ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರೋದ್ಯಾನ ಸೊಬಗು

Last Updated 20 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ನಗರದ ರಾಜ್‌ಮಹಲ್‌ ವಿಲಾಸ್ (ಆರ್‌ಎಂವಿ) ಬಡಾವಣೆ ಬಹಳ ದೊಡ್ಡದು. ಇದು ಎರಡು ಸ್ಟೇಜ್‌ಗಳಲ್ಲಿ ವಿಸ್ತಾರಗೊಂಡಿದೆ. ಚಂದನೆಯ ರಸ್ತೆ, ಇಕ್ಕೆಲಗಳಲ್ಲಿ ಮರಗಳು ಜತೆಗೆ ಅಂದದ ಉದ್ಯಾನಗಳೂ ಇವೆ. ಇಲ್ಲಿರುವ ವಾಜಪೇಯಿ ಉದ್ಯಾನ, ಸೌಂದರ್ಯ ಪಾರ್ಕ್‌ ಸೇರಿದಂತೆ ಹಲವು ಉದ್ಯಾನಗಳು ಕಿರು ಅರಣ್ಯದಂತೆ ಕಾಣುತ್ತವೆ.

ಆರ್‌ಎಂವಿ 2ನೇ ಹಂತದಲ್ಲಿರುವ (ಇಸ್ರೊ ಪಕ್ಕ) ಸೌಂದರ್ಯ ಪಾರ್ಕ್‌ ಉದ್ಯಾನ ವೈವಿಧ್ಯಮಯ ಮರಗಳಿಂದ ಕೂಡಿದೆ. ಇದನ್ನು ಹಿಂದೆ ‘ಟ್ರೀ ಪಾರ್ಕ್‌’ ಎಂದು ಕರೆಯುತ್ತಿದ್ದರಂತೆ. ಈ ಉದ್ಯಾನದಲ್ಲಿ ಸುಮಾರು 150 ಮರಗಳಿರಬಹುದೇನೋ. ಎಲ್ಲ ಮರಗಳು ಒತ್ತೊತ್ತಾಗಿ ಬೆಳೆದಿವೆ. ಸೂರ್ಯನ ಕಿರಣಗಳನ್ನು ಭೂಮಿಗೆ ತಾಗಿಸದಷ್ಟು ಮರಗಳ ಕೆನಾಪಿಗಳು ಹರಡಿಕೊಂಡಿವೆ.ಸುಮಾರು 40 ಅಡಿಗೂ ಎತ್ತರದ ಮರಗಳಿವೆ. ಗ್ಲಿರಿಸೀಡಿಯಾ, ಬೋಗನ್‌ವಿಲಾ, ಬಾಗೆ, ಅಶೋಕ ಮರಗಳಂತಹ ಹತ್ತು ಮರಗಳನ್ನು ಗುರುತಿಸಬಹುದು. ‘ಮರದ ಕುಟುಂಬ’ ಬಗ್ಗೆ ಗೊತ್ತಿರುವವರು ಪಾರ್ಕ್ ಸುತ್ತಿದರೆ ಇನ್ನಷ್ಟು ಮರಗಳ ತಳಿಗಳನ್ನು ಗುರುತಿಸಬಹುದು.

ಮರಗಳ ಜತೆಗೆ, ಬೇಲಿಯ ಹೂವುಗಳಿವೆ. ಅವುಗಳ ಮೇಲೆ ಚಿಟ್ಟೆಗಳು ಕುಳಿತಿರುತ್ತವೆ. ಇಂಥ ಕೀಟ ಸಂಕುಲಕ್ಕೆ ಆಶ್ರಯ ನೀಡುವಸಸ್ಯಗಳೂ ಇವೆ. ಸುತ್ತಲಿನ ನಿವಾಸಿಗಳು ಗಮನಿಸುವ ಪ್ರಕಾರ ಹೂವು ಅರಳುವ ಕಾಲದಲ್ಲಿ ಪಾರ್ಕ್‌ನಲ್ಲಿ ಬಣ್ಣ ಬಣ್ಣಗಳ ಹೂವು ಕಾಣುತ್ತವೆ. ಎತ್ತರದ ಮರಗಳಿರುವುದರಿಂದ ವೈವಿಧ್ಯಮಯ ಪಕ್ಷಿಗಳೂ ಹಾರಾಡುತ್ತವೆ. ಹೂಗಳ ಕಾಲದಲ್ಲಿ ಮಕರಂದ ಹೀರಲು ದುಂಬಿಗಳೂ ಬರುತ್ತವೆ.

ಪಾರ್ಕ್‌ ನಡುವೆ ವಿರಮಿಸಿಕೊಳ್ಳಲು ವಿಶ್ರಾಂತಿ ಕುಟೀರವಿದೆ. ಪಕ್ಷಿಗಳಿಗೆ ನೀರು ಕುಡಿಯಲು ಅಲ್ಲಲ್ಲಿ ಬಾನಿಗಳನ್ನಿಟ್ಟಿದ್ದಾರೆ. ಸುತ್ತಾಡಿ ದಣಿದರೆ ವಿರಮಿಸಿಕೊಳ್ಳಲು ಬೆಂಚುಕಲ್ಲುಗಳಿವೆ. ಈಗ ಓಪನ್ ಜಿಮ್‌ ಕೂಡ ಬಂದಿದೆ. ವಾಕಿಂಗ್‌ ಪಾತ್‌ಗೆ ಇಲ್ಲಿ ಕಲ್ಲುಗಳನ್ನು ಅಳವಡಿಸಿಲ್ಲ. ಮಣ್ಣಿನ ಮೇಲೆ ವಾಯುವಿಹಾರಿಗಳು ಹೆಜ್ಜೆ ಹಾಕುತ್ತಾರೆ.

ಮರಗಳ ಸಾಲು

ಆರ್‌ಎಂವಿ ಬಡಾವಣೆಯ 2ನೇ ಹಂತದದ ಸೊಗಸೇ ಅಂಥದ್ದು. ಇಲ್ಲಿ ಪಾರ್ಕ್‌ಗಳಷ್ಟೇ ಅಲ್ಲ, ರಸ್ತೆಗಳ ಬದಿಯಲ್ಲೂ ವೈವಿಧ್ಯಮಯ ಮರಗಳಿವೆ. ನ್ಯೂಬಿಇಎಲ್ ರಸ್ತೆ ಭಾಗದಲ್ಲಿರುವ ರಸ್ತೆಗಳಲ್ಲಿ ಮರಗಳು ಚಾಮರ ಬೀಸುತ್ತವೆ. ಬೇಸಿಗೆಯಲ್ಲೂ ಇಲ್ಲಿ ಮಲೆನಾಡ ವಾತಾವರಣ. ಇನ್ನೂ ಸಂಜಯನಗರದ ಭಾಗದಲ್ಲಿರುವ ಪೋಸ್ಟ್‌ಲ್‌ ಕಾಲೊನಿ, ಎಸಿಎಸ್ ಲೇಔಟ್‌ ಭಾಗದಲ್ಲಿ ‘ಹೊಂಗೆ ಮರ‘ಗಳ ರಸ್ತೆಯೇ ಇದೆ. ಈ ಎಲ್ಲ ಮರಗಳ ರಕ್ಷಣೆಯಲ್ಲಿ ನಿವಾಸಿಗಳ ಅಕ್ಕರೆಯೂ ಸೇರಿದೆ ಎಂದು ಆ ಬಡಾವಣೆಯ ಹಿರಿಯರು ನೆನಪಿಸಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT