ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹು ಪತಿತ್ವದ ಬಣ್ಣದ ಉಲ್ಲಂಕಿ: ದಾವಣಗೆರೆ ಗದ್ದೆಯಲ್ಲಿ ಕಂಡುಬಂದ ಅಪರೂಪದ ಹಕ್ಕಿಗಳು

Last Updated 11 ಡಿಸೆಂಬರ್ 2021, 2:56 IST
ಅಕ್ಷರ ಗಾತ್ರ

ಪ್ರಕೃತಿಯಲ್ಲಿ ನಡೆಯುವ ಸೋಜಿಗಗಳು ಹಲವು. ಕೆಲವು ಪಕ್ಷಿಗಳು ಏಕಪತ್ನಿ/ ಪತಿ ವ್ರತಸ್ಥರಾದರೆ ಮತ್ತೆ ಕೆಲವು ಬಹುಪತ್ನಿ/ ಪತಿತ್ವವನ್ನು ಹೊಂದಿವೆ. ಇದರಲ್ಲಿ ಯಾವುದು ಉತ್ತಮ ಅಥವಾ ಅಧಮ ಎಂದು ಮಾನವನ ಸಾಮಾಜಿಕ ವರ್ತನೆಯ ಆಧಾರದ ಮೇಲೆ ನಿರ್ಧರಿಸುವಂತಿಲ್ಲ. ಜೀವನದ ಹೋರಾಟದಲ್ಲಿ ಸಂತತಿಯನ್ನು ಮುಂದುವರಿಸುವುದೇ ಗುರಿ.

ಇತ್ತೀಚೆಗೆ ದಾವಣಗೆರೆ ಭತ್ತದ ಗದ್ದೆಯಲ್ಲಿ ಕಂಡುಬಂದ ಬಣ್ಣದ ಉಲ್ಲಂಕಿಗಳು ಅಂತಹ ಒಂದು ವಿಶಿಷ್ಟ ಪ್ರಬೇಧಕ್ಕೆ ಸೇರಿದವು. ಆಂಗ್ಲಬಾಷೆಯಲ್ಲಿ ಗ್ರೇಟರ್ ಪೇಂಟೆಡ್-ಸ್ನೈಪ್ ಎನ್ನುವ ಈ ಹಕ್ಕಿಯನ್ನು ವೈಜ್ಞಾನಿಕವಾಗಿ ‘ರೋಸ್ಟ್ರಟುಲ ಬೆಂಗಾಲ್ನೆಸಿಸ್’ ಎಂದು ಗುರುತಿಸಲಾಗಿದೆ.

ಗುಣಲಕ್ಷಣಗಳು: ಪಾರಿವಾಳಕ್ಕಿಂತ ಸ್ವಲ್ಪ ಸಣ್ಣದಿರುವ ಈ ಹಕ್ಕಿ ಗರಿಷ್ಠ 28 ಸೆಂ.ಮೀ. ಉದ್ದ ಇರುತ್ತವೆ. ತುದಿಯಲ್ಲಿ ಸ್ವಲ್ಪ ಬಾಗಿದ, ಕೆಂಪು-ಕಂದು ಬಣ್ಣದ ಕೊಕ್ಕನ್ನು ಹೊಂದಿದೆ. ಗಂಡಿಗಿಂತ ಹೆಣ್ಣು ಗಾತ್ರದಲ್ಲಿ ದೊಡ್ಡದ್ದಿದ್ದು ಆಕರ್ಷಣೀಯವಾಗಿರುತ್ತದೆ. ಹೆಣ್ಣು ಹಕ್ಕಿಯ ದೇಹದ ಮೇಲ್ಭಾಗವು ಹೊಳಪಿನ ಕಂದು-ಹಸಿರು ಬಣ್ಣವಾದರೆ, ಹೊಟ್ಟೆಯ ಭಾಗ ಬಿಳಿ. ತಲೆ ಮತ್ತು ಕುತ್ತಿಗೆ ಕಡು-ಕಂದು ಬಣ್ಣವಿದ್ದು, ಕಣ್ಣಿನ ಸುತ್ತ ಬಿಳಿಯ ವೃತ್ತವಿರುತ್ತದೆ. ಗಂಡು ಹಕ್ಕಿ ಪೇಲವ ಹಳದಿ-ಮಿಶ್ರಿತ ಕಂದು ಮತ್ತು ಕಪ್ಪು ಬಣ್ಣದ ಮೇಲ್ಭಾಗವನ್ನು ಹೊಂದಿದೆ. ಗಂಡು ಹೆಣ್ಣುಗಳೆರಡರಲ್ಲೂ ಕಣ್ಣುಗಳ ಮೇಲೆ ನಿರ್ದಿಷ್ಟವಾದ ಉದ್ದದ ಬಿಳಿಪಟ್ಟಿ ಮತ್ತು ರೆಕ್ಕೆಗಳ ಮೇಲೆ ಬಿಳಿ ಬಣ್ಣದ ಪಟ್ಟಿಯಿರುವುದು ಈ ಪ್ರಬೇಧ ಗುರುತಿಸಲು ಸಹಕಾರಿ. ಸಾಮಾನ್ಯವಾಗಿ ನಿಶಾಚರಿ. ಸಣ್ಣದಾಗಿ ’ಕಿಕ್’ ಎಂಬ ಕೂಗು. ಆದರೆ ಪ್ರಜನನ ಕಾಲದಲ್ಲಿ ಹೆಣ್ಣು ಆಳವಾದ ದೊಡ್ಡದಾದ ’ಊಕ್’ ಎಂದು ಧ್ವನಿ ಹೊರಡಿಸುತ್ತದೆ.

ಆವಾಸ: ಕೆರೆ, ಸರೋವರ ಮತ್ತು ಭತ್ತದ ಗದ್ದೆಗಳ ಕೆಸರಿನಲ್ಲಿ ಒಂಟಿ ಅಥವಾ ಜೊತೆಯಾಗಿ ಆಹಾರ ಹುಡುಕುತ್ತಿರುತ್ತವೆ. ಭಾರತವಲ್ಲದೆ ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ಮಡಗಾಸ್ಕರ್ ಮತ್ತು ಆಫ್ರಿಕಾ ದೇಶಗಳಲ್ಲಿ ಕಂಡು ಬರುತ್ತವೆ. ಸ್ಥಳೀಯವಾಗಿ ವಲಸೆ ಹೋಗಬಲ್ಲವು.

ಆಹಾರ: ಕೆಸರಿನ ಕೀಟಗಳು, ಮೃದ್ವಂಗಿಗಳು, ಎರೆಹುಳು ಮತ್ತು ಕಾಳುಗಳನ್ನು ತಿನ್ನುತ್ತವೆ.

ಸಂತಾನೋತ್ಪತ್ತಿ: ಸಮಯ ನಿಗದಿತ ವಿಲ್ಲ. ಕೆರೆ ಅಥವಾ ಗದ್ದೆಗಳ ಬದುಗಳಲ್ಲಿ ನೆಲದ ಮೇಲೆ ಸಸ್ಯಗಳನ್ನು ಉಪಯೋಗಿಸಿ ಬಟ್ಟಲು ಆಕೃತಿಯ ಗೂಡನ್ನು ಮಾಡುತ್ತವೆ. ಒಂದು ಬಾರಿಗೆ ಮೂರರಿಂದ ನಾಲ್ಕು ಮೊಟ್ಟೆಗಳನ್ನಿಡುತ್ತವೆ.

ವಿಶೇಷತೆ: ಹೆಚ್ಚಿನ ಹಕ್ಕಿಗಳಲ್ಲಿ ಮರಿಗಳ ಪೋಷಣೆಯಲ್ಲಿ ತಂದೆ–ತಾಯಿರಿಬ್ಬರೂ ಸಮಭಾಗಿಗಳು. ಆದರೆ ಈ ಹಕ್ಕಿಗಳಲ್ಲಿ ಸಂತಾನಾಭಿವೃದ್ಧಿ ಕ್ರಮವೇ ವೈಶಿಷ್ಟಪೂರ್ಣ. ಹೆಣ್ಣು ಬಣ್ಣ ಮತ್ತು ಗಾತ್ರದಲ್ಲಿ ಗಂಡಿಗಿಂತ ಸುಂದರವಾಗಿದ್ದು ಜೊತೆಗಾರನನ್ನು ಆಕರ್ಷಿಸಲು ತನ್ನ ರೆಕ್ಕೆಗಳನ್ನು ಬಿಚ್ಚಿ, ಬಾಲದ ರೆಕ್ಕೆಗಳನ್ನು ಅಗಲಿಸಿ ಬೀಸಣಿಗೆಯಂತೆ ಮೇಲೆ ಕೆಳಗೆ ಆಡಿಸುತ್ತಾ ನರ್ತಿಸುತ್ತದೆ. ತಾನು ಇಷ್ಟಪಟ್ಟ ಗಂಡಿನ ಸುತ್ತ ಸುತ್ತುತ್ತಾ ಮೆಲುದನಿಯಲ್ಲಿ ಸ್ವರ ಹೊರಡಿಸುತ್ತದೆ. ತನ್ನ ಕೊಕ್ಕಿನಿಂದ ಗಂಡಿನ ರೆಕ್ಕೆಪುಕ್ಕಗಳನ್ನು ತೀಡುತ್ತದೆ. ಮಿಲನದ ನಂತರ ಸ್ವಲ್ಪ ಸಮಯ ಜೊತೆಗಾರನೊಂದಿಗೆ ಹತ್ತಿರ ನಿಂತು ಸ್ವರ ಹೊರಡಿಸುತ್ತದೆ.

ಸೂಕ್ತ ಗಂಡಿಗಾಗಿ ಹೆಣ್ಣುಗಳಲ್ಲಿ ಸ್ಪರ್ಧೆ ಇರುತ್ತದೆ. ಬಹುಪತಿತ್ವ ಈ ಪ್ರಬೇಧದ ವೈಶಿಷ್ಟ್ಯ. ಮಿಲನದ ನಂತರ ಕೆಲವೇ ದಿನಗಳಲ್ಲಿ ಗೂಡಿನಲ್ಲಿ ಮೊಟ್ಟೆಗಳನ್ನಿಟ್ಟ ಹೆಣ್ಣು ಮತ್ತೊಬ್ಬ ಸಂಗಾತಿಯನ್ನು ಹುಡುಕಿಕೊಳ್ಳುತ್ತದೆ. ಮೊದಲಿನ ಗಂಡ 19 ದಿನಗಳವರೆಗೆ ಮೊಟ್ಟೆಗಳ ಮೇಲೆ ಕುಳಿತು ಕಾವು ಕೊಟ್ಟು ಮರಿ ಮಾಡಿಸುತ್ತಾನೆ. ಆನಂತರವೂ ಮರಿಗಳಿಗೆ ಆಹಾರ ತಂದು ಕೊಡುವುದು ಮತ್ತು ರಕ್ಷಣೆ ಮಾಡುವುದು ಗಂಡಿನ ಕೆಲಸ. ಮರಿಗಳು ಸ್ವತಂತ್ರ ಜೀವನ ನಡೆಸುವವರೆಗೂ ಗಂಡಿನದೇ ಜವಾಬ್ದಾರಿ. ಮೊದಲ ಮಿಲನದ ನಂತರ ಮಕ್ಕಳ ಆರೈಕೆಯ ಹೊಣೆಗಾರಿಕೆಯಿಲ್ಲದ ಹೆಣ್ಣು ಮತ್ತೊಂದು ಗಂಡನ್ನು ಆಕರ್ಷಿಸಿ ಅವನೊಂದಿಗೆ ಕೂಡುತ್ತಾಳೆ. ಮತ್ತದೇ ಕಥೆ. ಒಂದು ಪ್ರಜನನ ಕಾಲದಲ್ಲಿ ಗರಿಷ್ಠನಾಲ್ಕು ಗಂಡುಗಳನ್ನು ಕೂಡುವ ಸಾಮರ್ಥ್ಯ ಈ ಅಂದಗಾತಿಗಿದೆ.

ಅಪರೂಪವೆಂಬಂತೆ ಪ್ರಥಮ ಬಾರಿಗೆ ದಾವಣಗೆರೆಯಲ್ಲಿ ಜೊತೆಯಲ್ಲಿದ್ದ ಗಂಡು-ಹೆಣ್ಣುಗಳ ದರ್ಶನವಾಯಿತು. ಇಲ್ಲಿಯೇ ಸಂತಾನಾಭಿವೃದ್ಧಿ ಮಾಡುತ್ತಿವೆಯೇ ಅಥವಾ ಆಹಾರಕ್ಕಾಗಿ ಸ್ಥಳಿಯವಾಗಿ ವಲಸೆ ಬಂದಿವೆಯೇ ತಿಳಿಯದು. ವಿಶ್ವದ್ಯಾದಂತ ಮಾನವನಿಂದ ಇವುಗಳ ಆವಾಸ ಸ್ಥಾನಗಳು ಹಾಳಾಗುತ್ತಿರುವುದರಿಂದ ಸಂತತಿ ಕಡಿಮೆಯಾಗುತ್ತಿರುವುದು ಕಳವಳದ ಸಂಗತಿ.

(ಲೇಖಕರು ದಾವಣಗೆರೆ ವಿಶ್ವವಿದ್ಯಾಲಯದ ಸೂಕ್ಷ್ಮಜೀವಿವಿಜ್ಞಾನ ವಿಭಾಗದ ಪ್ರಾಧ್ಯಾಪಕರು. ಚಿತ್ರ: ಲೇಖಕರದ್ದು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT