ನಿರಾಶ್ರಿತರ ಕೇಂದ್ರದಲ್ಲಿ ಸುಧಾರಣೆ ಪರ್ವ

7
ಜೀವನ್ಮುಖಿ

ನಿರಾಶ್ರಿತರ ಕೇಂದ್ರದಲ್ಲಿ ಸುಧಾರಣೆ ಪರ್ವ

Published:
Updated:

ನೆಮ್ಮದಿಯ ಗೂಡಿನಲ್ಲಿ ಬದುಕುತ್ತಿರುವ ಜೀವಗಳು, ಬದುಕು ಕಟ್ಟಿಕೊಳ್ಳಲು ಸಹಕಾರಿಯಾದ ಗುಡಿ ಕೈಗಾರಿಕೆ, ನಿರಾಶ್ರಿತರ ಕೈಚಳಕದಿಂದಲೇ ಸುತ್ತಲು ಮೂಡಿರುವ ಹಸಿರು, ಫಸಲಿಗೆ ಬಂದಿರುವ ಬಾಳೆ ತೋಟ, ಪಪ್ಪಾಯ ಹಣ್ಣಿನ ಗಿಡಗಳು, ಪಕ್ಕದಲ್ಲೊಂದು ಆಟದ ಮೈದಾನ, ರಂಗ ಮಂದಿರ, ವಿಶಾಲವಾದ ಪಾದಚಾರಿ ಮಾರ್ಗ...

ಇದು ಮಾಗಡಿರಸ್ತೆಯ ಸುಮನಹಳ್ಳಿಯಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರದ ನೋಟ. 2010ರಲ್ಲಿ ಕಳಪೆ ಗುಣಮಟ್ಟದ ಆಹಾರ ಸೇವನೆ, ಶುಚಿತ್ವದ ಕೊರತೆಯಿಂದಾಗಿ ಭಿಕ್ಷುಕರ ಸಾವುಗಳು ಸರಣಿಯೇ ಇಲ್ಲಿ ಸಂಭವಿಸಿತ್ತು. ಆ ಸಾವಿನ ಮನೆಯೀಗ ಜೀವನ್ಮುಖಿಯಾಗಿದೆ.

ದಿನಚರಿ
ಮುಂಜಾನೆ 5.30ರಿಂದ ಅರಂಭವಾಗುವ ದಿನನಿತ್ಯದ ಚಟುವಟಿಕೆಗಳು ಇಲ್ಲಿನ ಜನರ ಶಿಸ್ತನ್ನು ತೋರಿಸುತ್ತದೆ. ಬೆಳಿಗ್ಗೆ 6ಕ್ಕೆ ಕೇಂದ್ರದ ಸುತ್ತ ಮುತ್ತಲ ರಸ್ತೆಗಳಲ್ಲಿ ಸಂಚರಿಸಿದರೆ ಅಲ್ಲಿಂದ ಓಂಕಾರವನ್ನು ಕೇಳಬಹುದು. ಶಿಸ್ತಿನ ಸಿಪಾಯಿಗಳಂತೆ ಸಮವಸ್ತ್ರ ಧರಿಸುವ ನಿರಾಶ್ರಿತರೆಲ್ಲಾ, ಯೋಗ ಶಿಕ್ಷಕರು ಹೇಳಿಕೊಡುವ ಯೋಗ, ವ್ಯಾಯಾಮದಲ್ಲಿ ತೊಡಗುತ್ತಾರೆ. 

ಊಟ ಮತ್ತು ವಸತಿ ವ್ಯವಸ್ಥೆ: ಒಟ್ಟು 647 ನಿರಾಶ್ರಿತರಿಗೆ ಬದುಕು ನೀಡಿರುವ ತಾಣವಿದು. ಮೂರು ವಸತಿ ಗೃಹಗಳಿದ್ದು ಪುರುಷರ ಗೃಹಗಳಿಗೆ ಘಟಪ್ರಭಾ, ಮಲಪ್ರಭಾ, ‌ಮಹಿಳೆಯರ ಗೃಹಕ್ಕೆ ತುಂಗಭದ್ರ ಎಂದು ನದಿಗಳ ಹೆಸರಿಡಲಾಗಿದೆ. ಪ್ರತಿ ಕೊಠಡಿಯಲ್ಲಿ 35–40 ಮಂದಿ ಉಳಿಯುವಂತೆ ವ್ಯವಸ್ಥೆ ಮಾಡಲಾಗಿದೆ. ವರ್ಷಕ್ಕೆ ಮೂರು ಜತೆ ಬಟ್ಟೆ, ಹೊದಿಕೆ, ದಿನಬಳಕೆ ವಸ್ತುಗಳು ಸೇರಿದಂತೆ ಅಗತ್ಯವಾದ ವಸ್ತುಗಳನ್ನು ಪೂರೈಸಲಾಗುತ್ತಿದೆ. ಬಟ್ಟೆ ಸ್ವಚ್ಚ ಮಾಡಲು ಲಾಂಡ್ರಿ ವ್ಯವಸ್ಥೆಯನ್ನು ಒದಗಿಸಲಾಗಿದೆ.

250 ಮಂದಿ ಕೂರಬಹುದಾದಷ್ಟು ವಿಶಾಲವಾದ ಊಟದ ಮನೆ, ಶುದ್ಧ ನೀರಿನ ಘಟಕವೂ ಇಲ್ಲಿದೆ. ಪ್ರತಿದಿನ ಇಸ್ಕಾನ್‌ನಿಂದ ತಿಂಡಿ, ಊಟ ಬರುತ್ತದೆ. ಇದರೊಟ್ಟಿಗೆ ನಿತ್ಯ ಮೊಟ್ಟೆ ಅಥವಾ ಬಾಳೆಹಣ್ಣು ನೀಡಲಾಗುತ್ತದೆ. ದಿನಕ್ಕೆ ನಾಲ್ಕು ಬಾರಿ ಟೀ ಅಥವಾ ಕಾಫಿಯನ್ನು ಕೊಡಲಾಗುತ್ತದೆ.  

ಶುಚಿತ್ವ ಮತ್ತು ಆರೋಗ್ಯ: ಸಮಯಕ್ಕೆ ತಕ್ಕಂತೆ ನಿರಾಶ್ರಿತರ ಪರಿಹಾರ ಕೇಂದ್ರದ ಸೌಲಭ್ಯಗಳು ಬದಲಾಗಿವೆ. ಶುಚಿತ್ವದ ಕುರಿತು ಹೆಚ್ಚಿನ ಮುತುವರ್ಜಿ ವಹಿಸಲಾಗಿದೆ. ಪ್ರಾಥಮಿಕ ಆರೋಗ್ಯ ಘಟಕವಿದ್ದು, 24 ಗಂಟೆಯೂ ಅದು ಕಾರ್ಯ ನಿರ್ವಹಿಸುತ್ತಿದೆ. ತೀರಾ ಅಗತ್ಯವಾದ ತುರ್ತು ಸಂದರ್ಭಗಳಲ್ಲಿ ವಿಕ್ಟೋರಿಯಾ ಹಾಗೂ ಇತರೆ ಆಸ್ಪತ್ರಗಳಿಗೆ ರೋಗಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸುವ ವ್ಯವಸ್ಥೆಯಿದೆ.

ತಿಂಗಳಿಗೊಮ್ಮೆ ಹಲ್ಲು ಪರೀಕ್ಷೆ, ಮೂರು ತಿಂಗಳಿಗೊಮ್ಮೆ ನೇತ್ರ ಪರೀಕ್ಷೆ ನಡೆಸಿ, ಅಗತ್ಯವಿರುವವರಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಲಾಗುತ್ತದೆ ಎನ್ನುತ್ತಾರೆ ಸಿಬ್ಬಂದಿ. 

‘ಕುಡಿತ, ಮುಂತಾದ ಚಟಗಳಿಗೆ ಒಳಗಾಗಿರುವವರನ್ನು ಅದರಿಂದ ಹೊರತರುವುದು ಕಷ್ಟಸಾಧ್ಯ. ಇಲ್ಲಿಗೆ ಬಂದಮೇಲೆ ಅಂತಹ  ಯಾವುದೇ ವಸ್ತುಗಳು ದೊರೆಯಲು ಅವಕಾಶವಿಲ್ಲ. ಆದ್ದರಿಂದ ಬೇಕೋ ಬೇಡವೋ ಈ ಎಲ್ಲಾ ಚಟಗಳಿಂದ ದೂರವಿರಲೇಬೇಕಾಗುತ್ತದೆ. ಇಲ್ಲಿರುವ ಎಲ್ಲರೂ ಇದನ್ನು ಕಲಿಯುತ್ತಿದ್ದಾರೆ’ ಎನ್ನುತ್ತಾರೆ ನಿರಾಶ್ರಿತರ ಪುನರ್ವಸತಿ ಕೇಂದ್ರದ ವೈದ್ಯರು. 

ತೋಟಗಾರಿಕೆ ಆರಂಭ: ‘ಕೇಂದ್ರದಲ್ಲಿರುವ ನಿರಾಶ್ರಿತರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಕುಗ್ಗಿದ್ದರು. ತೋಟಗಾರಿಕೆ ಮಾಡಬೇಕೆಂದು ನಿರ್ಧರಿಸಿ ಸುಮಾರು 80 ಎಕರೆ ಪ್ರದೇಶದಲ್ಲಿ ತೋಟ ಮಾಡಬೇಕೆಂದು ಕೆಲಸ ಆರಂಭಿಸಿದೆವು. ಕೃಷಿಯಲ್ಲಿ ಆಸಕ್ತಿ ಇರುವವರು ತೋಟದಲ್ಲಿ ಬಂದು ಕೆಲಸ ಮಾಡುತ್ತಿದ್ದಾರೆ. ಇದರಿಂದ ಅವರ ಮಾನಸಿಕ ಮತ್ತು ದೈಹಿಕ ಆರೋಗ್ಯದಲ್ಲಿ ಸುಧಾರಣೆಯಾಗಿದೆ’ ಎನ್ನುತ್ತಾರೆ ಈಚೆಗಷ್ಟೆ ನಿವೃತ್ತಿ ಹೊಂದಿದ ಕೇಂದ್ರದ ಹಿರಿಯ ಅಧಿಕಾರಿ ಮಾನಯ್ಯ.

ಮಾವು, ಬಾಳೆ, ಪಪ್ಪಾಯ, ನಿಂಬೆ, ನೇರಳೆ, ಸಪೋಟಾ ಹಣ್ಣನ್ನು ಇಲ್ಲಿ ಬೆಳೆಯಲಾಗುತ್ತಿದೆ. ಇಲ್ಲಿಯವರೇ ಇವನ್ನು ಸೇವಿಸುತ್ತಾರೆ. ಕೇಂದ್ರದ ಮಾರಾಟ ಮಳಿಗೆಗೂ ನೀಡಲಾಗುತ್ತದೆ. ಗುಡಿ ಕೈಗಾರಿಕೆಗಳ ತರಬೇತಿ: ಬೆಳಿಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ಅವರವರ ಆಸಕ್ತಿಗೆ ಅನುಗುಣವಾಗಿ ವಿವಿಧ ಗುಡಿ ಕೈಗಾರಿಕೆಗಳಲ್ಲಿ ತರಬೇತಿ ನೀಡಲಾಗುತ್ತದೆ.

ಹಲವರು ತೆಂಗಿನ ನಾರನ್ನು ಬಿಡಿಸಿ ರಾಟೆಯ ಮೂಲಕ ಹಗ್ಗ ತಯಾರಿಸುತ್ತಾರೆ. ಈ ಹಗ್ಗದಿಂದ ಮ್ಯಾಟ್‌ಗಳನ್ನು ತಯಾರಿಸುತ್ತಾರೆ. ಗೃಹೋಪಯೋಗಿ ವಸ್ತುಗಳಾದ ಫಿನಾಯ್ಲ್‌, ಬ್ಲೀಚಿಂಗ್‌ ಪೌಡರ್‌, ಡಿಟರ್ಜಂಟ್‌ ಪುಡಿಯನ್ನು ತಯಾರಿಸುತ್ತಾರೆ.

 ಹೊಲಿಗೆ ತರಬೇತಿ ನೀಡಲಾಗುತ್ತದೆ. ತರಬೇತಿ ಪಡೆದವರು ಇಲ್ಲಿರುವವರಿಗೆ ಬಟ್ಟೆ ಸಿದ್ಧಪಡಿಸುತ್ತಾರೆ. ಸರ್ಕಾರಿ ಕಚೇರಿಗಳಿಗೆ ಅಗತ್ಯವಿರುವ ಪುಸ್ತಕಗಳಿಗೆ ಇಲ್ಲಿಂದಲೇ ಬುಕ್‌ ಬೈಂಡಿಂಗ್‌ ಕೂಡಮಾಡಿ ಕಳುಹಿಸಲಾಗುತ್ತಿದೆ. ಸರ್ಕಾರಿ ಇಲಾಖೆಗಳಲ್ಲಿ ಬಳಸುವ ಫೈಲ್‌ಗಳನ್ನೂ ಸಿದ್ಧಪಡಿಸಲಾಗುತ್ತದೆ. 


-ಸುಮನಹಳ್ಳಿ ಬಳಿ ಇರುವ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿರುವ ಮಹಿಳೆಯರು

‘ಎಲ್ಲರೊಟ್ಟಿಗೆ ಬೆರೆತು ಕೆಲಸ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಇದೆ. ಕೌಟುಂಬಿಕ ದೌರ್ಜನ್ಯ ಸಹಿಸಲಾಗದೆ ಮನೆ ಬಿಟ್ಟು ಹೊರ ನಡೆದೆ. ಭಿಕ್ಷಾಟನೆ ಮಾಡತೊಡಗಿದೆ. ಇಲ್ಲಿಗೆ ಬಂದು ನನ್ನ ಕೈಲಾಗುವಷ್ಟು ಕೆಲಸ ಮಾಡುವುದನ್ನು ಕಲಿತ್ತಿದ್ದೇನೆ’ ಎನ್ನುತ್ತಾರೆ ನಿರಾಶ್ರಿತೆಯೊಬ್ಬರು.

ಕೇಂದ್ರಕ್ಕೆ ಬರುವ ನಿರಾಶ್ರಿತರನ್ನು ಅವರ ಮನೆಯ ವಿಳಾಸ ತಿಳಿದುಕೊಂಡು ಮನೆಗೆ ಕಳುಹಿಸುವುದು ವಾಡಿಕೆ. ಒಂದೆರಡು ದಿನಗಳಲ್ಲಿ ವಾಪಸ್‌ ಹೋಗುವವರೂ ಇದ್ದಾರೆ. ಸದ್ಯಕ್ಕೆ ಇಲ್ಲಿರುವವರು ವರ್ಷದಿಂದೀಚೆಗೆ ಬಂದವರಾಗಿದ್ದಾರೆ’ ಎನ್ನುತ್ತಾರೆ ಅಲ್ಲಿನ ಸಿಬ್ಬಂದಿ. 

ಹೊಸ ಯೋಜನೆಗಳು: ‘ಕುರಿ ಸಾಕಾಣಿಕೆ ಮಾಡಲು ಅಗತ್ಯವಾದ ಎಲ್ಲಾ ಪರಿಕರಗಳನ್ನು ನಮಗೆ ಒದಗಿಸಿಕೊಳ್ಳಲು ಸಾಧ್ಯವಿರುವುದರಿಂದ ಯೋಜನೆಯನ್ನು ರೂಪಿಸಿದ್ದೇವೆ.  ಈಗಾಗಲೇ ಶೆಡ್‌ ತಯಾರಿದೆ. ಮೇವು ಬೆಳೆಯಬೇಕು.
ಇದಕ್ಕಾಗಿ ತಯಾರಿ ನಡೆಸಲಾಗುತ್ತಿದೆ. ಮೀನು ಸಾಕಾಣೆಯನ್ನೂ ಯೋಜಿಸುತ್ತಿದ್ದೇವೆ’ ಎನ್ನುತ್ತಾರೆ ನಿರಾಶ್ರಿತರ ಪರಿಹಾರ ಕೇಂದ್ರದ ಕಾರ್ಯದರ್ಶಿ ಚಂದ್ರ ನಾಯಕ್‌.

ಏನಿದು ನಿರಾಶ್ರಿತರ ಪುನರ್ವಸತಿ ಕೇಂದ್ರ
ಭಿಕ್ಷಾಟನೆ ನಿಷೇಧ ಕಾಯ್ದೆ–1975ರ ಅನ್ವಯ ಭಿಕ್ಷಾಟನೆಯನ್ನು ನಿಷೇಧಿಸಲಾಗಿದೆ. ಆದರೆ ಇನ್ನೂ ಚಾಲ್ತಿಯಲ್ಲಿರುವ ಭಿಕ್ಷಾಟನೆಯನ್ನು ನಿಯಂತ್ರಿಸಲು ‘ಕೇಂದ್ರ ಪರಿಹಾರ ಸಮಿತಿ’ಯನ್ನು ರಚಿಸಲಾಗಿದೆ. ಭಿಕ್ಷಾಟನೆಯಲ್ಲಿ ತೊಡಗಿರುವವರನ್ನು ಪುನರ್ವಸತಿ ಕೇಂದ್ರದಲ್ಲಿ ಇರಿಸುವುದು ಜಾರಿಯಲ್ಲಿದೆ. 

ಏರಿಕೆಯಾಗದ ದಿನಗೂಲಿ: ಕೆಲಸ ಮಾಡುವ ಆಸಕ್ತಿಯಿರುವಂತವರಿಗೆ ಪ್ರತಿದಿನ ಅವರಿಗಿಷ್ಟವಾದ ಕ್ಷೇತ್ರದಲ್ಲಿ ಕೆಲಸ ಮಾಡಲು ಅವಕಾಶ ಒದಗಿಸಿ  ದಿನಕ್ಕೆ ತಲಾ ₹10ರಂತೆ ಕೂಲಿ ನೀಡಲಾಗುತ್ತಿದೆ. ನಿರಾಶ್ರಿತರ ಕೇಂದ್ರವನ್ನು ಬಿಟ್ಟು ಹೋಗುವಾಗ ಅವರು ಕೆಲಸ ಮಾಡಿದ ಒಟ್ಟು ದಿನಗಳ ಲೆಕ್ಕದಲ್ಲಿ ಅವರಿಗೆ ಕೂಲಿಯನ್ನು ಕೊಡಲಾಗುತ್ತದೆ. ಈ ಕೇಂದ್ರದಿಂದ ಹೊರ ಹೋದವರು ಮತ್ತೆ ಭಿಕ್ಷಾಟನೆಯಲ್ಲಿ ತೊಡಗಿಕೊಳ್ಳದೇ ಯಾವುದಾದರೂ ಸ್ವ–ಉದ್ಯೋಗ ಮಾಡುತ್ತಾ ಜೀವನ ಸಾಗಿಸಲು ಈ ಹತ್ತು ರೂಪಾಯಿ ಎಲ್ಲಿಗೂ ಸಾಲುವುದಿಲ್ಲ. ಹಾಗಾಗಿ ಈ ಕೂಲಿಯನ್ನು ಹೆಚ್ಚಿಸಬೇಕು ಎಂಬ ಬೇಡಿಕೆ ಇದೆ. 

ಇಲ್ಲಿರುವ ಒಟ್ಟು ಸದಸ್ಯರು
ಪುರುಷರು – 479
ಮಹಿಳೆಯರು – 168
ಒಟ್ಟು – 647

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !