ಆರೋಗ್ಯವಂತಬೆಂಗಳೂರು

ಶನಿವಾರ, ಏಪ್ರಿಲ್ 20, 2019
31 °C
ಜೀವನ ಶೈಲಿ

ಆರೋಗ್ಯವಂತಬೆಂಗಳೂರು

Published:
Updated:
Prajavani

ಬೆಂಗಳೂರು ‘ಫಿಟ್‌ ಸಿಟಿ’

ಮುಂಬೈ, ದೆಹಲಿ ಹಾಗೂ ಭಾರತದ ಇತರ ಮಹಾನಗರಗಳಿಗೆ ಹೋಲಿಸಿದರೆ ಬೆಂಗಳೂರು ದೇಶದ ಅತ್ಯಂತ ‘ಆರೋಗ್ಯವಂತರ ನಗರ’ ಎಂದು ‘ಇಂಡಿಯಾ ಫಿಟ್‌ –2019’ ವರದಿ ಹೇಳಿದೆ. ಇದರಿಂದೊಂದಿಗೆ ಉದ್ಯಾನನಗರಿ, ಸಿಲಿಕಾನ್‌ ಸಿಟಿ ಎಂದು ಹೆಗ್ಗಳಿಕೆ ಪಡೆದ ಬೆಂಗಳೂರಿನ ಕೀರ್ತಿಯ ಕಿರೀಟಕ್ಕೆ ಮತ್ತೊಂದು ಹೆಮ್ಮೆಯ ಗರಿ ಮೂಡಿದಂತಾಗಿದೆ.

ಸದಾ ಕ್ರಿಯಾಶೀಲ ಮತ್ತು ಚಟುವಟಿಕೆಯುತ ಜೀವನ ಸಾಗಿಸುತ್ತಿರುವ ಬೆಂಗಳೂರಿಗರು ದೈನಂದಿನ ಬದುಕಿನಲ್ಲಿ ಅಳವಡಿಸಿಕೊಂಡಿರುವ ಉತ್ತಮ ಜೀವನಶೈಲಿಯನ್ನು ಪ್ರಮುಖವಾಗಿ ಗಣನೆಗೆ ತೆಗೆದುಕೊಳ್ಳಲಾಗಿದೆ. 

ಬೆಂಗಳೂರುವಾಸಿಗಳು ರೂಢಿಸಿಕೊಂಡಿರುವ ಸಾಕಷ್ಟು ನೀರು ಸೇವನೆ, ಉತ್ತಮ ನಿದ್ದೆ, ವಿಶ್ರಾಂತಿ ಮುಂತಾದ ಆರೋಗ್ಯಯುತ ಹವ್ಯಾಸಗಳು ಬೆಂಗಳೂರನ್ನು ಅಗ್ರಸ್ಥಾನಕ್ಕೆ ಏರಿಸಿವೆ. 

ದೇಶದ ಉಳಿದ ಮೆಟ್ರೊ ನಗರಗಳಿಗೆ ಹೋಲಿಸಿದರೆ ಬೆಂಗಳೂರು ವಾಸಿಗಳು ಹೆಚ್ಚು ವಿಶ್ರಾಂತಿ ಪಡೆಯುತ್ತಾರೆ ಮತ್ತು ಸಾಕಷ್ಟು ನಿದ್ದೆ (ದಿನಕ್ಕೆ 6.56 ತಾಸು) ಮಾಡುತ್ತಾರೆ. ಇದು ಅವರ ಆರೋಗ್ಯಯುತ ಜೀವನದ ಗುಟ್ಟು ಎಂದು ದೇಶದ ಮುಂಚೂಣಿ ಆರೋಗ್ಯಸೇವಾ ಸಂಸ್ಥೆ ಗೊಕಿ (ಜಿಒಕ್ಯೂಐಐ) ಇತ್ತೀಚೆಗೆ ಬಿಡುಗಡೆ ಮಾಡಿದ ವರದಿ ಹೇಳಿದೆ.

ವಾಕಿಂಗ್‌–ಮುಂಬೈಕರ್‌ಗಳು ಮುಂದೆ: ರಾಷ್ಟ್ರ ರಾಜಧಾನಿ ದೆಹಲಿಯು ಬೆಂಗಳೂರು ನಂತರದ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ಸ್ಥಾನ ಪಡೆಯಲು ಮುಂಬೈ ವಿಫಲವಾಗಿದೆ. ಆದರೆ, ಅತ್ಯಂತ ಕ್ರಿಯಾಶೀಲ ನಗರ ಎಂಬ ಹೆಗ್ಗಳಿಕೆಗೆ ಅದು ಪಾತ್ರವಾಗಿದೆ. ಉಳಿದ ನಗರವಾಸಿಗಳಿಗೆ ಹೋಲಿಸಿದರೆ ವಾಕಿಂಗ್‌, ಜಾಗಿಂಗ್‌ ಮತ್ತು ರನ್ನಿಂಗ್‌ನಲ್ಲಿ ತೊಡಗಿರುವ ಮುಂಬೈಕರ್‌ಗಳು ಸದಾ ಚಟುವಟಿಕೆಯಿಂದ ಕೂಡಿರುತ್ತಾರೆ ಎಂದು ಹೇಳಿದೆ.  

ದೇಶದಲ್ಲಿ ಹೆಚ್ಚುತ್ತಿದೆ ಆರೋಗ್ಯ ಕಾಳಜಿ
ಭಾರತೀಯರಲ್ಲಿ ಆರೋಗ್ಯ ಕಾಳಜಿ ಹೆಚ್ಚುತ್ತಿದ್ದು ಉತ್ತಮ ಜೀವನಶೈಲಿ ಅಳವಡಿಸಿಕೊಳ್ಳುತ್ತಿದ್ದಾರೆ.  ಎಲ್ಲರಿಗೂ ಸಮಾಧಾನ ತರುವ ಅಂಶವೆಂದರೆ ಮಧುಮೇಹದ ಪ್ರಮಾಣ ಶೇ 7.9ರಿಂದ ಶೇ 7.1ಕ್ಕೆ ಕುಸಿದಿದೆ. ಬೆಳಗ್ಗೆ ಮತ್ತು ಸಂಜೆ ವಾಯು ವಿಹಾರ ಮಾಡುತ್ತಿರುವವರ ಸಂಖ್ಯೆ ಶೇ 22ರಿಂದ ಶೇ 33ಕ್ಕೆ ಹೆಚ್ಚಳವಾಗಿದೆ. ಅಂದರೆ, ಶೇ 10ರಷ್ಟು ಏರಿಕೆಯಾಗಿದೆ. 

2017–18ರ ಅವಧಿಯಲ್ಲಿ ವಾರ್ಷಿಕ ನಿದ್ದೆ ಪ್ರಮಾಣ 6.54ರಿಂದ 6.85 ತಾಸಿಗೆ ಏರಿಕೆಯಾಗಿದೆ. ಸರಾಸರಿ ನೀರು ಸೇವನೆ ಪ್ರಮಾಣ 1.5 ಲೀಟರ್‌ನಿಂದ 2.17 ಲೀಟರ್‌ಗೆ ಹೆಚ್ಚಿದೆ.  

ಮಾನದಂಡ ಏನು? 
ದೇಶದ ಎಂಟು ಪ್ರಮುಖ ನಗರಗಳಲ್ಲಿರುವ ಅಂದಾಜು ಏಳು ಲಕ್ಷ ‘ಗೊಕಿ’ ಆರೋಗ್ಯಸಾಧನಗಳ ಬಳಕೆದಾರರ ಅಭಿಪ್ರಾಯ ಆಧರಿಸಿ ‘ಇಂಡಿಯಾ ಫಿಟ್‌ ರಿಪೋರ್ಟ್‌ 2019’ ಸಿದ್ಧಪಡಿಸಿದೆ. ಸಮೀಕ್ಷೆಗೆ ಒಂದು ವರ್ಷ ತೆಗೆದುಕೊಂಡಿದೆ. 

ಮಧುಮೇಹ, ಹೃದಯಸಂಬಂಧಿ ಕಾಯಿಲೆ, ಅಧಿಕ ರಕ್ತದೊತ್ತಡ (ಬಿ.ಪಿ), ಒತ್ತಡ, ಖಿನ್ನತೆ ಮುಂತಾದ ಜೀವನಶೈಲಿ ಆಧಾರಿತ ರೋಗಗಳನ್ನು ಪ್ರಮುಖವಾಗಿ ಸಮೀಕ್ಷೆ ವೇಳೆ ಗಣನೆಗೆ ತೆಗೆದುಕೊಳ್ಳಲಾಗಿದೆ. 

ಬಾಡಿ ಮಾಸ್‌ ಇಂಡೆಕ್ಸ್‌ (ಬಿಎಂಐ), ನೀರು ಸೇವನೆ, ಪೌಷ್ಠಿಕ ಆಹಾರ, ಒತ್ತಡದ ಜೀವನ, ನಿದ್ದೆ, ರೋಗನಿರೋಧಕ ಶಕ್ತಿ ಮುಂತಾದ ಅಂಶ, ಎಂಟು ನಗರಗಳ ಮಾಲಿನ್ಯ ಪ್ರಮಾಣ ಮತ್ತು ಆಹಾರ ಗುಣಮಟ್ಟವನ್ನು ಅಳತೆಗೋಲಾಗಿ ಇಟ್ಟುಕೊಳ್ಳಲಾಗಿದೆ.

***
ಆರೋಗ್ಯಯುತ ಜೀವನಶೈಲಿ ಬಗ್ಗೆ ಜಾಗೃತಿ ಮೂಡಿಸಲು ‘ಗೊಕಿ’ ಸಂಸ್ಥೆ ದೇಶದಾದ್ಯಂತ ನೂರು ದಿನ ‘ಇಂಡಿಯಾ ಸ್ಟೆಪ್ಸ್‌ ಚಾಲೆಂಜ್‌’ ಆಯೋಜಿಸಿತ್ತು. ಜನರಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಾಗಿರುವುದು ಗೋಚರಿಸಿತು
–ವಿಶಾಲ್‌ ಗೊಂಡಲ್‌, ಗೊಕಿ ಸಂಸ್ಥಾಪಕ ಸಿಇಒ

***

ಮುಖ್ಯಾಂಶಗಳು

* ಅತಿ ಹೆಚ್ಚು ವಾಯುವಿಹಾರಿ ಮತ್ತು ಜಾಗರ್ಸ್‌ ಹೊಂದಿರುವ ಮುಂಬೈ ಮಹಾನಗರ ಇಂದಿಗೂ ದೇಶದ ಅತ್ಯಂತ ಕ್ರಿಯಾಶೀಲನಗರ 

* ಶುದ್ಧ ಗಾಳಿ ಮತ್ತು ನೀರು ಹೊಂದಿರುವ ಪುಣೆ ಭಾರತದ ವಾಸಯೋಗ್ಯ ನಗರ 

* ನಗರವಾಸಿಗಳಲ್ಲಿ ಹೆಚ್ಚುತ್ತಿರುವ ಆರೋಗ್ಯ ಕಾಳಜಿ  

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !