ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲ ಸಂರಕ್ಷಣೆ : ಜಾಗೃತಿಯೇ ಮೊದಲು, ನಂತರ ಕಾನೂನು

Last Updated 29 ಜುಲೈ 2019, 19:30 IST
ಅಕ್ಷರ ಗಾತ್ರ

‘ಸ್ವಾತಂತ್ರ್ಯದಿಂದೀಚೆಗೆ ಸರ್ಕಾರದ ನೂರೆಂಟು ಯೋಜನೆ, ಸಬ್ಸಿಡಿಗಳಿಗೆ ಕೈಯೊಡಿದ್ದೀರಿ. ಆದರೆ, ನಿಮ್ಮ ನೀರಿನ ಸಮಸ್ಯೆ ಪರಿಹಾರ ಆಗಿಲ್ಲ ಅಂತೀರಿ. ಬದಲಾವಣೆಗಾಗಿ, ಈ ಸಲ ಆಕಾಶಕ್ಕೆ ಕೈಯೊಡ್ಡಿ. ಮಳೆ ನೀರು ಹಿಡಿಯಲು ಆರಂಭಿಸಿ. ಈ ದಾರಿ ನಿಮ್ಮ ನೀರಿನ ಸಮಸ್ಯೆ ಪರಿಹರಿಸಬಲ್ಲುದು. ಅದಕ್ಕೆ ಬೇಕಾದ ಸಹಾಯ ಕೊಡೋ ಬಗ್ಗೆ ಚಿಂತಿಸೋಣ’

ಹದಿನಾಲ್ಕು ವರ್ಷಗಳ ಹಿಂದೆ ಬಾಗಲಕೋಟೆಯ ಜಿಲ್ಲಾಧಿಕಾರಿಯಾಗಿದ್ದ ಆರ್. ಪ್ರಭಾಕರ್, ತಾವೇ ಆಯೋಜಿಸಿದ್ದ ಐತಿಹಾಸಿಕ ‘ಜಲಜಾಥಾ’ ಕಾರ್ಯಕ್ರಮದಲ್ಲಿ ಜನರಿಗೆ ಸಲಹೆ ಕೊಡುತ್ತಿದ್ದ ಪರಿ ಇದು. ಅವರು ತಮ್ಮ ಸರ್ಕಾರಿ ನಿವಾಸ ಮತ್ತು ಬೆಂಗಳೂರಿನ ಸ್ವಂತ ಮನೆಗೆ ಮಳೆ ನೀರು ಸಂಗ್ರಹ ವಿಧಾನ ಅಳವಡಿಸಿದ್ದರು. ಆ ಅನುಭವ, ಜಿಲ್ಲೆಯ ನೀರಿನ ಪರಿಸ್ಥಿತಿ ಎರಡೂ ಸೇರಿ, ಅವರನ್ನು ಜಿಲ್ಲೆಯಾದ್ಯಂತ ಜಲ ಸಂರಕ್ಷಣಾ ಶಿಕ್ಷಣ ಪಸರಿಸಲು ಪ್ರೇರೇಪಿಸಿತ್ತು. ಆದರೆ, ಅವರಿಗೆ ಆಗ ತೊಡಕಾಗಿದ್ದು ಜಿಲ್ಲೆಯಲ್ಲಿದ್ದ ಕನಿಷ್ಠ ಸಾಕ್ಷರತೆ(ಸಾಕ್ಷರತೆ ಪ್ರಮಾಣ ಶೇ 23). ಆಗ ಅವರು ಅನುಸರಿಸಿದ್ದು ಬೀದಿ ನಾಟಕಗಳ ಮೂಲಕ ಜಲಸಾಕ್ಷರ ಅಭಿಯಾನವನ್ನು. ಅದಕ್ಕಾಗಿ ಅದೇ ಜಿಲ್ಲೆಯಲ್ಲಿದ್ದ ವೃತ್ತಿ ನಾಟಕ ಕಂಪನಿಗಳ ಪ್ರತಿಭಾವಂತ ಕಲಾವಿದರನ್ನು ಕರೆಸಿ, ಜಲಸಂರಕ್ಷಣೆಯ ಹಾಡು, ನಾಟಕ ಬರೆಯಿಸಿ ಅವರಿಗೆ ತರಬೇತಿ ಕೊಟ್ಟರು. ಒಟ್ಟು ಹತ್ತು ತಂಡ. ಪ್ರತಿ ತಂಡಕ್ಕೆ ಎರಡು ವಾಹನ. ಹತ್ತು ದಿನಗಳ ಜಲಜಾಥಾ ಹೊರಟೇಬಿಟ್ಟಿತು. ಜಾಥಾದ ನಂತರ ಕಲಾವಿದರು ಊರವರೊಂದಿಗೆ ನೀರಿನ ಸುಖ–ದುಃಖ ಮಾತನಾಡುತ್ತಿದ್ದರು. ಜತೆಗೆ ಅಧಿಕಾರಿಗಳು, ಜಿಲ್ಲಾಧಿಕಾರಿಯೂ ಇರುತ್ತಿದ್ದರು. ಆ ಸಂವಾದದಲ್ಲಿ, ನೀರು ಕೇಳುವ ಹಕ್ಕೊತ್ತಾಯಗಳು ಬರುತ್ತಿದ್ದುವು. ಅದರ ಜತೆಗೆ ಕಲಾವಿದರು, ಅಧಿಕಾರಿಗಳು ನಿಧಾನವಾಗಿ ಜನರಿಗೆ ಮಳೆ ನೀರು ಸಂಗ್ರಹದ ಕುರಿತು ಪಾಠ ಹೇಳುತ್ತಾ ಜಲಸಂರಕ್ಷಣೆಯ ಬೀಜ ಬಿತ್ತುತ್ತಿದ್ದರು.

ರಾಜ್ಯದಲ್ಲಿ ನಡೆದ ಮೊತ್ತ ಮೊದಲ ಸಾಮೂಹಿಕ ಜಲಜಾಗೃತಿಯ ಈ ಅದ್ಭುತ ಕಾರ್ಯ ರಾಜ್ಯ ಮಟ್ಟದಲ್ಲಿ ಸುದ್ದಿಯೂ ಆಗಲಿಲ್ಲ. ರಾಜ್ಯ ಸರ್ಕಾರ ಈ ವಿಚಾರದಲ್ಲಿ ರವಷ್ಟೂ ಆಸಕ್ತಿ ತೆಗೆದುಕೊಂಡಿರಲಿಲ್ಲ. ಉದ್ಘಾಟನೆಗಾಗಿ ಪ್ರಭಾಕರ್ ಸಚಿವರನ್ನು ವಾರಗಟ್ಟಲೆ ಕಾಯುವಂತಾಗಿತ್ತು. ಆದರೆ, ಹತ್ತೇ ದಿನಗಳಲ್ಲಿ ಜಿಲ್ಲೆಯಲ್ಲೇ ಮಳೆಕೊಯ್ಲು ಮನೆಮಾತಾಯಿತು. ಅಂತಹ ಕಳಕಳಿಯ ಗಟ್ಟಿ ಹೆಜ್ಜೆ ಅದು.

ದಕ್ಷಿಣ ಭಾರತದಲ್ಲೇ ಹಿಂದೆ

ಇದಾಗಿ ವರ್ಷ ಹದಿಮೂರು ಸಂದಿದೆ. ಅನಂತರದ ವರ್ಷಗಳಲ್ಲಿ ಬರ ಬಿಗಡಾಯಿಸುತ್ತಾ ಹೋಗಿದೆ. ಆದರೆ ಯಾವ ಸರ್ಕಾರಗಳಿಗೂ ಅಧಿಕಾರಿಗಳಿಗೂ ಜನರಲ್ಲಿ ನೀರೆಚ್ಚರ ಹುಟ್ಟಿಸಬೇಕು, ನೀರ ನೆಮ್ಮದಿಗಾಗಿ ಜನ ಸಹಭಾಗಿತ್ವ ಪಡೆಯಬೇಕು ಅನ್ನಿಸಿದ್ದೇ ಇಲ್ಲ!

ಕಳೆದ ದಶಕದ ಆರಂಭದಲ್ಲಿ ತಮಿಳುನಾಡು ಸರ್ಕಾರ ಚೆನ್ನೈಯಲ್ಲಿ ಮನೆಗಳಿಗೆ ಮಳೆ ನೀರು ಸಂಗ್ರಹವನ್ನು ಕಡ್ಡಾಯ ವಾಗಿಸಿತು. ಅನುಸರಿಸದವರ ಮನೆಗಳಲ್ಲಿ, ಸರ್ಕಾರವೇ ವಿಧಾನ ಅಳವಡಿಸಿ ದಂಡ ವಸೂಲು ಮಾಡುವಂತಹ ಕಠಿಣ ನಿಯಮ ರೂಪಿಸಿತು. ಪರಿಣಾಮವಾಗಿ ನಗರದ ಕೆಲವು ಭಾಗಗಳಲ್ಲಿ ಜಲಮಟ್ಟ ಆರರಿಂದ ಎಂಟು ಮೀಟರ್ ಏರಿದೆ! ದಶಕಗಳ ನಂತರ ಹೊಸದಾಗಿ ತೆರೆದ ಬಾವಿ ತೋಡಿದರೂ ನೀರು ಸಿಗುತ್ತಿದೆ!

ಈ ಯಶಸ್ಸಿನ ಹಿಂದೆ ಜಲಕಾರ್ಯಕರ್ತರು ಮತ್ತು ನೆರೆಹೊರೆ ಮಾಧ್ಯಮಗಳು ಮಳೆಕೊಯ್ಲಿನ ಅರಿವು ಹಬ್ಬಿಸಿದ್ದೂ ಸೇರುತ್ತದೆ. ಈ ಪ್ರಚಾರಕ್ಕಾಗಿ ಖಾಸಗಿ ರಂಗದ ‘ಮಳೆ ಕೇಂದ್ರ’ (ರೈನ್ ಸೆಂಟರ್) ತಲೆಯೆತ್ತಿತ್ತು. ಜಯಲಲಿತಾ ಸರ್ಕಾರಕ್ಕೆ ನೀರಿಂಗಿಸುವುದರ ಮಹತ್ವ ಅರ್ಥವಾದೊಡನೆಯೇ ವ್ಯಾನ್‌ಗಳ ಮೂಲಕ ರಾಜ್ಯದಲ್ಲಿ ನೀರಿನ ಬಗ್ಗೆ ವಿಡಿಯೊ ಪ್ರದರ್ಶನ, ಪ್ರಚಾರ ನಡೆಸಲಾಗಿತ್ತು. ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಹಲವು ನಗರಗಳಲ್ಲಿ ಮಳೆ ನೀರು ಸಂಗ್ರಹ ವಿಧಾನ ಅಳವಡಿಕೆ ಕಡ್ಡಾಯಕ್ಕೆ ಕಾನೂನು ರೂಪಿಸಲಾಗಿದೆ. ಇನ್ನೂ ಹಲವೆಡೆ ಈ ನಿಟ್ಟಿನ ತಯಾರಿ ನಡೆದಿದೆ. ಆದರೆ, ನೀರಿನ ಬಗ್ಗೆ ಸಾಮೂಹಿಕ ಜಾಗೃತಿ ಮೂಡಿಸುವು
ದರಲ್ಲಿ ಇಡೀ ದಕ್ಷಿಣ ಭಾರತದಲ್ಲೇ ಕರ್ನಾಟಕ ಅತ್ಯಂತ ಹಿಂದುಳಿದಿದೆ.

ಏನೇನು ಆಗಬೇಕಾಗಿದೆ?

ನಾಗರಿಕರು ನಗುನಗುತ್ತಾ ಮಳೆ ನೀರು ಸಂಗ್ರಹ ಮಾಡಿಕೊಳ್ಳಬೇಕೆಂದರೆ, ಅವರಿಗೆ ಇದು ‘ನಮಗೇ ಉಪಯೋಗಕರ’ ಎಂಬ ವಾಸ್ತವ ಅರಿಯುವಂತಾ‌ಗಬೇಕು. ಇದಕ್ಕೆ ಸಾಮೂಹಿಕ ಜಾಗೃತಿಗಿಂತ ಬೇರೆ ಶಾರ್ಟ್‌ಕಟ್‌ಗಳಿಲ್ಲ. ಅದು ಇಂದಿನ ಡಿಜಿಟಲ್ ಮತ್ತು ಬಹುಮಾಧ್ಯಮ ಯುಗದಲ್ಲಿ ಬಹು ಸುಲಭದ ಕೆಲಸ. ಆದರೆ ಆ ಬಗ್ಗೆ ಪ್ರಾಮಾಣಿಕ ಕಾಳಜಿ ಮತ್ತು ಛಲ ಇರಬೇಕು.

ಮಳೆಕೇಂದ್ರ ಅಗತ್ಯ

ಪ್ರತಿ ಜಿಲ್ಲೆಯಲ್ಲಿ ಮಳೆ ಕೇಂದ್ರಗಳು ಅಗತ್ಯವಾಗಿ ಬೇಕು. ಜಲ ಕಾರ್ಯಕರ್ತರು ದಶಕದಿಂದ ಸರ್ಕಾರದ ಎದುರು ಈ ಬೇಡಿಕೆ ಇಟ್ಟಿದ್ದಾರೆ. ಈ ಕೇಂದ್ರದಲ್ಲಿ ಜಿಲ್ಲೆಯ ನಗರ ಮತ್ತು ಹಳ್ಳಿಗಳಲ್ಲಿ ಮಾಡಬಹುದಾದ ನೀರಿಂಗಿಸುವ, ನೆಲ ಜಲಸಂರಕ್ಷಣೆಯ ಎಲ್ಲ ಮಾದರಿಗಳು ( ಪ್ರತಿಕೃತಿಗಳು), ಮಾಡುವ ವಿಧಾನ, ಯಶೋಗಾಥೆ ಸಾಧಿಸಿದವರ ವಿವರ, ಸಂಪರ್ಕ ವಿಳಾಸ ಇತ್ಯಾದಿಗಳ ಬಗ್ಗೆ ಬಹುಮಾಧ್ಯಮ ದಾಖಲಾತಿ, ಬಂದ ಆಸಕ್ತರಿಗೆ ಏಕದಿನದ ತರಬೇತಿ ಕೊಡುವಂತಹ ವ್ಯವಸ್ಥೆ ಒಳಗೊಂಡಿರಬೇಕು. ಇದು ಮಳೆಕೊಯ್ಲು, ನೆಲಜಲ ಸಂರಕ್ಷಣೆಯ ಬಗ್ಗೆ ಏಕ ಕೇಂದ್ರ ಮಾಹಿತಿ ಪೂರೈಕೆದಾರ ಆಗಿರಬೇಕು. ಕಾರ್ಯಕ್ಷಮತೆಯ ದೃಷ್ಟಿಯಿಂದ ಇದು ಕೇಂದ್ರ ಸರ್ಕಾರಿ ಮತ್ತು ಖಾಸಗಿ ರಂಗದ ಜಂಟಿ ಆಡಳಿತದಡಿ ಇರುವುದು ಉತ್ತಮ. ಈಗ ದೆಹಲಿ, ಚೆನ್ನೈ, ಬೆಂಗಳೂರಿನಲ್ಲಿ ಮಳೆ ಕೇಂದ್ರಗಳು ಉತ್ತಮವಾಗಿವೆ. ವಿಜಯಪುರ, ಬಾಗಲಕೋಟೆಯಲ್ಲಿರುವ ಕೇಂದ್ರಗಳು ತೀರಾ ಸೊರಗಿವೆ.

ಮಾಧ್ಯಮ’ ಮಾದರಿ..

ಕೇರಳದ ಮಲೆಯಾಳ ಮನೋರಮಾ ದೈನಿಕ 2004ರಲ್ಲಿ ಆರಂಭಿಸಿದ ‘ಪಲತುಳ್ಳಿ’ ಎಂಬ ನೀರೆಚ್ಚರದ ಮಾಧ್ಯಮ ಅಭಿಯಾನ ಆರಂಭಿಸಿದ ಮೇಲೆ ಸರ್ಕಾರ ಎಚ್ಚೆತ್ತುಕೊಂಡಿತು. ಬ್ಯಾಂಕ್‌ಗಳು ಮಳೆ ನೀರು ಸಂಗ್ರಹ ಅಳವಡಿಕೆಗೆ ಸಾಲ ಯೋಜನೆ ಪ್ರಕಟಿಸಿದವು. ಹಳ್ಳಿಗಳಲ್ಲಿ ಜನಕೇಂದ್ರಿತ ಜಲಸಂರಕ್ಷಣಾ ಚಟುವಟಿಕೆಗಳು ಆರಂಭವಾದವು. ಇಂಥ ಅಭಿಯಾನ ಇಲ್ಲೂ ಆಗಬೇಕು.

‘ಜನ, ನೀರಿನ ಸಮಸ್ಯೆ ಎಂದರೆ ಅದು ನಮ್ಮದೇ ಸಮಸ್ಯೆ ಎಂದುಕೊಂಡು ಕೆಲಸ ಮಾಡತೊಡಗಿದರೆ ತುಂಬ ಮಿತ ವೆಚ್ಚದಲ್ಲಿ ಆ ಕೆಲಸವೂ ಆಗುತ್ತದೆ, ಕೆಲಸದ ಗುಣಮಟ್ಟವೂ ಚೆನ್ನಾಗಿರುತ್ತದೆ’ ಎನ್ನುತ್ತಾರೆ ರಾಜಸ್ಥಾನದಲ್ಲಿ ನಾಂಡುವಾಲಿ ಮತ್ತು ಸಕಟ್‍ವಾಲಿ ನದಿ ಪುನರುಜ್ಜೀವನಕ್ಕೆ ಒತ್ತಾಸೆಯಾಗಿ ನಿಂತ ‘ಸಂಭಾವ್’ ಸಂಸ್ಥೆಯ ಮುಖ್ಯಸ್ಥ ಫರ್ಹಾದ್ ಕಾಂಟ್ರಾಕ್ಟರ್. ಮಹಾರಾಷ್ಟ್ರದಲ್ಲಿ ನಾಲ್ಕು ವರ್ಷಗಳಿಂದ ‘ಪಾನಿ ಫೌಂಡೇಶನ್’ ನೇತೃತ್ವದಲ್ಲಿ ನಡೆಯುತ್ತಿರುವ ‘ಸತ್ಯಮೇವ ಜಯತೇ ವಾಟರ್ ಕಪ್’ ಜನಕೇಂದ್ರಿತ ಜಲಕಾಯಕಕ್ಕೆ ಅದ್ಭುತ ಉದಾಹರಣೆ.

ನೋಡಿ ಕಲಿಯುವ ಅವಕಾಶ

ಓದುವುದಕ್ಕಿಂತ, ಕೇಳುವುದಕ್ಕಿಂತ ನೋಡುವುದು ಹೆಚ್ಚು ಪರಿಣಾಮಕಾರಿ. ಜನರಲ್ಲಿ ಮಳೆ ನೀರು ಸಂಗ್ರಹದ ಬಗ್ಗೆ ಹಲವು ಅನುಮಾನ, ಅಪನಂಬಿಕೆ, ಜಿಜ್ಞಾಸೆಗಳಿರುತ್ತವೆ. ಈ ವಿಧಾನ ಅನುಸರಿಸಿ ಗೆದ್ದವರನ್ನು ಕಂಡು ಮಾತನಾಡಿದರೆ ಇವು ಪರಿಹಾರವಾಗುತ್ತವೆ. ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಇಂದು ಬೇರೆಬೇರೆ ವಿಧಾನಗಳಿಂದ ಮಳೆಕೊಯ್ಲು ಮಾಡಿ ಗೆದ್ದ ನೂರಾರು ಸಾಧಕರು ಇದ್ದಾರೆ. ಅವರನ್ನು ಹುಡುಕಿ, ಪಟ್ಟಿ ಮಾಡಬೇಕು. ಇಂಥ ಸಾಧಕರಲ್ಲಿಗೆ ಆಸಕ್ತ ನಾಗರಿಕರನ್ನು ಒಂದು ದಿನದ ಅಧ್ಯಯನ ಭೇಟಿಗೆ ಕರೆದೊಯ್ದರೆ, ಇದೊಂದು ಉತ್ತಮ ಫಲಿತಾಂಶ ನೀಡುವ ಕಾರ್ಯಕ್ರಮವಾಗಬಹುದು.

ಈ ಕಾರ್ಯಕ್ರಮವನ್ನು ಇದೇ ಮಳೆಗಾಲದಲ್ಲೇ ಆರಂಭಿಸಬಹುದು. ವಾರಕ್ಕೊಮ್ಮೆ, ಬೇಕಿದ್ದರೆ ಭಾನುವಾರ ನಡೆಸಬಹುದು. ಪಂಚಾಯ್ತಿ, ನಗರಪಾಲಿಕೆಗಳು ಮಾಡಬಹುದು, ಆಸಕ್ತ ಸರ್ಕಾರೇತರ ಸಂಸ್ಥೆಗಳು ಇನ್ನೂ ಚೆನ್ನಾಗಿ ಮಾಡಬಹುದು. ಅಂಥ ಸಂಸ್ಥೆಗಳಿಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಅಥವಾ ನಗರಪಾಲಿಕೆಗಳು ಆರ್ಥಿಕ ನೆರವು ಕೊಡಬಹುದು.

‌ಸೂಕ್ತ ಮಾರ್ಗದರ್ಶನ ಸಿಕ್ಕರೆ, ಸರ್ಕಾರಕ್ಕಾಗಿ ಕಾಯದೆ ನೀರನಿಶ್ಚಿಂತೆಗಾಗಿ ಕೈಯಿಂದ ವೆಚ್ಚ ಮಾಡಲು ಸಿದ್ಧವಿರುವ ಬಹಳ ಮಂದಿ ರಾಜ್ಯದಲ್ಲಿದ್ದಾರೆ. ನಿಜವಾಗಿ ಇದು ಹೆಮ್ಮೆಯ ಸಂಗತಿ. ಇಂಥವರಿಗೆ ನಮ್ಮಲ್ಲಿ ಇರುವ ತಿಳಿವಳಿಕೆಯನ್ನೂ ಸಕಾಲಕ್ಕೆ ಬೇಕಾದ ರೀತಿಯಲ್ಲಿ ಒದಗಿಸಲು ಸರ್ಕಾರ ಮನಸ್ಸು ಮಾಡುತ್ತಿಲ್ಲ.

‘ಬಾವಿ ಪುನಶ್ಚೇತನ’ ಮಾದರಿ

ಬೆಳಗಾವಿಯಲ್ಲಿ ನಗರಪಾಲಿಕೆ ಎಂಜಿನಿಯರ್ ಆರ್.ಎಸ್. ನಾಯಕ್ ನೇತೃತ್ವದಲ್ಲಿ ಎರಡು ದಶಕಗಳಲ್ಲಿ ನೂರಕ್ಕೂ ಹೆಚ್ಚು ಮುಚ್ಚಿದ ಬಾವಿಗಳ ಪುನಶ್ಚೇತನ ಮಾಡಿದ್ದಾರೆ. ಇವುಗಳಲ್ಲಿ ಬ್ರಿಟಿಷರ ಕಾಲದ ಕೆಲವು ಬಾವಿಗಳು ದಿನಕ್ಕೆ ನಾಲ್ಕು ಲಕ್ಷ ಲೀಟರ್ ನೀರು ಕೊಡುತ್ತಿವೆ. ‘ಇದೇ ಹುಮ್ಮಸ್ಸಿನಲ್ಲಿ ಜನರನ್ನು ಒಗ್ಗೂಡಿಸಿ ನಗರದಲ್ಲಿ ಒಂದೊಮ್ಮೆ ಇದ್ದ ಹೆಚ್ಚಿನ ಬಾವಿಗಳಿಗೆ ಮರುಜೀವ ಕೊಟ್ಟರೆ ಬೆಳಗಾವಿಗೆ ಈಗಿನಂತೆ ಬಹುದೂರದ ನೀರಿನ ಹಂಗೇ ಬೇಕಾಗುತ್ತಿರಲಿಲ್ಲ’ ಎನ್ನುವವರು ಈ ಕುಂದಾನಗರಿಯಲ್ಲಿ ಇದ್ದಾರೆ. ಅದೇ ರೀತಿ ವಿಜಯಪುರದಲ್ಲಿ ಮೆಟ್ಟಲುಬಾವಿಗಳ ದೊಡ್ಡ ಆಸ್ತಿಯಿದೆ. ಈಗ ನಗರಪಾಲಿಕೆ ಇವುಗಳ ಪುನಶ್ಚೇತನಕ್ಕೆ ದೊಡ್ಡ ಹೆಜ್ಜೆ ಇಟ್ಟಿದೆ. ಬೀದರಿನಲ್ಲಿ ಕರೇಝ್ ಎನ್ನುವ ಭೂಗತ ಸುರಂಗಕ್ಕೆ ಮರುಜೀವ ಕೊಡುತ್ತಿದ್ದಾರೆ. ಇವೆಲ್ಲ ಸರಿಯಾದ ದಿಸೆಯ ಸ್ವಾಗತಾರ್ಹ ಹೆಜ್ಜೆಗಳು.

ದೇಶವೇ ಹೆಮ್ಮೆ ಪಡಬಹುದಾದ ಕೆಲವು ಬರನಿರೋಧಕ ಜಾಣ್ಮೆಗಳು ರಾಜ್ಯದಲ್ಲಿವೆ. ಅವುಗಳಲ್ಲಿ ಮರಳು ಮುಚ್ಚಿಗೆ, ತಳ ಒಡ್ಡಿನ ರಚನೆಯ ಜತೆಗೆ ಹೊಲವನ್ನು ಸಮತಟ್ಟಾಗಿಸುವುದು ಮತ್ತು ಹೆಚ್ಚು ಅಂತರದ ಬೆಳೆ ಪ್ರಮುಖವಾದವು. ಕೊಪ್ಪಳ ಜಿಲ್ಲೆಯಲ್ಲಿ ಜನಪ್ರಿಯವಾಗಿರುವ ಮರಳು ಮುಚ್ಚಿಗೆಯಿಂದ ‘ಒಣಗಿ ಹಾಕಿದ ಅಂಗಿ ತೋಯುವಷ್ಟು ಮಳೆ ಸಿಕ್ಕರೂ ಪಚ್ಚೆ ಹೆಸರಿನಂತಹ ಬೆಳೆ ತಗೊಳ್ತೀವಿ’ ಎನ್ನುತ್ತಾರೆ ಅಲ್ಲಿನ ರೈತರು. ಇದನ್ನು ಅಳವಡಿಸಿದ ರೈತರಿಗೆ ಎಂಥ ಬರಗಾಲದಲ್ಲೂ ‘ಬೆಳೆ ಇಲ್ಲ’ ಎನ್ನುವ ಸ್ಥಿತಿ ಬಂದಿಲ್ಲ.

‘ಅರಬರದಾಗ ಎಂಟಾಣೆ ಬೆಳೆ’

ಹುನಗುಂದದ ಡಾ.ಮಲ್ಲಣ್ಣ ನಾಗರಾಳ ಪ್ರತಿನಿಧಿಸುವ ನಾಗರಾಳ ಕುಟುಂಬದ ಮೂರು ಪೀಳಿಗೆಗಳು ‘ಅರಬರದಾಗ ಎಂಟಾಣೆ ಬೆಳೆ’ ಎನ್ನುತ್ತಾ ಬಂದಿವೆ. ಇವರು ತುಂಬ ಕಾರ್ಯಕ್ಷಮವಾದ ಬರನಿರೋಧಕ ಜಾಣ್ಮೆಯನ್ನು ಹೇಳಿಕೊಡುತ್ತಾ ಬಂದಿದ್ದಾರೆ. ‘ಮಲ್ಲಣ್ಣ ಪ್ರಚಾರ ಮಾಡುವ ತಳ ಒಡ್ಡು ಮತ್ತು ಹೊಲವನ್ನು ‘ಕೆರೆ ಅಂಗಳದಂತೆ’ ಮಾಡುವ ವಿಧಾನ ರಾಜ್ಯದ ಎಂಟು ಬರಪೀಡಿತ ಜಿಲ್ಲೆಗಳಿಗೆ ಪ್ರಸ್ತುತ’ ಎಂದು ಮೆಚ್ಚಿಕೊಳ್ಳುತ್ತಾರೆ ಧಾರವಾಡ ಕೃಷಿವಿವಿಯ ನಿವೃತ್ತ ವಿಜ್ಞಾನಿ ಡಾ.ಎಂ.ಬಿ.ಗುಳೇದ್. ಈ ಕ್ರಮಗಳನ್ನ ಅನುಸರಿಸಿದ ರೈತರು ಬರ ವರ್ಷದಲ್ಲೂ ಧಾನ್ಯ ಕೊಳ್ಳಲು ಅಂಗಡಿಗೆ ಹೋಗಬೇಕಾಗುವುದಿಲ್ಲ! ಸಂಕಟದ ವಿಚಾರವೆಂದರೆ ಮೇಲಿನ ಎರಡೂ ಬರ ನಿರೋಧಕ ಜಾಣ್ಮೆಗಳನ್ನು ಸರ್ಕಾರ ಅಂಗೀಕರಿಸಿ ಹಬ್ಬಿಸುವ ಯತ್ನಕ್ಕೆ ಇನ್ನೂ ಹೊರಟೇ ಇಲ್ಲ. ಇದನ್ನು ಅರ್ಥ ಮಾಡಿಕೊಳ್ಳಬೇಕೆಂಬ ತುಡಿತ ಇಲಾಖೆಗಳಿಗೂ ಇಲ್ಲ!

ಮರೆತ ಪಾರಂಜವ್ಯ

‘ಭಾರತದ ಜಲಸುಸ್ಥಿರತೆಯ ಕೀಲಿಕೈ ಇರುವುದು ನಮ್ಮ ಪಾರಂಪರಿಕ ಜಲಸಂರಕ್ಷಣಾ ವ್ಯವಸ್ಥೆಯಲ್ಲಿ (ಪಾರಂಜವ್ಯ)’ ಎಂದು ದೆಹಲಿಯ ‘ಸೆಂಟರ್ ಫಾರ್ ಸೈನ್ಸ್‌ ಅಂಡ್ ಎನ್ವಿರಾನ್ಮೆಂಟ್’ ಸಂಸ್ಥೆಯ ನಿರ್ದೇಶಕ ದಿ.ಅನಿಲ್ ಅಗರ್‌ವಾಲ್‌ ಪ್ರತಿಪಾದಿಸುತ್ತಿದ್ದರು. ಜಲಚಿಂತಕ ದಿ.ಅನುಪಮ್ ಮಿಶ್ರಾ ತಮ್ಮ ಎರಡು ಮಹಾಕೃತಿಗಳಲ್ಲಿ ಇಂಥದ್ದೇ ಸಂದೇಶ ಕೊಟ್ಟಿದ್ದಾರೆ. ಆಯಾಯಾ ಊರುಗಳ ಪಾರಂಜವ್ಯಗಳನ್ನು (ಉದಾಹರಣೆಗೆ ಬೆಂಗಳೂರಿನಲ್ಲಿ ಕೆರೆಗಳನ್ನು) ಮರೆತು ನೀರಿನ ಸುಸ್ಥಿರತೆ ಸಾಧ್ಯವಿಲ್ಲ. ತೆರೆದ ಬಾವಿ, ಮೆಟ್ಟಲು ಬಾವಿ (ಬಾವಿ), ಕಲ್ಯಾಣಿ, ಗೋಕಟ್ಟೆ, ಮದಕ, ಒಡ್ಡು, ಕಟ್ಟ, ತಲಪರಿಗೆ, ತಲೆ ಕೊಳ, ಸರಣಿ ಕೆರೆ – ರಾಜ್ಯದಲ್ಲಿ ಎಷ್ಟೊಂದು ಪಾರಂಜವ್ಯ ಸಂಪತ್ತು ಇದೆ! ಇವೆಲ್ಲವೂ ಜನಸಹಭಾಗಿತ್ವದಲ್ಲಿ ರಚನೆ ಆಗುತ್ತಿದ್ದವು. ಈಗ ಅವುಗಳಲ್ಲಿ ಉಳಿದಿರುವುದು ಕೆಲವು ಮಾತ್ರ.

ಕರಾವಳಿ ಕರ್ನಾಟಕದಲ್ಲಿ ಒಂದು ಕಾಲಕ್ಕೆ ಮೂರು ಸಾವಿರಕ್ಕೂ ಹೆಚ್ಚು ಮದಕಗಳಿದ್ದುವು. ಇವು ರಾಜಸ್ಥಾನದ ‘ಜೊಹಾಡ್’ನಂತಹದೇ ಪಾರಂಜವ್ಯಗಳು. ಮದಕಗಳು ಸಾವಿರ ಇಂಗುಗುಂಡಿಗಳು ಮಾಡುವ ಕೆಲಸವನ್ನು ಸುಲಭದಲ್ಲಿ ಮಾಡಿ ಲಕ್ಷ, ಕೋಟಿಗಟ್ಟಲೆ ಮಳೆನೀರನ್ನು ತಡೆದು ಇಂಗಿಸಬಲ್ಲವು. ಇಂದು 60 ವಯಸ್ಸಿನ ಕೆಳಗಿನವರಿಗೆ ಮದಕವೆಂಬ ಜಲನಿಧಿಯ ಬಗ್ಗೆ ತಿಳಿದೇ ಇಲ್ಲ! ಈ ಕಡೆಗೆ ಸರ್ಕಾರ, ಇಲಾಖೆಗಳ ದೃಷ್ಟಿ ಹರಿದೇ ಇಲ್ಲ.

ಪಾರಂಜವ್ಯಗಳ ಇತಿಹಾಸದಲ್ಲೇ ತಲಪರಿಗೆಯ ಪುನರುಜ್ಜೀವನ ರೋಚಕ. ದಶಕದ ಮೊದಲು ಈ ಹೆಸರು ಬಲ್ಲವರೇ ಇರಲಿಲ್ಲ. ತುಮಕೂರಿನ ಜಲಕಾರ್ಯಕರ್ತ ಮಲ್ಲಿಕಾರ್ಜುನ ಹೊಸಪಾಳ್ಯ ಈ ಬಗ್ಗೆ ಪುಸ್ತಕ ಪ್ರಕಟಿಸಿ, ಮಾಹಿತಿ ಶಿಬಿರ ಏರ್ಪಡಿಸಿ ಜನರ ನೆನಪನ್ನು ಉದ್ದೀಪಿಸಿದರು. ಆ ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ನೂರಕ್ಕೂ ಹೆಚ್ಚು ತಲಪರಿಗೆಗಳು ಮರುಜೀವ ಪಡೆದು, ಶಾಸಕರು ಹಾಗೂ ಆಡಳಿತದ ಗಮನ ಸೆಳೆದಿವೆ ಎಂದರೆ ನಂಬುತ್ತೀರಾ?

ಯುವಜನರೂ ಅತಿ ಹುಮ್ಮಸ್ಸಿನಿಂದ ರಚಿಸುತ್ತಿರುವ ನೆಲಜಲ ಸಂರಕ್ಷಣೆಯ ವಿಧಾನ ಬಾಗಲಕೋಟೆ ಜಿಲ್ಲೆಯ ಬೆನಕಟ್ಟಿಯ ಕಲ್ಲು ಒಡ್ಡುಗಳದ್ದು. ದಶಕದ ಹಿಂದೆ ಅಂದಾಜಿಸುವಾಗ ಅಲ್ಲಿ ಸುಮಾರು ಮೂರು ಕೋಟಿ ರೂಪಾಯಿ ಮೌಲ್ಯದ ಕಲ್ಲೊಡ್ಡು ಕಟ್ಟಿದ್ದರು. ಕಳೆದೆರಡು ವರ್ಷಗಳಲ್ಲಿ ಒಂದು ಕೋಟಿ ರೂಪಾಯಿ ಮೌಲ್ಯದವು ತಲೆಯೆತ್ತಿವೆ. ದುಬಾರಿ ವೆಚ್ಚದ ಈ ಒಡ್ಡುಗಳು ಕೆಲವೇ ವರ್ಷಗಳಲ್ಲಿ ಏರಿದ ಉತ್ಪಾದನೆಯ ಮೂಲಕ ತಮ್ಮ ಅಸಲನ್ನು ರೈತರಿಗೆ ಮರಳಿಸಿವೆ.

ಜಲಮಟ್ಟ ಏರಿಸುವ ಇಂಗುಬಾವಿ

ನೀರು ಇಂಗುವುದಕ್ಕಾಗಿಯೇ ಮಾಡುವ ಕಿರುಬಾವಿಯೇ ಇಂಗುಬಾವಿ(ರೀಚಾರ್ಜ್ ವೆಲ್). ಬೆಂಗಳೂರಿನ ‘ರೈನ್ ವಾಟರ್’ ಕ್ಲಬ್ ಇದನ್ನು ನಗರದಲ್ಲಿ ದೊಡ್ಡ ರೀತಿಯಲ್ಲಿ ಪ್ರಚಾರ ಮಾಡುತ್ತಿದೆ. ಈವರೆಗೆ ನಗರದಲ್ಲಿ ಸುಮಾರು ಒಂದು ಲಕ್ಷ ಇಂಗುಬಾವಿ ನಿರ್ಮಾಣವಾಗಿರಬಹುದು. ಇದು ನಗರದಲ್ಲಿ ಉಂಟಾಗುವ ನೆರೆಯನ್ನು ನಿಯಂತ್ರಿಸಿ, ಅಂತರ್ಜಲ ಮಟ್ಟ ಏರಿಕೆಗೆ ಸಹಾಯವಾಗಿದೆ. ಮೂರು ಅಡಿ ವ್ಯಾಸ, ಇಪ್ಪತ್ತು ಅಡಿ ಆಳದ ಇಂಗುಬಾವಿಗೆ ತಗಲುವ ಅಂದಾಜು ವೆಚ್ಚ ₹30ಸಾವಿರ.

‘ಬೆಂಗಳೂರಲ್ಲಿ ದಶಲಕ್ಷ ಇಂಗುಬಾವಿ ನಿರ್ಮಿಸಿದರೆ ಇಲ್ಲಿನ ಅರ್ಧದಷ್ಟು ಓಡುವ ಮಳೆನೀರು ಹಿಡಿಯಬಹುದು. ಇದರಿಂದಾಗಿ ಕಾವೇರಿ ನದಿಯಿಂದ ಈಗ ದಿನವೊಂದಕ್ಕೆ ಪೂರೈಕೆ ಆಗುತ್ತಿರುವ 1400 ದಶಲಕ್ಷ ಲೀಟರ್ ನೀರನ್ನು ಇಲ್ಲೇ ಲಭ್ಯವಾಗಿಸಬಹುದು. ಇಂಗುಬಾವಿ ರಾಜ್ಯದ ಎಲ್ಲಾ ನಗರ - ಹಳ್ಳಿಗಳಿಗೆ ಎಲ್ಲೆಲ್ಲಿ ಬಾವಿಗಳಿವೆಯೋ ಅಲ್ಲಿಗೆಲ್ಲಾ ಪ್ರಸ್ತುತ’ ಎನ್ನುತ್ತಾರೆ ‘ರೈನ್‍ವಾಟರ್’ ಕ್ಲಬ್‌ನ ಖ್ಯಾತ ಜಲಕಾರ್ಯಕರ್ತ ಎಸ್. ವಿಶ್ವನಾಥ್. ಅವರ ಪ್ರಕಾರ, ‘ಹೆಚ್ಚು ಪ್ರಮಾಣದ ನೀರನ್ನು ಕಡಿಮೆ ಸಮಯದಲ್ಲಿ ಭೂಮಿಗಿಳಿಸಿ ಜಲಮಟ್ಟ ಏರಿಸಲು ಇಂಗುಬಾವಿಯಷ್ಟು ಉಪಯೋಗಿ ವಿಧಾನ ಬೇರೆ ಇಲ್ಲ’ ಈ ಉದ್ದೇಶಕ್ಕೆ ಹೊಟ್ಟು ಬಾವಿಗಳನ್ನೂ ಬಳಸಬಹುದು.

ಕೇರಳದ ತ್ರಿಶೂರಿನ ಕೊಡುಂಗಲ್ಲೂರು ಪಂಚಾಯತ್ ‘ಎರಡು ಗಿಡ ನೆಡದೆ ಹೊಸ ಮನೆಗೆ ಲೈಸೆನ್ಸ್ ಕೊಡಲಾಗದು’ ಎನ್ನುವ ನಿಯಮ ತಂದಿದೆ. ಪ್ರಕೃತಿಯಲ್ಲಿ ಜಲ ಲಭ್ಯತೆ ವೃದ್ಧಿಸಿ ಜನಜೀವನ ಸುಗಮವಾಗಿಸಬೇಕಾದರೆ ನೀರು ಮಾತ್ರವಲ್ಲ, ಮಣ್ಣು ಮತ್ತು ಅರಣ್ಯದ ( ಜಲ್, ಜಮೀನ್ ಮತ್ತು ಜಂಗಲ್) ಸಂರಕ್ಷಣೆ ಒಟ್ಟಾಗಿ ಮಾಡಬೇಕಿದೆ. ಈ ಬಗ್ಗೆ ಪ್ರಾಥಮಿಕ ಪಾಠವನ್ನು ಎಳವೆಯಿಂದಲೇ ಶಾಲಾ ಪಾಠದಲ್ಲೂ, ಪಠ್ಯೇತರ ಚಟುವಟಿಕೆಗಳಲ್ಲೂ ಸೇರಿಸಬೇಕು. ಪ್ರತಿ ಶಾಲೆಯಲ್ಲಿ ಒಂದು ಪುಟ್ಟ ಶಾಲಾವನ, ಫಲವೃಕ್ಷ ವನ ಮತ್ತು ನೀರಿಂಗಿಸುವ ಚಟುವಟಿಕೆಯನ್ನು ಕಡ್ಡಾಯವಾಗಿ ಮಾಡುವಂತೆ ನಿಯಮ ರೂಪಿಸಬೇಕು. ಮುಂದಿನ ಜನಾಂಗವನ್ನಾದರೂ ಜಲಸಾಕ್ಷರರಾಗಿಸದೆ ಹೋದರೆ ನಾವು ಇನ್ನಷ್ಟು ನೀರಸಂಕಟಕ್ಕೆ ಒಳಗಾಗಬೇಕಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT