ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಪಂಚದ ಸುಂದರ ಗ್ರಾಮ

Last Updated 25 ಜೂನ್ 2022, 19:30 IST
ಅಕ್ಷರ ಗಾತ್ರ

ಯುರೋಪ್ ಒಕ್ಕೂಟದ ಚಿಕ್ಕ ರಾಷ್ಟ್ರ ಆಸ್ಟ್ರಿಯಾ. ಈ ದೇಶದ ಒಳನಾಡಿನ ಸೌಂದರ್ಯ ಚಿರಕಾಲ ನೆನಪಿಡುವಂತಹದು. ಕಣ್ಮನ ಸೆಳೆಯುವ ಆಲ್ಫ್ಸ್‌ ಪರ್ವತಗಳೂ ಈ ದೇಶದಲ್ಲಿ ಇರುವುದರಿಂದ ನಿಸರ್ಗದ ಸಹಜ ಸೊಬಗು ಇಲ್ಲಿ ತುಂಬಿಕೊಂಡಿದೆ. ಈ ಪರ್ವತಸ್ತೋಮದ ಮಂಜಿನ ಹೊದಿಕೆಯ ಇಳಿಜಾರುಗಳಲ್ಲಿ ಮೈಚಾಚಿದ ಹುಲ್ಲುಗಾವಲು, ಅಲ್ಲಿ ಮೇಯುವ ಹಸು, ಕುರಿಗಳು, ನದಿ ಸೇತುವೆಗಳ ದೃಶ್ಯಗಳು ಮನಮೋಹಕ. ನೀಲಿ ಆಕಾಶ, ಅದರಲ್ಲಿ ತೇಲುವ ಬಿಳಿಯ ಮೋಡಗಳು, ಬಾನೆತ್ತರಕ್ಕೆ ಬೆಳೆದು ನಿಂತ ಹಸಿರ ಮಜ್ಜನದ ಗಿಡ ಮರಗಳು. ಸುತ್ತಲೂ ಕಲ್ಲಿನ ಗೋಡೆಯಂತೆ ನಿಂತ ಪರ್ವತ ಶ್ರೇಣಿಯ ಮಧ್ಯದಲ್ಲಿ ಸಂಚರಿಸುವದೇ ಒಂದು ರೋಮಾಂಚನಕಾರಿ ಅನುಭವ.

ಈ ದೇಶದ ಹೃದಯ ಭಾಗದಲ್ಲಿ ಪವಡಿಸಿರುವ ‘ಹಾಲ್‌ಸ್ಟಾಟ್’ ಎಂಬ ಪುಟ್ಟ ಊರನ್ನು ನೋಡಬೇಕೆಂಬ ನನ್ನ ತವಕ ಈ ಸಲದ ಯುರೋಪ್ ಪ್ರವಾಸದಲ್ಲಿ ತಣಿಯಿತು. ಈ ಕೌತುಕಕ್ಕೆ ಬಲವಾದ ಕಾರಣವಿತ್ತು. ಪ್ರಕೃತಿ ಸೌಂದರ್ಯದ ಮಧ್ಯೆ ಕಂಗೊಳಿಸುವ ಈ ಚಿಕ್ಕ ಊರು ಜಗತ್ತಿನ ಅತ್ಯಂತ ಸುಂದರ ಹಳ್ಳಿಗಳಲ್ಲೊಂದಾಗಿರುವುದು. ಹಾಲ್‌ಸ್ಟಾಟ್ ಎಂಬ ಸರೋವರದ ಅಂಚಿನಲ್ಲಿರುವ ಅದೇ ಹೆಸರಿನ ಈ ಗ್ರಾಮ ಸಾಲ್ಜ್‌ ಕಮ್ಮರಗುಟ್ ಪರ್ವತ ಪ್ರದೇಶದಲ್ಲಿ ನೆಲೆಗೊಂಡಿದೆ. ಅನಾದಿ ಕಾಲದ ಜನವಸತಿಯ ಇತಿಹಾಸ ಈ ಗ್ರಾಮದ ಸ್ವಚ್ಛ ಶುಭ್ರ ಸರೋವರದಲ್ಲಿಯೇ ನಿಂತಂತೆ ಭಾಸವಾಗುತ್ತದೆ.

ಈ ಪುಟ್ಟ ಊರನ್ನು ಅಲ್ಲಿರುವ ನುಣುಪು ಕಲ್ಲು ಹಾಸಿನ ಬೀದಿಯಲ್ಲಿ ಕಾಲ್ನಡಿಗೆಯಿಂದಲೇ ಸುತ್ತಾಡಬೇಕು. ಬೆಟ್ಟಕ್ಕೆ ಬೆನ್ನು ತಾಗಿಸಿ ಉದ್ದಕ್ಕೂ ಒತ್ತೊತ್ತಾಗಿ ನಿಂತ ಬಣ್ಣ ಬಣ್ಣದ ಚಿತ್ತಾರದ ಮರದ ಹಳೆಯ ಮಹಡಿ ಮನೆಗಳು. ಕಲಾತ್ಮಕ ಕಿಟಕಿ, ಬಾಗಿಲುಗಳ ಮುಂದೆ ಆರೋಗ್ಯ ಮತ್ತು ಸ್ನೇಹದ ಸಂದೇಶ ಸಾರುವ ಇಳಿಬಿಟ್ಟ ಜಿರೇನಿಯಂ ಹೂಗಳು. ಜೊತೆಗೆ ಹಸಿರಿನಿಂದ ಹೊಳೆಯುವ ಎಲೆಗಳ ಬಳ್ಳಿಗಳು ಬೀರುವ ಸೊಬಗು ಚಲನಚಿತ್ರದ ಸೆಟ್ ಹಾಕಿದಂತೆ ತೋರುತ್ತವೆ.

ಕಿರಿದಾದ ಬಳಸು ದಾರಿಯಲ್ಲಿ ಸ್ವಲ್ಪ ದೂರ ಕ್ರಮಿಸುತ್ತಿರುವಂತೆಯೇ ಕ್ಲಾಸಿಕ್ ಮನೆ, ಕಟ್ಟಡಗಳಿರುವ ಮಾರ್ಕ್ಸ್ ಪ್ಲಾಜಾ ಎಂಬ ಕೇಂದ್ರ ಸ್ಥಳದಲ್ಲಿರುತ್ತೇವೆ. ಸಭೆ, ಸಮಾರಂಭ ಹಾಗೂ ಸಂಗೀತ ಕಛೇರಿಗಳು ಜರುಗುವುದು ಇಲ್ಲಿಯೇ. ಈ ಚೌಕದ ಮಧ್ಯದಲ್ಲೊಂದು ಕಾರಂಜಿ, ಹತ್ತಿರದಲ್ಲಿ ಸರೋವರದಂಚಿನಲ್ಲಿ ಎತ್ತರ ಗೋಪುರದ ಸುಂದರ ಇವಾಂಜೆಲಿಕಲ್ ಚರ್ಚ್‌ ಇದೆ. ಸರೋವರದಂಚಿಗೆ ಸಾಗುವ ವಿಹಾರ ಪಥದ ಮಾರ್ಗ ಸಹ ಇಲ್ಲಿಂದ ತೆರೆದುಕೊಳ್ಳುತ್ತದೆ. ಈ ಗಮ್ಯ ಸ್ಥಳದಲ್ಲಿ ಕರಕುಶಲ ಸಾಮಗ್ರಿ, ಸ್ಮರಣಿಕೆ, ಆಹಾರ ಮಳಿಗೆಗಳು, ಕೆಫೆ, ರೆಸ್ಟೊರೆಂಟ್‌ ಪ್ರವಾಸಿಗರಿಗೆ ಮುದ ನೀಡುತ್ತವೆ.

ಅಲಂಕಾರಿಕ ತಲೆಬುರುಡೆ

ಸ್ವಲ್ಪ ದೂರದ ಪರ್ವತದ ಬದಿಯಲ್ಲಿರುವ 16ನೇ ಶತಮಾನದ ಫಾರ್ಕಿರ್ಚ್‌ ಮಾರಿಯಾ ಕ್ಯಾಥೊಲಿಕ್ ಚರ್ಚ್‌ ಬಳಿ ಇರುವ ‘ಚಾರ್ನಲ್ ಹೌಸ್’ ಬಾಲ್ಕನಿಯ ಭೇಟಿಯು ವಿಲಕ್ಷಣ ತಲೆಬುರಡೆಗಳ ಸಂಗ್ರಹಾಲಯದಿಂದ ಆಸಕ್ತಿದಾಯಕವಾಗಿದೆ. ಇಲ್ಲಿಯ ಸ್ಮಶಾನದಲ್ಲಿ ಮೃತದೇಹಗಳನ್ನು ಹೂಳಲು ಸ್ಥಳಾವಕಾಶದ ಕೊರತೆಯಿಂದಾಗಿ, ಹೂತ ದೇಹಗಳನ್ನು ಹತ್ತು -ಹದಿನೈದು ವರ್ಷಗಳ ಬಳಿಕ ಹೊರತೆಗೆದು, ಸಂಸ್ಕರಿಸಿ, ಬುರುಡೆಗಳ ಮೇಲೆ ವ್ಯಕ್ತಿಯ ಹೆಸರು, ಹುಟ್ಟು-ಸಾವಿನ ದಿನಾಂಕ ನಮೂದಿಸಿ ನೆಲಮಾಳಿಗೆಯಲ್ಲಿ ಸಂಗ್ರಹಿಸಿಡುವ ವ್ಯವಸ್ಥೆ ಜಾರಿಗೆ ಬಂದಿತಂತೆ. ತಲೆ ಬುರಡೆಗಳ ಬಳಿ ಹೂ ಇಡಲು ಜಾಗ ಇರದ ಕಾರಣ, ಅವುಗಳ ಮೇಲೆಯೇ ಕಲಾತ್ಮಕವಾಗಿ ಹೂಗಳನ್ನು ಬಿಡಿಸಿದ್ದನ್ನು ಕಾಣಬಹುದು. ಸಾವಿರಾರು ತಲೆಬುರಡೆಗಳ ಈ ಸಂಗ್ರಹಾಲಯದಲ್ಲಿ 1995ರಲ್ಲಿ ಕೊನೆಯ ನಿವಾಸಿಯ ಬುರುಡೆ ಸೇರಿಸಲಾಗಿದ್ದು ಅದನ್ನು ಚಿನ್ನದ ಹಲ್ಲಿನಿಂದ ಗುರುತಿಸಲಾಗಿದೆ.

ಆಲ್ಫ್ಸ್‌ನ ಸುತ್ತಮುತ್ತಲಿನ ಪ್ರಕೃತಿ ಸೌಂದರ್ಯ ಸವಿಯಲು ಹಾಲ್‌ಸ್ಟಾಟ್ ಸರೋವರದ ದೋಣಿ ವಿಹಾರ, ಗೊಂಡೊಲಾ ಸವಾರಿ, ನಿಸ್ಸಂದೇಹವಾಗಿ ಆಹ್ಲಾದಕರ ಅನುಭವ ನೀಡುತ್ತದೆ. ಚಿಕ್ಕ ಹಳ್ಳಿಯ ಚೊಕ್ಕ ಸರೋವರವಿದು. ನಿಸರ್ಗದ ಸಹಜ ಚೆಲುವಿನ ಆರಾಧಕರಿಗೆ ಇದೊಂದು ಸ್ವರ್ಗವೇ ಸರಿ. ಇಲ್ಲಿ ಮೋಟಾರ್ ಬೋಟುಗಳಿಗೆ ಪ್ರವೇಶ ನಿಷಿದ್ಧ. ಪೆಡಲ್ ಹಾಗೂ ಎಲೆಕ್ಟ್ರಿಕ್ ದೋಣಿಯಲ್ಲಿಯೇ ಪಯಣಿಸಬೇಕು. ಪರ್ವತದ ಪ್ರಶಾಂತ ಪರಿಸರದಲ್ಲಿ ಸರೋವರದ ಅದ್ಭುತ ದೃಶ್ಯಾವಳಿಯನ್ನು ನಾವು ಕಣ್ತುಂಬಿಕೊಂಡೆವು. ಸ್ಫಟಿಕದಂತೆ ಶುಭ್ರವಾಗಿರುವ ನೀಲಿ ನೀರಿನ ಮೇಲೆ ತೂಗಾಡುತ್ತ ನಡೆಸಿದ ವಿಹಾರದಲ್ಲಿ ಕಂಡ ರಮಣೀಯ ದೃಶ್ಯಗಳು ನಮ್ಮನ್ನು ಬೆರಗುಗೊಳಿಸಿದವು. ಶ್ವೇತ ಹಂಸಗಳು ಸರೋವರದ ಅಂಚಿನಲ್ಲಿ ಸಂಚರಿಸಿ ಅದರ ಅಂದ ಹೆಚ್ಚಿಸಿದವು.

ಆಕಾಶದ ನಡಿಗೆ

ಈ ಅಂದದ ಊರಿನ ಮತ್ತೊಂದು ಸುಂದರ ಸ್ಥಳ ಸ್ಕೈವಾಕ್. ಹೆಸರೇ ಸೂಚಿಸುವಂತೆ ಇದು ಆಕಾಶದ ನಡಿಗೆ. ಕಡಿದಾದ ಬೆಟ್ಟದ ನೆತ್ತಿಗೆ ಒಂದು ಸಾವಿರಕ್ಕೂ ಅಡಿ ಮಿಕ್ಕಿದ ಎತ್ತರದವರೆಗೆ ಫ್ಯೂನಿಕ್ಯುಲರ್ ( ತಂತಿ ಆಧಾರದಿಂದ ಎಳೆಯುವ ಕ್ಯಾಬಿನ್) ಮೂಲಕ ಸಾಗಬೇಕು. ಇಲ್ಲಿಂದ ಇಡೀ ಊರು ಹಾಗೂ ಶೃಂಗಗಳ ಮಧ್ಯದ ಸರೋವರದ ಸಂಪೂರ್ಣ ವಿಹಂಗಮ ನೋಟವನ್ನು ವೀಕ್ಷಿಸಬಹುದು. ಇಲ್ಲಿಯ ಅನನ್ಯ ಸೊಬಗು ಮನಸ್ಸನ್ನು ಸೂರೆಗೊಳ್ಳುತ್ತದೆ. ಇಲ್ಲಿಂದ ಕ್ಯಾಮೆರಾ ಎತ್ತ ತಿರುಗಿಸಿದರೂ ಪೈಪೋಟಿಗಿಳಿದಂತಿರುವ ರಮ್ಯ ನಿಸರ್ಗ ಸಿರಿಯ ದೃಶ್ಯ ಸೆರೆಯಾಗುತ್ತದೆ.

ಹಾಲ್‌ಸ್ಟಾಟ್ 1997ರಲ್ಲಿಯೇ ಯುನೆಸ್ಕೊ ಸಾಂಸ್ಕೃತಿಕ ತಾಣಗಳ ಪಟ್ಟಿಯಲ್ಲಿ ಸೇರಿದೆ. ಎಂಟನೂರು ಜನಸಂಖ್ಯೆಯ ಈ ಊರು ಕೇವಲ ಸುಂದರ ಗ್ರಾಮವಲ್ಲ, ಪ್ರಪಂಚದ ಅತ್ಯಂತ ಹಳೆಯ ಉಪ್ಪಿನ ಗಣಿ ಇಲ್ಲಿರುವುದು ಇದರ ವಿಶೇಷ. ನಾಗರಿಕತೆಯ ಪ್ರವರ್ಧಮಾನದಿಂದ ಉಪ್ಪು ಈ ಊರಿನ ಆರ್ಥಿಕ ಚಟುವಟಿಕೆಯಲ್ಲಿ ಬಹು ಮಹತ್ವದ ಪಾತ್ರ ವಹಿಸಿದೆ. ಸ್ಕೈವಾಕ್ ಸ್ಥಳದಿಂದ ಸ್ವಲ್ಪ ದೂರದ ಪರ್ವತದ ಗರ್ಭದಲ್ಲಿರುವ ಪುರಾತನ ಸಾಲ್ಜವೆಲ್ಟೆನ್ ಉಪ್ಪಿನ ಗಣಿಯನ್ನು ಸಂದರ್ಶಿಸಬಹುದು. ಎರಡು ಕಿ.ಮೀ. ಸುರಂಗ ಮಾರ್ಗದಲ್ಲಿ ಸಂಚರಿಸಿ ಸಾಂಪ್ರದಾಯಿಕ ಉಪ್ಪು ಉತ್ಪಾದನೆ ಹಾಗೂ ಸಂಸ್ಕರಣೆಯ ವಿಧಾನಗಳನ್ನು ನೋಡಬಹುದು. ಇಲ್ಲಿರುವ ಮ್ಯೂಸಿಯಂನಲ್ಲಿ ಉಪ್ಪಿನ ಕ್ಯೂಬ್ ಖರೀದಿಸಬಹುದು.

ಈ ಊರು ತಲುಪಲು ಸಾಕಷ್ಟು ಸಾರಿಗೆ ಸೌಲಭ್ಯಗಳಿವೆ. ಬೆಂಗಳೂರು, ದೆಹಲಿಯಿಂದ ಆಸ್ಟ್ರಿಯಾ ದೇಶದ ರಾಜಧಾನಿ ವಿಯನ್ನಾಗೆ ವಿಮಾನ ಸೌಲಭ್ಯವಿದೆ. ಅಲ್ಲಿಂದ ಬಸ್ಸು ಅಥವಾ ಕಾರಿನ ಮೂಲಕ ಮೂರು ಗಂಟೆಗಳ 288 ಕಿ.ಮೀ. ಪ್ರವಾಸದಲ್ಲಿ ಈ ಊರು ತಲುಪಬಹುದು. ಆಸ್ಟ್ರಿಯಾದ ಮತ್ತೊಂದು ಪ್ರೇಕ್ಷಣೀಯ ಸ್ಥಳ ಸಾಲ್ಜ್‌ಬರ್ಗ್‌ ಅತೀ ಸನಿಹದ ವಿಮಾನ ನಿಲ್ದಾಣವಾಗಿದ್ದು ಅಲ್ಲಿಂದ ರಸ್ತೆ ಮೂಲಕ ಒಂದು ಗಂಟೆಯ ಪ್ರಯಾಣವಿದೆ. ಜೂನ್‌ದಿಂದ ಅಗಸ್ಟ್‌ವರೆಗೆ ಸರಾಸರಿ ತಾಪಮಾನವಿದ್ದು, ದೀರ್ಘ ಹಗಲು ಮತ್ತು ಬೆಚ್ಚಗಿನ ವಾತಾವರಣ ಪ್ರವಾಸಕ್ಕೆ ಸೂಕ್ತ. ಪ್ರವಾಸಿಗರ ವಾಸ್ತವ್ಯಕ್ಕೆ ಹೋಟೆಲ್‌ಗಳಿವೆ.

ಆಸ್ಟ್ರಿಯಾ ಸರ್ಕಾರದ ನಿಸರ್ಗ ಪ್ರೀತಿಯಿಂದಾಗಿ ಇಲ್ಲಿ ಪ್ರವಾಸಿಗರ ಹುಚ್ಚಾಟಕ್ಕೆ ಅವಕಾಶವಿಲ್ಲ. ಇಲ್ಲಿನ ನಿಯಮಗಳು ಸಹ ಕಟ್ಟುನಿಟ್ಟು. ನಿಸರ್ಗ ಕರೆಗೆ ಸಾರ್ವಜನಿಕ ಶೌಚಗೃಹದ ಕೊರತೆ ಮಾತ್ರ ಎದ್ದು ಕಂಡಿತು. ದಾರಿಯುದ್ದಕ್ಕೂ ಕಣ್ತುಂಬುವ ಹಸಿರು ಹೊದ್ದ ಪರ್ವತ, ಸ್ವಚ್ಛ ನೀರು, ಅಲಂಕೃತ ಮನೆಗಳು, ಗಡಿಬಿಡಿಯಿಲ್ಲದ ಪ್ರಶಾಂತ ವಾತಾವರಣ, ಸ್ನೇಹಶೀಲ ನಗುಮೊಗದ ನಿವಾಸಿಗಳಿಂದಾಗಿ ಇದೊಂದು ಪರಿಪೂರ್ಣ ಪ್ರವಾಸಿ ತಾಣವಾಗಿದೆ. ಕ್ರಿ.ಶ. ಎಂಟನೆಯ ಶತಮಾನದಿಂದ ಶ್ರೀಮಂತ ಸಂಸ್ಕೃತಿ ಹಾಗೂ ಪುರಾತನ ನಾಗರಿಕತೆಯನ್ನು ತನ್ನೊಡಲೊಳು ಅವಿತಿಟ್ಟುಕೊಂಡಿರುವ ಹಾಲ್‌ಸ್ಟಾಟ್ ಪ್ರವಾಸದಿಂದ ಜೀವನಪೂರ್ತಿ ನೆನಪಿನಲ್ಲುಳಿಯುವ ಅನುಭವ ದಕ್ಕುತ್ತದೆ - ಲವ್ ಎಟ್ ಫಸ್ಟ್‌ ಸೈಟ್‌ ಎಂಬಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT