ, ಬೇಡ್ತಿ ಮೂಲಕ ಉತ್ತರ ಕನ್ನಡ ಜಿಲ್ಲೆಯಲ್ಲಿ 96 ಕಿಲೋ ಮೀಟರ್ ಹರಿಯುತ್ತದೆ. ಮಾಗೋಡು ಜಲಪಾತದ ಕೆಳ ಭಾಗದಿಂದ ನದಿ ಅಂಕೋಲಾದ ಮಂಜಗುಣಿ ಬಳಿ ಸಮುದ್ರ ಸೇರುತ್ತದೆ. ಇಲ್ಲಿ ಶಾಲ್ಮಲಾ ‘ಬೇಡ್ತಿ’ಯಾಗಿ ನಂತರ ‘ಗಂಗಾವಳಿ ನದಿ’ ಹೆಸರಿನಿಂದ ಕರೆಸಿಕೊಳ್ಳುತ್ತದೆ.

ಮಾಗೋಡು ಜಲಪಾತ, ಶಿವಗಂಗಾ ಜಲಪಾತ, ಜೇನುಕಲ್ಲು ಗುಡ್ಡ, ಕೊಂಕಿ ಕೋಟೆ, ಸಹಸ್ರಲಿಂಗ ಶಾಲ್ಮಲಾ ನದಿಯ ನೀರಿನಿಂದಲೇ ಮೈದುಂಬಿ ಕಂಗೊಳಿಸುವ, ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳು. ಅಪರೂಪದ ಸಸ್ಯ ಪ್ರಭೇದಗಳ ತವರು ಶಾಲ್ಮಲಾ ನದಿಪಾತ್ರ. ಬೇಡ್ತಿ ಸಂರಕ್ಷಣಾ ಪ್ರದೇಶವು ಮಾಗೋಡ ಜಲಪಾತದಿಂದ ಬೇಡ್ತಿ ನದಿ ಕಣಿವೆಯ ಎರಡೂ ಭಾಗ, ಜೇನುಕಲ್ಲು ಗುಡ್ಡದಿಂದ ಕೆಳಾಸೆ ಗ್ರಾಮದ ಅಂಚಿನವರೆಗೆ, ಬಿಳಿಹಳ್ಳ ಕಣಿವೆಯಲ್ಲಿ ನಿಶಾನೆ ಗುಡ್ಡದವರೆಗೆ ಹರಡಿಕೊಳ್ಳುತ್ತದೆ. 

ಶಾಲ್ಮಲಾ ನದಿ ಕಣಿವೆಯ ಸಹಸ್ರಲಿಂಗದಿಂದ ಗಣೇಶಪಾಲ್ ವರೆಗಿನ 15.36 ಕಿಲೋ ಮೀಟರ್ ಉದ್ದದ ನದಿಯಂಚಿನ ಎರಡೂ ಬದಿಯ ಒಂದು 100 ಮೀಟರ್ ಪ್ರದೇಶವನ್ನು ‘ಶಾಲ್ಮಲಾ ನದಿ ಕಣಿವೆ ಪರಿಸರ ಸಂರಕ್ಷಣಾ ಪ್ರದೇಶ’ ಎಂದು ಘೋಷಿಸಲಾಗಿದೆ.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು