ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆನುಜುವೆಲಾದಲ್ಲಿ ಶಾಲಾ ಅವಧಿ ಆಯ್ಕೆ ಮಕ್ಕಳದ್ದು

Last Updated 15 ಮಾರ್ಚ್ 2019, 16:55 IST
ಅಕ್ಷರ ಗಾತ್ರ

ವಿಭಿನ್ನ ಸಂಸ್ಕೃತಿ, ಭೌಗೋಳಿಕ ವೈವಿಧ್ಯತೆಗೆ ನೆಲೆಯಾಗಿರುವ ರಾಷ್ಟ್ರ ದಕ್ಷಿಣ ಅಮೆರಿಕ ಖಂಡದ ವೆನಿಜುವೆಲಾ. ಈ ದೇಶ ದಕ್ಷಿಣದಲ್ಲಿ ಬ್ರೆಜಿಲ್‌, ಪಶ್ಚಿಮದಲ್ಲಿ ಈಕ್ವೆಡಾರ್ ಪೂರ್ವದಲ್ಲಿ ಗಯನಾ ದೇಶಗಳೊಂದಿಗೆ ಗಡಿ ಹಂಚಿಕೊಂಡಿದೆ.

ಉತ್ತರದಲ್ಲಿ ಕೆರೇಬಿಯನ್ ಮತ್ತು ಉತ್ತರ ಅಟ್ಲಾಂಟಿಕ್ ಸಮುದ್ರಗಳಿವೆ. ಈ ದೇಶದ ಹಲವು ವಿಶೇಷಗಳನ್ನು ತಿಳಿಯೋಣ.

ದೇಶ: ವೆನಿಜುವೆಲಾ
ರಾಜಧಾನಿ: ಕರಾಕಸ್‌
ಜನಸಂಖ್ಯೆ: ಸುಮಾರು 3 ಕೋಟಿ
ವಿಸ್ತೀರ್ಣ: 9,12,050 ಚದರ ಕಿ.ಮೀ
ಸಾಕ್ಷರತೆ ಪ್ರಮಾಣ: 97%
ಕೃಷಿ ಭೂಮಿ: 24%

ಇತಿಹಾಸ
* 1487ರಲ್ಲಿ ಮೂರನೇ ಬಾರಿ ಅನ್ವೇಷಣೆಗೆ ಹೊರಟ ಖ್ಯಾತ ನಾವಿಕ ಕ್ರಿಸ್ಟೊಫರ್ ಕೊಲಂಬಸ್‌, ಇಲ್ಲಿನ ಒರಿನೊಕೊ ಡೆಲ್ಟಾ ಪ್ರದೇಶವನ್ನು ತಲುಪುತ್ತಿದ್ದಂತೆಯೇ ‘ವಿಶ್ವದ ಸ್ವರ್ಗವನ್ನು ಪತ್ತೆ ಹಚ್ಚಿದೆ’ ಎಂದು ಕೂಗಿದ. ಇದನ್ನು ‘ಲ್ಯಾಂಡ್‌ ಆಫ್ ಗ್ರೇಸ್‌’ ಎಂದ. ಈಗಲೂ ಈ ದೇಶವನ್ನು ಈ ಹೆಸರಿನಿಂದ ಕರೆಯುತ್ತಾರೆ.
* ಈ ದೇಶ ಸ್ಪೇನ್ ಆಡಳಿತಕ್ಕೆ ಒಳಪಟ್ಟ ಅಮೆರಿಕದ ಮೊದಲ ವಸಹಾತು ರಾಷ್ಟ್ರ (1522ರಲ್ಲಿ). 1811ರಲ್ಲಿ ಸ್ಪೇನ್‌ನಿಂದ ಸ್ವಾತಂತ್ರ್ಯ ಪಡೆಯಿತು.
* ಮೊದಲು ಈ ರಾಷ್ಟ್ರ ಕೊಲಂಬಿಯಾದೊಂದಿಗೆ ಸೇರಿತ್ತು. 1830ರಲ್ಲಿ ಪ್ರತ್ಯೇಕಗೊಂಡು ಸ್ವತಂತ್ರ ಗಣರಾಜ್ಯವಾಗಿ ಘೋಷಿಸಿಕೊಂಡಿತು.
* 1830ರಿಂದ ಹಲವು ಕ್ರಾಂತಿಗಳು, ಪ್ರತಿಭಟನೆಗಳು ಮತ್ತು ಹೋರಾಟಗಳ ನಡೆದವು. ಕೊನೆಗೆ 1958ರಲ್ಲಿ ಪ್ರಜಾಪ‍್ರಭುತ್ವ ರಾಷ್ಟ್ರವಾಗಿ ರಚನೆಯಾಯಿತು.

ಗೋಳದಲ್ಲಿ ವೆನುಜುವೆಲಾ ಮತ್ತು ವೆನುಜುವೆಲಾ ಭೂಪಟ
ಗೋಳದಲ್ಲಿ ವೆನುಜುವೆಲಾ ಮತ್ತು ವೆನುಜುವೆಲಾ ಭೂಪಟ

ಆರ್ಥಿಕ ಸ್ಥಿತಿ
* ಲ್ಯಾಟಿನ್ ಅಮೆರಿಕ ರಾಷ್ಟ್ರಗಳ ಪೈಕಿ ಹೆಚ್ಚು ನಗರ ಪ್ರದೇಶಗಳನ್ನು ಹೊಂದಿರುವ ರಾಷ್ಟ್ರ ವೆನಿಜುವೆಲಾ.
* ಈ ದೇಶದ ಕರೆನ್ಸಿ ಬೊಲಿವಿಯರ್ ಫ್ಯೂರ್ಟೆ. ಇತರೆ ರಾಷ್ಟ್ರಗಳ ಕರೆನ್ಸಿಗಳನ್ನು ಈ ದೇಶದ ಕರೆನ್ಸಿಯೊಂದಿಗೆ ಬದಲಾಯಿಸಿಕೊಂಡರೆ ಪುನಃ ಡಾಲರ್‌ ಆಗಿ ಆಗಲೀ, ಯುರೋಗಳಾಗಿ ಆಗಲೀ ಬದಲಾಯಿಸಲು ಇಲ್ಲಿ ಅವಕಾಶವಿಲ್ಲ.
* 20ನೇ ಶತಮಾನದಲ್ಲಿ ಇಲ್ಲಿನ ಮರಕ್ಯೈಬೊ ಸರೋವರದ ಬಳಿ ತೈಲ ನಿಕ್ಷೇಪಗಳನ್ನು ಪತ್ತೆಹಚ್ಚಲಾಯಿತು. ಅಂದಿನಿಂದ ಈವರೆಗೆ ತೈಲ ರಫ್ತು ಮಾಡುವ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿ ವೆನಿಜುವೆಲಾ ಗುರುತಿಸಿಕೊಂಡಿದೆ. ಹಾಗೂ ಒಪೆಕ್‌ನ (OPEC) ಸಂಸ್ಥಾಪಕ ರಾಷ್ಟ್ರಗಳಲ್ಲಿ ಒಂದಾಗಿಯೂ ಸ್ಥಾನ ಪಡೆದಿದೆ.
* ಕಚ್ಚಾ ತೈಲ ಉತ್ಪಾದನೆ ಮಾಡುವಂತಹ ವಿಶ್ವದ ಪ್ರಮುಖ 10 ರಾಷ್ಟ್ರಗಳಲ್ಲಿ ಒಂದಾಗಿದೆ. ಅಷ್ಟೇ ಅಲ್ಲ, ನೈಸರ್ಗಿಕ ಅನಿಲ ಉತ್ಪಾದನೆಯಲ್ಲಿ 8ನೇ ದೊಡ್ಡ ದೇಶವಾಗಿದೆ.
* ಇಲ್ಲಿ ಉತ್ಪಾದನೆಯಾಗುವ ಶೇ 80ರಷ್ಟು ಪೆಟ್ರೋಲಿಯಂ ಉತ್ಪನ್ನಗಳನ್ನು ಇತರೆ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ.
* ವಿಶ್ವದ ಅತಿಹೆಚ್ಚು ಜಲವಿದ್ಯುತ್ ಉತ್ಪಾದನೆ ಮಾಡುವಂತಹ ಪ್ರಮುಖ ಅಣೆಕಟ್ಟೆಗಳಲ್ಲಿ ಇಲ್ಲಿನ ಗುರಿ ಡ್ಯಾಂ ಕೂಡ ಒಂದು. ಇಡೀ ದೇಶಕ್ಕೆ ಇಲ್ಲಿಂದಲೇ ವಿದ್ಯುತ್ ಪೂರೈಸಲಾಗುತ್ತಿದೆ.
* 2017ರಲ್ಲಿ ಈ ದೇಶಕ್ಕೆ ವಲಸೆ ಬರುವವರ ಪ್ರಮಾಣ ಶೇ 2000ರಷ್ಟು ಹೆಚ್ಚಾದ ಪರಿಣಾಮ ದೇಶ ಆರ್ಥಿಕವಾಗಿ ದಿವಾಳಿಯಾಯಿತು. ಆಹಾರ, ಔಷಧಿಗೂ ದೇಶ ಪರದಾಡಿತು.

ಗುರಿ ಅಣೆಕಟ್ಟು
ಗುರಿ ಅಣೆಕಟ್ಟು

ಭೌಗೋಳಿಕ ವಿಶೇಷ
* ಕೆರೇಬಿಯನ್ ದ್ವೀಪಗಳು, ನದಿಗಳು, ಜೌಗು ಪ್ರದೇಶಗಳು, ಪರ್ವತ ಪ್ರದೇಶಗಳು, ಹಿಮಾವೃತ ಪ್ರದೇಶಗಳು, ಎತ್ತರದ ಪ್ರದೇಶಗಳು, ಕಣಿವೆಗಳು,ಹುಲ್ಲುಗಾವಲು, ಮರುಭೂಮಿ, ಅರಣ್ಯ ಪ್ರದೇಶ ಹೀಗೆ ಎಲ್ಲ ಬಗೆಯ ಭೌಗೋಳಿಕ ವೈವಿಧ್ಯಗಳನ್ನು ಇಲ್ಲಿ ಕಾಣಬಹುದು.
* ಈ ದೇಶದ ಪಶ್ಚಿಮದಲ್ಲಿ ಆ್ಯಂಡಿಸ್ ಪರ್ವತ ಪ್ರದೇಶಗಳಿದ್ದರೆ, ದಕ್ಷಿಣದಲ್ಲಿ ಅಮೇಜಾನ್ ಮಳೆ ಕಾಡು ಪ್ರದೇಶಗಳಿವೆ. ಪೂರ್ವದಲ್ಲಿ ಒರಿಂಕೊ ಡೆಲ್ಟಾ ನದಿ ಇದೆ.
* ದಕ್ಷಿಣ ಅಮೆರಿಕ ಖಂಡದ ಅತಿದೊಡ್ಡ ಸರೋವರ ಮರಾಕಾಬಿಯೊ (Lake Maracaibo) ವೆನಿಜುವೆಲಾದಲ್ಲಿದೆ. ಇದು ಸುಮಾರು 40 ಲಕ್ಷ ವರ್ಷಗಳ ಹಿಂದೆಯೇ ರಚನೆಯಾಗಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಜೀವ ವೈವಿಧ್ಯ
* ಇಲ್ಲಿನ ಶೇ 50ರಷ್ಟು ಉಭಯಚರ ಜೀವಿಗಳು, ಶೇ 23ರಷ್ಟು ಸರೀಸೃಪಗಳು, ಶೇ 38ರಷ್ಟು ವೃಕ್ಷಪ್ರಭೇದ ಮತ್ತು ಶೇ 48ರಷ್ಟು ಪಕ್ಷಿ ಪ್ರಭೇದಗಳು ವಿಶ್ವದ ಬೇರೆ ಯಾವ ದೇಶದಲ್ಲೂ ಕಾಣಿಸುವುದಿಲ್ಲ.
* ಇಲ್ಲಿನ ದಟ್ಟಾರಣ್ಯಗಳಲ್ಲಿ ಸುಮಾರು 25 ಸಾವಿರ ಬಗೆಯ ಹೂವಿನ ಗಿಡಗಳನ್ನು ನೋಡಬಹುದು. ಫ್ಲೋರ್ ಡೆ ಮಯೊ (flor de mayo) ಎಂಬುದು ಈ ರಾಷ್ಟ್ರದ ರಾಷ್ಟ್ರೀಯ ಹೂ.
* ಸುಮಾರು 39 ಸಾವಿರ ಬಗೆಯ ಶಿಲೀಂಧ್ರಗಳು ಇಲ್ಲಿವೆ.
* ಎರಡು ಬೆರಳು ಮತ್ತು ಮುರು ಬೆರಳುಗಳಿರುವ ಸ್ಲಾತ್ಸ್‌ (Sloths) ವಿಶಿಷ್ಟ ಕೋತಿಗಳು ಇಲ್ಲಿವೆ.
* ಅಮೆಜಾನ್ ನದಿಯಲ್ಲಿ ವಿಶಿಷ್ಟ ಡಾಲ್ಫಿನ್‌ ತಳಿಗಳು ಮತ್ತು ಒರಿನೊಕೊ ಮೊಸಳೆಗಳು ಕಾಣಸಿಗುತ್ತವೆ. ದೈತ್ಯ ಕೀಟ ಭಕ್ಷಕ, ಜಾಗ್ವಾರ್‌ ಮತ್ತು ದಂಶಕ ಜಾತಿಗೆ ಸೇರಿದ ಕ್ಯಾಪಿಬೆರಾಗಳು ಇಲ್ಲಿವೆ.
* ಇಲ್ಲಿನ ಒರಿನೊಕೊ ನದಿ ಪಾತ್ರ ಪ್ರದೇಶದಲ್ಲಿ ಕಾಣಸಿಗುವ ವೆನಿಜುವೆಲನ್ ಟ್ರೋಪಿಕಲ್ ಈ ದೇಶದ ರಾಷ್ಟ್ರೀಯ ಹಕ್ಕಿ.
* ಇಲ್ಲಿ 43 ರಾಷ್ಟ್ರೀಯ ಅಭಯಾರಣ್ಯಗಳಿದ್ದು, ಶೇ 33ರಷ್ಟು ಅರಣ್ಯ ಪ್ರದೇಶವನ್ನು ಸಂರಕ್ಷಿತ ಪ್ರದೇಶವೆಂದು ಘೋಷಿಸಲಾಗಿದೆ.
* ಈ ದೇಶದ ದಕ್ಷಿಣ ಭಾಗದ ಸುಮಾರು 90 ಸಾವಿರ ಚದರ ಕಿ.ಮೀಟರ್ ಪ್ರದೇಶವನ್ನು ಯನೊಮಮಿ ಎಂಬ ಬುಡಕಟ್ಟು ಸಮುದಾಯಕ್ಕೆ ಮೀಸಲಿಡಲಾಗಿದೆ.

ಸ್ಲಾತ್ ಕೋತಿ​
ಸ್ಲಾತ್ ಕೋತಿ​

ಸಂಸ್ಕೃತಿ ಮತ್ತು ಭಾಷೆ
* 2008ರಲ್ಲಿ ಬ್ರೆಸಿಲಿಯಾ ವಿಶ್ವವಿದ್ಯಾಲಯ ಡಿಎನ್‌ಎ ಅಧ್ಯಯನ ನಡೆಸಿದಾಗ ದೇಶದ ಶೇ 61ರಷ್ಟು ಜನ ಯುರೋಪಿಯನ್ನರು, ಶೇ 23ರಷ್ಟು ಜನ ಸ್ಥಳೀಯರು ಮತ್ತು ಶೇ 16ರಷ್ಟು ಜನ ಆಫ್ರಿಕನ್ನರು ಎಂಬುದು ತಿಳಿಯಿತು.
* ಈ ದೇಶದ ರಾಷ್ಟ್ರೀಯ ಭಾಷೆ ಸ್ಪ್ಯಾನಿಷ್‌. ಇದಲ್ಲದೇ 30 ಅಧಿಕೃತ ಭಾಷೆಗಳನ್ನೂ ಮಾತನಾಡುತ್ತಾರೆ.
* ದೇಶದ ಶೇ 88ರಷ್ಟು ಜನ ಕ್ರಿಶ್ಚಿಯನ್ ಧರ್ಮ (ರೋಮನ್ ಕ್ಯಾಥೊಲಿಕ್‌) ಅನುಯಾಯಿಗಳು. ಇವರಷ್ಟೇ ಅಲ್ಲದೇ, ಯಹೂದಿಗಳು, ಮುಸಲ್ಮಾನರು ಮತ್ತು ಬೌದ್ಧರು ಇದ್ದಾರೆ.

ಕ್ರೀಡೆ– ಸಂಗೀತ
* 19ನೇ ಶತಮಾನದಿಂದ ಬೇಸ್‌ಬಾಲ್ ಕ್ರೀಡೆ ಆರಂಭವಾಯಿತು. ಇದು ಈ ದೇಶದ ಪ್ರಮುಖ ಜನಪ್ರಿಯ ಕ್ರೀಡೆ. ಇದಲ್ಲದೇ ಬಾಸ್ಕೆಟ್ ಬಾಲ್ ಕೂಡ ಆಡುತ್ತಾರೆ.
* ಆಫ್ರಿಕಾ ಮತ್ತು ಸ್ಪಾನಿಷ್‌ ಸಂಗೀತವೇ ಇಲ್ಲಿ ಆರ್ಭಟಿಸುತ್ತದೆ. ಇಲ್ಲಿನವರು ಹೆಚ್ಚಾಗಿ ಗಿಟಾರ್ ಬಳಸುತ್ತಾರೆ. ನಾಲ್ಕು ತಂತಿಗಳಿರುವ ಕ್ವಾಟ್ರೊ ಈ ದೇಶದ ರಾಷ್ಟ್ರೀಯ ಸಂಗೀತ ವಾದ್ಯ.
* ಜೊರೊಪೊ ಈ ದೇಶದ ರಾಷ್ಟ್ರೀಯ ನೃತ್ಯ.

ಆಹಾರ
* ಅರೆಪಸ್‌ (Arepas) ಈ ದೇಶದ ರಾಷ್ಟ್ರೀಯ ಖಾದ್ಯ. ಜೋಳದ ಚಪಾತಿ, ಚೀಸ್‌, ವಿವಿಧ ಬಗೆಯ ಮಾಂಸ ಬಳಸಿ ಈ ಖಾದ್ಯವನ್ನು ತಯಾರಿಸುತ್ತಾರೆ.
* ಚಿ ಚಾ ಆ್ಯಂಡಿನಾ (chi cha andina) ಈ ದೇಶದ ಜನಪ್ರಿಯ ಪಾನೀಯ. ಇದನ್ನು ಅಕ್ಕಿಹಿಟ್ಟು ಅಥವಾ ಜೋಳದ ಹಿಟ್ಟು ಬಳಸಿ ತಯಾರಿಸುತ್ತಾರೆ.

ಪ್ರಮುಖ ಪ್ರವಾಸಿ ತಾಣಗಳು
* ಕಯೊ ಡೆ ಅಕ್ವಾ, ಕಯೊ ಫ್ರಾನ್ಸಿಕ್ವಿ, ಇಸ್ಲಾ ಕೊಚೆ, ಪ್ಲಯ ಎಲ್ ಅಕೆ, ಪ್ರಯಾ ಕ್ರಾಸ್ಕಿ ಮತ್ತು ಕಯೊ ಸೊಂಬ್ರೆರೊ ಬೀಚ್‌ಗಳನ್ನು ಸಂದರ್ಶಿಸಲು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಸ್ಕೂಬಾ ಡೈವಿಂಗ್, ಕೈಟ್ ಸರ್ಫಿಂಗ್‌ ಇಲ್ಲಿನ ಆಕರ್ಷಣೆ.
* ಇಲ್ಲಿನ ಕ್ಯಾನೈಮಾ ರಾಷ್ಟ್ರೀಯ ಅಭಯಾರಣ್ಯ ವಿಶ್ವದ 6ನೇ ಅತಿದೊಡ್ಡ ಅಭಯಾರಣ್ಯ. ಇದು ಸುಮಾರು 30 ಸಾವಿರ ಚದರ ಕಿಲೊ ಮೀಟರ್‌ ವಿಸ್ತೀರ್ಣ ಹೊಂದಿದೆ.
* ವಿಶ್ವದ ಅತಿ ಎತ್ತರದ ಏಂಜೆಲ್ಸ್ ಜಲಪಾತ ಸುಮಾರು 970 ಅಡಿಗಳಷ್ಟು ಎತ್ತರದಲ್ಲಿದೆ. ಇದರ ಎತ್ತರ ನಯಾಗಾರ ಜಲಪಾತಕ್ಕಿಂತ 16ಪಟ್ಟು ಹೆಚ್ಚು.

ಏಂಜೆಲ್ಸ್‌ ಜಲಪಾತ
ಏಂಜೆಲ್ಸ್‌ ಜಲಪಾತ

ಸ್ವಾರಸ್ಯಕರ ಸಂಗತಿಗಳು
* 2016ರಲ್ಲಿ ವಿದ್ಯುತ್ ಕ್ಷಾಮ ಈ ದೇಶವನ್ನು ಕಾಡಿತ್ತು. ಹೀಗಾಗಿ ಮಹಿಳೆಯರು ಯಾವುದೇ ಕಾರಣಕ್ಕೂ ಕೂದಲು ಒಣಗಿಸಿಕೊಳ್ಳಲು ಹೇರ್ ಡ್ರೈಯರ್‌ಗಳನ್ನು ಬಳಸುವಂತಿಲ್ಲ ಎಂದು ಆದೇಶ ಹೊರಡಿಸಲಾಗಿತ್ತು.
* ಮಕ್ಕಳಿಗೆ ಸಂಬಂಧಿಸಿದ ವಸ್ತು ಅಥವಾ ಡೈಪರ್ ಖರೀದಿಸಬೇಕೆಂದರೆ ಮಗುವಿನ ಜನನ ಪ್ರಮಾಣಪತ್ರ ತೋರಿಸುವುದು ಕಡ್ಡಾಯ.
* ಇಲ್ಲಿ ಕುಡಿಯುವ ನೀರಿಗಿಂತ ಪೆಟ್ರೋಲ್ ಅಗ್ಗ. ಕಿಸೆಯಲ್ಲಿನ ಚಿಲ್ಲರೆ ಹಣ ಕೊಟ್ಟರೂ ಪೆಟ್ರೋಲ್ ಸಿಗುತ್ತದೆ! ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ಅಡುಗೆ ಅನಿಲವೂ ಅಗ್ಗ.
* ಈ ದೇಶದ ಮಕ್ಕಳಿಗೆ ಶಾಲಾ ಅವಧಿಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ. ಬೆಳಿಗ್ಗೆ ಮಧ್ಯಾಹ್ನ ಅಥವಾ ರಾತ್ರಿ ಹೊತ್ತಲ್ಲೂ ಶಾಲೆಗೆ ಹೋಗಬಹುದು.
* ಅಪಹರಣ ಪ್ರಕರಣಗಳು ಇಲ್ಲಿ ಸಾಮಾನ್ಯ. ಇತರೆ ದೇಶಗಳಿಗೆ ಹೋಲಿಸಿದರೆ ಕೊಲೆ ಪ್ರಕರಣಗಳು ಇಲ್ಲೇ ಹೆಚ್ಚು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT