ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈದರಾಬಾದ್‌ನಲ್ಲಿ ನಿತ್ಯ ಹೃದಯಪೂರ್ಣ ಅರಣ್ಯ!

Last Updated 2 ಜುಲೈ 2022, 19:45 IST
ಅಕ್ಷರ ಗಾತ್ರ

ಬಿಸಿಲಿನ ನಾಡು ಎನಿಸಿದ ಹೈದರಾಬಾದ್‌ನಲ್ಲೂ ಒಂದು ನಿತ್ಯ ಹರಿದ್ವರ್ಣ ಕಾಡಿದೆ ಗೊತ್ತೆ? ಅದನ್ನು ನೋಡಲು ನೀವು ಇಲ್ಲಿನ ಕಾನ್ಹಾ ಶಾಂತಿವನದವರೆಗೆ ಪಾದ ಬೆಳೆಸಲೇಬೇಕು. ಕೇವಲ 6–8 ವರ್ಷಗಳಲ್ಲಿ ಇಲ್ಲಿ ಮಳೆ ಕಾಡೊಂದನ್ನು ಸೃಷ್ಟಿಸಿ ಬಹುದೊಡ್ಡ ಪವಾಡವನ್ನೇ ಮಾಡಲಾಗಿದ್ದು, ಮನುಷ್ಯ ಪ್ರಯತ್ನದಿಂದ ಏನನ್ನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಸಾಕ್ಷಿಯಾಗಿ ಈ ಶಾಂತಿವನ ಮೈದಾಳಿದೆ. ವಿನಾಶದ ಅಂಚಿನಲ್ಲಿದ್ದ ಸಸ್ಯ ಪ್ರಭೇದಗಳು ಈ ಕಾಡಿನಲ್ಲಿ ಮರುಹುಟ್ಟನ್ನೂ ಪಡೆದಿವೆ. ಈ ಕಾಡಿನಲ್ಲಿ ನೆತ್ತಿಯ ಜತೆಗೆ ಹೃದಯವನ್ನು ತಂಪು ಮಾಡುವಂತಹ ಗುಣವಿದ್ದು, ಅದನ್ನು ನೀವು ಖುದ್ದಾಗಿಯೇ ಅನುಭವಿಸಬೇಕು...

ನಿಮಗೆ ನಿತ್ಯ ಹರಿದ್ವರ್ಣ ಕಾಡು ಗೊತ್ತು. ನಿತ್ಯವೂ ಹಸಿರಿನಿಂದ ಕಂಗೊಳಿಸುವ ವನ ಅದು. ನಮ್ಮ ಪಶ್ಚಿಮಘಟ್ಟದಲ್ಲಿ ಅದು ಇದೆ. ಪಶ್ಚಿಮಘಟ್ಟದ ಪ್ರದೇಶ ಭಾರೀ ಮಳೆ ಬೀಳುವ ಪ್ರದೇಶ. ಅಲ್ಲಿ ನಿತ್ಯ ಹರಿದ್ವರ್ಣ ಕಾಡಿರುವುದು ವಿಶೇಷವಲ್ಲ. ಆದರೆ, ಹೈದರಾಬಾದ್‌ನಂತಹ ಬಿಸಿಲುನಾಡಿನಲ್ಲಿಯೂ ನಿತ್ಯ ಹರಿದ್ವರ್ಣ ಕಾಡಿದೆ ಎಂದರೆ ನೀವು ನಂಬಬೇಕು. ನಂಬುವಂತೆ ಮಾಡಿದ್ದಾರೆ ಕಮಲೇಶ್ ಪಟೇಲ್ ಅಥವಾ ದಾಜಿ. ಅದೂ 6–8 ವರ್ಷದಲ್ಲಿ ಮಳೆ ಕಾಡು ಸೃಷ್ಟಿ ಮಾಡಿ ಪವಾಡವನ್ನೇ ಮಾಡಿದ್ದಾರೆ.

ಹೌದು, ವರ್ಷಕ್ಕೆ 155 ಮಿ.ಮೀ.ಗಿಂತ ಕಡಿಮೆ ಮಳೆಯಾಗುವ ಪ್ರದೇಶದಲ್ಲಿ ಅವರು ಮಳೆ ಕಾಡು ರೂಪಿಸಿದ್ದಾರೆ. ಹೈದರಾಬಾದ್‌ನಿಂದ ಸುಮಾರು 50 ಕಿ.ಮೀ. ದೂರದಲ್ಲಿರುವ, ರಾಜೀವ್‌ ಗಾಂಧಿ ವಿಮಾನ ನಿಲ್ದಾಣದಿಂದ 30 ಕಿ.ಮೀ. ದೂರದಲ್ಲಿರುವ ಕಾನ್ಹಾ ಶಾಂತಿವನದಲ್ಲಿ ಇಂತಹ ಕಾಡು ಸೃಷ್ಟಿಯಾಗಿದೆ. ಕಾನ್ಹಾ ಶಾಂತಿವನದೊಳಗೆ ಪ್ರವೇಶ ಮಾಡಿದರೆ ಮಲೆನಾಡಿಗೆ ಬಂದ ಅನುಭವ. ಬಿರು ಬೇಸಿಗೆಯ ಕಾಲದಲ್ಲಿಯೂ ತಂಪು ತಂಪು. ಸುಮಾರು ಒಂದೂವರೆ ಸಾವಿರ ಎಕರೆಯಷ್ಟು ವಿಸ್ತಾರವಾಗಿರುವ ಈ ಆಶ್ರಮದ ಆವರಣದಲ್ಲಿ ಎಲ್ಲಿ ನೋಡಿದರೂ ಸಸ್ಯಗಳು ಹಸಿರಿನಿಂದ ಕಂಗೊಳಿಸುತ್ತವೆ. ಇಲ್ಲಿ ಯಾವ ಜಾಗವನ್ನೂ ವ್ಯರ್ಥ ಮಾಡಿಲ್ಲ. ಎಲ್ಲೆಲ್ಲಿ ಜಾಗವಿದೆಯೋ ಅಲ್ಲಿ ಸಸ್ಯವಿದೆ ಅಥವಾ ನೀರು ಸಂಗ್ರಹಿಸುವ ಇಂಗುಗುಂಡಿ ಇದೆ.

ಇದು ಮೂಲತಃ ಹಾರ್ಟ್‌ಫುಲ್‌ನೆಸ್ ಧ್ಯಾನ ವಿಧಾನವನ್ನು ಹೇಳಿಕೊಡುವ ಆಶ್ರಮ. ಇಲ್ಲಿಗೆ ದೇಶ ವಿದೇಶಗಳಿಂದ ಸ್ವಯಂ ಸೇವಕರು ಬರುತ್ತಾರೆ, ಧ್ಯಾನ ಮಾಡುತ್ತಾರೆ. ಉಚಿತವಾಗಿ ಧ್ಯಾನ ಕಲಿಯುತ್ತಾರೆ, ಕಲಿಸುತ್ತಾರೆ. ರಾಮಚಂದ್ರ ಮಿಷನ್‌ನ ಒಂದು ಭಾಗ ಇದು. ಆದರೆ, ಇಲ್ಲಿ ಪ್ರಕೃತಿಯೇ ದೇವರು. ಈ ಆಶ್ರಮದಲ್ಲಿ ಯಾವುದೇ ದೇವಾಲಯವಿಲ್ಲ. ಎಲ್ಲ ಧರ್ಮಗಳ, ಎಲ್ಲ ಜಾತಿಗಳ ಜನರಿಗೂ ಇಲ್ಲಿ ಪ್ರವೇಶವಿದೆ. ಕಣ್ಣು ಬಿಟ್ಟರೂ ನಿಸರ್ಗ ನಗುತ್ತದೆ. ಕಣ್ಣು ಮುಚ್ಚಿ ಧ್ಯಾನಕ್ಕೆ ಕುಳಿತರೂ ಪ್ರಕೃತಿ ದೇವರು ಒಲಿಯುತ್ತಾನೆ.

ದಾಜಿ ಅವರು ಇಲ್ಲಿ ಆಶ್ರಮ ಸ್ಥಾಪಿಸಬೇಕು ಎಂದು ಮನಸ್ಸು ಮಾಡಿದಾಗ ಇದೊಂದು ಬರಡುಭೂಮಿ. ಅಲ್ಲೊಂದು ಇಲ್ಲೊಂದು ಬೇವಿನಮರ ಇರುವುದು ಬಿಟ್ಟರೆ ಬೇರೆ ಮರಗಳೇ ಇರಲಿಲ್ಲ. 2015ರಲ್ಲಿ ಆಶ್ರಮದ ಕಾಮಗಾರಿ ಆರಂಭವಾಯಿತು. ಈಗ ನೀವು ಹೋಗಿ ನೋಡಿದರೆ ಅಲ್ಲೊಂದು ಮಲೆನಾಡು ತಲೆ ಎತ್ತಿ ನಿಂತಿದೆ. ಒಟ್ಟಾರೆ ಆರು ಲಕ್ಷಕ್ಕೂ ಹೆಚ್ಚು ಸಸ್ಯಗಳಿವೆ. ಸುಮಾರು ಎರಡು ಸಾವಿರ ಪ್ರಭೇದಗಳ ಸಸ್ಯಗಳಿವೆ. ಅದರಲ್ಲಿ ಅಪಾಯದ ಅಂಚಿನಲ್ಲಿರುವ 354 ಸಸ್ಯ ಪ್ರಭೇದಗಳು ಮರುಹುಟ್ಟು ಪಡೆದಿವೆ. ಬೇರೆ ಬೇರೆ ರಾಜ್ಯಗಳಿಂದ ಬೃಹದಾಕಾರದ ಮರಗಳನ್ನು ತಂದು ಇಲ್ಲಿ ಬೇರೂರಿಸಲಾಗಿದೆ. ಮಳೆ ಕಾಡಿನಲ್ಲಿ ಸಿಗುವ ಎಲ್ಲ ರೀತಿಯ ಸಸ್ಯಗಳನ್ನೂ ತಂದು ಇಲ್ಲಿ ಬೆಳೆಸಲಾಗಿದೆ. ಆಶ್ರಮದ ಎಲ್ಲೆಡೆ ಸಸ್ಯಗಳು ತಂಗಾಳಿ ಬೀಸುತ್ತಿದ್ದರೆ ಆಶ್ರಮದ ಒಂದು ಭಾಗದಲ್ಲಿ ಮಳೆಕಾಡನ್ನೇ ಸೃಷ್ಟಿಸಲಾಗಿದೆ. ಕಾನ್ಹಾ ಶಾಂತಿವನ ಹೀಗೆ ಮಳೆಕಾಡಾಗಿ ಬದಲಾದ ಕತೆ ರೋಚಕವಾಗಿದೆ.

ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ನಂದಿಗ್ರಾಮದಲ್ಲಿರುವ ಈ ಪ್ರದೇಶ ಬರಪ್ರದೇಶ. ಇಲ್ಲಿ ಇರುವ ಕೆರೆಗಳೂ ಬತ್ತಿ ಹೋಗಿದ್ದವು. ಆಶ್ರಮ ಕಟ್ಟಲು ಆರಂಭಿಸುವಾಗಲೇ ದಾಜಿ ಅವರ ಮನಸ್ಸಿನಲ್ಲಿ ಇದನ್ನು ಹೇಗೆ ಅಭಿವೃದ್ಧಿಪಡಿಸಬೇಕು ಎಂಬ ಬಗ್ಗೆ ಸ್ಪಷ್ಟ ಕಲ್ಪನೆ ಇತ್ತು. ಅದಕ್ಕೇ ಅವರು ಮೊದಲು ನೀರು ಸಂಗ್ರಹಕ್ಕೆ ಆದ್ಯತೆ ನೀಡಿದರು. ಈ ಪ್ರದೇಶದಲ್ಲಿ ಇರುವ ಕೆರೆಗಳನ್ನು ಮೊದಲು ಅಭಿವೃದ್ಧಿಪಡಿಸಿದರು. ಹೂಳು ತೆಗೆಸಿದರು. ಕೆರೆಗಳನ್ನು ಇನ್ನಷ್ಟು ದೊಡ್ಡದಾಗಿಸಿದರು. ಕೆರೆಗೆ ನೀರು ಹರಿದು ಬರುವಂತೆ ವ್ಯವಸ್ಥೆ ಮಾಡಿದರು ಮತ್ತು ಒಂದು ಕೆರೆಯಿಂದ ಇನ್ನೊಂದು ಕೆರೆಗೆ ಸಂಪರ್ಕವನ್ನೂ ಕಲ್ಪಿಸಿದರು. ಭಾರೀ ಮಳೆಯಾದಲ್ಲಿ ಕೆರೆ ಒಡೆದು ಹೋಗದಂತೆ ವ್ಯವಸ್ಥೆ ಮಾಡಿಸಿದರು. ಆಶ್ರಮದ ಪರಿಸರದಲ್ಲಿ ಬಿದ್ದ ಮಳೆಯ ಒಂದೊಂದು ಹನಿಯೂ ಕೂಡ ಅಲ್ಲಿಯೇ ಇಂಗಬೇಕು. ನೀರು ಯಾವುದೇ ಕಾರಣಕ್ಕೂ ಹೊರಕ್ಕೆ ಹೋಗಬಾರದು ಎಂಬ ಎಚ್ಚರಿಕೆಯನ್ನು ವಹಿಸಿದರು. ನೀರು ಇಂಗುವುದಕ್ಕಾಗಿ ನೂರಾರು ಚೆಕ್ ಡ್ಯಾಂ ನಿರ್ಮಾಣ ಮಾಡಿಸಿದರು.

ಆಶ್ರಮದಲ್ಲಿ ಕಟ್ಟಿದ ಎಲ್ಲ ಕಟ್ಟಡಗಳೂ ಮಳೆ ನೀರು ಸಂಗ್ರಹಿಸುವ ತಾಣಗಳಾದವು. ಕಟ್ಟಡದ ಮೇಲೆ ಬಿದ್ದ ನೀರನ್ನು ಹುಷಾರಿನಿಂದ ಸಂಗ್ರಹಿಸಿ ಭೂಮಿಯ ಒಳಕ್ಕೆ ಹೋಗುವಂತೆ ಮಾಡಲಾಯಿತು. ಜೊತೆಗೆ ಕಟ್ಟಡದ ಮೇಲ್ಚಾವಣಿ ಮೇಲೆ ಬಿದ್ದ ನೀರು ಸರಾಗವಾಗಿ ಹರಿದು ಹೋಗಿ ಕೆರೆಗೆ ಸೇರುವ ವ್ಯವಸ್ಥೆಯನ್ನೂ ಮಾಡಲಾಯಿತು. ಒಂದೇ ಬಾರಿಗೆ ಒಂದೂವರೆ ಲಕ್ಷ ಮಂದಿ ಕುಳಿತು ಧ್ಯಾನ ಮಾಡಲು ಸಾಧ್ಯವಾಗುವಂತಹ ಧ್ಯಾನ ಮಂದಿರವನ್ನೂ ಅಲ್ಲಿ ಕಟ್ಟಲಾಗಿದೆ. ಈ ಧ್ಯಾನ ಮಂದಿರದ ಮೇಲೆ ಬೀಳುವ ಮಳೆ ನೀರು ಕೂಡ ಸಂಗ್ರಹವಾಗುತ್ತದೆ. ಆಶ್ರಮದ ಎಲ್ಲ ಕಟ್ಟಡಗಳೂ ಸೇರಿ ಈಗ ಸುಮಾರು ಆರು ಕೋಟಿ ಲೀಟರ್ ನೀರು ಸಂಗ್ರಹದ ಸಾಮರ್ಥ್ಯವನ್ನು ಕಾನ್ಹಾ ವನ ಹೊಂದಿದೆ. ಇದೆಲ್ಲ ಅಲ್ಲಿಯೇ ಉಳಿಯುತ್ತದೆ ಮತ್ತು ಪುನರ್ ಬಳಕೆಯಾಗುತ್ತದೆ.

ಹೌದು, ಆಶ್ರಮದಲ್ಲಿ ಬಳಕೆಯಾಗುವ ನೀರನ್ನು ಮರುಬಳಕೆ ಮಾಡುವ ವ್ಯವಸ್ಥೆಯೂ ಇದೆ. ತ್ಯಾಜ್ಯ ನೀರನ್ನು ರಾಸಾಯನಿಕ ರಹಿತವಾಗಿ ಕಡಿಮೆ ವಿದ್ಯುತ್ ಬಳಸಿ ಶುದ್ಧ ಮಾಡುವ ತಂತ್ರಜ್ಞಾನವನ್ನು ಇಲ್ಲಿ ಅಳವಡಿಸಿಕೊಳ್ಳಲಾಗಿದೆ. ಆಶ್ರಮದ ಪರಿಸರದಲ್ಲಿ ಬರುವ ಮಳೆಯ ನೀರು ಅಲ್ಲಿಯೇ ಇಂಗುತ್ತದೆ. ಅಲ್ಲಿ ಬಳಕೆಯಾಗುವ ನೀರು ಕೂಡ ಮರುಬಳಕೆಯಾಗುತ್ತದೆ. ಇದರಿಂದಾಗಿ ಈಗ ಅಲ್ಲಿ ಅಂತರ್ಜಲ ಪ್ರಮಾಣ ಹೆಚ್ಚಾಗಿದೆ. ಮೊದಲು ಸಾವಿರ ಅಡಿ ಕೊರೆದರೂ ನೀರು ಸಿಗದೇ ಇರುವ ಪ್ರದೇಶದಲ್ಲಿ ಈಗ 200 ಅಡಿಗೆ ನೀರು ಲಭ್ಯವಾಗುವ ಹಂತಕ್ಕೆ ಬಂದಿದೆ.

ನೀರು ಉಳಿಸುವ ಕೆಲಸದ ಜೊತೆಗೇ ಸಸ್ಯಗಳನ್ನು ನೆಡುವ ಕೆಲಸವೂ ಸಾಗಿತು. ಅದಕ್ಕಾಗಿ ಸಸ್ಯಗಳೂ ನಳನಳಿಸುತ್ತಾ ಬೆಳೆದವು. 30–40 ವರ್ಷಗಳಷ್ಟು ಹಳೆಯದಾದ, ದೇಶದ ವಿವಿಧೆಡೆ ಅಭಿವೃದ್ಧಿ ಕಾಮಗಾರಿಗಾಗಿ ತೆಗೆಯಲು ಗುರುತಿಸಿದ್ದ ಆಲದ ಮರಗಳನ್ನು ಸಂರಕ್ಷಿಸಿ ತಂದು ಇಲ್ಲಿ ಹಾಕಲಾಯಿತು. ಅಂತಹ 20ಕ್ಕೂ ಹೆಚ್ಚು ಆಲದ ಮರಗಳು ಇಲ್ಲಿ ಅರಳಿ ನಿಂತಿವೆ. ಬರೀ ಬೇವಿನ ಸಸಿಗಳೇ ಬೆಳೆಯುತ್ತಿದ್ದ ಈ ಪ್ರದೇಶದಲ್ಲಿ ಈಗ ತೆಂಗು, ಅಡಿಕೆ ಕೂಡ ಬೆಳೆಯುತ್ತಿದೆ. ದೇಶದ ಬಹುತೇಕ ಭಾಗಗಳಲ್ಲಿ ಬೆಳೆಯುವ ಎಲ್ಲ ಸಸ್ಯಗಳನ್ನೂ ತಂದು ಇಲ್ಲಿ ಬೆಳೆಸಲಾಗುತ್ತಿದೆ.

ಹಿಮಾಲಯ ಪ್ರದೇಶದಲ್ಲಿ ಬೆಳೆಯುವ ಕೇಸರಿ ಬೆಳೆಗೆ ಕೂಡ ಇಲ್ಲಿ ಸೂಕ್ತ ವಾತಾವರಣವನ್ನು ಸೃಷ್ಟಿಸಿ ಬೆಳೆಯಲಾಗುತ್ತಿದೆ. ಇಲ್ಲಿನ ಮಳೆ ಕಾಡಿನಲ್ಲಿ ಪಶ್ಚಿಮಘಟ್ಟದ ಬಹುತೇಕ ಸಸ್ಯಗಳು ಇವೆ. ಪಶ್ಚಿಮಘಟ್ಟದಲ್ಲಿ ವರ್ಷದ 365 ದಿನ ಮಳೆ ಬರಲಿಕ್ಕಿಲ್ಲ. ಆದರೆ ಮಳೆಗಾಲದಲ್ಲಿ ಬಂದ ಮಳೆಯ ಲಾಭ ಅಲ್ಲಿನ ಸಸ್ಯಗಳಿಗೆ ಸಿಗುತ್ತದೆ. ಅದೇ ವಾತಾವರಣವನ್ನೂ ಇಲ್ಲಿ ಸೃಷ್ಟಿಸಲಾಗಿದೆ. ಅದಕ್ಕಾಗಿಯೇ ಇಲ್ಲಿನ ಮಣ್ಣಿನ ಗುಣಮಟ್ಟ ಕೂಡ ಚೆನ್ನಾಗಿದೆ. ಮಳೆ ಬಂದೂಕುಗಳನ್ನು ಬಳಸಿ ಮಳೆ ಕಾಡಿಗೆ ಮಳೆ ಸಿಂಪಡಿಸುವ ವ್ಯವಸ್ಥೆಯೂ ಇಲ್ಲಿದೆ.ಆ ಮೂಲಕ ಇಲ್ಲಿಯೂ ಮಲೆನಾಡಿನ ವಾತಾವರಣವನ್ನೇ ಸಹಜವಾಗಿ ಸೃಷ್ಟಿಸಲಾಗಿದೆ. ‘ನಾವು ಎಲ್ಲ ದಿನ ನೀರು ಕೊಡುವುದಿಲ್ಲ. ಇಲ್ಲಿ ಅಭಿವೃದ್ಧಿಪಡಿಸಲಾದ ಮಳೆ ಕಾಡಿನ ಪ್ರದೇಶದಲ್ಲಿ ಬೇಸಿಗೆಯ ಸಮಯದಲ್ಲಿ ಮಾತ್ರ 2–3 ಮಳೆ ಬಂದೂಕುಗಳನ್ನು ಬಳಸಿ ಸಂಜೆಯ ವೇಳೆಗೆ 5ರಿಂದ 10 ನಿಮಿಷ ಮಳೆ ಸುರಿಸಲಾಗುತ್ತದೆ. ಮಳೆ ಕಾಡಿಗೆ ಇಷ್ಟು ಸಾಕು. ಅದು ತನ್ನ ವ್ಯವಸ್ಥೆಯನ್ನು ತಾನೇ ಮಾಡಿಕೊಳ್ಳುತ್ತದೆ’ ಎಂದು ದಾಜಿ ಹೇಳುತ್ತಾರೆ.

ಸಸ್ಯಗಳನ್ನು ಉಳಿಸಿಕೊಳ್ಳುವುದಕ್ಕೆ ಹನಿ ನೀರಾವರಿ, ತುಂತುರು ನೀರಾವರಿಯ ವ್ಯವಸ್ಥೆ ಕೂಡ ಇಲ್ಲಿದೆ. ಯಾವ ಸಸ್ಯಕ್ಕೆ ಯಾವ ವಾತಾವರಣ ಬೇಕು ಎಂದು ಗ್ರಹಿಸಿ ಅದೇ ವಾತಾವರಣವನ್ನು ಸೃಷ್ಟಿಸಿ ಬೆಳೆಸುವುದು ಇಲ್ಲಿನ ಹೆಚ್ಚುಗಾರಿಕೆ. ಹೂವು, ಹಣ್ಣಿನ ಗಿಡಗಳು ನಿಮ್ಮ ಮೈಮನವನ್ನು ಆಹ್ಲಾದಗೊಳಿಸುತ್ತವೆ. ಆಯಾ ಕಾಲಕ್ಕೆ ತಕ್ಕಂತೆ ಹೂವುಗಳು ಬಿಡುತ್ತವೆ. ಹಣ್ಣುಗಳೂ ಬಿಡುತ್ತವೆ. ಇಲ್ಲಿ ಎಲ್ಲವೂ ಸಹಜ ಕೃಷಿ. ಆದರೆ ಎಲ್ಲವೂ ವೈಜ್ಞಾನಿಕ. ಅದು ನೀರು ಉಳಿಸುವುದಿರಲಿ, ಸಸ್ಯ ಪಾಲನೆ ಇರಲಿ, ನೀರು ಶುದ್ಧೀಕರಣ ಇರಲಿ, ಅಡುಗೆ ಮನೆ ಇರಲಿ, ಸೌರಶಕ್ತಿ ಬಳಕೆ ಇರಲಿ ಎಲ್ಲವೂ ಅಚ್ಚುಕಟ್ಟು. ಒಂದರ್ಥದಲ್ಲಿ ಇಲ್ಲಿ ವಿಜ್ಞಾನ ಪರಿಸರದೊಂದಿಗೆ ಲೀನವಾಗಿದೆ.

ನೀರು ಬಂತು. ಸಸ್ಯಗಳೂ ಬೆಳೆದವು. ಅಷ್ಟಾದ ಮೇಲೆ ಯಾರೂ ಕರೆಕೊಡದೇ ಹೋದರೂ ಹಕ್ಕಿಗಳು ಬಂದು ನೆಲೆಸಿದವು. ‘ಮೊದಲು ಇಲ್ಲಿ ಕೇವಲ ಕಾಗೆಗಳಿದ್ದವು. ಬಹಳ ಅಪರೂಪಕ್ಕೆ ಒಂದೋ ಎರಡೋ ಪಾರಿವಾಳಗಳು ಕಾಣಿಸಿಕೊಳ್ಳುತ್ತಿದ್ದವು. ಆದರೆ ಈಗ ಇಲ್ಲಿ ಪಕ್ಷಿಗಳ ಹಿಂಡೇ ಇದೆ. ಅಪರೂಪದ ಪಕ್ಷಿಗಳೂ ಇಲ್ಲಿ ಕಾಣಸಿಗುತ್ತವೆ. ಒಂದು ಅಂದಾಜಿನ ಪ್ರಕಾರ 150 ಜಾತಿಯ ಪಕ್ಷಿಗಳು ಇಲ್ಲಿವೆ’ ಎಂದು ದಾಜಿ ಹೇಳುತ್ತಾರೆ. ಇದರ ಜೊತೆಗೆ ಪ್ರಾಣಿಗಳೂ ಬಂದವು. ಈಗ ಇದೊಂದು ಜೀವವೈವಿಧ್ಯದ ತಾಣವೇ ಆಗಿಬಿಟ್ಟಿದೆ. ಮುಂಜಾನೆ ಅಥವಾ ಸಂಜೆ ನೀವು ಇಲ್ಲಿ ಧ್ಯಾನಕ್ಕೆ ಕುಳಿತರೆ ತರಾವರಿ ಪಕ್ಷಿಗಳ ಕೂಗನ್ನು ಕೇಳಬಹುದು. ಇತರ ಕಾಡು ಪ್ರಾಣಿಗಳನ್ನೂ ಗುರುತಿಸಬಹುದು. ಹಾರ್ಟ್‌ಫುಲ್‌ನೆಸ್ ಧ್ಯಾನಕ್ಕೆ ಒಲಿದು ದೇಶ ವಿದೇಶಗಳಿಂದ ಜನರು ಇಲ್ಲಿಗೆ ಬರುವ ಹಾಗೆಯೇ ಪಕ್ಷಿಗಳೂ ಕೂಡ ಎಲ್ಲೆಲ್ಲಿಂದಲೋ ಇಲ್ಲಿಗೆ ಬಂದು ತಮ್ಮ ಸಂತತಿ ಹೆಚ್ಚಿಸಿಕೊಳ್ಳುತ್ತಿವೆ.

ಈ ಆಶ್ರಮದಲ್ಲಿ ಧ್ಯಾನದ ಪಾಠದ ಜೊತೆಗೆ ನೀರಿನ ಪಾಠ, ಸಸ್ಯಗಳ ಪಾಠ ಉಚಿತ ಸಿಗುತ್ತದೆ. ಧ್ಯಾನದ ತಂತ್ರಗಳನ್ನು ಕಲಿಯಲೂ ಇಲ್ಲಿ ಕಾಸು ಕೊಡಬೇಕಿಲ್ಲ. ವಸತಿ, ಊಟ ಎಲ್ಲವೂ ಉಚಿತ. ಜೊತೆಗೆ ಪರಿಸರದೊಂದಿಗೆ ಹೇಗೆ ಹೊಂದಿಕೊಂಡು ಬಾಳಬೇಕು ಎಂದು ಕಲಿಸಿಕೊಡುವುದು ನಿಮಗೊಂದು ಬೋನಸ್.

ಆಶ್ರಮದ ಇನ್ನೊಂದು ಪ್ರಮುಖ ಆಕರ್ಷಣೆ ಎಂದರೆ ಅಂಗಾಂಶ ಕಸಿ (ಟಿಶ್ಯು ಕಲ್ಚರ್) ಪ್ರಯೋಗಾಲಯ. ನಮ್ಮ ದೇಶದಲ್ಲಿ ಅಪಾಯದ ಅಂಚಿನಲ್ಲಿರುವ ಎಲ್ಲ ಸಸ್ಯಗಳ ಬಗ್ಗೆ ಇಲ್ಲಿ ಅಧ್ಯಯನ ನಡೆಸಲಾಗುತ್ತದೆ. ಜೊತೆಗೆ ಅಂಗಾಂಶ ಕಸಿ ಮೂಲಕ ಎಲ್ಲ ಸಸ್ಯಗಳನ್ನು ರಕ್ಷಿಸಲಾಗುತ್ತದೆ. ಅಳಿವಿನ ಅಂಚಿನಲ್ಲಿರುವ ಸಸ್ಯ ಪ್ರಭೇದಗಳನ್ನು ನೂರು, ಸಾವಿರದ ಲೆಕ್ಕದಲ್ಲಿ ಬೆಳೆಸಲಾಗುತ್ತಿದೆ. ಅಳಿವಿನ ಅಂಚಿನಲ್ಲಿರುವ ಸಸ್ಯ ಪ್ರಭೇದದ ಯಾವುದೇ ಭಾಗವನ್ನು ತಂದುಕೊಟ್ಟರೆ ಅದನ್ನು ರಕ್ಷಿಸಿ ಸುರಕ್ಷಿತವಾಗಿ ಬೆಳೆಸಿ ಸಾವಿರಾರು ಸಂಖ್ಯೆಯಲ್ಲಿ ನಿಮಗೆ ವಾಪಸು ನೀಡಲಾಗುತ್ತದೆ. ನಮ್ಮ ದೇಶದ ಯಾವುದೇ ಸಸ್ಯ ನಾಶವಾಗಿ ಹೋಗಬಾರದು ಎನ್ನುವುದು ನಮ್ಮ ಬಯಕೆ ಎಂದು ಇಲ್ಲಿನ ಸ್ವಯಂಸೇವಕರು ಹೇಳುತ್ತಾರೆ. ‘ನೀವು ಎಷ್ಟೇ ಸಸ್ಯ ಪ್ರಭೇದಗಳನ್ನು ತಂದುಕೊಡಿ. ನಾವು ಬೆಳೆಸಿ ಕೊಡುತ್ತೇವೆ’ ಎಂದೂ ಅವರು ಹೇಳುತ್ತಾರೆ. ಅಂದಹಾಗೆ ನಮ್ಮ ನಂಜನಗೂಡು ರಸಬಾಳೆಯ ಸಾವಿರದ ಕುಡಿಗಳನ್ನು ಇಲ್ಲಿ ಬೆಳೆಸಲಾಗಿದೆ. ‘ಅಳಿವಿನ ಅಂಚಿನಲ್ಲಿ ಇರುವ ಸಸ್ಯ ಪ್ರಭೇದಗಳು ಎಂದರೆ ಮುಂದಿನ ಹತ್ತು ವರ್ಷದಲ್ಲಿ ಸಂಪೂರ್ಣವಾಗಿ ಕಾಣೆಯಾಗಿ ಹೋಗಬಹುದಾದ ಸಸ್ಯಗಳನ್ನು ಗುರುತಿಸಿ ಅವುಗಳನ್ನು ಇಲ್ಲಿ ತರಲಾಗಿದೆ ಮತ್ತು ಬೆಳೆಸಲಾಗುತ್ತಿದೆ’ ಎಂದು ದಾಜಿ ಮಾಹಿತಿ ನೀಡುತ್ತಾರೆ.

ಮನುಷ್ಯ ಪ್ರಯತ್ನದಿಂದ ಏನನ್ನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಉದಾಹರಣೆಯಂತೆ ಈ ಆಶ್ರಮ ಇದೆ. ರಾಮಾಯಣದಲ್ಲಿ ಕಾಕಭುಶುಂಡಿ ಆಶ್ರಮದ ಉಲ್ಲೇಖವಿದೆ. ಯಾವುದೇ ಮನುಷ್ಯ ಆ ಆಶ್ರಮದೊಳಕ್ಕೆ ಕಾಲಿಟ್ಟೊಡನೆಯೇ ಆತ ಎಲ್ಲ ಸಮಸ್ಯೆಗಳಿಂದ ಮುಕ್ತಿ ಹೊಂದುತ್ತಾನೆ ಎಂಬ ಐತಿಹ್ಯ ಇದೆ. ಎಲ್ಲ ಸಮಸ್ಯೆಗಳು, ಎಲ್ಲ ಬಂಧನಗಳಿಂದ ಮುಕ್ತಿ ಎಂದರೆ ಸಾವು ಅಲ್ಲ. ಆತ್ಮತೃಪ್ತಿ. ಅಂತಹ ಒಂದು ಸಣ್ಣ ಅನುಭವ ಇಲ್ಲಿಯೂ ನಿಮಗೆ ಆಗಬಹುದು. ಒಮ್ಮೆ ಹೋಗಿ ಬನ್ನಿ. ನೀರಿನ ಪಾಠ, ಪರಿಸರದ ಪಾಠ ಕಲಿತು ಬನ್ನಿ.

ಸಂಪರ್ಕಕ್ಕೆ ನಿತಿನ್ - 9686055448.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT