ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರುದ್ರಭೂಮಿ ಅಭಿವೃದ್ಧಿ‌ಗೆ ಉದ್ಯಮಿ ಕಾಳಜಿ

Last Updated 10 ಜನವರಿ 2019, 19:30 IST
ಅಕ್ಷರ ಗಾತ್ರ

ವಯಸ್ಸು 64 ವರ್ಷ ದಾಟಿದರೂ ಸಮಾಜ ಸೇವೆಯಲ್ಲಿ ನಿರತರಾಗಿದ್ದಾರೆ, ಇಂದಿರಾ ನಗರದ ಜವಳಿ ಉದ್ಯಮಿ ಸಂತೋಷ್‌ ಕುಮಾರ್ ಗೋಯೆಂಕಾ.

ಸಮಾಜಕ್ಕೆ ಏನಾದರೂ ಕೊಡುಗೆ ಕೊಡಬೇಕು, ಎಂದರೆ ಹಲವು ರೂಪದಲ್ಲಿ ಮಾಡಬಹುದು. ಸಂತೋಷ್‌ ಅನಾಥ ಮಕ್ಕಳಿಗಾಗಿ ಹಾಸಿಗೆಗಳನ್ನು ಪೂರೈಸಿದರು. ಅವರ ಬಟ್ಟೆಗಳನ್ನು ಒಗೆದು ಕೊಡಲು ಬ್ಯಾಂಡ್‌ ಬಾಕ್ಸ್‌ ಜೊತೆಗೆ ಒಪ್ಪಂದ ಮಾಡಿಕೊಂಡರು. ಊಟದ ತಟ್ಟೆಗಳನ್ನೂ ನೀಡಿದರು. ಮಕ್ಕಳಿಗಾಗಿ, ಊಟ, ನಿದ್ದೆ, ಉಡುಗೆಗಳ ವ್ಯವಸ್ಥೆ ಮಾಡಿದರು ಸಂತೋಷ್.

ಚಿರನಿದ್ರೆಗೆ ಹೋದವರ ಬಗ್ಗೆಯೂ ಒಮ್ಮೆ ಗಮನ ಹರಿಯಿತು. ಸರ್ವಜ್ಞನಗರದ ಕಲ್ಲಪಳ್ಳಿಯಲ್ಲಿರುವ ಚಿತಾಗಾರ ಹಾಗೂ ವಿದ್ಯುತ್‌ ಚಿತಾಗಾರದ ಅವಸ್ಥೆ ಕಂಡು ಮರುಗಿದರು. ದುರಸ್ತಿಗೊಳಿಸಲು ಮುಂದಾದರು.

‘ನಮ್ಮದು ದೊಡ್ಡ ಕುಟುಂಬ. ನಮ್ಮ ಸಹೋದರರೆಲ್ಲಾ ವಿವಿಧ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ. ನಾನು ಸಿದ್ಧ ಉಡುಪುಗಳನ್ನು ತಯಾರಿಸುವ ಕೆಲಸದಲ್ಲಿ ನಿರತನಾಗಿದ್ದೇನೆ. 1978ರಲ್ಲಿ ಬೆಂಗಳೂರಿಗೆ ಬಂದೆ. ಇಲ್ಲಿನ ವಾತಾವರಣ, ಸಹೃದಯಿ ಜನರನ್ನು ಕಂಡು ನಗರದ ಮೇಲಿನ ಪ್ರೀತಿ ದಿನೇ ದಿನೇ ಹೆಚ್ಚಾಯಿತು. ಈವರೆಗೆ ಈ ನಗರ ನನಗೆ ಸಾಕಷ್ಟು ಕೊಟ್ಟಿದೆ. ನಾನೂ ಏನಾದರೂ ಮಾಡಬೇಕು ಎನಿಸಿತು. ಹೀಗಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ’ ಎನ್ನುತ್ತಾರೆ ಸಂತೋಷ್‌ ಗೋಯೆಂಕಾ.

‘ಮುಂಬೈನಲ್ಲಿರುವ ಅಜಂತಾ ಫಾರ್ಮಾ ಲಿ. ಸಂಸ್ಥೆಯ ಸಹಕಾರದೊಂದಿಗೆ ಈ ಕೆಲಸ ಆರಂಭಿಸಿದೆ. ಕಲ್ಲಪಳ್ಳಿ ವಿದ್ಯುತ್‌ ಚಿತಾಗಾರದ ಬಗ್ಗೆ ಮಾಹಿತಿ ಇತ್ತು. ಮೊದಲು ಗೋಡೆಗಳಿಗೆ ಬಣ್ಣ ಬಳಿಯುವ ಉದ್ದೇಶ ಮಾತ್ರ ಇತ್ತು. ಆದರೆ ಅಲ್ಲಿಗೆ ಭೇಟಿ ನೀಡಿದ ಮೇಲೆ ಗೊತ್ತಾಯಿತು ಅಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ ಎಂದು. ಗೋಡೆಗಳೆಲ್ಲಾ ಬಿರುಕು ಬಿಟ್ಟಿದ್ದವು. ಇದಷ್ಟೇ ಅಲ್ಲ, ತಿಗಣೆಗಳು, ವಿಷಕಾರಿ ಕೀಟಗಳು ಗೋಡೆಗಳ ಮೇಲೆ ರಾರಾಜಿಸುತ್ತಿದ್ದವು.

ಇನ್ನು ಮೇಲ್ಛಾವಣಿಯೆಲ್ಲಾ ಬಿರುಕು ಬಿಟ್ಟು, ಮಳೆ ಬಂದರೆ ಸೋರುತ್ತಿತ್ತು. ಹೀಗಾಗಿ ಈ ಎಲ್ಲ ಕೆಲಸಗಳನ್ನು ಮಾಡಿದ ನಂತರವಷ್ಟೇ ಬಣ್ಣ ಬಳಿಸಬೇಕಿತ್ತು. ಸ್ಮಶಾನದಲ್ಲಿ ಕೆಲಸ ಎಂದರೆ ಸುಲಭವಾಗಿ ಯಾರೂ ಒಪ್ಪುವುದಿಲ್ಲ. ಕೆಲಸಗಾರರನ್ನು ಒಪ್ಪಿಸುವುದು ಒಂದು ಸವಾಲಾಗಿತ್ತು.

ಇದರ ಜತೆಗೆ ಮುರಿದಿದ್ದ ಬಾಗಿಲುಗಳನ್ನು ಸರಿಪಡಿಸುವುದು, ಕಿಟಕಿಗಳಿಗೆ ಗಾಜು ಹಾಕಿಸುವುದು, ಹೀಗೆ ಹಲವು ಹೆಚ್ಚುವರಿ ಕೆಲಸಗಳನ್ನು ಮಾಡಬೇಕಾಯಿತು. ₹3 ಲಕ್ಷದಲ್ಲಿ ಕೆಲಸದಲ್ಲಿ ಮುಗಿಯಬಹುದು ಎಂದು ಊಹಿಸಿದ್ದೆ, ಆದರೆ ಕೆಲಸ ಮುಗಿಯುವಷ್ಟರಲ್ಲಿ ₹5 ಲಕ್ಷ ಖರ್ಚು ಮಾಡಬೇಕಾಗಿ ಬಂತು.

ಚಿತಾಗಾರ ಅಭಿವೃದ್ಧಿಗೆ ಬಿಬಿಎಂಪಿಯಿಂದ ಅನುಮತಿ ಪಡೆಯುವುದಕ್ಕೂ ಪರದಾಡಬೇಕಾಯಿತು. ಶ್ರಮ, ಕಾಳಜಿಯಿಂದಾಗಿ ಈಗ ವಿದ್ಯುತ್‌ ಚಿತಾಗಾರಕ್ಕೆ ನವೀನ ಸ್ಪರ್ಶ ಸಿಕ್ಕಿದೆ.

ಸಾವಿನ ಕಾರ್ಯ ಪುಣ್ಯಕಾರ್ಯ ಎನ್ನುತ್ತಾರೆ. ಅಂತಿಮ ವಿಧಿ ವಿಧಾನಗಳನ್ನು ನಡೆಸಬೇಕಾದ ಸ್ಥಳವೇ ಅವ್ಯವಸ್ಥೆಯಿಂದ ಕೂಡಿರುವುದು ನನಗೆ ಬೇಸರ ಮೂಡಿಸಿತು. ಹೀಗಾಗಿ ಈ ವಿದ್ಯುತ್‌ ಚಿತಾಗಾರವನ್ನು ದುರಸ್ತಿಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಇಲ್ಲಿರುವ ಕಟ್ಟಿಗೆಯ ಚಿತಾಗಾರವನ್ನೂ ಅಭಿವೃದ್ಧಿಪಡಿಸುವ ಉದ್ದೇಶವಿದೆ ಎನ್ನುತ್ತಾರೆ’ ಅವರು. ಆದರೆ ಅದಕ್ಕೆಲ್ಲ ಸಾಕಷ್ಟು ಹಣ ಬೇಕಾಗುತ್ತದೆ. ಸಾಕಷ್ಟು ಶ್ರಮವೂ ಬೇಕಾಗುತ್ತದೆ ಎನ್ನುವ ಸಂತೋಷ್‌ ಸದ್ಯಕ್ಕೆ ಕೆಲಸಗಳಿಗೆಲ್ಲ ಪೂರ್ಣವಿರಾಮವನ್ನಂತೂ ಇರಿಸಿಲ್ಲ. ಪ್ರಯತ್ನಿಸುತ್ತಲೇ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT