ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಮಲೆನಾಡಿನಲ್ಲಿ ಕಾಳಿಂಗ ಪ್ರೀತಿ ಪಸರಿಸುತ್ತಿರುವ ‘ಮಾಂತ್ರಿಕ’

Last Updated 10 ಸೆಪ್ಟೆಂಬರ್ 2020, 6:57 IST
ಅಕ್ಷರ ಗಾತ್ರ
ADVERTISEMENT
""
""

ಕಾಳಿಂಗ ಸರ್ಪವನ್ನು ನೋಡುವುದೇ ಅಪಶಕುನ ಎಂಬ ಮೂಢನಂಬಿಕೆ ದಶಕಗಳ ಹಿಂದೆ ಮಲೆನಾಡಿನಲ್ಲಿ ಮನೆ ಮಾಡಿತ್ತು. ಈ ಹಾವು ಪ್ರವೇಶಿಸಿದೆ ಎಂಬ ಕಾರಣಕ್ಕಾಗಿ ಮನೆತೊರೆದ, ನೆಲಸಮಗೊಳಿಸಿದ ಪ್ರಸಂಗಗಳೂ ನಡೆಯುತ್ತಿದ್ದವು. ಕಾಳಿಂಗ ಸರ್ಪದ ಕುರಿತ ಭಯವಂತೂ ಯಾವ ಪರಿ ಇತ್ತೆಂದರೆ ಈ ಬೃಹತ್‌ ಉರಗವನ್ನು ದೂರದಲ್ಲೇ ಗುಂಡಿಕ್ಕಿ ಕೊಲ್ಲುವುದೂ ಆಗಾಗ ನಡೆಯುತ್ತಿತ್ತು. ಅದೇ ನೆಲದಲ್ಲಿ ‘ಮಾಂತ್ರಿಕ’ನಂತೆ ಕಾಳಿಂಗ ಪ್ರೀತಿಯನ್ನು ಪಸರಿಸುವಲ್ಲಿ ಯಶಸ್ವಿಯಾಗಿದ್ದಾರೆ ಸಂಶೋಧಕ ಅಜಯ್‌ ಗಿರಿ.

ಉರಗಗಳೂ ಸೇರಿದಂತೆ ವನ್ಯಜೀವಿಗಳ ಬಗೆಗೆ ಅಪಾರ ಪ್ರೀತಿ ಇರಿಸಿಕೊಂಡಿರುವ ಈ ತರುಣ ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯದ ಅಕೋಲಾ ಜಿಲ್ಲೆಯವರು. ಚಿಕ್ಕಂದಿನಿಂದಲೇ ಹಾವುಗಳ ಕುರಿತು ಕುತೂಹಲ, ಪ್ರೀತಿ ಇರಿಸಿಕೊಂಡಿದ್ದ ಅಜಯ್‌ ಬಿ.ಕಾಂ ಪದವಿ ಪೂರೈಸಿದ ಬಳಿಕ ಉರಗ ಸಂರಕ್ಷಣೆಯತ್ತ ಹೊರಳಿದ್ದರು. ಹುಟ್ಟೂರಿನಲ್ಲಿ ಹಾವುಗಳ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದ ಅಜಯ್‌, 2009ರಲ್ಲಿ ಆಗುಂಬೆಯ ಮಳೆಕಾಡು ಸಂಶೋಧನಾ ಕೇಂದ್ರ (ಎಆರ್‌ಆರ್‌ಎಸ್‌)ದಲ್ಲಿ ಸಂಶೋಧನಾ ಸಹಾಯಕನಾಗಿ ವೃತ್ತಿ ಆರಂಭಿಸಿದರು.

12 ವರ್ಷಗಳ ಪಯಣದಲ್ಲಿ ಕಾಳಿಂಗ ಸರ್ಪಗಳ ಕುರಿತ ಸಂಶೋಧನೆಯಲ್ಲಿ ಒಂದೊಂದೇ ಮೆಟ್ಟಿಲು ಏರುತ್ತಾ ಸಾಗುತ್ತಿರುವ ಅವರು, ಈಗ ಎಆರ್‌ಆರ್‌ಎಸ್‌ನ ಕ್ಷೇತ್ರ ನಿರ್ದೇಶಕ. ಆಗುಂಬೆ ಕೇಂದ್ರ ಸ್ಥಾನವಾದರೂ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಸಾಗರ, ಹೊಸನಗರ, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ತಾಲ್ಲೂಕುಗಳಲ್ಲಿ ಇವರ ಹೆಸರು ಚಿರಪರಿಚಿತ. ಕರಾವಳಿಯ ಉಡುಪಿ ಜಿಲ್ಲೆಯ ಕಾರ್ಕಳ, ಹೆಬ್ರಿ, ಕುಂದಾಪುರ ತಾಲ್ಲೂಕುಗಳವರೆಗೂ ವ್ಯಾಪಿಸಿದೆ ಇವರ ಉರಗ ಸಂರಕ್ಷಣೆಯ ಕಾಯಕ.

ಕಾಳಿಂಗ ಸರ್ಪಗಳಿಗೆ ‘ಟೆಲಿಮೆಟ್ರಿ’ ಚಿಪ್‌ ಅಳವಡಿಸಿ ಅವುಗಳ ಜೀವನದ ಕುರಿತು ಸಂಶೋಧನೆ ಕೈಗೊಳ್ಳುವುದರ ಜತೆಯಲ್ಲೇ ಮೂರು ಜಿಲ್ಲೆಗಳ ಬಹುಭಾಗಗಳಲ್ಲಿ ಉರಗಗಳ ಸಂರಕ್ಷಣೆಯಲ್ಲಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ ಅಜಯ್‌. 12 ವರ್ಷಗಳ ಅವಧಿಯಲ್ಲಿ ಕನ್ನಡ ಭಾಷೆಯನ್ನು ಸ್ಪಷ್ಟವಾಗಿ ಕಲಿತಿರುವ ಅವರು, ಈ ಭಾಗದ ಮನೆಮಗನಂತಾಗಿದ್ದಾರೆ. ಜನವಸತಿ ಪ್ರದೇಶ, ಕೃಷಿ ಜಮೀನಿನಲ್ಲಿ ಯಾವುದೇ ಹಾವು ಕಾಣಸಿಕೊಂಡರೂ ಇಲ್ಲಿನ ಜನ ಮೊದಲು ನೆನಪಿಸಿಕೊಂಡು ಕರೆ ಮಾಡುವುದು ಅಜಯ್‌ ಅವರಿಗೆ.

ಕಾರ್ಯಶೈಲಿಯೇ ವಿಶಿಷ್ಟ: ಹಾವುಗಳನ್ನು ಹಿಡಿದು, ಸುರಕ್ಷಿತ ಸ್ಥಳಕ್ಕೆ ಬಿಡುವವರು ನೂರಾರು ಮಂದಿ ಸಿಗುತ್ತಾರೆ. ಆದರೆ, ಅಜಯ್‌ ಅವರೆಲ್ಲರಿಗಿಂತಲೂ ಭಿನ್ನವಾಗಿ ಕೆಲಸ ಮಾಡುತ್ತಾರೆ. ಕರೆಬಂದ ತಕ್ಷಣದಲ್ಲೇ ಅಲ್ಲಿನ ಜನರಿಗೆ ಏನು ಮಾಡಬೇಕು? ಏನನ್ನು ಮಾಡಬಾರದು ಎಂಬುದನ್ನು ದೂರವಾಣಿಯಲ್ಲೇ ತಿಳಿಸುತ್ತಾರೆ. ಹಾವಿನ ಚಲನವಲನಗಳ ಕುರಿತು ದೂರವಾಣಿಯಲ್ಲೇ ಹೆಚ್ಚು ಮಾಹಿತಿ ಪಡೆಯಲು ಪ್ರಯತ್ನಿಸುತ್ತಾರೆ. ಹಾವು ತಾನಾಗಿಯೇ ಸಾಗಿ ಹೋಗುತ್ತಿದೆ ಎಂದಾದರೆ ಹಾಗೆಯೇ ಅದು ಸುರಕ್ಷಿತ ಸ್ಥಳಕ್ಕೆ ಮರಳಲು ಅವಕಾಶ ಕಲ್ಪಿಸುವಂತೆ ಜನರನ್ನು ಮನವೊಲಿಸುತ್ತಾರೆ.

‘ನಾನು ಇಲ್ಲಿಗೆ ಬಂದಾಗ ದಿನವೊಂದಕ್ಕೆ 15ರಿಂದ 16 ಕರೆಗಳು ಬಂದದ್ದೂ ಇದೆ. ಈಗ ಜನರಲ್ಲಿ ಕಾಳಿಂಗ ಸರ್ಪದ ಕುರಿತು ಹೆಚ್ಚಿನ ಮಾಹಿತಿ ಇದೆ. ಹಾವು ತಾನಾಗಿಯೇ ಸಾಗಿ ಹೋಗುತ್ತಿದ್ದರೆ ಕರೆ ಮಾಡುವವರು ಕಡಿಮೆ. ಹಾವುಗಳ ಕುರಿತು ಜನರಲ್ಲಿ ತಪ್ಪು ಕಲ್ಪನೆಗಳೇ ಹೆಚ್ಚಿವೆ. ಆ ಕುರಿತು ಸರಿಯಾಗಿ ಜಾಗೃತಿ ಮೂಡಿಸಿದರೆ ಜನರು ಹಾವುಗಳನ್ನು ಕೊಲ್ಲುವುದು, ಅವುಗಳ ಕುರಿತು ಭಯಪಡುವುದು ಕಡಿಮೆಯಾಗುತ್ತದೆ. ಆ ದಿಸೆಯಲ್ಲಿ ನಮ್ಮ ಪ್ರಯತ್ನ ಫಲ ನೀಡಿದೆ’ ಎನ್ನುತ್ತಾರೆ ಅಜಯ್‌.

ನಿಪುಣ ರಕ್ಷಕ: ಹಾವುಗಳನ್ನು ಹಿಡಿದು, ಸ್ಥಳಾಂತರಿಸುವ ಬಹುತೇಕರು ಪ್ರಚಾರಪ್ರಿಯರೂ, ‘ಪೋಸ್‌’ ಪ್ರಿಯರೂ ಆಗಿರುತ್ತಾರೆ. ಆದರೆ, ಅಜಯ್‌ ಗಿರಿ ಇದಕ್ಕಿಂತ ಭಿನ್ನ ವ್ಯಕ್ತಿತ್ವದ ಸಂಶೋಧಕ. ಹಾವು ಕೈಗೆ ಸಿಕ್ಕ ಬಳಿಕ ಅನಗತ್ಯವಾಗಿ ಕ್ಯಾಮೆರಾ ಎದುರು ಪೋಸ್‌ ಕೊಡುವುದಿಲ್ಲ. ಸೆರೆಸಿಕ್ಕ ಹಾವನ್ನು ಜನರು ಸ್ಪರ್ಶಿಸಲು ಅವಕಾಶವನ್ನೂ ನೀಡುವುದಿಲ್ಲ. ಸೆರೆಹಿಡಿದ ಸ್ಥಳದಿಂದ ಅನತಿ ದೂರದಲ್ಲಿ, ಸ್ಥಳೀಯರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿಯ ಉಪಸ್ಥಿತಿಯಲ್ಲೇ ಅರಣ್ಯಕ್ಕೆ ಬಿಟ್ಟು ಬರುತ್ತಾರೆ. ಹೆಚ್ಚು ದೂರ ಸ್ಥಳಾಂತರಿಸುವುದು ಹಾವಿನ ಜೀವಕ್ಕೆ ಅಪಾಯಕಾರಿ ಎಂಬುದನ್ನು ಸ್ಥಳೀಯರಿಗೆ ಮನದಟ್ಟು ಮಾಡುವುದಕ್ಕೆ ಈ ಎಲ್ಲ ಅವಕಾಶಗಳನ್ನೂ ಅವರು ಬಳಸಿಕೊಳ್ಳುತ್ತಾರೆ.

‘12 ವರ್ಷಗಳ ಅವಧಿಯಲ್ಲಿ ಸಾವಿರಾರು ಕರೆಗಳಿಗೆ ಸ್ಪಂದಿಸಿ, ಹಾವುಗಳನ್ನು ಸರೆಹಿಡಿದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದೇವೆ. ನಾನು ಮತ್ತು ನಮ್ಮ ಸಂಸ್ಥೆಯ ಅಜಯ್‌ ಕುಮಾರ್‌ ಹೆಚ್ಚಾಗಿ ಒಟ್ಟಿಗೆ ಹೋಗುತ್ತೇವೆ. ಒಮ್ಮೆಯೂ ನಮಗಾಗಲೀ, ಜೊತೆಗಿದ್ದವರಿಗಾಗಲೀ ಅಪಾಯ ಎದುರಾಗಿಲ್ಲ. ಒಂದು ಕೇರೆ ಹಾವು, ನೀರುಳ್ಳೆ ಹಾವಿನಿಂದಲೂ ಕಚ್ಚಿಸಿಕೊಂಡಿಲ್ಲ. ಹಾವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವುದೇ ನಮ್ಮ ಆದ್ಯತೆಯಾಗಿರಬೇಕು. ಚೆಲ್ಲಾಟ ಆಡುವುದೇ ಅಪಾಯಕ್ಕೆ ದಾರಿಯಾಗುತ್ತದೆ ಎಂಬ ಎಚ್ಚರಿಕೆಯಿಂದ ಕೆಲಸ ಮಾಡುವುದು ಮುಖ್ಯ’ ಎಂದು ವಿವರಿಸುತ್ತಾರೆ.

ಅಂತರರಾಷ್ಟ್ರೀಯ ಮನ್ನಣೆ

ಎಆರ್‌ಆರ್‌ಎಸ್‌ ಚೆನ್ನೈನ ಮದ್ರಾಸ್‌ ಕ್ರೊಕೊಡೈಲ್‌ ಬ್ಯಾಂಕ್‌ ಟ್ರಸ್ಟ್‌ ಸಂಸ್ಥಾಪಕ ರೋಮಿಲಸ್‌ ವಿಟೇಕರ್‌ ಸ್ಥಾಪಿಸಿದ ಸಂಸ್ಥೆ. ಅವರಿಂದಲೇ ಅಜಯ್‌ ಕೂಡ ತರಬೇತಿ ಹೊಂದಿದವರು. ಎಆರ್‌ಆರ್‌ಎಸ್‌ನಲ್ಲಿ ಕಾಳಿಂಗ ಸರ್ಪಗಳ ಕುರಿತು ಸಂಶೋಧನೆ ಮಾಡುತ್ತಲೇ ನಾಗಾಲ್ಯಾಂಡ್‌ ವಿಶ್ವವಿದ್ಯಾಲಯದಲ್ಲಿ ದೂರ ಶಿಕ್ಷಣದಲ್ಲಿ ಪರಿಸರ ವಿಜ್ಞಾನ ವಿಷಯದಲ್ಲಿ ಎಂ.ಎಸ್‌ಸಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಈಗ ಕಾಳಿಂಗ ಸರ್ಪಗಳ ಸಂಶೋಧನಾ ಕ್ಷೇತ್ರದಲ್ಲಿಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದಿರುವ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಕಾಳಿಂಗ ಸರ್ಪಗಳಿಗೆ ಸಂಬಂಧಿಸಿದಂತೆ 2017ರಲ್ಲಿ ನೆದರ್‌ಲೆಂಡ್‌ನಲ್ಲಿ ನಡೆದ ಅಂತರರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾರತದಿಂದ ಪಾಲ್ಗೊಂಡ ಮೂವರು ಸಂಶೋಧಕರಲ್ಲಿ ಅಜಯ್‌ ಗಿರಿ ಒಬ್ಬರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT