ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕಾಂಗಿಗಲ್ಲ ಈ ಭೂಮಿ

Last Updated 20 ಏಪ್ರಿಲ್ 2019, 19:45 IST
ಅಕ್ಷರ ಗಾತ್ರ

‘ಹೇಳು ಭೂಮಿ ತಾಯಿ ನೀನು ಯಾರ ಪಗಡೆಯ ದಾಳ?
ನಿನ್ನ ಮಕ್ಕಳೆಲ್ಲ ನಿನಗೆ ಬರಿಯ ಶೋಕ ಮೇಳ’

–ಎಂ. ಗೋಪಾಲಕೃಷ್ಣ ಅಡಿಗ

ಏಪ್ರಿಲ್ 22 ವಿಶ್ವ ಭೂಮಿ ದಿನ. ತಾಯಿ ಭೂರಮೆಯ ಕ್ಷೇಮ ಚಿಂತನೆಗೆ ಮೀಸಲಾದ ದಿನ. ‘ನಮ್ಮ ಜೀವ ಜಾತಿಯನ್ನು ರಕ್ಷಿಸಿ’ ಎಂಬ ತಿರುಳಿನೊಂದಿಗೆ ಈ ಬಾರಿ ಭೂ ದಿನದ ಆಚರಣೆ ವಿಶ್ವದಾದ್ಯಂತ ನಡೆಯಲಿದೆ.

ಪ್ರಕೃತಿಯಲ್ಲಿ ಏಕಾಂಗಿ ಎಂಬುದು ಇಲ್ಲವೇ ಇಲ್ಲ. ಒಂದಕ್ಕೊಂದು ಪೂರಕವಾಗಿಯೇ ಪರಿಸರ ಸೃಷ್ಟಿಯಾಗಿರುತ್ತದೆ. ಅದರಲ್ಲಿ ಬದುಕುವ ಎಲ್ಲ ಜೀವಜಾತಿಗಳಿಗೂ ಜೀವಿಸುವ ಸಮಾನ ಹಕ್ಕಿದೆ. ಅದನ್ನು ಸಾಧಿಸುವುದು ಅಷ್ಟು ಸುಲಭವಲ್ಲ. ಅದಕ್ಕೆಂದೇ ಪ್ರತಿ ಜೀವಜಾತಿಯೂ ತನ್ನ ಹಾಗೂ ಸಂತತಿಯ ಉಳಿವಿಗೆ ನಿರಂತರವಾಗಿ ದುಡಿಯುತ್ತಾ ಅಗತ್ಯ ಬಿದ್ದಾಗ ಹೋರಾಟಕ್ಕೂ ಇಳಿಯುತ್ತದೆ. ಉಳಿವಿಗಾಗಿ ನಡೆಯುವ ಹೋರಾಟದಲ್ಲಿ ಸಶಕ್ತವಾದವು ಉಳಿದು, ಅಶಕ್ತವಾದವು ಅಳಿಯುತ್ತವೆ. ಇದು ನಿಸರ್ಗದ ನಿಯಮ.

ಸಕಲ ಜೀವಜಾತಿಗಳು ತಾವಿರುವ ಪರಿಸರದಲ್ಲಿ ತಮ್ಮದೇ ಜೀವನಚಕ್ರಕ್ಕೆ ಸರಿಹೊಂದುವ ಆಪ್ತನೆಲೆಯೊಂದನ್ನು ನಿರ್ಮಿಸಿಕೊಂಡಿರುತ್ತವೆ. ಯಾವ ಕಾರಣಕ್ಕೂ ಬೇರೊಂದು ಜೀವ ಜಾತಿಯ ಆವಾಸಕ್ಕೆ ಕಾಲಿರಿಸಿ ಅನಗತ್ಯ ಗೊಂದಲ, ತೊಂದರೆ ಮತ್ತು ನಾಶಕ್ಕೆ ಕಾರಣವಾಗುವುದಿಲ್ಲ. ಆದರೆ, ದಿನದಿಂದ ದಿನಕ್ಕೆ ಅಪರೂಪದ ಜೀವಜಾತಿಯ ಶಾಶ್ವತ ನಾಶದ ಸುದ್ದಿ ಪ್ರಕಟಗೊಳ್ಳುತ್ತಲೇ ಇವೆ. ಭೂಮಿಯ ಬಿಸಿ ಏರುತ್ತಲೇ ಇದೆ. ಕಡಿಮೆ ಮಾಡಲು ಒಪ್ಪಂದಗಳ ಮೇಲೆ ಒಪ್ಪಂದಗಳಾಗುತ್ತಿವೆ.

ಇತ್ತೀಚಿನ ಎರಡು ನೂರು ವರ್ಷಗಳಲ್ಲಿ ನೂರಿಪ್ಪತ್ತು ಬಗೆಯ ಸಸ್ತನಿಗಳು ಮತ್ತು ಇನ್ನೂರ ಇಪ್ಪತ್ತೈದು ಪಕ್ಷಿ ಪ್ರಭೇದಗಳು ಶಾಶ್ವತ ನಾಶ ಕಂಡಿವೆ. ಇವತ್ತಿನ ಲೆಕ್ಕಕ್ಕೆ ದಿನವೊಂದಕ್ಕೆ ಮೂರು ಪ್ರಾಣಿಗಳು, ಏಳು ಸಸ್ಯ ಪ್ರಭೇದಗಳು ಶಾಶ್ವತ ಅಂತ್ಯ ಕಾಣುತ್ತಿವೆ. ಹಿಂದೆ ಕಶೇರುಕವೊಂದು ಶಾಶ್ವತವಾಗಿ ನಾಶವಾಗಲು ಒಂದು ಸಾವಿರ ವರ್ಷ ಹಿಡಿಯುತ್ತಿತ್ತು. ಇದು ಜೆಟ್‍ಯುಗ. ಆ ಅನಾಹುತಕ್ಕೀಗ ಒಂಬತ್ತು ತಿಂಗಳು ಸಾಕು. ಇತ್ತೀಚಿನ ಅಧ್ಯಯನದ ಪ್ರಕಾರ ಒಟ್ಟು ಇಪ್ಪತ್ತೆರಡು ಸಾವಿರ ಜೀವಜಾತಿಗಳು ವಿನಾಶದ ಅಂಚು ತಲುಪಿವೆ. ಪ್ರಭೇದ ನಾಶ ನೈಸರ್ಗಿಕವಾಗಿ ನಡೆದರೆ ಯಾವ ಭಯವೂ ಇಲ್ಲ. ಸರಾಸರಿಯೇ ಪ್ರಕೃತಿಯ ಗುರಿ.

ಸಂತಾನೋತ್ಪತ್ತಿ ಸಮಸ್ಯೆ ಮತ್ತು ಆಹಾರಕ್ಕಾಗಿ ನಡೆಯುವ ಪೈಪೋಟಿಯಿಂದಲೂ ಅಲ್ಪ ಪ್ರಮಾಣದ ನಾಶ ಸಂಭವಿಸುತ್ತದೆ. ಆದರೆ, ಅಗಾಧ ಪ್ರಮಾಣದ ಪ್ರಭೇದ ನಾಶಕ್ಕೆ ಬೇರೆಯದೇ ಕಾರಣಗಳಿವೆ.

ಜೀವ ಜಾತಿ ನಾಶ ಏಕೆ?

ಪ್ರಭೇದ ನಾಶ ನಿಸರ್ಗದ ಸಹಜ ಮತ್ತು ಪ್ರಮುಖ ವಿದ್ಯಮಾನಗಳಲ್ಲೊಂದು. ಪ್ರಾಕೃತಿಕ ವೈಪರೀತ್ಯಗಳೆನಿಸಿದ ಕಾಡ್ಗಿಚ್ಚು, ಪ್ರವಾಹ, ಆಮ್ಲಮಳೆ, ಬರಗಾಲ, ಅತಿಯಾದ ತಂಪು, ಹೆಚ್ಚಿನ ಬಿಸಿಯಿಂದಾಗಿ ಕೆಲವು ಪ್ರಭೇದಗಳು ಹಠಾತ್ತಾಗಿ ನಾಶ ಹೊಂದುತ್ತವೆ. ಇದು ಮಾನವ ಪ್ರಣೀತವಲ್ಲದ್ದರಿಂದ ಹೆಚ್ಚಿನ ಅಪಾಯವಿಲ್ಲ. ವಿನಾಶದಿಂದ ಪಾರಾದ ಪ್ರಭೇದಗಳು ಹೊಸ ಪರಿಸರಕ್ಕೆ ಒಗ್ಗಿಕೊಳ್ಳಲು ಪ್ರಾರಂಭಿಸುತ್ತವೆ. 65 ಮಿಲಿಯನ್ ವರ್ಷಗಳ ಹಿಂದೆ ತಲೆದೋರಿದ ವಾತಾವರಣದ ಅತಿಯಾದ ಶೀತಕ್ಕೆ ಬಲಿಯಾಗಿ ಭೂಮಿಯ ಬೃಹತ್ ಸರೀಸೃಪಗಳು ನಾಶವಾದವು. ಅದೇ ಪ್ರಭೇದಕ್ಕೆ ಸೇರಿದ ಮೊಸಳೆ ಮತ್ತು ದೊಡ್ಡದಾದ ಮರಹಲ್ಲಿ ವಿನಾಶದಿಂದ ಪಾರಾಗಿ ನೀರಿಗಿಳಿದು ಬದುಕತೊಡಗಿದವು.

ಹೀಗೆ ವಾತಾವರಣದಲ್ಲಾಗುವ ತೀವ್ರ ಮತ್ತು ಹಠಾತ್ ಬದಲಾವಣೆಯಿಂದ ಹತ್ತು ಸಾವಿರ ವರ್ಷಗಳ ಹಿಂದೆ ರಾಜಾರೋಷವಾಗಿ ನಡೆದಾಡಿಕೊಂಡಿದ್ದ ಉದ್ದಕೊದಲಿನ ಆನೆ, ದೊಡ್ಡಳಿಲು ಮತ್ತು ಕೋರೆಹುಲಿಗಳೆಲ್ಲ ಶಾಶ್ವತವಾಗಿ ಕಣ್ಮರೆಯಾದವು. ಅಲ್ಲಿಂದಾಚೆಗೆ ಸುಮಾರು ಹತ್ತೊಂಬತ್ತನೆಯ ಶತಮಾನದವರೆಗೆ ಭೂಮಿಯ ವಾತಾವರಣ ಸಮತೋಲನ ಕಾಯ್ದುಕೊಂಡದ್ದರಿಂದ ಪ್ರಭೇದ ನಾಶದ ಗತಿ ಕಡಿಮೆಯಾದದ್ದಲ್ಲದೆ ನಿಯಂತ್ರಣದಲ್ಲೂ ಇತ್ತು. ಆಗ ವಿಶ್ವದ ಜನಸಂಖ್ಯೆ ನೂರು ಕೋಟಿಯಷ್ಟಿತ್ತು. ನಂತರದ ನೂರೈವತ್ತು ವರ್ಷಗಳಲ್ಲಿ ಅದು ಏಳು ನೂರು ಕೋಟಿಗೆ ದಾಟಿದೆ. ಈಗಿನ ಪ್ರಭೇದ ನಾಶದ ಹಿಂದೆ ಮನುಷ್ಯನ ಕೈವಾಡವಿದೆ.

ಜನಸಂಖ್ಯೆ ಏರತೊಡಗಿದಂತೆ ಮನುಷ್ಯನ ಕಾರ್ಯ ಚಟುವಟಿಕೆ ನೈಸರ್ಗಿಕ ಶಕ್ತಿಗಳ ಜತೆ ಹೋಲಿಸಬಹುದಾದಂಥ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿವೆ. ಜನಸಂಖ್ಯೆಯ ಜತೆ ಜಾನುವಾರುಗಳ ಹಿಂಡೂ ಬೆಳೆದು ಬಡರಾಷ್ಟ್ರಗಳ ಜನತೆಯ ಆಹಾರ, ವಸತಿಯ ಸಮಸ್ಯೆಗಳು ಬೆಳೆಯತೊಡಗಿದಂತೆ, ಅದುವರೆಗೆ ಸುಸ್ಥಿತಿಯಲ್ಲಿದ್ದ ಬೃಹತ್ ಅರಣ್ಯಗಳು ಜನ– ಜಾನುವಾರುಗಳ ಅಗತ್ಯ ಪೂರೈಸುವ ನಿಧಿಗಳಾಗಿ ಬದಲಾಗಿಬಿಟ್ಟವೆ. ಕೃಷಿಗಾಗಿ ಲಕ್ಷಾಂತರ ಹೆಕ್ಟೇರ್‌ನಷ್ಟು ಅರಣ್ಯವನ್ನು ಕಡಿಯಲಾಗಿದೆ.

ಜನರಿಗೆ ಉದ್ಯೋಗ, ವಿದ್ಯುತ್‌, ಕುಡಿಯಲು ಮತ್ತು ಕೃಷಿಗಾಗಿ ನೀರೊದಗಿಸಲು ಕಟ್ಟಲಾದ ಬೃಹತ್ ಅಣೆಕಟ್ಟುಗಳಿಂದ ಅಪಾರ ಅರಣ್ಯ ನೀರು ಪಾಲಾಗಿ ತಮ್ಮ ಸಹಜ ಹಾಗೂ ಸುಭದ್ರ ಆವಾಸಗಳನ್ನು ಕಳೆದುಕೊಂಡ ಅಮೂಲ್ಯ ಪ್ರಾಣಿ- ಸಸ್ಯ ಪ್ರಭೇದಗಳು ಅಭಿವೃದ್ಥಿಯ ಹೆಸರಿನಲ್ಲಿ ನಾಶಗೊಂಡಿವೆ. ಅಣೆಕಟ್ಟಿನ ಪ್ರದೇಶದಿಂದ ನಿರ್ವಸಿತರಾದವರಿಗೆ ಸೂರು ಕಲ್ಪಿಸಲು ಮತ್ತಷ್ಟು ಅರಣ್ಯಗಳನ್ನು ಖಾಲಿ ಮಾಡಲಾಗಿದೆ. ಇದಲ್ಲದೆ ಇರುವ ಕಾನೂನುಗಳನ್ನೆಲ್ಲ ಕ್ರಯಕ್ಕೆ ಕೊಂಡವರಂತೆ ಬೀಗುವ ಅರಣ್ಯ ಲೂಟಿಗಾರರು ಸ್ವಂತ ಲಾಭಕ್ಕಾಗಿ ಅನಿಯಂತ್ರಿತವಾಗಿ ಬೇಟೆಯಾಡಿ ಅನೇಕ ಪ್ರಭೇದಗಳ ನಾಶಕ್ಕೆ ಕಾರಣವಾಗಿದ್ದಾರೆ. ಕಾಡಿನಲ್ಲೇ ಇದ್ದು ಅವುಗಳನ್ನು ರಕ್ಷಿಸುತ್ತಿದ್ದ ಬುಡಕಟ್ಟು ಜನಾಂಗಗಳನ್ನು ಅಲ್ಲಿಂದ ಒಕ್ಕಲೆಬ್ಬಿಸಲಾಗಿದೆ.

ಸಂರಕ್ಷಣೆ ಮತ್ತು ನಿರ್ವಹಣೆ

ಹೆಚ್ಚಿನ ಅಪಾಯವಿರುವುದು ವನ್ಯಜೀವಿಗಳಿಗೆ. ಜಗತ್ತಿನ ವಿವಿಧ ಭಾಗಗಳ ಅನೇಕ ಬಗೆಯ ಪ್ರಾಣಿ, ಪಕ್ಷಿ, ಜಲಚರ, ಸಸ್ಯ, ಕೀಟಗಳು ಹಿಂದೆಂದಿಗಿಂತಲೂ ಇಂದು ಹೆಚ್ಚಿನ ಅಪಾಯ ಎದುರಿಸುತ್ತಿವೆ. ಮನುಷ್ಯನಿಗಿಂತ ಸಹಸ್ರಾರು ವರ್ಷ ಮೊದಲೇ ರೂಪುಗೊಂಡು ಅನೇಕ ಜೀವ ಪರಿಸರ ಪ್ರಭೇದಗಳಿಗೆ ನೆಲೆ ಕಲ್ಪಿಸುತ್ತಾ ಬಂದಿರುವ ಅರಣ್ಯ ಮತ್ತು ಸಾಗರಗಳಲ್ಲಿ ಇವು ನೆಲೆ ನಿಂತಿವೆ. ಪ್ರತ್ಯೇಕವಾಗಿ ಇವುಗಳನ್ನುಳಿಸುವ ಬದಲು ಇವುಗಳ ಆವಾಸವನ್ನು ಮೊದಲು ರಕ್ಷಿಸಬೇಕು. ಪ್ರಭೇದಗಳ ಸಂಖ್ಯೆಯನ್ನು ಸರಿದೂಗಿಸಿಕೊಂಡು ಹೋಗಲು ಪ್ರತಿಯೊಂದು ಆವಾಸದಲ್ಲಿ ಏನಿರಬೇಕು, ಎಷ್ಟಿರಬೇಕೆಂದು ಮೊದಲು ಲೆಕ್ಕ ಹಾಕಬೇಕು. ಇದಕ್ಕೂ ಮುಂಚೆ, ಒಂದು ಆವಾಸ ಸುಸ್ಥಿತಿಯಲ್ಲಿರಬೇಕಾದರೆ ಅಲ್ಲಿ ನಿಸರ್ಗ ಸಹಜ ತೊಂದರೆಗಳಿರಲೇಬೇಕು.

ಪ್ರಕೃತಿಯೇ ಇದರ ಮಾನಿಟರ್. ದಟ್ಟ ಕಾಡಿನ ಮರವೊಂದರಲ್ಲಿ ಒಂದು ವರ್ಷ ಅತಿಹೆಚ್ಚು ಹಣ್ಣು ಬಿಟ್ಟಿತೆಂದರೆ ಅದನ್ನು ತಿಂದು ಬದುಕುವ ಪಕ್ಷಿ, ಪ್ರಾಣಿ, ಕೀಟಗಳ ಸಂಖ್ಯೆ ಆಗಾಧವಾಗಿ ಏರುತ್ತದೆ. ಇದೇನೂ ಅನಾಹುತವಲ್ಲ. ಮರುವರ್ಷ ಅದೇ ಮರದಲ್ಲಿ ಯಾವುದೋ ಕಾರಣಕ್ಕಾಗಿ ಹಣ್ಣುಗಳ ಸಂಖ್ಯೆ ಕಡಿಮೆಯಾದರೆ ಆಹಾರಕ್ಕಾಗಿ ಮರವನ್ನು ಆಶ್ರಯಿಸಿರುವ ಬೃಹತ್ ಸಂಖ್ಯೆಯ ಕೀಟ, ಪ್ರಾಣಿ, ಪಕ್ಷಿಗಳಲ್ಲೇ ಹೋರಾಟ ನಡೆದು ಶಕ್ತಿಯಿರುವ ಕೆಲವು ಉಳಿದು, ಹಲವು ಅಳಿಯುತ್ತವೆ. ಅಲ್ಲಿಗೆ ನಿಸರ್ಗದ ತಕ್ಕಡಿಯ ಮುಳ್ಳು ಸರಿಯಾದ ಜಾಗಕ್ಕೆ ಬಂದು ಸಮತೋಲನ ತನ್ನಿಂತಾನೇ ನೆಲೆಯೂರುತ್ತದೆ.

ನಾವಿರುವುದು ಉಷ್ಣವಲಯದಲ್ಲಿ. ನಮ್ಮಲ್ಲಿ ಹದಿನಾರು ಬಗೆಯ ಅರಣ್ಯಗಳಿವೆ. ಆಘಾತಕಾರಿ ವಿಷಯವೆಂದರೆ ಈ ಪ್ರಭೇದಗಳ ನಾಶ ಮತ್ತು ಕಣ್ಮರೆ ಹೆಚ್ಚಾಗಿ ಕಂಡುಬರುತ್ತಿರುವುದು ಉಷ್ಣವಲಯದ ಕಾಡುಗಳನ್ನು ಹೊಂದಿರುವ ಭಾರತ ಮತ್ತು ಏಷ್ಯಾದ ಇತರ ದೇಶಗಳಲ್ಲಿ. ನಮ್ಮ ಕಾಡುಗಳು ವಿಶ್ವದ ಬೇರೆಲ್ಲಾ ಅರಣ್ಯಗಳಿಗೆ ಹೋಲಿಸಿದರೆ ಅತ್ಯಂತ ಸಂಕೀರ್ಣ ಮತ್ತು ವೈವಿಧ್ಯಮಯವಾದುವು. ವಯಸ್ಸಿನ ದೃಷ್ಟಿಯಿಂದ ನೋಡಿದರೆ ಇವು ಇತರೆ ದೇಶಗಳ ಸಮಶೀತೋಷ್ಣವಲಯದ ಚೂಪಾದ ಎಲೆ (ಕೋನಿಫರಸ್) ಕಾಡುಗಳಿಗಿಂತ ತುಂಬಾ ಹಳೆಯವು. ನೀರು ಮತ್ತು ಸೂರ್ಯನ ಶಾಖ ಹೆಚ್ಚಾಗಿ ದೊರೆಯುವುದರಿಂದ ಇಲ್ಲಿ ಸಸ್ಯಗಳ ವಿಕಾಸ ಮತ್ತು ಬೆಳವಣಿಗೆಯ ವೇಗ ಜಾಸ್ತಿ. ಜಗತ್ತಿನ ಜೈವಿಕ ಪರಿಸರದ ಶೇಕಡ 11ರಷ್ಟು ಸಸ್ಯ ಮತ್ತು ಶೇಕಡ 7ರಷ್ಟು ಪ್ರಾಣಿ ಪ್ರಭೇದಗಳನ್ನು ಹೊಂದಿರುವ ಭಾರತದ ಕಾಡುಗಳನ್ನು, ಇದೇ ಕಾರಣಕ್ಕಾಗಿ ವಿಶ್ವದ ಮುಖ್ಯ ಮತ್ತು ಸೂಕ್ಷ್ಮ ಜೈವಿಕ ಪರಿಸರಗಳಲ್ಲೊಂದು ಎಂದು ಗುರುತಿಸಲಾಗಿದೆ.

ಈ ಕಾಡುಗಳಲ್ಲಿ 400 ಬಗೆಯ ಸಸ್ತನಿಗಳು, 1,200 ಬಗೆಯ ಪಕ್ಷಿ ಪ್ರಭೇದಗಳು, 224 ಬಗೆಯ ಹಾವುಗಳು, 150 ಬಗೆಯ ಹಲ್ಲಿಗಳು, 446 ಬಗೆಯ ಸರೀಸೃಪಗಳು, 2500 ಬಗೆಯ ಸಿಹಿನೀರಿನ ಮೀನುಗಳು, 30 ಬಗೆಯ ಆಮೆಗಳು, 60 ಸಾವಿರ ಕೀಟಗಳು ಮತ್ತು 48 ಸಾವಿರ ಸಸ್ಯ ಪ್ರಭೇದಗಳು ತಮ್ಮವೇ ಆದ ಆವಾಸಗಳಲ್ಲಿ ನೆಲೆನಿಂತಿವೆ. ಇನ್ನೂ ಪೂರ್ಣವಾಗಿ ಶೋಧಗೊಂಡಿರದ ಸಾಗರ ತಳಗಳಲ್ಲಿ ಅಸಂಖ್ಯ ಅಕಶೇರುಕಗಳು ಮತ್ತು ಸೂಕ್ಷ್ಮಾಣು ಜೀವಿಗಳು ಬೆಳಕಿಗೆ ಬಾರದೆ ಹಾಗೆಯೆ ಇವೆ. 66 ಸಸ್ತನಿಗಳು, 38 ಬಗೆಯ ಪಕ್ಷಿಗಳು ಮತ್ತು 18 ಬಗೆಯ ಸರೀಸೃಪಗಳು ವಿನಾಶದ ಅಂಚಿನಲ್ಲಿವೆ.

ಐದು ದಶಕಗಳ ಹಿಂದೆ ನಲವತ್ತು ಸಾವಿರ ಹುಲಿಗಳಿದ್ದ ನಮ್ಮಲ್ಲೀಗ ಕೇವಲ ಎರಡೂವರೆ ಸಾವಿರ ಇವೆ. ಕೆಲವೇ ವರ್ಷಗಳ ಹಿಂದೆ ನಮ್ಮ ಗಂಗಾ, ಬ್ರಹ್ಮಪುತ್ರಾ ಮತ್ತು ಮಹಾನದಿಗಳಲ್ಲಿ ಸಾವಿರಗಟ್ಟಲೆ ಇರುತ್ತಿದ್ದ ಘರಿಯಾಲ್ ಮೊಸಳೆಗಳ ಸಂಖ್ಯೆ ಈಗ ಕೇವಲ 300ಕ್ಕೆ ಇಳಿದಿದೆ. ಈ ಮೊದಲೇ ವಿನಾಶದ ಅಂಚಿಗೆ ತಲುಪಿರುವ ಸಾಗರ ತಳದ ಹವಳದ ದಂಡೆಗಳು, ಭಾರತದ ಹುಲಿ, ಕೃಷ್ಣಮೃಗ, ಗ್ರೇಟ್‌ ಇಂಡಿಯನ್ ಬಸ್ಟರ್ಡ್ ಪಕ್ಷಿ ಮತ್ತು ಒಂಟಿ ಕೊಂಬಿನ ರೈನೊಗಳು ತಮ್ಮ ನೈಸರ್ಗಿಕ ಆವಾಸ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿವೆ.

ಯತ್ನ ಸಾಗಿದೆ

ಭಾರತದ ಹುಲಿ ಮತ್ತಿತರ ವನ್ಯಪ್ರಾಣಿಗಳನ್ನು ಸಂರಕ್ಷಿಸಲು ನಮ್ಮಲ್ಲಿ 100ಕ್ಕೂ ಹೆಚ್ಚು ರಾಷ್ಟೀಯ ಉದ್ಯಾನ ಮತ್ತು 500ಕ್ಕೂ ಹೆಚ್ಚು ಅಭಯಾರಣ್ಯಗಳನ್ನು ರಚಿಸಿ ಎರಡು ಲಕ್ಷ ಚದರ ಕಿ.ಮೀ.ನಷ್ಟು ಅರಣ್ಯವನ್ನು ರಕ್ಷಿಸುವ ಕೆಲಸ ನಡೆದಿದೆ. ಸರ್ಕಾರೇತರ ಸಂಸ್ಥೆಗಳು ಸರ್ಕಾರಗಳೊಂದಿಗೆ ಕೈಜೋಡಿಸಿ ಜೀವಿ ಪ್ರಭೇದಗಳ ರಕ್ಷಣೆ ಮತ್ತು ವೃದ್ಧಿಯ ಕೆಲಸದಲ್ಲಿ ತೊಡಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT