ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲ ಅಭಾವ: ಮಿತವ್ಯಯವೇ ಪರ್ಯಾಯ

ನೀರು ಸೋರಿಕೆ ತಡೆಗಟ್ಟಬೇಕು l ಮಳೆ ನೀರು ಸಂಗ್ರಹ ಪ್ರಮಾಣ ಹೆಚ್ಚಾಗಬೇಕು
Last Updated 2 ನವೆಂಬರ್ 2020, 19:14 IST
ಅಕ್ಷರ ಗಾತ್ರ

ಬೆಂಗಳೂರು: ವಿಶ್ವದಲ್ಲಿ 2050ರ ವೇಳೆಗೆ ನೀರಿನ ತೀವ್ರ ಅಭಾವ ಎದುರಿಸಲಿರುವ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಸ್ಥಾನ ಪಡೆದಿದೆ. ಜನಸಂಖ್ಯೆ ಹೆಚ್ಚಿದಂತೆ ನೀರಿನ ಕೊರತೆಯೂ ಜಾಸ್ತಿಯಾಗಲಿದ್ದು, ಇದಕ್ಕೆ ಮಿತವ್ಯಯವೇ ಪರಿಣಾಮಕಾರಿ ಪರ್ಯಾಯ ಮಾರ್ಗ ಎನ್ನುತ್ತಾರೆ ಜಲಮಂಡಳಿಯ ಅಧ್ಯಕ್ಷ ಎನ್. ಜಯರಾಂ.

‘ನಗರವು ಕುಡಿಯುವ ನೀರಿಗೆ ಹೆಚ್ಚು ಅವಲಂಬಿಸಿರುವುದು ಕಾವೇರಿ ನದಿ ನೀರನ್ನು. ನದಿ ಮೂಲದ ಬದಲು, ಕೊಳವೆ ಬಾವಿಗಳನ್ನು ಹೆಚ್ಚು ಅವಲಂಬಿಸಿದ್ದರೆ ಅಂತರ್ಜಲ ಬತ್ತಿ ಹೋಗುವ ಅಪಾಯವಿತ್ತು. ಅಲ್ಲದೆ, 2023ರ ವೇಳೆಗೆ ಕೆ.ಆರ್.ಎಸ್‌ ನಿಂದ ಹೆಚ್ಚುವರಿ ನೀರು ತರಲು ವ್ಯವಸ್ಥೆ ಮಾಡಲಾಗುತ್ತಿದ್ದು, ನೀರಿನ ಕೊರತೆ ಉದ್ಭವಿಸುವುದಿಲ್ಲ. ಜನರು ಆತಂಕಕ್ಕೆ ಒಳಗಾಗಬೇಕಾದ ಅಗತ್ಯವಿಲ್ಲ’ ಎಂದೂ ಅವರು ಹೇಳಿದರು.

‘ಕೆಆರ್‌ಎಸ್‌ನಿಂದ ನಗರಕ್ಕೆ ಈಗ ನಿತ್ಯ 145 ಕೋಟಿ ಲೀಟರ್‌ ನೀರು ಪೂರೈಕೆಯಾಗುತ್ತಿದೆ. 2025–26ರ ವೇಳೆಗೆ ನಗರದಲ್ಲಿ ಹೆಚ್ಚಾಗುವ ಜನಸಂಖ್ಯೆ ನೋಡಿದರೆ, ದಿನಕ್ಕೆ 220 ಕೋಟಿ ಲೀಟರ್‌ ಬೇಕಾಗುತ್ತದೆ. ಈ ನಡುವೆ, 2023ರ ವೇಳೆಗೆ ಕೆಆರ್‌ಎಸ್‌ನಿಂದ ಹೆಚ್ಚುವರಿಯಾಗಿ ದಿನಕ್ಕೆ 75 ಕೋಟಿ ಲೀಟರ್‌ ತೆಗೆದುಕೊಳ್ಳುವುದರಿಂದ ನೀರು ಪೂರೈಕೆಗೆ ತೊಂದರೆ ಆಗುವುದಿಲ್ಲ' ಎಂದು ಅವರು ಹೇಳಿದರು.

ಅಂಕಿ–ಅಂಶ

145 ಕೋಟಿ ಲೀಟರ್‌: ಕಾವೇರಿಯಿಂದ ನಗರಕ್ಕೆ ನಿತ್ಯ ಪೂರೈಕೆಯಾಗುವ ನೀರಿನ ಪ್ರಮಾಣ

1.5 ಟಿಎಂಸಿ ಅಡಿ:ನಗರದ ತಿಂಗಳ ನೀರಿನ ಬೇಡಿಕೆ

19 ಟಿಎಂಸಿ ಅಡಿ:ಕಾವೇರಿಯಿಂದ ವರ್ಷಕ್ಕೆ ಈಗ ನಗರ ಪಡೆಯುತ್ತಿರುವ ನೀರು

29 ಟಿಎಂಸಿ ಅಡಿ:2023ರ ವೇಳೆಗೆ ಕಾವೇರಿಯಿಂದ ನಗರಕ್ಕೆ ಸಿಗಲಿರುವ ನೀರು

100 ಲೀಟರ್‌:ನಗರದಲ್ಲಿ ದಿನಕ್ಕೆ ‍ಪ್ರತಿ ವ್ಯಕ್ತಿಗೆ ಪೂರೈಸುತ್ತಿರುವ ನೀರು

30 ಲೀಟರ್‌:ವ್ಯಕ್ತಿಗೆ ದಿನಕ್ಕೆ ನೀಡಲು ಉದ್ದೇಶಿಸಿರುವ ಸಂಸ್ಕರಿಸಿದ ತ್ಯಾಜ್ಯ ನೀರು

ನೀರು ಸೋರಿಕೆ ಪ್ರಮಾಣ ಶೇ 37 !

ನಗರದಲ್ಲಿ ಶೆ 37ರಷ್ಟು ನೀರು ಸೋರಿಕೆಯಾಗುತ್ತಿದೆ. ಅನಧಿಕೃತ ಸಂಪರ್ಕಗಳು, ಶಿಥಿಲಗೊಂಡಿರುವ ಪೈಪ್‌ಲೈನ್‌ಗಳು ಮತ್ತು ಜಲಾಗಾರಗಳಿಂದ ಈ ಪ್ರಮಾಣದ ನೀರು ಸೋರಿಕೆಯಾಗುತ್ತಿದ್ದು, ಇದನ್ನು ತಡೆಗಟ್ಟಬೇಕಾದ ಅವಶ್ಯಕತೆ ಇದೆ.

‘ನೀರು ಸೋರಿಕೆ ತಡೆಗೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮೊದಲು ನೀರು ಸೋರಿಕೆ ಪ್ರಮಾಣ ಶೇ 48ರಷ್ಟು ಇತ್ತು. ಈಗ ಇದನ್ನು ಶೇ 37ಕ್ಕೆ ಇಳಿಸಲಾಗಿದೆ. ಅಲ್ಲದೆ, 30 ಸಾವಿರಕ್ಕೂ ಹೆಚ್ಚು ಅನಧಿಕೃತ ಸಂಪರ್ಕಗಳನ್ನು ಗುರುತಿಸಲಾಗಿದೆ. ಇವರಿಗೆ ದಂಡ ವಿಧಿಸಿ, ಅವುಗಳನ್ನು ಅಧಿಕೃತ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಜಯರಾಂ ತಿಳಿಸಿದರು.

‘ಹಳೆಯ ಪೈಪ್‌ಲೈನ್‌ಗಳನ್ನು ಬದಲಾಯಿಸುವುದು ತುಂಬಾ ವೆಚ್ಚದಾಯಕ ಮತ್ತು ಸವಾಲಿನ ಕೆಲಸ. ಮೆಜೆಸ್ಟಿಕ್ ಸುತ್ತ–ಮುತ್ 50–60 ವರ್ಷಗಳಷ್ಟು ಹಳೆಯದಾದ ಪೈಪ್‌ಲೈನ್‌ಗಳಿವೆ. ಇಂತಹ ಪೈಪ್‌ಲೈನ್‌ಗಳನ್ನು ಬದಲಾಯಿಸುವುದಕ್ಕೆ ಅನೇಕ ಸವಾಲುಗಳು ಎದುರಾಗುತ್ತಿವೆ. ಆದರೂ, ಇಂದಿರಾ ನಗರ ಸೇರಿದಂತೆ ನಗರದ ವಿವಿಧ ಕಡೆಗೆ ಹಳೆಯ ಪೈಪ್‌ಲೈನ್‌ ತೆರವುಗೊಳಿಸಿ ಹೊಸದನ್ನು ಅಳವಡಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ’ ಎಂದು ಹೇಳಿದರು.

ಸಂಗ್ರಹಿಸಿದ ನೀರು ಮರಳಿ ಚರಂಡಿಗೆ !

ನಿರ್ದಿಷ್ಟ ವಿಸ್ತೀರ್ಣದ ಮನೆಗಳು ಮತ್ತು ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹಿಸುವುದನ್ನು ಕಡ್ಡಾಯ ಮಾಡಲಾಗಿದೆ. ಇದಕ್ಕೆ ತಪ್ಪಿದಲ್ಲಿ ಜಲಮಂಡಳಿಯಿಂದ ದಂಡವನ್ನೂ ವಿಧಿಸಲಾಗುತ್ತದೆ. ಆದರೆ, ಎಷ್ಟೋ ಜನ ಹೀಗೆ ಸಂಗ್ರಹಿಸಿದ ಮಳೆ ನೀರನ್ನು ಮತ್ತೆ ಚರಂಡಿಗೆ ಅಥವಾ ರಸ್ತೆಗೆ ಹರಿಯಬಿಡುವುದು ಸವಾಲಾಗಿ ಪರಿಣಮಿಸಿದೆ. ಹೀಗೆ ಸಂಗ್ರಹಿಸಿದ ನೀರನ್ನು, ಮಳೆ ಸುರಿಯುತ್ತಿರುವಾಗಲೇ ಶೌಚಾಲಯಗಳ ಮೂಲಕ ಒಳಚರಂಡಿಗೆ ಹರಿಸುತ್ತಿರುವುದರಿಂದ ಪೈಪ್‌ಲೈನ್‌ಗಳಿಗೂ ಹಾನಿಯಾಗುತ್ತಿದೆ. ಸಂಗ್ರಹಿಸಿದ ನೀರನ್ನು ಸಮರ್ಪಕವಾಗಿ ಪುನರ್‌ ಬಳಸುವ ಕೆಲಸವಾಗಬೇಕಾಗಿದೆ ಎಂದು ತಜ್ಞರು ಹೇಳುತ್ತಾರೆ.

ಜನರಲ್ಲಿಯೂ ಬೇಕು ಜಾಗೃತಿ

ನೀರನ್ನು ಮಿತವ್ಯಯವಾಗಿ ಬಳಸುವ ಕುರಿತು ಜನರಲ್ಲಿಯೂ ಜಾಗೃತಿ ಮೂಡಬೇಕಾಗಿದೆ ಎಂದು ಜಲತಜ್ಞರು ಹೇಳುತ್ತಾರೆ.

l ಕಟ್ಟಡ ನಿರ್ಮಾಣಕ್ಕೆ, ಕಾರು, ಮನೆಯ ಆವರಣ ತೊಳೆಯಲು ಕುಡಿಯುವ ನೀರು ಬಳಸಬಾರದು

l ತ್ಯಾಜ್ಯ ನೀರನ್ನು ಕಟ್ಟಡ ನಿರ್ಮಾಣಕ್ಕೆ ಬಳಸಬೇಕು

l ಶುದ್ಧೀಕರಿಸಿದ ತ್ಯಾಜ್ಯ ನೀರನ್ನೇ ಉದ್ಯಾನಕ್ಕೆ, ಶೌಚಾಲಯಕ್ಕೆ ಬಳಸಬೇಕು

l ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸಿಕೊಳ್ಳಬೇಕು

l ಓವರ್‌ಟ್ಯಾಂಕ್‌ ತುಂಬಿ ಹರಿಯದಂತೆ ಎಚ್ಚರಿಕೆ ವಹಿಸಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT