ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವಾನ್ವೇಷಣೆ ಅಂಕಣ: ಕೃಷ್ಣಕಮಲ

ಜೀವಾನ್ವೇಷಣೆ ಅಂಕಣ
Last Updated 2 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

ಸಸ್ಯಗಳಲ್ಲಿನ ವೈವಿಧ್ಯ ಹೇಳಲು ಅಸಾಧ್ಯ. ಭೂಮಿಯಲ್ಲಿ ಪ್ರಾಣಿಗಳಿಗಿಂತ ಮೊದಲೇ ವಿಕಾಸ ಹೊಂದಿದ ಸಸ್ಯಗಳು ತಾವು ಬೆಳೆಯುವ ಪರಿಸರವನ್ನವಲಂಬಿಸಿ ವಿವಿಧ ಆಕೃತಿ ಮತ್ತು ಸಂತಾನೋತ್ಪತ್ತಿಯ ಗುಣಗಳನ್ನು ಬೆಳೆಸಿಕೊಂಡಿವೆ. ಬಹುತೇಕ ಎಲ್ಲಾ ಸಸ್ಯಗಳು ಸೂರ್ಯ ರಶ್ಮಿಯಿಂದ ಪಡೆದ ಶಕ್ತಿಯನ್ನು ಪತ್ರಹರಿತ್ತಿನ ಮೂಲಕ ಹೀರಿಕೊಂಡು ದ್ಯುತಿಸಂಶ್ಲೇಷಣೆಯಿಂದ ಗ್ಲೂಕೋಸ್‌ನ್ನು ಉತ್ಪಾದಿಸುತ್ತವೆ. ಹಾಗಾಗಿ ಸಸ್ಯಗಳನ್ನು ದ್ಯುತಿಸ್ವಯಂಪೋಷಣೆ (Photo autotrophs) ಜೀವಿಗಳು ಎಂದು ಪರಿಗಣಿಸಲಾಗಿದೆ.

ಸಣ್ಣ ಹುಲ್ಲಿನಿಂದ ಹಿಡಿದು ದೊಡ್ಡ ತೆಂಗಿನಮರದವರೆಗೆ ಅದೇನು ವೈಶಿಷ್ಯ? ಸಣ್ಣ ಪೊದೆಗಳು, ಕುರುಚಲು ಮತ್ತು ಬೃಹದಾಕಾರದ ಮರಗಳಿವೆ. ಇವುಗಳ ಮಧ್ಯೆ ಬೆಳೆಯುವ ಬಳ್ಳಿಗಳಿವೆ. ಇಂತಹ ಬಳ್ಳಿಗಳ ಗುಂಪಿನ ಸದಸ್ಯನೆಂದರೆ ಕೃಷ್ಣಕಮಲ ಅಥವಾ ಗಡಿಯಾರದ ಹೂ. ಇದನ್ನು ಆಂಗ್ಲಭಾಷೆಯಲ್ಲಿ ಪ್ಯಾಷನ್ ಫ್ಲವರ್ ಎಂದು ಕರೆಯುತ್ತಾರೆ. ಸಸ್ಯಗಳ ಪ್ಲಾಸಿಪ್ಲೊರೇಸಿ ಕುಟುಂಬಕ್ಕೆ ಸೇರಿರುವ ಇದನ್ನು ವೈಜ್ಞಾನಿಕವಾಗಿ ಪ್ಯಾಸಿಪ್ಲೋರ ಎಂಬ ಜಾತಿಯಲ್ಲಿರಿಸಲಾಗಿದೆ. ಐನೂರಕ್ಕೂ ಹೆಚ್ಚು ಪ್ರಭೇದಗಳು ಪ್ರಪಂಚದಲ್ಲಿ ಲಭ್ಯ.

ಗುಣಲಕ್ಷಣಗಳು: ಗಟ್ಟಿಯಾದ ಕೋನಗಳನ್ನು ಹೊಂದಿರುವ ಕಾಂಡವಿರುತ್ತದೆ. ಮೃದುವಾದ ತೊಗಟೆಯಿರುತ್ತದೆ. ಎಲೆಗಳು ಒಂದು ಬಿಟ್ಟು ಮತ್ತೊಂದರಂತೆ ಜೋಡಣೆಯಾಗಿರುತ್ತವೆ. ಪ್ರತಿಯೊಂದು ಎಲೆಯಲ್ಲಿಯೂ ಮೂರು ಪತ್ರೆಗಳಿರುತ್ತವೆ. ಎಲೆಯಲ್ಲಿ ಮುಳ್ಳಿನಂತಹ ರಚನೆಯ ಅಂಚುಗಳಿರುತ್ತವೆ. ತೆಳುವಾದ ಸುರುಳಿ ಸುತ್ತಿದ ಲತಾತಂತು (Tendril)ಗಳು ಪ್ರತಿ ಗಂಟಿನಿಂದಲೂ ಮೂಡುತ್ತವೆ. ಎಲೆಗಳ ತೊಟ್ಟು ಮೂರರಿಂದ ಐದು ಸೆಂ.ಮೀನಷ್ಟಿರುತ್ತದೆ. ಈ ಸಸ್ಯದ ವೈಶಿಷ್ಟವೆಂದರೆ ಅದರ ಹೂ. ಕಾಂಡದ ಪ್ರತಿ ಗಂಟಿನಿಂದ ಒಂದೊಂದು ಹೂವು ಅರಳುತ್ತದೆ. ಸುಮಪತ್ರವು ಅಂಡಾರೂಪಿಯಾಗಿರುವುದು. ಸೂರ್ಯನ ರಶ್ಮಿಗಳು ಹೊರಟಂತೆ ತೆಳುವಾದ ಹೊರಪುಗಳಿರುತ್ತವೆ. ಎದ್ದುಕಾಣುವ ಐದು ಕೇಸರಗಳಿದ್ದು (Style) ಮೂರು ಶಲಾಕೆಗಳಿರುತ್ತವೆ (Stamen). ವಿವಿಧ ಪ್ರಭೇದಗಳಲ್ಲಿನ ಬಣ್ಣ ವೈವಿಧ್ಯ ಅನನ್ಯ. ಬಿಳಿ, ಕೆಂಪು, ಗುಲಾಬಿ, ನೇರಳೆ, ನೀಲಿ ಅಥವಾ ಬಹುವರ್ಣಗಳಲ್ಲಿ ಹೂಗಳು ಕಾಣಸಿಗುತ್ತವೆ. ನೈಸರ್ಗಿಕ ಸಸಿಗಳಲ್ಲದೆ ಕಸಿ ಮಾಡಿ ವಿವಿಧ ತಳಿಗಳನ್ನು ತಯಾರಿಸಲಾಗಿದೆ.

ಉಪಯೋಗ: ಎರಡು ವರ್ಷಕ್ಕೂ ಹೆಚ್ಚು ಕಾಲ ಬದುಕುತ್ತವೆ. ಸಮಶೀತೋಷ್ಣ ವಲಯದಲ್ಲಿರುವ ಒಳ್ಳೆಯ ಬಿಸಿಲು ಲಭ್ಯವಿರುವ ಜಾಗದಲ್ಲಿ ಬೆಳೆಯುತ್ತವೆ. ಮೂವತ್ತು ಅಡಿಗಳವರೆಗೆ ಬೆಳೆಯುವ ಸಸ್ಯ ಪ್ರಭೇದವಿದು. ಜೇನು ಹುಳು, ಬಾವಲಿ ಮುಂತಾದವುಗಳಿಂದ ಪರಾಗಸ್ವರ್ಶ ಕ್ರಿಯೆ ನಡೆಯುವುದು. ಹಣ್ಣು ಎಂಟರಿಂದ ಇಪ್ಪತ್ತು ಸೆಂ.ಮೀ ವರೆಗೆ ಇದ್ದು ಗಟ್ಟಿಯಾಗಿರುತ್ತದೆ. ಒಳಗಿನ ತಿರುಳು ಹಳದಿ ಬಣ್ಣದಿಂದಿದ್ದು ತಿನ್ನಲು ಯೋಗ್ಯ. ಹಣ್ಣಿನ ರಸವನ್ನು ಸಹಾ ಉಪಯೋಗಿಸುವರು. ಹಣ್ಣು ಪೋಷಕಾಂಶಗಳ ಆಗರವಾಗಿದ್ದು ವಿವಿಧ ವಿಟಮಿನ್‌ಗಳು, ಉಪಯುಕ್ತ ಲವಣಗಳು, ಆ್ಯಂಟಿಆಕ್ಸಿಡೆಂಟ್‌ಗಳು, ಕಬ್ಬಿಣ, ಮೆಗ್ನೀಷಿಯಂ, ನಿಯಾಸಿನ್, ಪ್ರೊಟಿನ್‌ಗಳು, ನಾರಿನಂಶ ಹೇರಳವಾಗಿದ್ದು ಔಷಧೀಯ ಗುಣಗಳನ್ನು ಹೊಂದಿದೆ. ಎಲೆ ಮತ್ತು ಬೇರುಗಳನ್ನು ನಿದ್ರಾಹಿನತೆ, ಅಪಸ್ಮಾರ, ಉನ್ಮಾದ ಮುಂತಾದ ಸಮಸ್ಯೆಗಳನ್ನು ನಿವಾರಿಸಲು ಬಳಸಲಾಗುವುದು. ಎಲೆಗಳನ್ನು ಹಲವಾರು ಚಿಟ್ಟೆಗಳ ಕಂಬಳಿಹುಳುಗಳು ಆಹಾರವಾಗಿ ಬಳಸುತ್ತವೆ. ಹೂವಿನ ಆಕಾರ ಮತ್ತು ಸೊಬಗನ್ನು ಪುರಾಣಗಳಲ್ಲಿಯೂ ಉಲ್ಲೇಖಿಸಲಾಗಿದೆ. ಮನೆಯ ಕೈತೋಟ ಮತ್ತು ಶಾಲಾ-ಕಾಲೇಜುಗಳ ಆವರಣದಲ್ಲಿ ಸುಲಭವಾಗಿ ಬೆಳೆಸಬಹುದಾಗಿದೆ. ಈ ಹೂವಿನ ಸೌಂದರ್ಯವನ್ನು ವಿವರಿಸಲು ಸಾಧ್ಯವೇ? ಅಸ್ವಾದಿಸಿಯೇ ನೋಡಬೇಕು.

(ಲೇಖಕರು: ಪ್ರಾಧ್ಯಾಪಕರು, ಸೂಕ್ಷ್ಮಜೀವಿಶಾಸ್ತ್ರ ವಿಭಾಗ, ದಾವಣಗೆರೆ ವಿಶ್ವವಿದ್ಯಾಲಯ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT