ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕತ್ತಲ ಖಂಡದಲ್ಲಿನ ಮಾನವೀಯ ಮೌಲ್ಯ

Last Updated 12 ಜನವರಿ 2019, 19:45 IST
ಅಕ್ಷರ ಗಾತ್ರ

ಸದ್ಗುಣಗಳಿಗೆ ಭಾಷೆ, ದೇಶ, ಜನಾಂಗಗಳ ಮಿತಿ ಇಲ್ಲ ಅನ್ನುವುದು ಕಾಲಕಾಲಕ್ಕೆ ನಿರೂಪಿತ ಆಗುತ್ತಲೇ ಇದೆ. ಸದ್ಗುಣ- ದುರ್ಗುಣಗಳು ಎಲ್ಲ ಕಾಲದಲ್ಲೂ ಮಾನವನಿಗೆ ಅಂಟಿಕೊಂಡು ಬರುವ, ಸ್ಪರ್ಶಿಸಲು ಆಗದಿದ್ದರೂ ಆಸ್ವಾದಿಸಲು ಸಾಧ್ಯವಾಗುವ ವಿಚಾರಗಳು.

ಕತ್ತಲ ಖಂಡ ಎಂಬ ಹೆಸರು ಪಡೆದಿರುವ ಆಫ್ರಿಕಾದ ಇಥಿಯೋಪಿಯ ದೇಶದಲ್ಲಿ ಪ್ರಾಧ್ಯಾಪಕನಾಗಿ ಕೆಲಸ ಮಾಡುವ ಅವಕಾಶ ನನಗೆ ಒದಗಿಬಂದಿತ್ತು. ಇಥಿಯೋಪಿಯ ಸುತ್ತಲೂ ಕೆಟ್ಟ ವಿಚಾರಗಳಿಗೆ ಹೆಸರು ಮಾಡಿರುವ ಸುಡಾನ್, ಸೋಮಾಲಿಯಾ ಮತ್ತು ಕೀನ್ಯಾ ಸುತ್ತುವರಿದಿದ್ದರೂ, ಇಥಿಯೋಪಿಯದಲ್ಲಿ ಸಿಗುವ ಆತಿಥ್ಯ ಮತ್ತು ಮಾನವೀಯ ಮೌಲ್ಯಗಳ ಬಗ್ಗೆ ಹೇಳಲೇಬೇಕು ಎಂಬ ತವಕದಿಂದ ಈ ಬರಹಕ್ಕೆ ಕೈಹಾಕಿದ್ದೇನೆ. ಇಥಿಯೋಪಿಯವು ಬಡ ರಾಷ್ಟ್ರಗಳಲ್ಲಿ ಒಂದು ಎಂಬುದು ನಮಗೆ ತಿಳಿದ ವಿಚಾರವೇ. ಆದರೆ, ಅಲ್ಲಿನ ಜನರಲ್ಲಿ ಮಾನವೀಯತೆಯ ದಾರಿದ್ರ್ಯ ಇಲ್ಲ ಎಂಬದನ್ನು ಈ ಎರಡು ಘಟನೆಗಳು ನಿರೂಪಿಸುತ್ತವೆ.

ಘಟನೆ 1

ನಾನು ಮತ್ತು ನನ್ನ ಸಹೋದ್ಯೋಗಿ ಅಡಾಮ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿದ್ದೆವು. ಅಲ್ಲಿನ ಒಂದು ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದೆವು. ಮನೆಗೆಲಸಕ್ಕೆ ಬರುವ ಹೆಂಗಸರು ತಮ್ಮ ಶಿಸ್ತುಬದ್ಧ ಜೀವನ ಶೈಲಿಯಿಂದ ಎಲ್ಲರನ್ನೂ ಚಕಿತಗೊಳಿಸುತ್ತಿದ್ದರು. ಮನೆಯ ಕೆಲಸಕ್ಕೆ ಬರುವವರ ಕೈಯಲ್ಲಿ ಮನೆಯ ಒಂದು ಕೀಲಿಕೈ ಸದಾ ಇರುತ್ತಿತ್ತು. ನಮ್ಮ ಅನುಪಸ್ಥಿತಿಯಲ್ಲಿ ಮನೆಗೆಲಸ ಮಾಡಲು ಅವರು ಬರುತ್ತಿದ್ದದ್ದು ವಾಡಿಕೆ.

ನಾವು ಮನೆಯಲ್ಲಿ ಇಟ್ಟ ಹಣ ಅಥವಾ ಬೆಲೆಬಾಳುವ ಯಾವ ವಸ್ತುವೂ ಕಳುವಾದ ಉದಾಹರಣೆ ಇಲ್ಲ! ಒಮ್ಮೆ ನಾವು ಮನೆಯಲ್ಲಿ ನೋಟಿನ ಕಂತೆ ಬಿಟ್ಟು ಕಾಲೇಜಿಗೆ ಹೋಗಿದ್ದೆವು. ಇದನ್ನು ಗಮನಿಸಿದ್ದ ಕೆಲಸದಾಕೆ ನೋಟು ಲಪಟಾಯಿಸಲಿಲ್ಲ. ಬದಲಾಗಿ ಮಾರನೇ ದಿನ ಭೇಟಿಯಾಗಿ ‘ಸರ್, ನಿಮಗೆ ಆದಾಯ ಹೆಚ್ಚಿಗೆ ಇರುವಂತೆ ಕಾಣುತ್ತೆ. ನನ್ನ ಸಂಬಳವನ್ನು ಒಂದೈದು ಬಿರ್ (ಬಿರ್- ಇಥಿಯೋಪಿಯ ಕರೆನ್ಸಿ) ಹೆಚ್ಚಿಸಿ’ ಎಂದು ವಿನಂತಿಸಿಕೊಂಡಿದ್ದು ನಾನು ಎಂದೂ ಮರೆಯಾಲಾಗದ ಘಟನೆ.

ಘಟನೆ 2

ನನ್ನ ಸ್ನೇಹಿತ ರವಿ ಎಂಬುವರು ಸಹ ಪ್ರಾಧ್ಯಾಪಕರಾಗಿ ಕೆಲಸದಲ್ಲಿದ್ದರು. ಒಮ್ಮೆ ಅವರು ಅಡಿಸ್- ಅಬಾಬ ಎಂಬ ನಗರದಲ್ಲಿನ ಮಾರುಕಟ್ಟೆ ಪ್ರದೇಶದಲ್ಲಿ ಹೋಗುತ್ತಿದ್ದರಂತೆ. ಹೊಟ್ಟೆ ಹಸಿವಿನಿಂದ ತೀವ್ರವಾಗಿ ಬಳಲಿದ್ದ ಅನಾಥ ವ್ಯಕ್ತಿಯೊಬ್ಬ ಇವರ ಕೈ, ಕಾಲನ್ನು ಕಟ್ಟಿ ಹಾಕಿ ಸಾವಿರಾರು ಬಿರ್ ಇದ್ದ ಪರ್ಸಿನಿಂದ ಕೇವಲ ಐದು ಬಿರ್ ಕಸಿದುಕೊಂಡನಂತೆ. ‘ಇಕರ್ತಾ’ (ಆಫ್ರಿಕನ್ ಭಾಷೆಯಲ್ಲಿ ಕ್ಷಮಿಸಿ) ಎಂದು ವಿನಂತಿಸಿಕೊಂಡು, ‘ನನಗೆ ಹಸಿವು ಆಗಿದೆ. ಕ್ಷಮಿಸಿ ಬಿಡಿ’ ಎಂದನಂತೆ. ಇದನ್ನು ಕಂಡು ಗದ್ಗದಿತರಾದ ನನ್ನ ಸ್ನೇಹಿತರು ಇನ್ನೊಂದೈದು ಬಿರ್ ಅವನ ಕೈಯಲ್ಲಿ ಇಟ್ಟು ಬಂದರಂತೆ.

***

ಇಥಿಯೋಪಿಯದ ಕಾಲೇಜುಗಳು ವಾರದಲ್ಲಿ ಐದು ದಿನ ಮಾತ್ರ ಕಾರ್ಯ ನಿರ್ವಹಿಸುತ್ತವೆ. ಸೋಮವಾರದ ದಿನ ಬೆಳಿಗ್ಗೆ ಭೇಟಿಯಾದಾಗ ಸಹೋದ್ಯೋಗಿಗಳ ನಡುವೆ ನಡೆಯುವ ಉಭಯ ಕುಶಲೋಪರಿಯ ಘಟನೆಗಳು, ನಮ್ಮಂತಹ ಪರಕೀಯರಿಗೆ ನಂಬಲಸಾಧ್ಯವಾದುದು. ಭಾರತೀಯರು ‘ಅತಿಥಿ ದೇವೋಭವ’ ಎಂಬ ಮಾತನ್ನು ಇಂದು ಎಷ್ಟರಮಟ್ಟಿಗೆ ಆಚರಣೆಯಲ್ಲಿ ಇಟ್ಟುಕೊಂಡಿದ್ದೇವೋ. ಆದರೆ, ಆಫ್ರಿಕಾದ ಜನ ಆಚರಣೆಯಲ್ಲಿ ಅದನ್ನು ತಂದಿರುವುದು ಬಹಳ ಖುಷಿಯ ವಿಚಾರ.

ಅದೇ ರೀತಿ ‘ಗುರು ಸಾಕ್ಷಾತ್ ಪರಬ್ರಹ್ಮ...’ ಶ್ಲೋಕ ನಮ್ಮಲ್ಲಿ ಇಂದು ತೋರಿಕೆಗೆ ಮಾತ್ರ ಬಳಕೆಯಾಗುತ್ತಿದೆ. ಆದರೆ, ಇಥಿಯೋಪಿಯದ ಮಕ್ಕಳು ಶಾಲೆ-ಕಾಲೇಜುಗಳಲ್ಲಿ ತೋರುವ ಶಿಸ್ತು, ಸಂಯಮ ವಿಶ್ವಕ್ಕೆ ಮಾದರಿ ಎಂದರೆ ಅತಿಶಯೋಕ್ತಿ ಅಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT