ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ, ಮೋದಿ ಪರ ಘೋಷಣೆ

ಮುಗಿಲು ಮುಟ್ಟಿದ ಅಭಿಮಾನಿಗಳ, ಕಾರ್ಯಕರ್ತರ ಹರ್ಷೋದ್ಗಾರ
Last Updated 16 ಮೇ 2018, 11:27 IST
ಅಕ್ಷರ ಗಾತ್ರ

ಚಿತ್ರದುರ್ಗ: ಮೈದಾನದ ತುಂಬೆಲ್ಲಾ ಜನವೋ ಜನ, ಒಂದೆಡೆ ಕ್ಷಣ ಕ್ಷಣದ ಮಾಹಿತಿಗಾಗಿ ಅಚ್ಚರಿಯಿಂದ ಕಾಯುತ್ತ ನಿಂತಿದ್ದ ಅಭಿಮಾನಿಗಳು. ಮುನ್ನಡೆ ಸಾಧಿಸುತ್ತಿದ್ದಂತೆ ಕೇಕೆ, ಶಿಳ್ಳೆ, ಚಪ್ಪಾಳೆಗಳ ಸುರಿಮಳೆ. ಬಹುತೇಕ ಬಿಜೆಪಿ ಅಭ್ಯರ್ಥಿಗಳೇ ಪ್ರತಿ ಬಾರಿ ಮುನ್ನಡೆ ಆಗುತ್ತಿದ್ದಂತೆ ಮೋದಿ ಮೋದಿ ಮೋದಿ ಎಂಬುದಾಗಿ ಯುವಕರಿಂದ ಮುಗಿಲು ಮುಟ್ಟಿದ ಹರ್ಷೋದ್ಗಾರ...

ಇಲ್ಲಿನ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದ ಮುಂಭಾಗದಲ್ಲಿ ಮಂಗಳವಾರ ವಿಧಾನಸಭಾ ಚುನಾವಣೆಯ ಆರೂ ಕ್ಷೇತ್ರಗಳ ಮತದಾನ ಎಣಿಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಬಿಜೆಪಿ ಕಾರ್ಯಕರ್ತರು ಫಲಿತಾಂಶ ಘೋಷಣೆ ಆಗುವವರೆಗೂ ಸಂಭ್ರಮದಲ್ಲೇ ಮುಳುಗಿದ್ದ ಸಂದರ್ಭದಲ್ಲಿ ಕಂಡ ದೃಶ್ಯವಿದು.

ಬೆಳಿಗ್ಗೆ 8 ಕ್ಕೆ ಎಣಿಕೆ ಪ್ರಕ್ರಿಯೆ ಆರಂಭವಾಗುವುದಕ್ಕೂ ಮುನ್ನ ಜಿಲ್ಲೆಯ ವಿವಿಧೆಡೆಗಳಿಂದ ಬಂದಿದ್ದ ವಿವಿಧ ಪಕ್ಷಗಳ ಕಾರ್ಯಕರ್ತರು, ಅಭಿಮಾನಿಗಳು ಮೈದಾನದ ಹೊರ ಭಾಗದಲ್ಲೇ ತಮ್ಮ ದ್ವಿಚಕ್ರ ವಾಹನಗಳನ್ನು ಪೊಲೀಸರು ನಿಗದಿಪಡಿಸಿದ ಸ್ಥಳಗಳಲ್ಲಿ, ರಸ್ತೆ ಬದಿಗಳಲ್ಲಿ ನಿಲ್ಲಿಸಿ ಆತುರಾತುರವಾಗಿ ಮೈದಾನದೊಳಗೆ ಸಾವಿರಾರು ಮಂದಿ ಜಮಾಯಿಸಿದರು.

ಧ್ವನಿವರ್ಧಕದ ಮೂಲಕ ಮುನ್ನಡೆಯ ಘೋಷಣೆ ಆಗುತ್ತಿರುವುದನ್ನು ಕೆಲವರು ಆಲಿಸುತ್ತಿದ್ದರೆ, ಮತ್ತೆ ಕೆಲವರು ಬೇರೆ ಜಿಲ್ಲೆಗಳಲ್ಲಿ ಯಾವ ಅಭ್ಯರ್ಥಿ ಮುಂದಿದ್ದಾರೆ. ರಾಜ್ಯದಲ್ಲಿ ಅತಿ ಹೆಚ್ಚು ಸ್ಥಾನದಲ್ಲಿ ಯಾವ ಪಕ್ಷ ಮುನ್ನಡೆ ಹಾದಿಯಲ್ಲಿ ಸಾಗುತ್ತಿದೆ ಎಂಬುದನ್ನು ಮೊಬೈಲ್‍ಗಳ ಮೂಲಕ ಅಂತರ್ಜಾಲದಲ್ಲಿ ಮಾಹಿತಿ ಪಡೆಯಲು ಮುಂದಾಗುತ್ತಿದ್ದರು. ಇನ್ನೂ ಕೆಲವರು ಸ್ನೇಹಿತರಿಗೆ, ಸಂಬಂಧಿಕರಿಗೆ ಕರೆ ಮಾಡಿ ನಿಮ್ಮಲ್ಲಿ ಹೇಗಿದೆ ವಾತಾವರಣ, ಯಾರೂ ಮುಂದಿದ್ದಾರಪ್ಪಾ ಎಂದು ಕೇಳುತ್ತಿದ್ದರು. ಒಟ್ಟಾರೆ, ಅಲ್ಲಿ ನೆರೆದಿದ್ದವರಲ್ಲಿ ಕ್ಷಣ ಕ್ಷಣಕ್ಕೂ ಕೂತುಹಲ ಹೆಚ್ಚುತ್ತಲೇ ಇತ್ತು.

ಜೈಕಾರಗಳೇ ಹೆಚ್ಚು: ಪ್ರತಿ ಸುತ್ತಿನ ಮತ ಎಣಿಕೆಯ ನಂತರ ಚುನಾವಣಾ ಸಿಬ್ಬಂದಿ ಧ್ವನಿ ವರ್ಧಕದ ಮೂಲಕ ಮಾಹಿತಿ ನೀಡುತ್ತಿದ್ದರು. ಜಿಲ್ಲೆಯ ಆರೂ ಕ್ಷೇತ್ರಗಳ ಪೈಕಿ ಐದೂ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸುವ ಸಂದರ್ಭದಲ್ಲಿ ಬಹುತೇಕ ಯುವಕರು ಮತ್ತು ಮಹಿಳೆಯರು ಕುಣಿದು ಸಂಭ್ರಮಿಸಿದರು. ಮೋದಿ ಅವರಿಗೆ ಜೈ, ಅಮಿತ್ ಶಾಗೆ ಜೈ, ಯಡಿಯೂರಪ್ಪಗೆ ಜೈ ಎಂದು ಘೋಷಣೆ ಕೂಗುತ್ತಿದ್ದರು. ಇನೇನು ತಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವು ಖಚಿತವಾಗುತ್ತಿದ್ದಂತೆ ಕಾರ್ಯಕರ್ತರು ಪರಸ್ಪರ ಅಪ್ಪಿಕೊಂಡು ಸಂಭ್ರಮಾಚರಣೆಯಲ್ಲಿ ತೊಡಗಿದರು.

ಬಿಜೆಪಿ ಪಾಳಯದಲ್ಲಿ ಗೆಲುವಿನ ನಗೆ: ಹೊಳಲ್ಕೆರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚಂದ್ರಪ್ಪ, ಹೊಸದುರ್ಗ ಬಿಜೆಪಿ ಅಭ್ಯರ್ಥಿ ಗೂಳಿಹಟ್ಟಿ ಶೇಖರ್, ಹಿರಿಯೂರಿನಿಂದ ಪೂರ್ಣಿಮಾ, ಮೊಳಕಾಲ್ಮುರಿನಿಂದ ಬಿ.ಶ್ರೀರಾಮುಲು, ಚಿತ್ರದುರ್ಗದಿಂದ ಜಿ.ಎಚ್.ತಿಪ್ಪಾರೆಡ್ಡಿ ಈ ಐವರ ಗೆಲುವು ಖಚಿತವಾಗುತ್ತಿದ್ದಂತೆ ಅಭಿಮಾನಿಗಳಲ್ಲಿ, ಕಾರ್ಯಕರ್ತರಲ್ಲಿ ಸಂಭ್ರಮವೋ ಸಂಭ್ರಮ.

ಕಾರ್ಯಕರ್ತರು, ಬೆಂಬಲಿಗರು ಪ್ರಮುಖ ವೃತ್ತಗಳು, ಅಭ್ಯರ್ಥಿಗಳ ಮನೆ ಮುಂಭಾಗದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರೆ, ದ್ವಿಚಕ್ರ ವಾಹನಗಳಲ್ಲಿ ಸಂಚರಿಸಿದ ಕೆಲವರು ಪಕ್ಷದ ಬಾವುಟಗಳನ್ನು ಹಾರಿಸುತ್ತ ಗಮನ ಸೆಳೆದರು.

ಕೋಟೆನಾಡಲ್ಲಿ ಕಾಂಗ್ರೆಸ್ ದೂಳಿಪಟ, ಈವರೆಗೂ ಕೆಸರಲ್ಲಿ ಕಮಲ ಹರಳುವುದನ್ನು ನೋಡಿದ್ದೆವು. ಆದರೆ, ಈ ಬಾರಿ ಬಂಡೆಗಳ ಆಸುಪಾಸುಗಳ ಮೇಲೆಲ್ಲಾ ಕಮಲ ಅರಳಿತ್ತು.

‘ಅಭಿವೃದ್ಧಿಗೆ ಸಿಕ್ಕ ಗೆಲುವು’

ಚಳ್ಳಕೆರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಾಸಕ ಟಿ.ರಘುಮೂರ್ತಿ ಗೆಲುವು ಸಾಧಿಸಿದಾಗ ಅವರ ಅಭಿಮಾನಿಗಳು, ಕಾರ್ಯಕರ್ತರು ಕಾಂಗ್ರೆಸ್ ಬಾವುಟಗಳನ್ನು ಹಿಡಿದು ಸಂಭ್ರಮಿಸಿದರು. ಇದೇ ಸಂದರ್ಭದಲ್ಲಿ ಬಿ.ಡಿ. ರಸ್ತೆ ಮಾರ್ಗದಲ್ಲಿ ಕಾರಿನಲ್ಲಿ ಬಂದ ರಘುಮೂರ್ತಿ ಅವರಿಗೆ ಕೈ ಕುಲುಕುವ ಮೂಲಕ ಶುಭ ಕೋರಿದರು. ಇದು ಕಾಂಗ್ರೆಸ್ ಗೆಲುವಲ್ಲ, ರಘುಮೂರ್ತಿ ಅವರ ಅಭಿವೃದ್ಧಿ ಕೆಲಸಕ್ಕೆ ಸಿಕ್ಕ ಗೆಲುವು ಎಂದು ಜನ ಮಾತನಾಡಿಕೊಳ್ಳುತ್ತಿದ್ದರು.

ಸೋಲಿನ ಭೀತಿ; ಹೊರನಡೆದರು

ಮೊದಲೆರಡು ಸುತ್ತಿನಲ್ಲೂ ಹಿರಿಯೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಪೂರ್ಣಿಮ ಅವರು ಮುನ್ನಡೆ ಸಾಧಿಸುತ್ತಿದ್ದಂತೆ ಕಾಂಗ್ರೆಸ್ ಅಭ್ಯರ್ಥಿ ಡಿ.ಸುಧಾಕರ್ ಬೇಸರದಿಂದ ಹೊರ ನಡೆದರು.

ಚಿತ್ರದುರ್ಗದ ಕಾಂಗ್ರೆಸ್ ಅಭ್ಯರ್ಥಿ ಹನುಮಲಿ ಷಣ್ಮುಖಪ್ಪ ಬಿಜೆಪಿಯ ತಿಪ್ಪಾರೆಡ್ಡಿ ಪ್ರತಿ ಬಾರಿ ಮುನ್ನಡೆ ಕಾಯ್ದುಕೊಂಡದ್ದನ್ನು ಗಮನಿಸಿ, ಒಂಟಿಯಾಗಿ ಹೊರ ಬಂದರು. ಬೆಂಬಲಿಗರಾಗಲಿ, ಕಾರ್ಯಕರ್ತರಾಗಲಿ, ಮುಖಂಡರಾಗಲಿ ಯಾರೊಬ್ಬರು ಅವರ ಜತೆಯಲ್ಲಿ ಕಾಣಲಿಲ್ಲ. ಹೊಳಲ್ಕೆರೆಯ ಜೆಡಿಎಸ್ ಅಭ್ಯರ್ಥಿ ಶ್ರೀನಿವಾಸ್ ಕೂಡ ಇದಕ್ಕೆ ಹೊರತಾಗಿರಲಿಲ್ಲ. ಒಬ್ಬಂಟಿಯಾಗಿ ಓಡಾಡುತ್ತಿದ್ದ ದೃಶ್ಯ ಕಂಡು ಬಂತು.

**
ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಮೆಚ್ಚಿ ಜಿಲ್ಲೆಯ ಜನರು ಐದು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಆಶೀರ್ವದಿಸಿದ್ದಾರೆ
ಕೆ.ಎಸ್.ನವೀನ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT