‘ನಾನು ಕಡ್ಡಾಯ ಮತ ಚಲಾವಣೆ ಮಾಡುತ್ತೇನೆ’

ಭಾನುವಾರ, ಏಪ್ರಿಲ್ 21, 2019
26 °C
Bangalore university-Election awareness

‘ನಾನು ಕಡ್ಡಾಯ ಮತ ಚಲಾವಣೆ ಮಾಡುತ್ತೇನೆ’

Published:
Updated:
Prajavani

‘ನಾನು ತಪ್ಪದೇ ಈ ಸಲದ ಎಲೆಕ್ಷನ್‌ನಲ್ಲಿ ಮತ ಚಲಾವಣೆ ಮಾಡುತ್ತೇನೆ’– ಹೀಗೆಂದು ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿಜ್ಞಾ ವಿಧಿ ಸ್ವೀಕರಿಸಿದ್ದು ಈ ಲೋಕಸಭೆ ಚುನಾವಣೆ ಸಂದರ್ಭದ ವಿಶೇಷ ಬೆಳವಣಿಗೆ.

ಲೋಕಸಭಾ ಚುನಾವಣೆಯಲ್ಲಿ ಮತ ಹಕ್ಕು ಚಲಾಯಿಸುವವರಲ್ಲಿ ಯುವಜನರ ಸಂಖ್ಯೆಯೂ ಹೆಚ್ಚಿದೆ. ಪರೀಕ್ಷೆಗಳು ಮುಗಿದು ಬೇಸಿಗೆಯ ಸಾಲುಸಾಲು ರಜೆಗಳು ಬೇರೆ. ಇದರ ನಡುವೆಯೂ ಯುವಜನತೆ ಪ್ರಜ್ಞಾವಂತಿಕೆಯಿಂದ ಮತ ಚಲಾವಣೆ ಮಾಡುವರೇ ಎನ್ನುವ ಪ್ರಶ್ನೆಗೆ ಇದೊಂದು ಉತ್ತರದಂತೆ ಇದೆ. ಆದರೂ ಇದೇ ಮನಸ್ಥಿತಿ ಸಮಸ್ತ ಯುವ ಸಮುದಾಯದಲ್ಲೂ ಇದೆಯೇ ಎನ್ನುವುದು ಮತ ಪ್ರಮಾಣದ ಅಂಕಿ ಅಂಶಗಳು ಹೊರಬಿದ್ದಾಗ ಅರಿವಿಗೆ ಬರುವಂಥದು. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ ಚಲಾವಣೆಯ ಜಾಗೃತಿ ಕೆಲಸಕ್ಕೆ ಮುಂದಾಗಿರುವುದು ಪ್ರಬುದ್ಧ ಸಮಾಜ ನಿರ್ಮಾಣ ಯತ್ನದಲ್ಲಿ ಮಹತ್ವದ ಹೆಜ್ಜೆ. 

ಮತದಾನ ಪ್ರತಿಜ್ಞಾವಿಧಿ ಸ್ವೀಕಾರ, ವಿಡಿಯೊ ಮತ್ತು ಬೀದಿನಾಟಕಗಳ ಮೂಲಕ ವಿದ್ಯಾರ್ಥಿಗಳು ಬೆಂಗಳೂರು ವಿಶ್ವವಿದ್ಯಾಲಯದಲ್ಲಷ್ಟೇ ಅಲ್ಲ, ಸಾರ್ವಜನಿಕ ಸ್ಥಳಗಳಲ್ಲೂ ಮತದಾನ ಜಾಗೃತಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ವಿಶ್ವವಿದ್ಯಾಲಯ ಮತದಾನ ಜಾಗೃತಿ ಕಾರ್ಯಕ್ರಮ ಆಯೋಜಿಸಿದೆ. ವಿವಿಯ ವಿದ್ಯುನ್ಮಾನ ಮಾಧ್ಯಮ ವಿಭಾಗದ ವಿದ್ಯಾರ್ಥಿಗಳು ವಿಶೇಷವಾಗಿ ಗಮನ ಸೆಳೆಯುತ್ತಿದ್ದಾರೆ. ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗಿದೆ. 

‘ಫೆಬ್ರುವರಿ ಮೊದಲ ವಾರದಿಂದಲೇ ಈ ಬಗ್ಗೆ ಯೋಜನೆ ರೂಪಿಸಿದೆವು. ಬೀದಿನಾಟಕ ಮಾಡಲು ವಿದ್ಯಾರ್ಥಿಗಳೇ ಮುಂದೆ ಬಂದರು. ಮತದಾನ ಜಾಗೃತಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಬೀದಿನಾಟಕಗಳನ್ನು ರೂಪಿಸಿದ್ದಾರೆ. ಮೂರು ನಿಮಿಷ ವಿಡಿಯೊವನ್ನೂ ಮಾಡಿದ್ದಾರೆ. ಮತದಾರರ ಗುರುತಿನ ಚೀಟಿ ಇಲ್ಲದಿದ್ದರೂ ಬೇರೆ ಗುರುತಿನ ಚೀಟಿ ತೋರಿಸಿ ಹೇಗೆ ಮತದಾನ ಮಾಡಬಹುದು ಎಂಬುದನ್ನು ಮನವರಿಕೆ ಮಾಡುವ ಪ್ರಯತ್ನ ಇವರದು. ಕಾಲೇಜುಗಳಷ್ಟೇ ಅಲ್ಲ, ಸಾರ್ವಜನಿಕ ಪ್ರದೇಶಗಳಲ್ಲೂ ಮತ ಜಾಗೃತಿ ಕಾರ್ಯಕ್ರಮಗಳನ್ನು ಮಾಡಿದ್ದೇವೆ’ ಎನ್ನುತ್ತಾರೆ ಬೆಂಗಳೂರು ವಿ.ವಿ. ವಿದ್ಯುನ್ಮಾನ ಮಾಧ್ಯಮ ವಿಭಾಗದ ಮುಖ್ಯಸ್ಥೆ ಡಾ.ವಾಹಿನಿ. 

ಸಾರ್ವಜನಿಕ ಸ್ಥಳಗಳಲ್ಲಿ ನಡೆಸಿದ ಬೀದಿ ನಾಟಕ ಮತ್ತು ವಿಡಿಯೊಗಳು ಮತದಾನ ಕುರಿತು ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಬಹಳಷ್ಟು ವಿದ್ಯಾರ್ಥಿಗಳಿಗೆ ‘ನೋಟಾ’ದ ಬಗ್ಗೆ ಅರಿವು ಇರಲಿಲ್ಲ. ಗುರುತಿನ ಚೀಟಿ ಇಲ್ಲದಿ ದ್ದರೂ ಇತರ ದಾಖಲೆಗಳನ್ನು ತೋರಿಸಿ ಮತ ಚಲಾಯಿಸುವ ಬಗ್ಗೆ ಹಾಗೂ ತಮ್ಮ ಮತಗಟ್ಟೆಯನ್ನು ಪತ್ತೆ ಹಚ್ಚುವ ಬಗ್ಗೆ ಜನರಲ್ಲಿ ತಿಳಿವಳಿಕೆ ಇರಲಿಲ್ಲ. ವಿ.ವಿ. ವಿದ್ಯಾರ್ಥಿ ಗಳಿಂದಾಗಿ ಮತದಾರರಿಗೆ ಈ ಬಗ್ಗೆ ಮಾಹಿತಿ ದೊರೆ ತಿದೆ ಎನ್ನುತ್ತಾರೆ ವಿದ್ಯುನ್ಮಾನ ಮಾಧ್ಯಮ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ರಾಜೇಶ್ವರಿ ಆರ್.

 

ನಮಗೂ ಜವಾಬ್ದಾರಿ ಇದೆ

‘ಯುವಜನರಿಗೆ ಜವಾಬ್ದಾರಿ ಇಲ್ಲ, ಮೋಜು–ಮಸ್ತಿಯಲ್ಲೇ ಜೀವನ ಕಳೆಯುತ್ತಾರೆ ಅನ್ನುವ ಭಾವನೆ ಬಹುತೇಕರಲ್ಲಿದೆ. ಯುವಜನರಿಗೂ ಜವಾಬ್ದಾರಿ ಇದೆ ಅನ್ನುವುದನ್ನು ಮತಜಾಗೃತಿ ಮೂಲಕ ತೋರಿಸಿಕೊಡುತ್ತಿದ್ದೇವೆ. ಮತದಾನ ಅಮೂಲ್ಯ ಅನ್ನುವ ಸಂದೇಶ ಸಾರುತ್ತಿದ್ದೇವೆ. ಸ್ಥಳೀಯ ಸಮಸ್ಯೆಗಳ ಕುರಿತು ಬೀದಿನಾಟಕದಲ್ಲಿ ಅರಿವು ಮೂಡಿಸಿದ್ದೇವೆ. ಉತ್ತಮ ಜನಪ್ರತಿನಿಧಿಗಳ ಆಯ್ಕೆಗೆ ಮತ ಚಲಾವಣೆ ಎಷ್ಟು ಅವಶ್ಯಕ ಅನ್ನುವುದನ್ನು ಮತ ಜಾಗೃತಿ ಮೂಲಕ ತೋರಿಸಿದ್ದೇವೆ. 

 –ಅರುಣ್ ಕುಮಾರ್, ವಿದ್ಯಾರ್ಥಿ

*

ಮತ ಜಾಗೃತಿಗೆ ಆದ್ಯತೆ

ಮೊದಲ ಬಾರಿಗೆ ಮತ ಹಕ್ಕು ಚಲಾಯಿಸುವವರಿಗೆ ಮತ ಜಾಗೃತಿ ಮೂಡಿಸಲು ಆದ್ಯತೆ ನೀಡಿದ್ದೇವೆ. ಸಾಲು ಸಾಲು ರಜೆಗಳಿರುವುದರಿಂದ ಯುವಜನರಿಗೆ ವೋಟಿಂಗ್‌ಗಿಂತ ಸುತ್ತಾಟದಲ್ಲೇ ಹೆಚ್ಚು ಆಸಕ್ತಿ. ಅಂಥವರಲ್ಲಿ ಜಾಗೃತಿ ಮೂಡಿಸುವ ಉದ್ದೇಶ ನಮ್ಮದು. ಐದು ನಾಟಕಗಳ ತಂಡ ರೂಪಿಸಿಕೊಂಡು ಐದು ವಿಷಯಗಳನ್ನು ಯುವಜನರ ಮುಂದಿಡುತ್ತಿದ್ದೇವೆ. ಕೆಲವೇ ನಿಮಿಷಗಳ ಈ ನಾಟಕ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗುತ್ತಿದೆ. 

–ರಾಧಾ ಎಚ್.ಎನ್., ವಿದ್ಯಾರ್ಥಿನಿ

*

ಚುನಾವಣೆ ಅನ್ನೋದು ಪ್ರಜಾಪ್ರಭುತ್ವದ ಬಹುದೊಡ್ಡ ಹಬ್ಬ. ಮೊದಲ ಬಾರಿಗೆ ಬೆಂಗಳೂರು ವಿ.ವಿ. ಮತಜಾಗೃತಿ ಕಾರ್ಯಕ್ರಮ ಮಾಡಿದೆ. ವಿ.ವಿ. ವ್ಯಾಪ್ತಿಯ ಮೂರು ಸಾವಿರ ವಿದ್ಯಾರ್ಥಿಗಳು ತಪ್ಪದೇ ಮತದಾನ ಮಾಡುವುದಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದ್ದಾರೆ. 

–ಪ್ರೊ.ವೇಣುಗೋಪಾಲ್, ಕುಲಪತಿ, ಬೆಂಗಳೂರು ವಿವಿ. ಜ್ಞಾನಭಾರತಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !