ಭಾನುವಾರ, ಮಾರ್ಚ್ 26, 2023
21 °C

ಗುಹೆಯಲ್ಲಿ ಅಂತರಿಕ್ಷ ಜೀವಿಗಳು!

ಸುನೀಲ್ ಬಾರ್ಕೂರ್ Updated:

ಅಕ್ಷರ ಗಾತ್ರ : | |

Prajavani

ಅಂತರಿಕ್ಷ ಜೀವಿಗಳಿವೆಯೇ? ಹಾರುವ ತಟ್ಟೆಗಳಲ್ಲಿ ಅವುಗಳು ಭೂಮಿಗೆ ಆಗಾಗ ಭೇಟಿ ನೀಡುತ್ತಿರುತ್ತವೆಯೇ? ಇದೊಂದು ಇಂದಿಗೂ ಸಮರ್ಪಕ ಉತ್ತರ ಸಿಗದ, ಆದರೆ ಬಹುಚರ್ಚಿತ ಪ್ರಶ್ನೆ. ಅಂತರಿಕ್ಷದಲ್ಲಿ ಆಗೊಮ್ಮೆ ಈಗೊಮ್ಮೆ ಘಟಿಸುವ ಸಂಗತಿಗಳು ಭಾರಿ ಕುತೂಹಲದ ಚರ್ಚೆಯನ್ನು ಹುಟ್ಟುಹಾಕಿ ಯಾವುದೇ ಠರಾವಿಲ್ಲದೆ ಅಂತ್ಯವಾಗುವುದು ನಿಶ್ಚಿತವಾದರೂ ಈ ಪ್ರಶ್ನೆಯನ್ನು ಜೀವಂತವಾಗಿ ಇಟ್ಟಿರುವುದು ಖರೆ.

ಮಾಹಿತಿ ತಂತ್ರಜ್ಞಾನದ ಈ ಜಮಾನದಲ್ಲಿ ಹಾರುವ ತಟ್ಟೆಗಳು, ಅಂತರಿಕ್ಷ ಜೀವಿಗಳೆಲ್ಲ ಒಳ್ಳೆಯ ರಂಜನೆಯ ಸರಕಾಗಿರುವ ಕಾರಣ ಸಣ್ಣ ವಿಷಯಗಳೂ ರೆಕ್ಕೆಪುಕ್ಕ ಹಚ್ಚಿಕೊಂಡು ಇನ್ನೇನೋ ಆಗಿ ಬಿಂಬಿತವಾಗಿ ಅಸಲು ವಿಷಯ ಕಳೆದುಹೋಗುವ ಸಾಧ್ಯತೆ ಹೆಚ್ಚು. ಅವುಗಳಲ್ಲಿ ಕೆಲವು ಘಟನೆಗಳಾದರೂ ಸುಮ್ಮನೆ ತಳ್ಳಿಹಾಕುವಂಥವಲ್ಲ ಎಂಬುದೂ ಅಷ್ಟೇ ಸತ್ಯ.

ಅಂತರಿಕ್ಷ ಜೀವಿಗಳ ಇರುವಿಕೆ ಬಗ್ಗೆ ದೃಢವಾಗಿ ನಂಬಿಕೆಯಿರುವ ಒಂದು ದೊಡ್ಡ ಗುಂಪೇ ಇದೆ. ಇದಕ್ಕೆ ಸಂಬಂಧಿಸಿದ ಸಾಕ್ಷಿಗಳನ್ನು ತಿರುಚಿ ಮರೆಮಾಚಲಾಗುತ್ತಿದೆ ಎಂಬುದು ಆ ತಂಡದ ವಾದ. ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಉಂಟು ಮಾಡಲು ಆ ತಂಡ ಪ್ರತಿವರ್ಷ ಜುಲೈ 2ರಂದು ಹಾರುವ ತಟ್ಟೆಗಳ ದಿನವನ್ನು ಆಚರಿಸುತ್ತಿದೆ. 1947ರಲ್ಲಿ ಆ ದಿನದಂದು ರೋಸ್‍ವೆಲ್ ಎಂಬಲ್ಲಿ ನಡೆದ ಘಟನೆಯು ತಮ್ಮ ವಾದದ ಅತ್ಯಂತ ನಿಖರ ಪುರಾವೆಯೆಂದು ಅವರು ಪ್ರತಿಪಾದಿಸುವುದೇ ಆಚರಣೆಗೆ ಆ ದಿನವನ್ನು ನಿಕ್ಕಿ ಮಾಡಿರುವ ಮುಖ್ಯ ಕಾರಣ.

ಭಾರತದಲ್ಲೂ ಈ ಹಾರುವ ತಟ್ಟೆಗಳನ್ನು ಕಂಡಿರುವ ಹಲವು ಘಟನೆಗಳಿವೆ. ಅದರಲ್ಲಿ ಗಮನಾರ್ಹವಾದವುಗಳು ಎರಡು. 2008ರಲ್ಲಿ ಕೋಲ್ಕತ್ತದ ಜನನಿಬಿಡ ಪ್ರದೇಶವೊಂದರ ಆಗಸದಲ್ಲಿ ಹಗಲಿನಲ್ಲೇ ನೂರಾರು ಜನರು ಪ್ರಖರ ಬೆಳಕಿನ ಪುಂಜವೊಂದು ತನ್ನ ಆಕಾರ ಬದಲಿಸುತ್ತ ಹಾದು ಹೋಗಿದ್ದನ್ನು ಗಮನಿಸಿದ್ದರು. ಕೆಲವರು ಆ ದೃಶ್ಯಾವಳಿಯನ್ನು ಸೆರೆ ಹಿಡಿದದ್ದೂ ಆಯ್ತು. ಕೊನೆಗೆ ಈ ಮಾಹಿತಿ ತಜ್ಞರಿಗೂ ತಲುಪಿ ಅದು ಶುಕ್ರಗ್ರಹವಾಗಿರುವ ಸಾಧ್ಯತೆಯೆಂದು ಅವರು ಹೇಳಿದರು. ಆದರೆ, ಅದೊಂದು ಸಮಂಜಸ ಉತ್ತರವಲ್ಲವೆಂಬ ಭಾವನೆ ಹಲವರಲ್ಲಿತ್ತು.

ನಂತರ 2013ರ ಆಗಸ್ಟ್‌ 4ರಂದು ಲಡಾಕ್‌ನಲ್ಲಿ ಜರುಗಿದ ಇಂತಹುದೇ ವಿಸ್ಮಯವೊಂದನ್ನು ಗಮನಿಸಿದ್ದು ಭಾರತೀಯ ಸೇನೆಯ ತುಕಡಿ. ಆ ತುಕಡಿಯಲ್ಲಿದ್ದ ಸೈನಿಕರು ಅಂದು ಆಗಸದಲ್ಲಿ ಪ್ರಖರ ಬೆಳಕನ್ನು ಚೆಲ್ಲುತ್ತ ಹಾರುತ್ತಿದ್ದ ಸುಮಾರು ನೂರಕ್ಕೂ ಹೆಚ್ಚು ತಟ್ಟೆಗಳನ್ನು ನೋಡಿದ್ದರೆಂದು ವರದಿಯಾಗಿತ್ತು. ಇದಾದ ನಂತರ ಮುಂದಿನ ಕೆಲವು ತಿಂಗಳುಗಳ ಕಾಲ ಇಂತಹುದೇ ಸನ್ನಿವೇಶಗಳು ಆ ಭಾಗದಲ್ಲಿ ಪುನರಾವರ್ತಿತ ಆಗಿದ್ದವೆಂದು ಹೇಳಲಾಗುತ್ತದೆ.

ಇದೇನೋ ಸದ್ಯದ ವಿಚಾರವಾಯಿತು. ಆದರೆ, ಶತಮಾನಗಳ ಹಿಂದೆಯೂ ನಮ್ಮ ಪೂರ್ವಜರಲ್ಲಿ ಈ ಅನ್ಯಗ್ರಹವಾಸಿಗಳ ಭೂಮಿ ಭೇಟಿಯ ಅರಿವಿದ್ದುದರ ಕುರಿತು ಇತ್ತೀಚೆಗೆ ಬಲವಾದ ಪುರಾವೆಯೊಂದು ದೊರೆತಿದೆ. ಛತ್ತೀಸಗಡದ ಹೋಶಂಗಾಬಾದ ಜಿಲ್ಲೆಯ ಚಾಂದೇಲಿ ಮತ್ತು ಗೋಟಿಟೋಲಾ ಹಳ್ಳಿಗಳ ದಟ್ಟಡವಿಯಲ್ಲಿ ಅಲ್ಲಿನ ಕಾಡುಜನರ ಬಗ್ಗೆ ಅಧ್ಯಯನ ನಡೆಸುತ್ತಿದ್ದ ಮಾನವಶಾಸ್ತ್ರಜ್ಞರ ತಂಡವೊಂದು ಗುಹೆಯೊಂದಕ್ಕೆ ಅಕಸ್ಮಾತ್ ಭೇಟಿ ನೀಡಿದಾಗ ಅಲ್ಲಿನ ಗೋಡೆಗಳ ಮೇಲೆ ಕಂಡು ಬಂದ ಚಿತ್ರಗಳು ಹಲವು ಹೊಸ ವಿಷಯಗಳನ್ನು ಹೊರಹಾಕಿವೆ.

ಸುಮಾರು ಹತ್ತು ಸಾವಿರ ವರ್ಷಗಳಷ್ಟು ಹಳೆಯವೆಂದು ಹೇಳಲಾಗುವ ಈ ಚಿತ್ರಗಳನ್ನು ಸಂಪೂರ್ಣ ನೈಸರ್ಗಿಕ ಬಣ್ಣಗಳನ್ನೇ ಬಳಸಿ ಬಿಡಿಸಿದರೂ ಇನ್ನೂ ಮಾಸದೇ ಉಳಿದಿರುವುದು ವಿಶೇಷ. ಇದರಲ್ಲಿ ಚಿತ್ರಿತವಾಗಿರುವ ಜೀವಿಗಳು ಕೈಯಲ್ಲಿ ವಿಚಿತ್ರ ಆಯುಧಗಳನ್ನು ಹಿಡಿದುಕೊಂಡಿದ್ದು ಅವುಗಳಿಗೆ ಬಾಯಿ ಮತ್ತು ಕಣ್ಣುಗಳಿಲ್ಲ. ಕೆಲವೊಂದು ಚಿತ್ರಗಳಲ್ಲಿ ಅವರ ವೇಷಭೂಷಣ ಅಂತರಿಕ್ಷ ಜೀವಿಗಳನ್ನು ನೆನಪಿಸಿದರೆ ಕೆಲವು ಕಡೆ ಹಾರುವ ತಟ್ಟೆಗಳಂತಹ ಆಕಾಶಕಾಯಗಳೂ ಕಾಣಸಿಗುತ್ತವೆ.

ಸ್ಥಳೀಯ ಕಾಡು ಜನರು ಆ ಚಿತ್ರದಲ್ಲಿ ಇರುವವರನ್ನು ರೋಹೇಲಾಗಳು ಎಂದು ಸಂಬೋಧಿಸಿ ಪೂಜಿಸುತ್ತಾರೆ. ಸ್ಥಳೀಯ ಭಾಷೆಯಲ್ಲಿ ರೋಹೇಲಾ ಎಂದರೆ ಕುಬ್ಜರು ಎಂದರ್ಥ. ಈ ರೋಹೇಲಾಗಳು ಆಕಾಶದಿಂದ ಬಂದಿಳಿದು ಆ ಊರಿನ ಜನರಲ್ಲೊಂದಿಬ್ಬರನ್ನು ತಮ್ಮೊಂದಿಗೆ ಕರೆದುಕೊಂಡು ತಮ್ಮ ವಿಮಾನದಲ್ಲಿ ವಾಪಸಾಗುತ್ತಿದ್ದರಂತೆ. ಹೀಗೆ ಅವರೊಟ್ಟಿಗೆ ಹೋದವರ‍್ಯಾರೂ ಮತ್ತೆ ವಾಪಸು ಬರುತ್ತಿರಲಿಲ್ಲ ಎಂಬುದು ಆ ಕಾಡು ಜನರ ನಂಬಿಕೆ.

ಹಲವು ಪರಿಣತರು ಈ ಚಿತ್ರಗಳನ್ನು ಪರಿಶೀಲಿಸಿ ಅಲ್ಲಿರುವ ಚಿತ್ರಗಳು ಆಕಾಶಕಾಯ ಮತ್ತು ಅಂತರಿಕ್ಷ ಜೀವಿಗಳದ್ದೇ ಎಂದು ಪ್ರಮಾಣೀಕರಿಸಿದ್ದಾರೆ. ಛತ್ತೀಸಗಡ ಸರ್ಕಾರ ಕೂಡ ಈ ನಿಟ್ಟಿನಲ್ಲಿ ಹೆಚ್ಚಿನ ಸಂಶೋಧನೆಗಾಗಿ ಇಸ್ರೊ ನೆರವನ್ನು ಕೋರಿದೆ. ಅಲ್ಲಿಗೆ ನಮ್ಮ ಪೂರ್ವಜರು ಅಂತರಿಕ್ಷ ಜೀವಿಗಳೊಡನೆ ಸಂಪರ್ಕ ಹೊಂದಿರಬಹುದೆಂಬ ಗುಮಾನಿ ಬಲವಾಗತೊಡಗಿದೆ. ಈ ನಿಟ್ಟಿನಲ್ಲಿ ನಡೆಯುತ್ತಿರುವ ಶೋಧನೆಗಳು ಮುಂಬರುವ ದಿನಗಳಲ್ಲಿ ಸ್ಪಷ್ಟ ಚಿತ್ರಣವನ್ನು ನೀಡಬಹುದು. ಆಕಾಶಕಾಯಗಳ, ಅಂತರಿಕ್ಷ ಜೀವಿಗಳ ಅಭಿಮಾನಿಗಳ ವಾದಕ್ಕೆ ಹೊಸತೊಂದು ಪುರಾವೆಯು ಸೇರ್ಪಡೆಯಾಗಬಹುದು.

ಏನಿದು ರೋಸ್‍ವೆಲ್ ಘಟನೆ?

ಮೆಕ್ಸಿಕೊದ ರೋಸ್‍ವೆಲ್‍ನಿಂದ ಸುಮಾರು ಐವತ್ತು ಕಿ.ಮೀ. ದೂರದಲ್ಲಿ ವಿಲಿಯಮ್ ಬ್ರಝೆಲ್ ಎಂಬ ವ್ಯಕ್ತಿಯೊಬ್ಬ ಗದ್ದೆಯೊಂದರಲ್ಲಿ ಹಾದು ಹೋಗುವಾಗ ಯಾವುದೋ ವಿಮಾನದಂತಹ ವಸ್ತುವಿನ ಭಗ್ನಾವಶೇಷಗಳನ್ನು ಕಂಡ. ಹತ್ತಿರ ಹೋಗಿ ನೋಡಿದಾಗ ಅದು ರಬ್ಬರ್‌ನಂತಹ ವಸ್ತು ಬಳಸಿ ತಯಾರಾಗಿರುವುದು ಆತನ ಗಮನಕ್ಕೆ ಬಂತು. ವಿಷಯ ತತ್‌ಕ್ಷಣಕ್ಕೆ ಎಲ್ಲೆಡೆ ಹರಡಿ ಅಲ್ಲಿನ ಮಾಧ್ಯಮ ಹಾಗೂ ಸ್ಥಳೀಯರಲ್ಲಿ ಅದೊಂದು ಹಾರುವ ತಟ್ಟೆಯೆಂಬ ಗುಲ್ಲೆದ್ದರೂ ನಂತರ ಅಮೆರಿಕದ ವಾಯುಸೇನೆ ಅದು ತಾನು ವೈಮಾನಿಕ ವೀಕ್ಷಣೆಗೆಂದು ಬಳಸುತ್ತಿದ್ದ ಬಿಸಿಗಾಳಿಯ ಬಲೂನು ಕುಸಿದು ಬಿದ್ದುದರ ಅವಶೇಷಗಳೆಂಬ ಸಮಜಾಯಿಷಿ ನೀಡಿತು. ಇದರಿಂದ ವಿಷಯ ಅಷ್ಟಕ್ಕೆ ತಣ್ಣಗಾಯಿತು.

ಇದಾದ ನಂತರ ಮತ್ತೆ ಈ ವಿಷಯಕ್ಕೆ ಜೀವ ಬಂದಿದ್ದು 1980ರ ಆಸುಪಾಸಿನಲ್ಲಿ. ಹಾರುವ ತಟ್ಟೆಗಳ ಇರುವಿಕೆಯ ಪ್ರತಿಪಾದಕರ ತಂಡವೊಂದು ಈ ರೋಸ್‍ವೆಲ್ ಪ್ರಕರಣದ ಸಾಕ್ಷಿಗಳನ್ನು ಸಂದರ್ಶಿಸಿ ಈ ಹಿಂದೆ ಸರ್ಕಾರದ ಸಮಜಾಯಿಷಿಗಳೆಲ್ಲ ಸುಳ್ಳೆಂದು ವಾದಿಸಿತು. ಯಾವತ್ತಿಗೂ ಇದೊಂದು ರೋಚಕ ಸುದ್ದಿ ಆಗಿದ್ದುದರಿಂದ ಮತ್ತೊಂದಿಷ್ಟು ಜನ ಈ ವಾದಕ್ಕೆ ಸೊಪ್ಪುಹಾಕಿದರು. ನಂತರದ ವರ್ಷಗಳಲ್ಲಿ ಈ ಕುರಿತು ಹಲವು ಸರಣಿ ಪುಸ್ತಕಗಳು, ಟಿ.ವಿ. ಕಾರ್ಯಕ್ರಮಗಳು ಬಂದವು. ಇವೆಲ್ಲರ ಜೊತೆಗೆ ನಂತರದ ದಿನಗಳಲ್ಲಿ ಜಾಗತಿಕವಾಗಿ ಅಲ್ಲಲ್ಲಿ ಜರುಗಿದ ಹಾರುವ ತಟ್ಟೆಗಳ ಗೋಚರಿಕೆಯ ವಿದ್ಯಮಾನಗಳು ವಿಷಯವನ್ನು ಇಂದಿಗೂ ಪ್ರಸ್ತುತವಾಗಿರಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು