ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಟರ್ ಮ್ಯಾಟರ್‌: ಪ್ರತಿ ಹನಿಯೂ ಅಮೂಲ್ಯ!

Last Updated 12 ಜನವರಿ 2019, 19:30 IST
ಅಕ್ಷರ ಗಾತ್ರ

ಕೇರಳದಲ್ಲಿ ಈ ವರ್ಷ ಭಯಂಕರ ಮಳೆ ಉಂಟು ಮಾಡಿದ ಹಾಹಾಕಾರದ ಪ್ರತಿಧ್ವನಿ ಅಂದು ಆರೂವರೆ ಸಾವಿರ ಕಿ.ಮೀ ದೂರದ ಸ್ವೀಡನ್ ದೇಶದ ಸ್ಟಾಕ್‌ಹೋಂನಲ್ಲಿಯೂ ಮೊಳಗಿತು.

‘ಕೇರಳದ ಅತಿವೃಷ್ಟಿ, ಜಪಾನಿನ ಮಹಾಪೂರ, ಯುರೋಪಿನ ಬಿಸಿ ಅಲೆಗಳು ಈ ವಿಷಯಗಳನ್ನು ಎತ್ತುವುದಕ್ಕೇ ಭಯವಾಗುತ್ತಿದೆ. ಏಕೆಂದರೆ ಇವುಗಳಿಗೆ ಪೂರಕವಾದ ಆದರೆ ನಮ್ಮೆಲ್ಲರನ್ನೂ ಬೆಚ್ಚಿಬೀಳಿಸುವಂಥ ವಿವರಗಳು ನಮ್ಮಲ್ಲಿವೆ’ ಎನ್ನುತ್ತಲೇ ಅಂದಿನ ಕಾರ‍್ಯಕ್ರಮಕ್ಕೆ ಮುನ್ನುಡಿ ಹಾಕಿದರು ಜಾಗತಿಕ ಹವಾಮಾನ ಬದಲಾವಣೆಯ ಅಧ್ಯಯನ ನಡೆಸುತ್ತಿರುವ ಪರಿಸರ ವಿಜ್ಞಾನಿ ಯೊಹಾನ್‌ ರಾಕ್‌ಸ್ಟ್ರಾಮ್.

ಅದು ನೊಬೆಲ್‌ವೀಕ್‌ ಡೈಲಾಗ್, ಇಡೀ ದಿನದ ಸಮಾವೇಶ. ನೊಬೆಲ್ ಪ್ರಶಸ್ತಿ ಪ್ರದಾನದ ಮೊದಲ ಒಂದು ವಾರದ ಕಾರ್ಯಕ್ರಮದ ಅತ್ಯಂತ ಪ್ರಮುಖ ಅಂಗ. ಆರು ವರ್ಷಗಳಿಂದ ನಡೆಯುತ್ತಿರುವ ನೊಬೆಲ್‌ ಡೈಲಾಗ್‌ ವಿಶ್ವದಾದ್ಯಂತ ಜನರನ್ನು ಸೆಳೆಯುತ್ತಿದೆ. ವಿಜ್ಞಾನಿಗಳು, ತಜ್ಞರನ್ನು ಒಟ್ಟು ಸೇರಿಸಿ ಜಾಗತಿಕ ಮಟ್ಟದ ಜ್ವಲಂತ ಸಮಸ್ಯೆ ಅಥವಾ ವಿಜ್ಞಾನಕ್ಷೇತ್ರದ ಹೊಸ ಹೆಜ್ಜೆಯ ಕುರಿತು ಚರ್ಚೆ, ವಿಚಾರ ಸಂಕಿರಣಗಳು ಪ್ರತಿಷ್ಠಿತ ಸ್ಟಾಕ್‌ಹೋಂ ಸಿಟಿ ಸೆಂಟರ್ ಹಾಲ್‌ನಲ್ಲಿ ನಡೆಯುತ್ತವೆ.ಈ ಬಾರಿಯ ವಿಷಯ, ವಾಟರ್‌ ಮ್ಯಾಟರ್ಸ್, ಪ್ರತಿ ಹನಿಯೂ ಅಮೂಲ್ಯ.

ಪ್ರಸ್ತಾವನಾ ಭಾಷಣವನ್ನು ಮುಂದುವರಿಸುತ್ತ ಯೊಹಾನ್‌ ಅವರು ಅನೇಕ ಅಂತರರಾಷ್ಟ್ರೀಯ ಮಟ್ಟದ ಸಂಸ್ಥೆಗಳು ನಡೆಸಿದ ಅಧ್ಯಯನದ ವರದಿಗಳನ್ನು ಬಿಚ್ಚಿಡುತ್ತಾ ಹೋದರು.

‘ವಾಹನಗಳು ಮತ್ತು ಕೈಗಾರಿಕೆಗಳು ಹೊರಸೂಸುತ್ತಿರುವ ಇಂಗಾಲದ ಡೈ ಆಕ್ಸೈಡ್ ಪ್ರಮಾಣ ಮೂರು ವರ್ಷಗಳಿಂದ ಒಂದೇ ತೆರನಾಗಿದ್ದಿದ್ದು 2017ರಿಂದ ಮತ್ತೆ ಏರತೊಡಗಿದೆ. ವಿಚಿತ್ರವೆಂದರೆ ಆ ಮೂರೂ ವರ್ಷಗಳಲ್ಲಿ ಮಿಥೇನ್, ಸಲ್ಫರ್‌ ಡೈ ಆಕ್ಸೈಡ್ ಮತ್ತಿತರ ಹಸಿರುಮನೆ ಅನಿಲಗಳ ಮಾಲಿನ್ಯ ಅಧಿಕಗೊಂಡಿದೆ! ಅಂದರೆ ಇಡೀ ಜೀವಗೋಳದ ಸಮತೋಲನ ತಪ್ಪಿಹೋಗಿದೆ. ನಾವು ಮಾನವರು 10–15 ವರ್ಷಗಳಿಂದ ನಮ್ಮೀ ಭೂಗ್ರಹವನ್ನು ಹಾಕಿ ಸ್ಟಿಕ್ ಹಿಡಿದು ಚೆಂಡಾಡಿಸುತ್ತಿದ್ದೇವೆ.ಭೂ ವಾತಾವರಣದ ಉಷ್ಣತೆ 1 ಡಿಗ್ರಿ ಸೆಂಟಿಗ್ರೇಡ್‌ ಏರಿದೆ. ಈ ಬದಲಾವಣೆಯ ಮೊದಲ ಬಲಿ ಪರಿಸರ ವ್ಯವಸ್ಥೆಯ ಜೀವನಾಡಿಯಾದ ನೀರು. ಅತಿ ಹೆಚ್ಚು, ಅತಿ ಕಡಿಮೆ, ಬೇಡವಾದ ವೇಳೆ, ಬೇಡವಾದ ಜಾಗದಲ್ಲಿ ಮಳೆ ಸುರಿಯುತ್ತಿದೆ.

ಭೂ ಮಧ್ಯದಿಂದ ಧ್ರುವಪ್ರದೇಶಗಳಿಗೆ ಬಿಸಿ ನೀರನ್ನು ಒಯ್ದು ಅಲ್ಲಿಂದ ತಂಪು ನೀರನ್ನು ಮರಳಿ ತರುವ ಗಲ್ಫ್ ಪ್ರವಾಹಗಳು ಸಣಕಲಾಗುತ್ತಿವೆ. ಆಫ್ರಿಕಾದಲ್ಲಿ ಹೆಚ್ಚು ಬರ, ಪಶ್ಚಿಮ ಯುರೋಪಿನಲ್ಲಿ ಹೆಚ್ಚು ಚಳಿ ಇವುಗಳಿಗೆ ಕಾರಣವಾಗುತ್ತಿವೆ. ಭೂ ಮೇಲ್ಮೈನ ವಾತಾವರಣದಲ್ಲಿ ಜೆಟ್ ಪ್ರವಾಹ ಉಂಟುಮಾಡುವ ಬಿಸಿ ಮತ್ತು ತಂಪು ಹವೆಯ ಅದಲು ಬದಲಿನ ಆಟವೂ ತನ್ನತನವನ್ನು ಕಳೆದುಕೊಂಡು ಹವಾಮಾನ ಬದಲಾವಣೆ ಉಂಟುಮಾಡುತ್ತಿದೆ. ಇಂದು ಧ್ರುವಪ್ರದೇಶಗಳು ಬೇರೆಡೆಗಿಂತ ಅಧಿಕ ವೇಗವಾಗಿ ಬಿಸಿಯಾಗುತ್ತಿವೆ. ಜಗತ್ತಿನ ಹೆಚ್ಚಿನ ದೇಶಗಳು ಕಾಡಿನ ಮೇಲೆ ಹಾದು ತಂಪಾಗಿ ಮಳೆ ಸೂಸುವ ಮೋಡಗಳನ್ನು ನೆಚ್ಚಿಕೊಂಡಿವೆ. ಕಾಡು ಬರಿದಾದಂತೆ ಮಳೆ, ಬೆಳೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ‘ ಎಂದು ಸದ್ಯದ ಪರಿಸ್ಥಿತಿಯ ಕುರಿತು ವಿವರಿಸಿದ ಅವರುಈ ಭೂವ್ಯವಸ್ಥೆಗೆ ಚೇತರಿಸಿಕೊಳ್ಳುವ ಅವಕಾಶ ಖಂಡಿತ ಇದೆ ಎಂದು ಆಶಾಭಾವನೆಯನ್ನೂ ವ್ಯಕ್ತಪಡಿಸಿದರು.

ಈ ಜೀವಗೋಳವನ್ನು ಮತ್ತೆ ಸುಸ್ಥಿತಿಗೆ ತರಲು ನಮ್ಮ ಬಳಿ ವಿಜ್ಞಾನ ಇದೆ, ತಂತ್ರಜ್ಞಾನ ಇದೆ. ಇಂಗಾಲ ಹೊರಹೋಗುವುದನ್ನು ನಿಲ್ಲಿಸುವುದಷ್ಟೇ ಅಲ್ಲ, ವಾತಾವರಣದಿಂದ ಅದನ್ನು ಹೀರಿ ತೆಗೆಯುವ ವ್ಯವಸ್ಥೆ ಬರಬೇಕು. ಆಹಾರ ಉತ್ಪಾದನೆಯಲ್ಲಿ ಕ್ರಾಂತಿ ತರಬೇಕು, ನಮ್ಮ ಜೀವನ ಶೈಲಿಯಲ್ಲಿ ಕ್ರಾಂತಿ ತರಬೇಕು. 2025ರೊಳಗೆ ಇಂಗಾಲದ ಕಕ್ಕುವಿಕೆಯನ್ನು ಈಗಿನ ಅರ್ಧದಷ್ಟಕ್ಕೆ ಇಳಿಸಿ 2050ರ ವೇಳೆಗೆ ಕಲ್ಲಿದ್ದಲಿನ ಬಳಕೆಯನ್ನು ಸಂಪೂರ್ಣ ಸ್ಥಗಿತಗೊಳಿಸಬೇಕು. ವಿದ್ಯುತ್ ಮತ್ತಿತರ ಶಕ್ತಿ ಉತ್ಪಾದನೆಗೆ ಸೋಲಾರ್, ಗಾಳಿಯಂತಹ ಮರುಬಳಕೆಯ ತಂತ್ರಜ್ಞಾನ, ಕೈಗಾರಿಕಾ ಕ್ಷೇತ್ರದಲ್ಲಿ ಪುನರ್‌ ಬಳಕೆಯೇ ಮಂತ್ರವಾಗುಳ್ಳ ಸರ್ಕ್ಯುಲರ್ ಇಕಾನಮಿ, ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಕನಿಷ್ಠ ಇಂಗಾಲದ ಬಿಸಿ ಮತ್ತು ತಂಪು ವ್ಯವಸ್ಥೆ, ಸಾರಿಗೆ ಕ್ಷೇತ್ರದಲ್ಲಿ ಕಡಿಮೆ ಮಾಲಿನ್ಯ ಸೂಸುವ ಟ್ರಕ್ಕುಗಳು ಹಾಗೂ ಸಾರ್ವಜನಿಕ ಮತ್ತು ಎಲೆಕ್ಟ್ರಿಕ್ ವಾಹನಗಳ ನಿರ್ಮಾಣ ಮತ್ತು ಬಳಕೆ ಹಾಗೂ ವಿಮಾನ ಪ್ರಯಾಣದಲ್ಲಿ ಕಡಿತ, ಆಹಾರ ಕ್ಷೇತ್ರದಲ್ಲಿ ಸಸ್ಯಾಧಾರಿತ ಆಹಾರ ಪದ್ಧತಿ, ತ್ಯಾಜ್ಯವಸ್ತುಗಳ ಕಂಪೋಸ್ಟಿಂಗ್, ಆಹಾರ ಪದಾರ್ಥಗಳು ಪೋಲಾಗುವುದನ್ನು, ಹಾಳಾಗುವುದನ್ನು ತಡೆಗಟ್ಟುವುದು, ಕೃಷಿಕ್ಷೇತ್ರದಲ್ಲಿ ಸುಸ್ಥಿರ ಕೃಷಿ ಪದ್ಧತಿಗಳು, ಅರಣ್ಯಗಳ ಪುನರುಜ್ಜೀವನ ಹೀಗೆ ಹತ್ತಾರು ಸಲಹೆಗಳನ್ನೂ ಸೂಚಿಸಿದರು.

ಸ್ಕಾಟ್ ಪೋಲಾರ್‌ ಇನ್ಸ್‌ಸ್ಟಿಟ್ಯೂಟ್‌ ಹಿಮಶಾಸ್ತ್ರಜ್ಞ ಜೂಲಿಯನ್‌ ಡೌಡ್ಸ್ ವೆಲ್ ಅನೇಕ ವರ್ಷಗಳಿಂದ ಉಪಗ್ರಹಗಳು, ವಿಮಾನಗಳು ಹಾಗೂ ಹಡಗುಗಳ ಉಪಕರಣಗನ್ನು ಬಳಸಿ ಗ್ಲೇಸಿಯರ್ಸ್ ಕರಗುವುದನ್ನು ದಾಖಲಿಸುತ್ತ ಹವಾಮಾನ ಬದಲಾವಣೆಯ ಸತತ ಅಧ್ಯಯನ ನಡೆಸಿದವರು. ‘ಮೂವತ್ತೈದು ವರ್ಷಗಳ ಹಿಂದೆ ಧ್ರುವ ಪ್ರದೇಶಗಳ ಸಮುದ್ರ ಪ್ರಯಾಣದಲ್ಲಿ ಹಿಮಬಂಡೆಗಳನ್ನು ಒಡೆದು ಮುಂದೆ ಸಾಗಬೇಕಾಗಿತ್ತು, 5–10 ವರ್ಷಗಳಿಂದ ಸಾಧಾರಣ ಹಡಗಿನಲ್ಲಿಯೂ ಅಲ್ಲಿಗೆ ಸಾಗಬಹುದಾಯಿತು, ಆಗ ಕಾಣುತ್ತಿದ್ದ ಹಿಮಕರಡಿಗಳು ಈಗ ಅಪರೂಪವಾಗುತ್ತಿವೆ’ ಎಂದು ನಿಟ್ಟುಸಿರುಬಿಡುತ್ತಾರೆ ಜೂಲಿಯನ್.

ಜಲಚಕ್ರ ಈಗಾಗಲೇ ಮುರಿದಿದೆ, ಆದರೆ ಅಂತರ್ಜಲ ಎಷ್ಟು ಬರಿದಾಗಿದೆ. ಇನ್ನೆಷ್ಟು ಉಳಿದಿದೆ ಎಂಬುದನ್ನು ಸುಲಭದಲ್ಲಿ ಅಳೆಯಲು ಸಾಧ್ಯವಿಲ್ಲ. ಅದಕ್ಕೆಂದು ವಿಜ್ಞಾನಿಗಳು ಉಪಗ್ರಹ ಚಿತ್ರಗಳನ್ನು ಅಧ್ಯಯನ ಮಾಡುತ್ತಿದ್ದಾರೆ. ಶುದ್ಧನೀರನ್ನು ನಂಬಿದ ಇತರ ಪ್ರಾಣಿ, ಪಕ್ಷಿಗಳು, ಕಾಡುಗಳು ಅಳಿಯುತ್ತಿವೆ. ವೈಯಕ್ತಿಕ, ಕಂಪನಿಗಳ ಅಥವಾ ದೇಶಗಳ ಜಲಹೆಜ್ಜೆಯನ್ನು ಅವು ಬಳಸುವ ನೀರನ್ನು ಲೆಕ್ಕ ಹಾಕಿ ಅಳೆಯಬಹುದು. ಅಮೆರಿಕದ ಪ್ರಜೆಯದು ಬೃಹತ್ ಹೆಜ್ಜೆ. ಪ್ರತಿದಿನ 2000 ಗ್ಯಾಲನ್ ನೀರು ಬಳಸುತ್ತಾನೆ. ಡಯಟ್, ಉಡುಗೆ ತೊಡುಗೆ, ನಿತ್ಯದ ದಿನಚರಿ ಇವುಗಳಲ್ಲಿ ಪ್ರಜ್ಞಾಪೂರ್ವಕವಾಗಿ ಜಲಹೆಜ್ಜೆಯನ್ನು ಕುಗ್ಗಿಸಬಹುದು. ನಿಸರ್ಗವನ್ನು ನಮ್ಮ ಅಂಗೈ ದಾಸನಾಗಿಸದೆ ಜತೆಗಾರರನ್ನಾಗಿ ಮಾಡಿಕೊಡುವ ಇಕೊ ಎಂಜಿನಿಯರಿಂಗ್, ಇಕೊ ಸೋಶಿಯಲ್ ಎಂಜಿನಿಯರಿಂಗ್ ನಮಗೆ ಇಂದು ಬೇಕಾಗಿದೆ. ಬೊಲಿವಿಯಾದಲ್ಲಿ ನೀರಿಗಾಗಿ ನಡೆದ ಹೋರಾಟದಲ್ಲಿ ತಮ್ಮ ಪರವಾಗಿ ಮಾತನಾಡಿದರೆಂಬ ಅಭಿಮಾನದಿಂದ ವೃದ್ಧೆಯೊಬ್ಬಳು ತಮಗೇ ಅಪರೂಪವಾದ ಲೋಟ ತುಂಬ ಶುದ್ಧ ನೀರನ್ನು ನೀಡಿದ್ದನ್ನು ಸಾಂಡ್ರಾ ನೆನಪಿಸಿಕೊಂಡರು.

ನೀರು ಮತ್ತು ಹವಾಮಾನ ಬದಲಾವಣೆ ಹೇಗೆ ಒಂದಕ್ಕೊಂದು ಥಳುಕು ಹಾಕಿಕೊಂಡಿದೆ ಎಂಬ ಕುರಿತಾದ ಗೋಷ್ಠಿಯಲ್ಲಿ 1997ರಲ್ಲಿ ಭೌತಶಾಸ್ತ್ರದಲ್ಲಿ ನೊಬೆಲ್ ವಿಜೇತ ಸ್ಟೀವನ್ ಶು ಅವರ ಪ್ರಕಾರ ಭೂಬಿಸಿ ಹೆಚ್ಚಿದಂತೆ ಹಿಮ ಹೆಚ್ಚೆಚ್ಚು ಕರಗುತ್ತಿದೆ. ಹೆಚ್ಚು ನೀರು ಓಡುತ್ತಿದೆ. ಆವಿಯೂ ಆಗುತ್ತಿದೆ. ಮಳೆ ಬರುತ್ತಿದೆ. ಆದರೆ ಎಲ್ಲರಿಗೂ ಎಲ್ಲ ಕಡೆಯೂ ನೀರು ಸಿಗುತ್ತಿಲ್ಲ. ಜವುಳು ಭೂಮಿ ಇನ್ನಷ್ಟು ಜವುಳಾದರೆ, ಒಣಭೂಮಿ ಇನ್ನೂ ವಿಸ್ತರಿಸುತ್ತಿದೆ.

ಕ್ಯಾಲಿಫೊರ್ನಿಯಾ ಮತ್ತು ಕೊಲರಾಡೊ ನದಿಗಳಿಂದ ನೀರಿನ ಪೂರೈಕೆ ಇರುವ ಲಾಸ್‌ಎಂಜಲೀಸ್‌ ಅದನ್ನು ಕಡಿಮೆಗೊಳಿಸಿ, ಪ್ರವಾಹ ಹೊತ್ತುತರುವ ನೀರನ್ನು ಉಪದ್ರವವೆಂದು ಪರಿಗಣಿಸದೆ ಅದನ್ನು ಸಂಗ್ರಹಿಸಿ, ಅಂತರ್ಜಲವಾಗಿಸಿ ನೀರಿಲ್ಲದ ದಿನಗಳಲ್ಲಿ ಬಳಸುವ, ಆ ಪ್ರಕಾರ ಅರ್ಧದಷ್ಟಕ್ಕೆ ಇಳಿಸುವ ಗುರಿ ಹೊಂದಿದೆ. ರೈತರ ಲಾಬಿ ಬಹಳಷ್ಟಿದ್ದ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ಪೂರೈಕೆಯಾದ ಶೇಕಡಾ 20ರಷ್ಟು ವಿದ್ಯುತ್ ಕೃಷಿಗೆ ಬಳಕೆಯಾಗುತ್ತಿದೆ.

ಕೆನಡಿಯನ್ಸ್‌ ಕೌನ್ಸಿಲ್‌ನ ಗೌರವಾಧ್ಯಕ್ಷೆ ಮೌಡೆ ಬರ‍್ಲೊ ಹೇಳುವ ಪ್ರಕಾರ ಈ ವರ್ಷ ಮಾನವ ಪೀಳಿಗೆ ಎದುರಿಸುತ್ತಿರುವ ಅತ್ಯಂತ ಜಟಿಲ ಸಮಸ್ಯೆ ಎಂದರೆ ನೀರಿನ ಅಭಾವ ಎಂದಿದೆ ವಿಶ್ವಸಂಸ್ಥೆ. ಇಂದು ಐದು ವರ್ಷದೊಳಗಿನ ಮಕ್ಕಳಲ್ಲಿ ಪ್ರತಿ ಎರಡು ನಿಮಿಷಕ್ಕೆ ಒಂದು ಮಗು ನೀರಿನ ಸೋಂಕಿನಿಂದಾಗಿ ಸಾವನ್ನಪ್ಪುತ್ತಿದೆ. 2010ರಲ್ಲಿ ನೀರು ಮತ್ತು ನೈರ್ಮಲ್ಯವನ್ನು ಪ್ರತಿಯೊಬ್ಬರ ಹಕ್ಕು, ಅದು ನ್ಯಾಯಯುತವಾಗಿ ಪ್ರತಿ ಪ್ರಜೆಗೆ ದೊರೆಯಬೇಕಾದ್ದು, ದಾನವಾಗಿ ಅಲ್ಲ ಎಂದು ವಿಶ್ವಸಂಸ್ಥೆ ಘೋಷಿಸಿದ ನಂತರ 48 ದೇಶಗಳು ನೀರು ನಾಗರಿಕರ ಮೂಲಭೂತ ಹಕ್ಕು ಎಂಬುದಾಗಿ (ಕೆಲವು ದೇಶಗಳಲ್ಲಿ ಹಿಂದುಳಿದ ಸಮುದಾಯಗಳು, ಸಂಘ, ಸಂಸ್ಥೆಗಳು ಹೋರಾಟ ನಡೆಸಿದ ನಂತರ) ತಮ್ಮ ಸಂವಿಧಾನದಲ್ಲಿ ಸೇರಿಸಿಕೊಂಡಿವೆ. ತೈಲ ಮತ್ತು ಅನಿಲದಂತೆ ನೀರನ್ನೂ ಒಂದು ಸರಕಾಗಿ ಮಾರಾಟ ಮಾಡುವಂತಿಲ್ಲ.

ಎಲ್ಲರಿಗೂ, ಎಲ್ಲ ಕಡೆಯೂ, ಎಲ್ಲ ವೇಳೆಯಲ್ಲೂ ಶುದ್ಧ ನೀರು ಸಿಗುವಂತಾಗಬೇಕು. ಹವಾಮಾನ ಬದಲಾವಣೆ ನೀರಿನ ಬವಣೆಗೆ ಒಂದು ಕಾರಣವಾದರೆ, ನೀರಿನ ದುರ್ಬಳಕೆ, ಅತಿಬಳಕೆ, ಜಲಮೂಲಗಳ ನಾಶ ಇತ್ಯಾದಿಗಳು ನಾವೇ ಹುಟ್ಟುಹಾಕಿದ ಸಮಸ್ಯೆಗಳು. ಹಾಗಾಗಿ ನಾವಿಂದು ನೀರನ್ನು ನಮ್ಮ ಸುಖ ಸಂತೋಷಕ್ಕಾಗಿ ಇರುವ ಒಂದು ಸಂಪನ್ಮೂಲವೆಂದು ಭಾವಿಸದೆ, ಜೀವಂತ ಪರಿಸರ ವ್ಯವಸ್ಥೆಯ ಒಂದು ಪ್ರಮುಖ ಅಂಗವಾಗಿ ಕಾಣಬೇಕು; ಗೌರವಿಸಬೇಕು.

ವಿಜ್ಞಾನದ ಪಾತ್ರ

ಇಡೀ ಮಾನವಕುಲಕ್ಕೆ ಸಂಕಷ್ಟ ಬಂದೊದಗಿರುವಾಗ ವಿಜ್ಞಾನದ ಪಾತ್ರ ಏನು? ಸಮುದ್ರ, ನೀರು, ಕಾಡು ಇವುಗಳಿಗಿರುವ ಸೂಕ್ಷ್ಮ ಸಂಬಂಧಗಳನ್ನು ಎಳೆಎಳೆಯಾಗಿ ಮಕ್ಕಳಿಗೆ ಎಳವೆಯಿಂದಲೇ ಕಲಿಸುವ ವ್ಯವಸ್ಥೆ ಪ್ರತಿ ಶಾಲೆಯಲ್ಲೂ ಆಗಬೇಕು. ವಿಜ್ಞಾನ ಆಧಾರಿತ ನೀತಿ ನಿಯಮಾವಳಿಗಳು ರೂಪಿತವಾಗಬೇಕು, ವಿಜ್ಞಾನಿಗಳು ಸರ್ಕಾರಗಳಿಗೆ ಮತ್ತು ವ್ಯಾಪಾರೀ ಕಂಪನಿಗಳಿಗೆ ಈಗಿರುವಂತೆ ನಡೆಸುತ್ತಾ ಹೋದರೆ ಇನ್ನು 10–15 ವರ್ಷಗಳಲ್ಲಿ ವ್ಯಾಪಾರ ನಡೆಸಲು ಏನೂ ಉಳಿಯಲಿಕ್ಕಿಲ್ಲ ಎಂದು ಮನವರಿಕೆ ಮಾಡಿಕೊಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT