ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೂರದಿಂದ ಬಂದ ಸುಂದರಾಂಗನೆ

Last Updated 26 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ಇದೋ ದೂರದ ಅಮೆರಿಕದಿಂದ ಭಾರತಕ್ಕೆ ಬಂದ ಮರ. ಆದರೆ, ಅದು ಅರಳಿಸುವ ಪುಷ್ಪ ಮಾತ್ರ ಶಿವನಿಗೆ ತುಂಬಾ ಇಷ್ಟವಂತೆ. ಹೀಗಾಗಿ ಭಾರತೀಯರ ಪಾಲಿಗೆ ಈ ಹೂವು ಪರಮಪವಿತ್ರ. ದೇಶದ ಎಷ್ಟೋ ಪ್ರಮುಖ ಶಿವಾಲಯಗಳ ಅಂಗಳದಲ್ಲಿ ಈ ಹೂವಿನ ಮರ ಇದ್ದೇ ಇರುತ್ತದೆ. ಅಮೆರಿಕನ್ನರು ಇದಕ್ಕೆ ಕೆನೋನ್‌ಬಾಲ್‌ ಟ್ರೀ ಎಂದು ಕರೆದರೆ, ಭಾರತೀಯರ ಪಾಲಿಗೆ ಇದು ನಾಗಲಿಂಗ ಪುಷ್ಪದ ಮರ.

ಹಿಂದೂಗಳಿಗೆ ಅಷ್ಟೇ ಏಕೆ, ಬೌದ್ಧರ ಪಾಲಿಗೂ ಇದು ಪವಿತ್ರ ಮರವಂತೆ. ಅವರೂ ಈ ಮರಗಳನ್ನು ಬೆಳೆಸಲು ಉತ್ಸಾಹ ತೋರುವುದು ಥಾಯ್ಲೆಂಡ್‌, ಶ್ರೀಲಂಕಾ ಮತ್ತಿತರ ಕಡೆ ಎದ್ದು ಕಾಣುತ್ತದೆ.

ಭಾರತದಲ್ಲಂತೂ ಹುಟ್ಟಿನ ಸಂಭ್ರಮಕ್ಕೂ ಹೂವು ಬೇಕು, ಸಾವಿನ ಸಂದರ್ಭದಲ್ಲಿ ವಿದಾಯ ಹೇಳಲಿಕ್ಕೂ ಹೂವು ಬೇಕು. ಮಧ್ಯದ ಬದುಕಿನಲ್ಲಿ ಹೂವುಗಳ ಸೌಂದರ್ಯಕ್ಕೆ ಮನಸೋತ ಮನುಷ್ಯ ಅವುಗಳ ಪ್ರಯೋಜನವನ್ನು ನಾನಾ ರೀತಿಯಲ್ಲಿ ಪಡೆಯುತ್ತಿದ್ದಾನೆ.

ಅಂತಹ ವಿಶಿಷ್ಟವಾದ ಹೂವುಗಳಲ್ಲೊಂದು ನಾಗಲಿಂಗ ಅಥವಾ ನಾಗಲಿಂಗ ಸಂಪಿಗೆ. ಮಹಾಶಿವರಾತ್ರಿಯಂದು ಶಿವನಿಗೆ
ಬಿಲ್ವಪತ್ರೆಯಿಂದ ಅರ್ಚನೆ ಮಾಡಿದಷ್ಟೇ ಭಕ್ತಿಯಿಂದ ನಾಗಲಿಂಗ ಪುಷ್ಪವನ್ನೂ ಅರ್ಪಿಸುತ್ತಾರೆ. ಈ ಹೂವು ಡಿಸೆಂಬರ್‌ನಿಂದ ಮಾರ್ಚ್‌ವರೆಗೆ ಅರಳುತ್ತದೆ. ಹೆಚ್ಚಾಗಿ ಶಿವರಾತ್ರಿಯ ಸಮಯದಲ್ಲಿ ಗೊಂಚಲ ಗೊಂಚಲಾಗಿ ಅರಳುತ್ತದೆ.

ಪುಷ್ಪದ ರಚನೆ ಸಹ ನೋಡುವುದಕ್ಕೆ ಸೊಗಸಾಗಿದೆ. ಕಡುಗೆಂಪು ಎಸಳಿನ ಆರು ದಳಗಳಿಂದ ಆವೃತಗೊಂಡ ಹೂವಿನ ಮಧ್ಯ ಭಾಗದಲ್ಲಿ ಹಳದಿ ಬಣ್ಣದ ಪುಟ್ಟದಾದ ಲಿಂಗಾಕಾರ ಗೋಚರಿಸುತ್ತದೆ. ಹೂವಿನ ಶಲಾಕಾಗ್ರವೂ ಹಾವಿನ ಹೆಡೆಯಂತೆ ರಚನೆಗೊಂಡಿದ್ದು ಲಿಂಗಕ್ಕೆ ಹೆಡೆಯ ಆಕಾರದಲ್ಲಿರುವುದರಿಂದ ಇದಕ್ಕೆ ನಾಗಲಿಂಗ ಪುಷ್ಪವೆಂದು ಹೆಸರು ಬಂದಿರಬೇಕು.

ಮರದ ವ್ಯಾಸ ಸುಮಾರು ಒಂದು ಮೀಟರ್ ಇರುತ್ತದೆ. ಇದು ಹೆಮ್ಮರವಾಗಿ 50 ಅಡಿಗಳಷ್ಟು ಎತ್ತರ ಬೆಳೆಯುತ್ತದೆ. ಇದರ ಆಯಸ್ಸು ಸುಮಾರು 80 ವರ್ಷ. ಈ ಗಿಡ ಬೆಳೆದು 15 ವರ್ಷಗಳ ನಂತರ ಹೂವು, ಕಾಯಿ ಬಿಡುತ್ತದೆ. ಈ ಹೂವಿಗೆ ಮಕರಂದ ಇರುವುದಿಲ್ಲ. ಕಾಯಿಗಳು ನೆಲದಲ್ಲಿ ಒಡೆದಾಗ ಕೆಟ್ಟವಾಸನೆ ಹರಡು
ವುದು. ಆದರೆ ಔಷಧೀಯ ಗುಣವಿದೆ. ಈ ಮರದ ಹಣ್ಣುಗಳನ್ನು ಪಶು ಆಹಾರವಾಗಿ ಬಳಸುತ್ತಾರೆ. ಎಲೆಗಳ ಕಷಾಯ ಸೇವಿಸಿದರೆ ಚರ್ಮ ಸಂಬಂಧಿ ರೋಗಗಳು ಗುಣವಾಗುತ್ತವೆ. ಹಲ್ಲು ನೋವಿಗೆ ಇದರ ಚಿಗುರು ಎಲೆ ರಾಮಬಾಣ.

ಶಿವಲಿಂಗ ಪುಷ್ಪ, ಮಲ್ಲಿಕಾರ್ಜುನ ಹೂವು, ನಾಗಮಲ್ಲಿ, ನಾಗಸಂಪಿಗೆ ಮೊದಲಾದ ಹೆಸರುಗಳೂ ಈ ಹೂವಿಗಿವೆ. ನೀವೊಬ್ಬ ಪುಷ್ಪಪ್ರೇಮಿಯಾದರೆ ಶಿವರಾತ್ರಿಯ ಸಮಯದಲ್ಲಿ ಶಿವಾಲಯಗಳ ಬಳಿ ಹೋಗಿ. ಅವುಗಳ ಆವರಣದಲ್ಲಿ ನಿಮಗೂ ನಾಗಲಿಂಗ ಮರ ಹೂವರಳಿಸಿ ನಿಂತಿರುವುದು ಕಂಡೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT