ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೃತ ದೇಹವೂ ಬಿಡದ ಮಾರಣಾಂತಿಕ ನೊಣ!

Last Updated 29 ಡಿಸೆಂಬರ್ 2018, 11:06 IST
ಅಕ್ಷರ ಗಾತ್ರ

ನೊಣಗಳ ವರ್ಗ ಡಿಪ್ಟೆರ. ಇದರಡಿಯಲ್ಲಿ ವರ್ಗೀಕರಿಸಿದ ನೂರಾರು ಕುಟುಂಬಗಳ ಸಹಸ್ರ ಬಗೆಯ ನೊಣಗಳಲ್ಲಿ ಅಡಗಿರುವ ವಿಸ್ಮಯ ಅವರ್ಣನೀಯ. ಹಾಗೇಯೇ ಈ ವರ್ಗದ ಕ್ಯಾಲಿಫೋರಿಡೆ(Calliphoridae) ಎಂಬ ಕುಟುಂಬದ ಸದಸ್ಯ ನೊಣಗಳು ಪ್ರದರ್ಶಿಸುವ ವರ್ಣವಿನ್ಯಾಸ, ಕಾರ್ಯ ವೈಖರಿಯೇ ಭಿನ್ನವಾಗಿದೆ. ಹಾರಾಡುವಾಗ ವಿಶಿಷ್ಟ ಬಗೆಯ ಶಬ್ದವನ್ನುಂಟು ಮಾಡುತ್ತವೆ.

ಈ ನೊಣಗಳನ್ನು ಬ್ಲೋ ಫ್ಲೈ (Blow fly), ಗ್ರೀನ್ ಬಾಟಲ್ ಫ್ಲೈ(Green bottle fly), ಬ್ಲೂ ಬಾಟಲ್ ಫೈ (Blue bottle fly), ಕ್ಲಸ್ಟರ್ ಫ್ಲೈ(Cluster fly) ಗಳೆಂಬ ಹಲವಾರು ಹೆಸರುಗಳಿಂದ ಪ್ರಬೇಧಕ್ಕನುಸಾರ ಕರೆಯುತ್ತಾರೆ. ಹಚ್ಚ ಹಸಿರು ಮತ್ತು ನೀಲಿ ಮಿಶ್ರಿತ ಗಾಜಿನಂತೆ ಹೊಳೆಯುವ ಮೈ ಬಣ್ಣ ಇವುಗಳದ್ದು. ಗಾತ್ರದಲ್ಲಿ 10ರಿಂದ15 ಮಿ.ಮೀ ಗಳಷ್ಟಿದ್ದು, ಮನೆ ನೊಣ(House fly)ಕ್ಕಿಂತ ಸ್ವಲ್ಪ ದೊಡ್ಡವು. ಇವು ಬೆಚ್ಚನೆಯ ಮತ್ತು ತೇವಾಂಶದಿಂದ ಕೂಡಿದ ವಾತಾವರಣವನ್ನು ಬಯಸುತ್ತವೆ. ಕರಾವಳಿ ಪ್ರದೇಶಗಳಲ್ಲಿ ಇವು ಹೆಚ್ಚಾಗಿ ಕಂಡು ಬರುತ್ತವೆ.

ಹೆಣ್ಣು ನೊಣವು ಏಕಕಾಲಕ್ಕೆ ಅಂದಾಜು 175 ರಿಂದ 200 ಮೊಟ್ಟೆಗಳನ್ನಿಡುತ್ತದೆ. ಒಂದು ಹೆಣ್ಣು ನೊಣವು ತನ್ನ ಜೀವಿತಾ ಕಾಲದಲ್ಲಿ 2500 ರಿಂದ 3000 ಮೊಟ್ಟಗಳನ್ನಿಡುವ ಸಾಮರ್ಥ್ಯ ಹೊಂದಿದೆ. ಮನುಷ್ಯರ ಮತ್ತು ಜಾನುವಾರುಗಳ ಗಾಯಗಳಲ್ಲಿ, ಮಾನವರ ಮೃತ ದೇಹಗಳಲ್ಲಿ, ಕೊಳೆತ ಮಾಂಸದಲ್ಲಿ, ಸತ್ತ ಮೀನುಗಳಲ್ಲಿ ಈ ನೊಣಗಳು ಮೊಟ್ಟೆಗಳನ್ನಿಡುತ್ತವೆ. 8 ರಿಂದ 10 ನಿಮಿಷಗಳ ಶೀಘ್ರ ಸಮಯದಲ್ಲೇ ಮೊಟ್ಟೆಯೊಡೆದು ಹೊರಬಂದ ಮರಿ(maggots)ಗಳು ಗಾಯಗಳನ್ನು ಪ್ರವೇಶಿಸಿ ಕೊಳೆತ ಮಾಂಸವನ್ನು ತಿನ್ನುತ್ತವೆ.

ಈ ಮರಿಗಳು ಗಾತ್ರದಲ್ಲಿ ಒಂದೂವರೆ ಸೆಂಟಿಮೀಟರಿನ ಸ್ಕ್ರೀವ್(Screw)ಗಳಂತಿದ್ದು, ಇವುಗಳನ್ನು ಸ್ಕ್ರೀವ್ ವರ್ಮ್ ಫ್ಲೈ(Screwworm fly) ಗಳೆಂದು ಕರೆಯುತ್ತಾರೆ. ಹಾಗಾಗಿ ಇವು ಸುಲಭವಾಗಿ ಗಾಯಗಳನ್ನು ಕೊರೆಯುತ್ತಾ ಪ್ರವೇಶಿಸುತ್ತವೆ. ಜೀವಂತ ಕುರಿಗಳ ತುಪ್ಪಟಗಳಲ್ಲಿಯೂ ಈ ನೊಣಗಳು ಮೊಟ್ಟೆಗಳನ್ನಿಡುತ್ತವೆ. ಈ ನೊಣದ ಮರಿಗಳು ತೆವಳುತ್ತಾ ಕುರಿಗಳ ಚರ್ಮವನ್ನು ಛೇದಿಸಿ ಗಾಯಗಳನ್ನು ಮಾಡುತ್ತವೆ. ತೀವ್ರ ಬಾಧೆಗೊಳಗಾದ ಕುರಿಗಳು ಸಾವನ್ನೊಪ್ಪುತ್ತವೆ. ಅಮೆರಿಕದಲ್ಲಿ ವರ್ಷಕ್ಕೆ ಸರಿ ಸುಮಾರು ಹತ್ತು ಲಕ್ಷ ಕುರಿಗಳು ಈ ನೊಣಗಳ ಬಾಧೆಗೊಳಪಡುತ್ತವೆ ಎನ್ನಲಾಗಿದೆ.

ಈ ನೊಣದ ಮರಿಗಳು ಮೂರು ಹಂತಗಳನ್ನೊಳಗೊಂಡ 10 ದಿನಗಳನ್ನು ಪೂರೈಸಿ ಕೋಶಾವಸ್ಥೆಗೆ ಹೋಗಲು ಜಾನುವಾರುಗಳ ದೇಹದಿಂದ ಬಿದ್ದು ಭೂವಿಗೆ ತೆರಳುತ್ತವೆ. ಮಣ್ಣಿನಲ್ಲಿ ಕೋಶಾವಸ್ಥೆಯನ್ನು ಪೂರೈಸಿ 10 ರಿಂದ 12 ದಿನಗಳ ನಂತರ ಪ್ರೌಢ ನೊಣವಾಗಿ ಹೂವಿನ ಮಕರಂದ ಹೀರುತ್ತವೆ. ಗಂಡು-ಹೆಣ್ಣಿನ ಸಮಾಗಮದ ನಂತರ ಹೆಣ್ಣು ನೊಣವು ಕೊಳೆತ ಗಾಯಗಳನ್ನು ಹುಡುಕಿ ಮೊಟ್ಟೆಗಳನ್ನಿಟ್ಟು ಸಂತಾನ ಮುಂದುವರೆಸುತ್ತದೆ.

ಈ ನೊಣದ ಮರಿಗಳ ಅಸ್ತಿತ್ವವನ್ನು ಇವುಗಳ ಬೆಳವಣಿಗೆಯ ಹಂತದ ಮೇರೆಗೆ ಮೃತ ದೇಹಗಳನ್ನು ವಿಧಿ ವಿಜ್ಞಾನದ ಅಧ್ಯಯನಕ್ಕೆ ಪೂರಕವಾಗಿ ಮೃತವಾದ ಕಾಲಾವಧಿಯನ್ನು ಪೋಸ್ಟ್ ಮಾರ್ಟಮ್ ವರದಿಗಳಿಗೆ ಒಂದೆಡೆ ಉಪಯೋಗವಾಗುತ್ತದೆ.

ಇನ್ನೊಂದೆಡೆ ಲ್ಯುಸಿಲಿಯ ಸೆರಿಕೇಟ(Lucilia sericata--Green bottle fly)ನ ಮರಿಗಳು ಹೊರಸೂಸುವ ಸೆರಾಟಿಸಿನ್((Seraticin) ಎಂಬ ರಾಸಾಯನಿಕವು ಗಾಯಗಳಲ್ಲಿರುವ ಬ್ಯಾಕ್ಟಿರಿಯಾಗಳನ್ನು ನಾಶ ಪಡಿಸುತ್ತದೆ ಮತ್ತು ಕೆಲವೇ ದಿನಗಳಲ್ಲಿ ಗಾಯವು ಮಾಯವಾಗುತ್ತದೆ. ನೋಡಿ ಈ ನೊಣದ ವಿಸ್ಮಯ ಹೇಗಿದೆ. ಒಂದು ಕಡೆ ಪೀಡೆ ಮತ್ತೊಂದು ಕಡೆ ಸ್ನೇಹಜೀವಿ. ಒಟ್ಟಿನಲ್ಲಿ ಕೀಟ ಪ್ರಪಂಚವೇ ಬಲು ವಿಸ್ಮಯಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT