ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸಕ್ಕೆ ಕೈಹಾಕಿ ಶುಚಿತ್ವ ಕಾಪಾಡುವಶ್ರಮಿಕರಿಗೊಂದು ಸಲಾಂ

Last Updated 30 ಏಪ್ರಿಲ್ 2019, 19:45 IST
ಅಕ್ಷರ ಗಾತ್ರ

ನಾ ವೇ ತಿಂದು ಉಳಿಸಿದ ಎಂಜಿಲು ತೆಗೆಯುವುದಕ್ಕೆ ನಮಗೇ ವಾಕರಿಕೆ! ಇನ್ನು ಕಂಡವರ ಎಂಜಿಲು, ಕಸ ಎತ್ತಿ ಅದನ್ನು ಸಾಗಿಸುವ ಕಾರ್ಮಿಕರಿಗೆ ಅದೆಷ್ಟು ವಾಕರಿಕೆ ಬರಬೇಡ? ‘ಅದು ಅವರ ಕರ್ಮ’ ಎಂದುಕೊಳ್ಳುವರೂ ಇದ್ದಾರೆ. ಆದರೆ ಶ್ರಮದಾನದಂಥ (ಡಿಗ್ನಿಟಿ ಆಫ್‌ ಲೇಬರ್‌) ಈ ಮನೋಧರ್ಮವನ್ನು ಗೌರವಿಸುವವರು ಒಂದು ಸಲಾಂ ಹೇಳದಿರಲಾರರು.

ಹೌದು ಇವತ್ತು ಅಂಥ ಕಾರ್ಮಿಕರನ್ನು ಗೌರವದಿಂದ ಕಾಣುವ ದಿನ. ಕಸ ಅಷ್ಟೇ ಏಕೆ ನಮ್ಮ ಬದುಕು ಇಷ್ಟು ಹಸನುಗೊಳ್ಳಲು ಇಂಥ ಅದೆಷ್ಟೋ ವಿವಿಧ ರಂಗದ ಕಾರ್ಮಿಕರ ಶ್ರಮ ಮತ್ತು ಬೆವರು ಬಳಕೆಯಾಗುತ್ತದೆ. ಅವರೆಲ್ಲ ಇಂದು ಅತ್ಯಂತ ಸಂಭ್ರಮದಿಂದ ತಮ್ಮದೇ ಒಂದು ದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ‘ಕಾರ್ಮಿಕರ ದಿನಾಚರಣೆ’. ವಿಶ್ವದಾದ್ಯಂತ ಇದನ್ನು ‘ಮೇ ಡೇ’ ಎನ್ನುತ್ತಾರೆ.

ಪ್ರತಿದಿನ ನಮ್ಮ ಮನೆಗಳ ಮುಂದೆ ಸೀಟಿ ಊದುತ್ತ ಟಂ ಟಂ ಅಥವಾ ಪುಟ್ಟದೊಂದು ವ್ಯಾನ್‌ ಓಡಿಸಿಕೊಂಡು ಬರುತ್ತಾರೆ. ಸೀಟಿ ಸದ್ದು ಕೇಳಿದರೆ ಕಸ ಎತ್ತುವ ಗಾಡಿ ಬಂತು ಎಂತಲೇ ಲೆಕ್ಕ. ಎಲ್ಲ ತಮ್ಮ ಮನೆಯ ಕಸವನ್ನು (ಮುಸುರಿ ಕೂಡ) ಡಬ್ಬ ಅಥವಾ ಪ್ಲಾಸ್ಟಿಕ್‌ ಬ್ಯಾಗ್‌ನಲ್ಲಿ ಹಾಕಿಕೊಂಡು ಒಂದು ಕೈಯಿಂದ ಮೂಗು ಮುಚ್ಚಿಕೊಂಡೇ ಹೊರ ಬಂದು ಲಾರಿಯವನ ಕೈಗಿಡುತ್ತಾರೆ. ಅದೂ ಮಾರುದ್ದ ದೂರ ನಿಂತು. ಇನ್ನು ಕೆಲವರು ಪ್ಲಾಸ್ಟಿಕ್‌ ಬ್ಯಾಗ್‌ಗಳನ್ನು ಗಾಡಿಯ ಸಮೀಪಕ್ಕೆ ಎಸೆಯುತ್ತಾರೆ. ಕಸದ ಗಾಡಿಯವ ಎತ್ತಿಕೊಳ್ಳಲು ತಡ ಮಾಡಿದರೆ ‘ಎಷ್ಟು ಕೊಬ್ಬು ನೋಡು ಇವನಿಗೆ’ ಎಂದು ಮೂಗು ಮುರಿಯುತ್ತಾರೆ.

ಆ ಕಸದ ಹುಡುಗರು ‘ನೀವು ಕೊಡುವ ಕಸವೇ ನಮ್ಮ ಹೊಟ್ಟೆಗೆ ತುತ್ತು ತರುವುದು ಅಕ್ಕಾ..’ ಎನ್ನುವ ದೈನ್ಯ ಭಾವದಿಂದಲೇ ತಲೆ ಬಾಗಿ ಕಸದ ಡಬ್ಬಿ ಅಥವಾ ಪ್ಲಾಸ್ಟಿಕ್‌ ಮೂಟೆ ಎತ್ತಿಕೊಳ್ಳುತ್ತಾರೆ. ಕಸ ನೆಲಕ್ಕೆ ಚೆಲ್ಲಿದರೆ ತಮ್ಮ ಬೊಗಸೆಯಿಂದಲೇ ಬಳಿದುಕೊಳ್ಳುತ್ತಾರೆ. ಕೈಗೆ ಗೌಸು ಕೂಡ ಇರುವುದಿಲ್ಲ. ಕಾಲಿಗೆ ಹರಿದ ಚಪ್ಪಲಿ. ಇಲ್ಲದಿದ್ದರೆ ಅದೂ ಇಲ್ಲ. ಅಷ್ಟು ಜನರ ಎಂಜಿಲು ತುಂಬಿದ ಕಸದಲ್ಲಿ ಕಾಲಿಟ್ಟುಕೊಂಡೇ ‘ರೈಟ್‌ ರೈಟ್‌’ ಎನ್ನುತ್ತ ಅದೇ ಉತ್ಸಾಹದಿಂದ ಗಾಡಿ ಓಡಿಸಿಕೊಂಡು ಮುಂದಕ್ಕೆ ಸಾಗುತ್ತಾರೆ.

ಚಳಿ ಇರಲಿ, ಮಳೆ ಇರಲಿ ಅಥವಾ ಭೀಕರ ಗಾಳಿಯೇ ಇರಲಿ. ಇವರ ಕಾಯಕ ತಪ್ಪುವುದಿಲ್ಲ. ಇವರಿಗೆ ಹುಷಾರು ತಪ್ಪಿದರೆ ಕಸದ ವ್ಯಾನ್‌ ಬಡಾವಣೆಗಳ ಸುತ್ತ ಸುಳಿಯುವುದೇ ಇಲ್ಲ. ಆಗ ನೋಡಬೇಕು ಫಜೀತಿ. ‘ಕರ್ಮ ಕರ್ಮ ಆ ಕಸದ ಗಾಡಿಯವರಿಗೆ ಕೊಬ್ಬು ಜಾಸ್ತಿ. ಇವತ್ತೂ ಬರಲಿಲ್ಲ ನೋಡಿ. ಈ ಪಾಲಿಕೆಯವರು ಬೇರೆ ವ್ಯವಸ್ಥೆ ಏನಾದರೂ ಮಾಡಬಾರದೇ’ ಎಂದೆಲ್ಲ ಹಲುಬುತ್ತಾರೆ. ನಿಜವೆಂದರೆ ಇಂಥ ಕೆಲಸ ಮಾಡುವುದಕ್ಕೆ ಜನ ಸಿಕ್ಕುವುದೇ ಅಪರೂಪ. ಸಿಕ್ಕರೂ ಇದೇ ಕೆಲಸವನ್ನು ನಿತ್ಯ ಮಾಡುವುದಕ್ಕೆ ಅದೆಷ್ಟು ಅಸಹಾಯಕ ಸ್ಥಿತಿ ಅವರದಿರಬೇಡ? ಸೂಕ್ಷ್ಮವಾಗಿ ಯೋಚಿಸಿದರೆ ಇದೊಂದು ರೀತಿಯ ಸಾಮಾಜಿಕ ಸಮಸ್ಯೆ. ಇಡೀ ಸಮಾಜ ಇಂಥ ಕೆಲಸಕ್ಕೇ ಅಂತ ಕೆಲವರನ್ನು ಹೊಂದುವುದು ತಮ್ಮ ಹಕ್ಕು ಎಂದು ಭಾವಿಸಿಕೊಂಡಂತಿದೆ. ಕನಿಷ್ಠ ಹಸಿ ಕಸ, ಒಣ ಕಸ ಎನ್ನುವುದು ಇಂದೂ ಕೂಡ ಸಾಧ್ಯವಾಗುತ್ತಿಲ್ಲ ಎಂದರೆ ನಮ್ಮ ಸಮಾಜ ‘ಕಸ ಎತ್ತುವವರನ್ನು ಹೊಂದುವುದು ತಮ್ಮ ಹಕ್ಕು’ ಎಂದೇ ಭಾವಿಸಿಕೊಂಡಿದೆ ಎನ್ನುವುದಕ್ಕೆ ನಿದರ್ಶನವಲ್ಲವೇ?

ಉದಾಹರಣೆಗೆ ಎಚ್‌ಬಿಆರ್‌ ಬಡಾವಣೆಗೆ ಹತ್ತಿರದ ಕಸ ಸಂಗ್ರಹ ವಾಹನಗಳ ನಿಲ್ದಾಣವನ್ನು ಗಮನಿಸಬಹುದು. ಅಲ್ಲಿ ಸಾಲು ಸಾಲು ಕಸದ ವಾಹನಗಳ ದಂಡೇ ಕಣ್ಣಿಗೆ ಬೀಳುತ್ತದೆ. ಕಾರ್ಮಿಕರ ದುಸ್ಥಿತಿಯನ್ನು ಆ ಚಿತ್ರಣವೇ ಧ್ವನಿಪೂರ್ಣವಾಗಿ ಹೇಳುತ್ತದೆ. ಗಮನಿಸಿ. ಇಲ್ಲಿನ ಯಾವ ಕಾರ್ಮಿಕರನ ಕೈಗೆ ಗವಸುಗಳಿಲ್ಲ. ಕಾಲಿಗೆ ಶೂಗಳಿಲ್ಲ. ಮೂಗಿಗೆ ಕಟ್ಟಿಕೊಳ್ಳಲು ಒಂದು ಮುಖಗವಸು (ಮಾಸ್ಕ್‌) ಕೂಡ ಇಲ್ಲ. ಇವರ ಆರೋಗ್ಯದ ಗತಿ ಏನು?

ಇದರ ಬಗ್ಗೆ ಕಸ ಸಂಗ್ರಹದ ಗುತ್ತಿಗೆ ಹಿಡಿದವರು ಕೂಡ ತಮ್ಮ ಕಾರ್ಮಿಕರಿಗಾಗಿ ಕನಿಷ್ಠ ಸೌಲಭ್ಯಗಳನ್ನು ಒದಗಿಸುವುದಿಲ್ಲ. ಮೇಲ್ನೋಟಕ್ಕೆ ಇವರ ಮೇಲೆ ಬಿಬಿಎಂಪಿ ವ್ಯವಸ್ಥೆ ಕೂಡ ಯಾವುದೇ ಒತ್ತಡ ಅಥವಾ ಕಡ್ಡಾಯ ಎನ್ನುವಂಥ ನಿಯಮಗಳನ್ನು ಹಾಕಿದಂತೆ ಕಾಣಿಸುವುದಿಲ್ಲ. ಹಾಕಿದರೂ ಅವುಗಳ ಅನುಷ್ಠಾನ ಎಷ್ಟರಮಟ್ಟಿಗೆ ಆಗಿದೆ ಎನ್ನುವುದನ್ನು ಗಮನಿಸುವುದೂ ಇಲ್ಲ. ಇಷ್ಟೆಲ್ಲ ಸಹಿಸಿಕೊಂಡು ಕರ್ತವ್ಯ ನಿರ್ವಹಿಸುತ್ತಿರುವ ಇಂಥ ಕಸದ ಕಾರ್ಮಿಕರ ಕೈಗೆ ಸಿಗುವ ಕಾಸು ಅವರ ಹೊಟ್ಟೆ ಬಟ್ಟೆಗೂ ಆಗುವುದಿಲ್ಲ. ಇಂಥ ಕಾರ್ಮಿಕರ ಸ್ಥಿತಿಯನ್ನು ಕೇಳುವವರೇ ಇಲ್ಲದಂತಾಗಿದೆ. ಬಿಬಿಎಂಪಿ ದೂರಿ ಪ್ರಯೋಜನವಾದರೂ ಏನು? ಈ ಕಸದ ಕಾರ್ಮಿಕರಿಗೆ ‘ಮೇ ಡೇ’ ಶುಭಾಶಯ ಹೇಳೋಣ. ಹಾಗೆಯೇ ಒಂದು ಸಲಾಂ ಕೂಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT