ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯತ್ನಾಳ ವಿರುದ್ಧ ಅಪ್ಪು ಬೆಂಬಲಿಗರ ಧಿಕ್ಕಾರ

Last Updated 11 ಏಪ್ರಿಲ್ 2018, 13:38 IST
ಅಕ್ಷರ ಗಾತ್ರ

ವಿಜಯಪುರ: ವಿಧಾನ ಪರಿಷತ್‌ ಸದಸ್ಯ ಬಸನಗೌಡ ಪಾಟೀಲ ಯತ್ನಾಳ ಅವರ ಬಿಜೆಪಿ ಸೇರ್ಪಡೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಬೆಂಬಲಿಗರು, ವರಿಷ್ಠರು ಬಸನಗೌಡಗೆ ಟಿಕೆಟ್‌ ಘೋಷಿಸಿರುವುದನ್ನು ಖಂಡಿಸಿ, ಯತ್ನಾಳ ವಿರುದ್ಧ ನಗರದ ಗಾಂಧಿಚೌಕ್‌ನಲ್ಲಿ ಪ್ರತಿಭಟಿಸಿ, ಧಿಕ್ಕಾರದ ಘೋಷಣೆಗಳನ್ನು ಮೊಳಗಿಸಿದರು.

ನಗರದ ಮಹಾತ್ಮಗಾಂಧಿ ಚೌಕ್‌ನಲ್ಲಿ ಜಮಾಯಿಸಿದ ಅಪಾರ ಸಂಖ್ಯೆಯ ಅಪ್ಪು ಬೆಂಬಲಿಗರು 20 ನಿಮಿಷಕ್ಕೂ ಹೆಚ್ಚು ಅವಧಿ ರಸ್ತೆ ತಡೆ ನಡೆಸಿ, ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಿಂದ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಅವರಿಗೆ ಟಿಕೆಟ್ ನೀಡಬೇಕು ಎಂದು ಬಿಜೆಪಿ ರಾಷ್ಟ್ರೀಯ ವರಿಷ್ಠರನ್ನು ಆಗ್ರಹಿಸಿದರು.

ಯಾವುದೇ ಕಾರಣಕ್ಕೂ ಪಕ್ಷದ ಬಿ ಫಾರ್ಮನ್ನು ಬಸನಗೌಡ ಪಾಟೀಲ ಯತ್ನಾಳಗೆ ಕೊಡಬಾರದು ಎಂದು ಹಕ್ಕೊತ್ತಾಯ ಮಂಡಿಸಿದ ಪ್ರತಿಭಟನಾಕಾರರು, ಯತ್ನಾಳ ವಿರುದ್ಧ ಧಿಕ್ಕಾರದ ಘೋಷಣೆ ಮೊಳಗಿಸಿ, ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಪಾಲಿಕೆ ಸದಸ್ಯ ಗೋಪಾಲ ಘಟಕಾಂಬಳೆ ಮಾತನಾಡಿ ‘ಬಿಜೆಪಿಗೆ ದುಡಿದ ಕಾರ್ಯಕರ್ತರನ್ನು, ನಾಯಕರನ್ನು ಕಡೆಗಣಿಸುತ್ತಿರುವುದು ಸರಿಯಲ್ಲ. ಪಕ್ಷ ಬಿಟ್ಟು, ಪಕ್ಷದ ಅಭ್ಯರ್ಥಿಗಳ ವಿರುದ್ಧವೇ ಚುನಾವಣೆಗೆ ಸ್ಪರ್ಧಿಸಿದ ವ್ಯಕ್ತಿಗೆ ಮಣೆ ಹಾಕಿ, ಪಕ್ಷಕ್ಕಾಗಿಯೇ ದುಡಿದ ಅಪ್ಪು ಪಟ್ಟಣಶೆಟ್ಟಿ ಅವರನ್ನು ಕಡೆಗಣಿಸಲಾಗಿದೆ. ಇದು ಸರಿಯಲ್ಲ. ಅಪ್ಪು ಅವರಿಗೆ ಟಿಕೆಟ್ ನೀಡಿದಲ್ಲಿ ಮಾತ್ರ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಜಯ ಸಾಧಿಸುವುದು ನಿಶ್ಚಿತ. ಈ ಎಲ್ಲ ಅಂಶಗಳನ್ನು, ಇದರ ಜತೆಗೆ ಪಟ್ಟಣಶೆಟ್ಟಿ ಅವರ ಪಕ್ಷ ನಿಷ್ಠೆಯನ್ನು ಪಕ್ಷದ ವರಿಷ್ಠರು ಗಮನಕ್ಕೆ ತೆಗೆದುಕೊಳ್ಳಬೇಕು’ ಎಂದು ಇದೇ ಸಂದರ್ಭ ಆಗ್ರಹಿಸಿದರು.

ಪಾಲಿಕೆ ಸದಸ್ಯರಾದ ಅಪ್ಪು ಸಜ್ಜನ, ಆನಂದ ಧುಮಾಳೆ, ಅಲ್ತಾಫ್‌ ಇಟಗಿ, ಪ್ರಕಾಶ ಮಿರ್ಜಿ, ರಾಹುಲ್ ಜಾಧವ, ಶಂಕರ ಕುಂಬಾರ ಪ್ರತಿಭಟನೆ ನೇತೃತ್ವ ವಹಿಸಿದ್ದು, ಅಪ್ಪಾಸಾಹೇಬ ಪಟ್ಟಣಶೆಟ್ಟಿ ಅವರಿಗೆ ಟಿಕೆಟ್‌ ನೀಡಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT