ಗುರುವಾರ , ಮೇ 13, 2021
22 °C

ವಿಶ್ವ ಜಲ ದಿನ ವಿಶೇಷ: ಕಲ್ಯಾಣಿಗಳ ಪುನಶ್ಚೇತನ

ಆರ್‌.ಜಿತೇಂದ್ರ Updated:

ಅಕ್ಷರ ಗಾತ್ರ : | |

Prajavani

ಚಂದುರಾಯನಹಳ್ಳಿ ಸಮೀಪದ ಸಿದ್ದಗಂಗಯ್ಯನ ಪಾಳ್ಯದ ದೇವಾಲಯದ ಬಳಿ ಇಳಿಜಾರಿನಲ್ಲಿ ನೀರು ಹರಿದು ಹೋಗುತ್ತಿತ್ತು. ಆ ಹರಿಯುವ ನೀರಿನ ಜಾಡು ಹಿಡಿದು ಹೊರಟಾಗ ಮುಳ್ಳುಕಂಟಿಗಳಿಂದ ತುಂಬಿದ್ದ ಜಾಗದಲ್ಲಿ ಒಂದು ಕಲ್ಯಾಣಿ ಕಂಡಿತು!

ಕಲ್ಯಾಣಿ ನೋಡಿದ ಹಿರಿಯರು ‘ಮೊದಲು ಇದೇ ಕಲ್ಯಾಣಿಯಿಂದಲೇ ದೇವಾಲಯಕ್ಕೆ ನೀರು ತೆಗೆದುಕೊಂಡು ಹೋಗುತ್ತಿದ್ದೆವು’ ಎಂದು ನೆನಪಿಸಿ ಕೊಂಡರು. ಆ ಕಲ್ಯಾಣಿಯನ್ನು ಪುನಶ್ಚೇತನಗೊಳಿಸಲಾಗಿದೆ. ಅದರಲ್ಲೀಗ ಮಳೆ ನೀರು ಸಂಗ್ರಹವಾಗಿದೆ. ಪರಿಣಾಮ, ಸುತ್ತಲಿನ ನಾಲ್ಕಾರು ಕೊಳವೆಬಾವಿಗಳು ಮರುಪೂರಣಗೊಂಡಿವೆ.

ರಾಮನಗರ ಜಿಲ್ಲೆಯಲ್ಲಿ ಇಂಥ ನೂರಕ್ಕೂ ಹೆಚ್ಚು ಕಲ್ಯಾಣಿಗಳನ್ನು ಜಿಲ್ಲಾ ಪಂಚಾಯ್ತಿಯವರು ಪತ್ತೆ ಮಾಡಿದ್ದಾರೆ. ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲೂ ಹತ್ತಾರು ಕಲ್ಯಾಣಿಗಳು ಸಿಕ್ಕಿವೆ. ಅದರಲ್ಲೂ ಮಾಗಡಿಯಲ್ಲಿ ಹೆಚ್ಚು ಕಲ್ಯಾಣಿಗಳು ಪತ್ತೆಯಾಗಿ, ಪುನಶ್ಚೇತನಗೊಂಡಿವೆ.

‘ನರೇಗಾ’ ನೆರವು

ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಅಡಿ ರಾಮನಗರ ಜಿಲ್ಲೆಯಲ್ಲಿರುವ ಕಲ್ಯಾಣಿಗಳಿಗೆ ಮರು ಜೀವ ನೀಡಲಾಗುತ್ತಿದೆ. ಕಳೆದೊಂದು ವರ್ಷದಿಂದ ನಡೆಯುತ್ತಿರುವ ‘ಕಲ್ಯಾಣಿ ಪುನಶ್ಚೇತನ’ದ ಈ ಆಂದೋಲನದಲ್ಲಿ ಪುರಾತನ ಕಲ್ಯಾಣಿಗಳು ಪತ್ತೆಯಾಗಿವೆ. ಕೆಲವು ಕಡೆ ಮುಳ್ಳುಕಂಟಿಗಳು ತುಂಬಿ ಗುರುತು ಸಿಗದಿರುವ ಪ್ರದೇಶಗಳಲ್ಲಿ ಉತ್ಖನನ ನಡೆಸಿದಾಗ ಕಲ್ಯಾಣಿಗಳು ಪತ್ತೆಯಾಗಿವೆ. ಒಂದು ಭಾಗದಲ್ಲಿ 40ರಿಂದ 50 ಅಡಿಯಷ್ಟು ಆಳದ ಕಲ್ಯಾಣಿ ಪತ್ತೆಯಾಗಿದ್ದನ್ನು ಕಂಡು ಗ್ರಾಮಸ್ಥರು ಬೆರಗಾಗಿದ್ದಾರೆ.

ಕೆಂಪೇಗೌಡರ ಆಡಳಿತ ಕೇಂದ್ರವಾಗಿದ್ದ ಮಾಗಡಿ ಸುತ್ತಲಿನ ಹಳ್ಳಿಗಳಲ್ಲಿ ಹೆಚ್ಚು ಕಲ್ಯಾಣಿಗಳು ಪತ್ತೆ ಆಗುತ್ತಿವೆ. ಈ ತಾಲ್ಲೂಕು ಒಂದರಲ್ಲಿಯೇ 49 ಕಲ್ಯಾಣಿಗಳನ್ನು ಗುರುತಿಸಲಾಗಿದೆ. ಚಂದುರಾಯನ ಹಳ್ಳಿ ವ್ಯಾಪ್ತಿಯ ಸಿದ್ದಗಂಗಯ್ಯನ ಪಾಳ್ಯದ ದೇಗುಲದ ಸಮೀಪ ಪತ್ತೆಯಾದ ಕಲ್ಯಾಣಿ ಕೂಡ ಮಾಗಡಿ ವ್ಯಾಪ್ತಿಗೆ ಸೇರುತ್ತದೆ.

ರಾಮನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇಕ್ರಂ ಈ ಕಲ್ಯಾಣಿಗಳ ಹುಡುಕಾಟ ಮತ್ತು ಪುನರುಜ್ಜೀವದ ನೇತೃತ್ವ ವಹಿಸಿದ್ದಾರೆ. ಇದಕ್ಕಾಗಿ ಪ್ರತಿ ಗ್ರಾಮ ಪಂಚಾಯ್ತಿಯಲ್ಲಿ ಅಧಿಕಾರಿಗಳ ತಂಡ ರಚಿಸಿ, ಸ್ಥಳೀಯರಿಂದ ಮಾಹಿತಿ ಪಡೆದು, ನಕ್ಷೆಗಳನ್ನು ಹುಡುಕಿ ಜಲ ಸಂರಕ್ಷಣಾ ರಚನೆಗಳನ್ನು ಗುರುತು ಮಾಡುತ್ತಾರೆ. ನಂತರ ನರೇಗಾ ಯೋಜನೆ ಅಡಿ ಸ್ಥಳೀಯರನ್ನು ಬಳಸಿಕೊಂಡು ಆ ಜಲಮೂಲದ ಸುತ್ತಲಿರುವ ಗಿಡಗಂಟಿಗಳನ್ನು ತೆಗೆಸಿ, ಕಲ್ಯಾಣಿಗೆ ಮೂಲ ಸ್ವರೂಪ ನೀಡುತ್ತಾರೆ.

ಕಲ್ಯಾಣಿಗಳಿಗೆ ಹೊಸ ರೂಪ

ಪ್ರತಿ ತಾಲ್ಲೂಕಿನಲ್ಲೂ ಕಲ್ಯಾಣಿಗಳನ್ನು ಪತ್ತೆ ಮಾಡಿ, ಪುನಶ್ಚೇತನಗೊಳಿಸಿದ್ದಾರೆ. ಕನಕಪುರ ತಾಲ್ಲೂಕಿನಲ್ಲಿ 11, ರಾಮನಗರದಲ್ಲಿ 27 ಹಾಗೂ ಚನ್ನಪಟ್ಟಣದಲ್ಲಿ 25 ಕಲ್ಯಾಣಿಗಳನ್ನು ಗುರುತಿಸಲಾಗಿದ್ದು, ಇವುಗಳಲ್ಲಿ ಅರ್ಧದಷ್ಟು ಜಲಮೂಲಗಳು ಈಗಾಗಲೇ ಹೊಸ ಜೀವ ಪಡೆದು ತನ್ನೊಡಲಲ್ಲಿ ಮಳೆ ನೀರು ಸಂಗ್ರಹಿಸಿಕೊಂಡಿವೆ.

‘ಈ ಅಭಿಯಾನದಲ್ಲಿ ನಮ್ಮ ನಿರೀಕ್ಷೆಗೆ ಮೀರಿದ ಪ್ರಮಾಣದಲ್ಲಿ ಜಲಮೂಲಗಳು ಪತ್ತೆಯಾಗಿವೆ. ನೆಲಮಟ್ಟದಿಂದ 40ರಿಂದ 50 ಅಡಿ ಆಳದವರೆಗೂ ಮಣ್ಣಿನಲ್ಲಿ ಹುದುಗಿ ಹೋಗಿದ್ದ ಜಲಮೂಲಗಳನ್ನು ಪತ್ತೆ ಹಚ್ಚಿ, ಹೂಳು ತೆಗೆದು ಸ್ವಚ್ಛಗೊಳಿಸಲಾಗಿದೆ’ ಎಂದು ವಿವರಿಸುತ್ತಾರೆ ಇಕ್ರಂ.

‘ನಾವು ಪುನಶ್ಚೇತನಗೊಳಿಸಿದ ಕಲ್ಯಾಣಿಗಳಿಗೆ ಜನ ಪೂಜೆ ಸಲ್ಲಿಸಿದ್ದಾರೆ. ಪುನರುಜ್ಜೀವನಗೊಂಡ ಕಲ್ಯಾಣಿಗಳಲ್ಲಿ ನೀರು ನಿಂತಿದೆ. ಇದರಿಂದ ಮಳೆ ನೀರು ಸಂಗ್ರಹವಾಗಿ, ಅಂತರ್ಜಲ ಮಟ್ಟ ಸುಧಾರಣೆಯಾಗಲಿದೆ’ ಎಂದು ಇಕ್ರಂ ವಿವರಿಸುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು